Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Sunday, 15 September 2024

ಶ್ರೀಕೃಷ್ಣಾರ್ಪಣಂ ಸಮಾರಂಭ ಬಹಳ ಔಚಿತ್ಯಪೂರ್ಣವಾಗಿದೆ: ಶಾಸಕ ಶಿವರಾಮ ಹೆಬ್ಬಾರ್

IMG-20240915-232002 ಯಲ್ಲಾಪುರ : ನಮ್ಮ ಸನಾತನ ಸಂಸ್ಕಾರ ಹಾಗೂ ಮಹೋನ್ನತ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಶ್ರೀಕೃಷ್ಣಾರ್ಪಣಂ ಸಮಾರಂಭವು ಬಹಳ ಔಚಿತ್ಯಪೂರ್ಣವಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು. 
 ಅವರು ರವಿವಾರ ಯಲ್ಲಾಪುರ ಪಟ್ಟಣದ ಅಡಿಕೆ ಭವನದಲ್ಲಿ ಸುಜ್ಞಾನ ಸೇವಾ ಫೌಂಡೇಷನ್, ಇ-ಯಲ್ಲಾಪುರ ಡಿಜಿಟಲ್ ನ್ಯೂಸ್, ಸುಜ್ಞಾನ ವಾಹಿನಿ ಪತ್ರಿಕೆ ವತಿಯಿಂದ, ಗೌತಮ ಜ್ಯುವೆಲರ್ಸ್, ಹಾಂಗ್ಯೊ ಐಸ್ ಕ್ರೀಂ, ಟಿ.ಎಸ್.ಎಸ್, ರಂಗ ಸಹ್ಯಾದ್ರಿ ಇವು ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀಕೃಷ್ಣಾರ್ಪಣಂ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. 
   ಮಕ್ಕಳ ಬಾಲ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮವು ಬಹಳ ಮಹತ್ವದ್ದಾಗಿದೆ, ಮಕ್ಕಳಿಗೆ ಕೃಷ್ಣನ ವೇಷ ತೊಡಿಸುವ ಮೂಲಕ ಪಾಲಕರು ಸಂಭ್ರಮಿಸುವ ಮಾದರಿಯಾದ ಕಾರ್ಯಕ್ರಮ ಇದಾಗಿದೆ ಎಂದು ಶ್ಲಾಘಿಸಿದರು. IMG-20240915-231954 ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಮಕ್ಕಳಿಗೆ ಕೃಷ್ಣನ ವೇಷ ಹಾಕಿ ಸಂಭ್ರಮಿಸುವ ಜೊತೆಯಲ್ಲಿ ಪುರಾಣ, ಇತಿಹಾಸದ ಕುರಿತಾದ ಕಲ್ಪನೆಯನ್ನೂ ಮೂಡಿಸಿದಾಗ ಸಾರ್ಥಕತೆ ಬರುತ್ತದೆ. ಸುಜ್ಞಾನ ಸೇವಾ ಫೌಂಡೇಷನ್, ಇ-ಯಲ್ಲಾಪುರ ಡಿಜಿಟಲ್ ನ್ಯೂಸ್, ಸುಜ್ಞಾನ ವಾಹಿನಿ ಪತ್ರಿಕೆ ಹಾಗೂ ಸಂಘಟಕರ ಕಾರ್ಯ ಮಾದರಿಯಾಗಿದೆ ಎಂದರು. 
   ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆಯ ವಿಜೇತರಾದ ಪ್ರಥಮ,ದ್ವಿತೀಯ,ತೃತೀಯ ಬಹುಮಾನ ವಿಜೇತರಾದ ಮಕ್ಕಳಿಗೆ ನಗದು ಬಹುಮಾನ, ಬೆಳ್ಳಿಯ ಸ್ಮರಣಿಕೆ, ಪಾರಿತೋಷಕ, ಪದಕ, ಪ್ರಶಸ್ತಿಪತ್ರ ಹಾಗೂ ಒಂಭತ್ತು ಸಮಾಧಾನ ಬಹುಮಾನ ವಿಜೇತರಿಗೆ ಪಾರಿತೋಷಕ, ಪದಕ, ಪ್ರಶಸ್ತಿ ಪತ್ರ ವಿತರಿಸಲಾಯಿತು. 
   ಈ ಸಮಾರಂಭದಲ್ಲಿ ಶಿರಸಿಯ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಅವರಿಗೆ ಪ್ರತಿಷ್ಠಿತ ಸುಜ್ಞಾನ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. 
   ಪ್ರಶಸ್ತಿ ಸ್ವೀಕರಿಸಿದ ಅನಂತಮೂರ್ತಿ ಹೆಗಡೆ ಮಾತನಾಡಿ, ಪ್ರೀತಿಯಿಂದ ಗೌರವಿಸಿರುವುದಕ್ಕೆ ಋಣಿಯಾಗಿದ್ದೇನೆ ಎಂದ ಅವರು, ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಸಂಘಟಿಸುತ್ತಾ, ಜವಾಬ್ದಾರಿಯುತವಾಗಿ ನಿರ್ವಹಣೆ ಮಾಡುತ್ತ ಬಂದಿರುವುದು ಶ್ಲಾಘನೀಯವಾಗಿದೆ ಎಂದರು. 
   ಸುಜ್ಞಾನ ಸೇವಾ ಫೌಂಡೇಷನ್ ಅಧ್ಯಕ್ಷ ಜಿ.ಎನ್.ಭಟ್ಟ ತಟ್ಟಿಗದ್ದೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆ ನಡೆದು ಬಂದ ಹಾದಿ ಹಾಗೂ ಧ್ಯೇಯೋದ್ದೇಶಗಳನ್ನು ವಿವರಿಸಿ, ನಮ್ಮ ಸಂಸ್ಥೆಯು ಅನೇಕ ಮೌಲ್ಯಯುತ ವೈವಿಧ್ಯಮಯ ಚಟುವಟಿಕೆಗಳನ್ನು ಆಯೋಜಿಸುತ್ತಿದೆ. ಇ-ಯಲ್ಲಾಪುರ ಡಿಜಿಟಲ್ ನ್ಯೂಸ್, ಸುಜ್ಞಾನ ವಾಹಿನಿ ