Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Friday, 31 January 2025

ಸೋಂದಾ ಶ್ರೀಗಳಿಂದ ಗುರುಮೂರ್ತಿ ಮಂದಿರದಲ್ಲಿ ಶಿಖರ ಕಲಶ ಪ್ರತಿಷ್ಠೆ.


ಯಲ್ಲಾಪುರ: ಶ್ರೀ ಗುರುವಿನ ಅನುಗ್ರಹ ಎಲ್ಲ ಕಾಲಕ್ಕೂ ; ಎಲ್ಲ ಕಾರ್ಯಗಳಲ್ಲಿಯೂ ಅಪೇಕ್ಷಿತವಾದದ್ದು. ನಿರ್ಮಲವಾದ ಮನಸ್ಸಿನಿಂದ ಮಾಡಿದ ಪ್ರಾರ್ಥನೆ ಎಂದಿಗೂ ಫಲ ನೀಡುತ್ತದೆ ಎಂದು ಸೋಂದಾ ಸ್ವರ್ಣವಲ್ಲಿಯ ಶ್ರೀ ಗಂಗಾಧರೇAದ್ರ ಸರಸ್ವತೀ ಸ್ವಾಮೀಜಿ ನುಡಿದರು.

ಅವರು, ತಾಲೂಕಿನ ಉಮ್ಮಚಗಿಯ ಗುರುಮೂರ್ತಿ ಬಡಾವಣೆಯ ಶ್ರೀ ಗುರುಮೂರ್ತಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ೩ ದಿನಗಳ ಧಾರ್ಮಿಕ ಕಾರ್ಯಕ್ರಮಗಳ ನಿಮಿತ್ತ ಜ.೩೦ ರಂದು ಗುರುಮೂರ್ತಿ ಮಂದಿರದ ಶಿಖರ ಕಲಶ ಪ್ರತಿಷ್ಠೆ ನೆರವೇರಿಸಿ, ಆಶೀರ್ವಚನ ನೀಡುತ್ತಿದ್ದರು. 

ನಿಷ್ಕಲ್ಮಶ ಪ್ರಾರ್ಥನೆಗೆ ಮಾತ್ರ ಗುರು ಒಲಿದು, ಜೀವನ ಶ್ರೇಯಸ್ಕರ ಮಾರ್ಗವನ್ನು ತೋರುತ್ತಾನೆ. ಈ ಹಿನ್ನೆಲೆಯಲ್ಲಿ ಇಲ್ಲಿ ಹಮ್ಮಿಕೊಂಡ ಇಂತಹ ಕಾರ್ಯಕ್ರಮಗಳು ಲೋಕಹಿತ ಸಾಧನೆಗಾಗಿ ಮುಡಿಪಾಗಿಟ್ಟಿವೆ. ಇಂತಹ ಕಾರ್ಯಕ್ರಮಗಳು ಎಲ್ಲೆಡೆಯೂ ಇನ್ನಷ್ಟು ಹೆಚ್ಚಲಿ ಎಂದು ಹಾರೈಸಿದರು.

ಅಪರಾಹ್ನ ಆಯೋಜಿತಗೊಂಡ ಸಭಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಸಿದ್ದಾಪುರದ ಶಿರಳಗಿಯ ಶ್ರೀ ಚೈತನ್ಯ ರಾಜಾರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದಭಾರತೀ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಗುರುತತ್ವವೆಂದರೆ ಪರಮಾತ್ಮನ ಆಶೀರ್ವಚನವೇ ಆಗಿದೆ. 

ಇದನ್ನು ಸಾಧಿಸಲು ಏಕಾಗ್ರತೆ ಮತ್ತು ಚಿತ್ತಶುದ್ಧಿಗಳು ಅತ್ಯಗತ್ಯವಾಗಿದ್ದು, ಪ್ರಾಚೀನರು ಉಪಾಸನೆಗಳ ವಿವಿಧ ರೂಪಗಳಲ್ಲೊಂದಾದ ಲಿಂಗವನ್ನು ಚಿಹ್ನೆಯಾಗಿ ನೀಡಿದರು. ಕೊನೆ, ಮೊದಲುಗಳಿಲ್ಲದ ಬೆಳಕಿನ ಪುಂಜವೇ ದೇವರಾಗಿದ್ದು, ಶಿವನೆಂದರೆ ಜಗತ್ತಿನ ಅಣುರೇಣು ತೃಣಕಾಷ್ಠಗಳಲ್ಲಿ ಅಡಗಿದ ದಿವ್ಯ ಸ್ವರೂಪವಾಗಿದೆ. 

ಹಿರಿಯರು ಆಕಾಶವನ್ನೇ ದೈವದ ಗುರುತಿನ ಸಂಕೇತವೆಂದು ಪರಿಗಣಿಸಿದ್ದಾರೆ. ದೇವರನ್ನು ಗುರುತಿಸುವ ಪ್ರತ್ಯಕ್ಷವ್ಯಕ್ತಿ ಗುರುವೇ ಆಗಿದ್ದಾನೆ ಎಂದ ಅವರು, ಗುರುಗಳ ಆರಾಧನೆಯೇ ಪರಮಾತ್ಮನ ಚಿಂತನೆಯಾಗಿದೆ. ನಿರಂತರ ಭಗವಂತನ ಸಾಕ್ಷಾತ್ಕಾರದ ಸ್ವರೂಪ ಕಾಣಿಸುತ್ತಿರುವುದು ನಮ್ಮ ದೇಶದ ವಿಶೇಷವಾಗಿದ್ದು, ಇದು ಪರಂಪರೆಯ ವೈಶಿಷ್ಠ ಆಗಿದೆ ಎಂದರು. 

