ಯಲ್ಲಾಪುರ : ಯೋಗವು ಮಾನವ ಜೀವನದಲ್ಲಿ ಆರೋಗ್ಯ, ಸಮೃದ್ಧಿ ಮತ್ತು ಸಮತೋಲನವನ್ನು ಸಾಧಿಸುವ ಒಂದು ಪರಿಪೂರ್ಣ ಮಾರ್ಗವಾಗಿದೆ. ಈ ನಿಟ್ಟಿನಲ್ಲಿ ಯಲ್ಲಾಪುರ ತಾಲೂಕಿನಲ್ಲಿ ಯೋಗ ಸಮ್ಮೇಳನವನ್ನು ಏರ್ಪಡಿಸಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ ಎಂದು ಅಂತರಾಷ್ಟ್ರೀಯ ಯೋಗ ಪಟು ಗಣಪತಿ ಎನ್. ಹೆಗಡೆ ಸಿದ್ದಾಪುರ ಅಭಿಪ್ರಾಯಪಟ್ಟರು.
ಜನವರಿ 12 ರಂದು ಪಟ್ಟಣದ ವೆಂಕಟರಮಣ ಮಠದ ವೇದವ್ಯಾಸ ಸಭಾಭವನದಲ್ಲಿ ಯಲ್ಲಾಪುರ ತಾಲೂಕಾ ಯೋಗ ಸ್ಪೋರ್ಟ್ಸ್ ಅಸೋಸಿಯೇಶನ್, ಉತ್ತರಕನ್ನಡ ಯೋಗ ಫೆಡರೇಶನ್ ಶಿರಸಿ ಮತ್ತು ಯಲ್ಲಾಪುರ ಅಡಿಕೆ ವ್ಯವಹಾರಸ್ಥರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಯೋಗ ಸಮ್ಮೇಳನ ಮತ್ತು ಯೋಗ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
"ಯೋಗವು ವಿದ್ಯಾರ್ಥಿ ಜೀವನದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ನಿಯಮಿತ ಯೋಗಾಭ್ಯಾಸವು ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುವುದಲ್ಲದೆ, ಅವರಲ್ಲಿ ಸಂತೃಪ್ತಿಯ ಭಾವನೆಯನ್ನು ಬೆಳೆಸುತ್ತದೆ. ಇಂದು ಯೋಗವು ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ ಮತ್ತು ಒಲಿಂಪಿಕ್ ಕ್ರೀಡೆಗಳ ಭಾಗವಾಗಿದೆ. ನಮ್ಮ ಮಕ್ಕಳಿಗೆ ಯೋಗದ ಜೊತೆಗೆ ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಮೌಲ್ಯಗಳ ಬಗ್ಗೆಯೂ ಪರಿಚಯಿಸುವುದು ಅತ್ಯಗತ್ಯವಾಗಿದೆ" ಎಂದು ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, "ನಮ್ಮ ದೈನಂದಿನ ಜೀವನದಲ್ಲಿ ನಾವು ಅನೇಕ ಒತ್ತಡಗಳನ್ನು ಎದುರಿಸುತ್ತೇವೆ. ಈ ಒತ್ತಡಗಳನ್ನು ನಿಭಾಯಿಸಲು ಯೋಗವು ಅತ್ಯಂತ ಪರಿಣಾಮಕಾರಿಯಾದ ಮಾರ್ಗವಾಗಿದೆ. ವಿದ್ಯಾರ್ಥಿಗಳಿಗೆ ಶಾಲೆಯ ಒತ್ತಡ, ವೃತ್ತಿಜೀವನದ ಒತ್ತಡ ಹೀಗೆ ವಿವಿಧ ರೀತಿಯ ಒತ್ತಡಗಳು ಇರುತ್ತವೆ. ಈ ಒತ್ತಡಗಳನ್ನು ನಿವಾರಿಸಿಕೊಳ್ಳಲು ನಿಯಮಿತವಾಗಿ ಯೋಗಾಭ್ಯಾಸ ಮಾಡುವುದು ಅತ್ಯಗತ್ಯವಾಗಿದೆ. ಯೋಗವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು" ಎಂದು ತಿಳಿಸಿದರು.
ಅಡಿಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ಆರ್.ವಿ. ಹೆಗಡೆ ಮಾತನಾಡುತ್ತಾ, "ಸಂಪತ್ತು ಮತ್ತು ಐಶ್ವರ್ಯದ ಜೊತೆಗೆ ಆರೋಗ್ಯವೂ ಅತ್ಯಂತ ಮುಖ್ಯವಾಗಿದೆ. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಯೋಗವು ಅತ್ಯಂತ ಪರಿಣಾಮಕಾರಿಯಾದ ಮಾರ್ಗವಾಗಿದೆ. ಸಣ್ಣ ವಯಸ್ಸಿನಿಂದಲೇ ಯೋಗಾಭ್ಯಾಸವನ್ನು ಪ್ರಾರಂಭಿಸಿದರೆ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು" ಎಂದು ಹೇಳಿದರು.
ಯಲ್ಲಾಪುರ ತಾಲೂಕಾ ಯೋಗ ಸ್ಪೋರ್ಟ್ಸ್ ಅಸೋಸಿಯೇಶನ್ ಅಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯ ಯೋಗ ಸಾಧಕರಾದ ಶಂಕರ ಭಟ್ಟ ಪುಣೆ, ಮಂಜುನಾಥ ದೇಸಾಯಿ, ವಿಶಾಲಾಕ್ಷಿ ಭಟ್ಟ, ನಾರಾಯಣ ಭಾಗ್ವತ, ಡಿ.ಎನ್.ಗಾಂವ್ಕರ್, ರವಿ ಹೆಗಡೆ, ವಿ.ಕೆ.ಭಟ್ಟ, ನೇಮಿರಾಜ, ಪಾರ್ವತಿ ಹೆಗಡೆ, ನಾಗವೇಣಿ ಹೆಗಡೆ, ಜಾಹ್ನವಿ ಹೆಗಡೆ ಇವರನ್ನು ಸನ್ಮಾನಿಸಲಾಯಿತು.
ಶಿಕ್ಷಕಿ ರಾಧಾ ಭಟ್ಟ ಪ್ರಾರ್ಥಿಸಿದರು. ಸಂಸ್ಥೆಯ ಸಹಕಾರ್ಯದರ್ಶಿ ಚಂದ್ರಶೇಖರ ಭಟ್ಟ ಸ್ವಾಗತಿಸಿದರು. ಜಿಲ್ಲಾಧ್ಯಕ್ಷ ಅನಿಲ ಕರಿ ಪ್ರಾಸ್ತಾವಿಕ ಮಾತನಾಡಿದರು. ಶಿವಪ್ರಸಾದ ಭಟ್ಟ ಕಾರ್ಯಕ್ರಮವನ್ನು ನಿರ್ವಹಿಸಿದರು. ಯೋಗ ಮಾತೆ ಆಶಾ ಭಗನಗದ್ದೆ ವಂದಸಿದರು.