ಸತ್ಯ ಪರಿಶೋಧನೆಯೇ ಪ್ರತಿಯೊಬ್ಬ ಮನುಷ್ಯನ ಜೀವನದ ಗುರಿಯಾಗಿ, ನಮ್ಮ ನೈಜ ಸ್ವರೂಪವನ್ನು ನಾವೆಲ್ಲರೂ ಅರಿಯಬೇಕಿದೆ. ಜಗತ್ತಿನಲ್ಲಿ ಎಲ್ಲವೂ ಕ್ಷಣಿಕ. ಇಲ್ಲಿ ನಿಜಶಾಂತಿ, ಸುಖಗಳಿಲ್ಲ. ಆದ್ದರಿಂದ ಮೂಲಸ್ವರೂಪವನ್ನು ಕಂಡುಕೊಳ್ಳಬೇಕಿದ್ದು, ನಾನು ಯಾರೆಂಬುದೇ ನನಗೆ ಗೊತ್ತಿಲ್ಲದ ಸಂದರ್ಭದಲ್ಲಿ ಕೊರತೆ ಎಂದರೆ ಹೊರಗಿನದು.

ಒಳಗಿನದಲ್ಲ. ಆದ್ದರಿಂದ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ; ಆತ್ಮಜ್ಞಾನ, ಬ್ರಹ್ಮಜ್ಞಾನಗಳ ಅರಿವಿಗೆ ಗುರು ಉಪದೇಶ ಅತ್ಯಂತ ಅಗತ್ಯ. ದಟ್ಟವಾಗಿ ನಮ್ಮನ್ನಾವರಿಸಿರುವ ಮಂಜು ಕರಗಿಸಲು ಮತ್ತು ಮಮಕಾರದ ಸುಳಿಯಲ್ಲಿ ಸಿಲುಕಿರುವ ನಮ್ಮೆಲ್ಲರನ್ನೂ ಪಾರು ಮಾಡಲು ನಮಗೆ ಗುರುಕೃಪೆ ಅವಶ್ಯಕ. ಧರ್ಮಾನುಷ್ಠಾನದಿಂದ ಮಾತ್ರ ಅಧ್ಯಾತ್ಮಿಕ ಸಾಧನೆ ಸಾಧ್ಯ. ಇದಕ್ಕೆ ರಾಗದ್ವೇಷರಹಿತವಾದ ಕರ್ಮಾನುಷ್ಠಾನ ಮಾಡಬೇಕು ಎಂದರು.

೩ ದಿನಗಳ ಕಾಲ ನಡೆದ ಮಹಾರುದ್ರಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ೫೦ ಕ್ಕಿಂತ ಹೆಚ್ಚು ಸಂಖ್ಯೆಯ ವೈದಿಕರು ಪಾಲ್ಗೊಂಡಿದ್ದರು. ಸಮಾರೋಪ ಸಮಾರಂಭದ ಕಾರ್ಯಕ್ರಮ ಶ್ರೀಮಾತಾ ಸಂಸ್ಕೃತ ಮಹಾಪಾಠಶಾಲೆಯ ವಿದ್ಯಾರ್ಥಿಗಳಾದ ಶ್ರೀವರ ಮತ್ತು ಲೋಹಿತರ ವೇದಘೋಷದೊಂದಿಗೆ ಆರಂಭಗೊಂಡಿತು. 

ಸಂಜನಾ ಭಟ್ಟ ಪ್ರಾರ್ಥಿಸಿದರು. ಪಾಠಶಾಲೆಯ ಅಧ್ಯಾಪಕ ವಿ.ಮಹೇಶ ಭಟ್ಟ ಇಡಗುಂದಿ ನಿರ್ವಹಿಸಿದರು. ಶ್ರೀಪಾದ ಹೆಗಡೆ ಭಟ್ರಕೇರಿ ಸ್ವಾಗತಿಸಿದರು. ನಾರಾಯಣ ಹೆಗಡೆ ಕುಂಬ್ರಿಗುಡ್ಡೆ ವಂದಿಸಿದರು. 

ಕಾರ್ಯಕ್ರಮದಲ್ಲಿ ಜ್ಯೋತಿಷ್ಯಾಚಾರ್ಯ ವಿ.ನಾಗೇಂದ್ರ ಭಟ್ಟ ಹಿತ್ಲಳ್ಳಿ, ಅಗ್ನಿಹೋತ್ರಿ ನರಸಿಂಹ ಭಟ್ಟ ನಡುಗೋಡು, ಶ್ರೀಮಠದ ಉಪಾಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ, ಶ್ರೀಮಾತಾ ಸಂಸ್ಕೃತ ಪಾಠಶಾಲೆಯ ಅಧ್ಯಕ್ಷ ಟಿ.ವಿ.ಹೆಗಡೆ ಬೆದೆಹಕ್ಕಲು, ಸೀಮಾಧ್ಯಕ್ಷ ಶ್ರೀಪಾದ ಹೆಗಡೆ ಮತ್ತಿತರರು ಪಾಲ್ಗೊಂಡಿದ್ದರು. ಸಭೆಗೆ ಆಗಮಿಸಿದ ಗುರುಗಳನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು. ಸುದರ್ಶನ ಮಾತೃಮಂಡಳಿಯ ಮಾತೆಯರು ನಂತರ ಭಗವದ್ಗೀತೆಯನ್ನು ಪಠಿಸಿದರು.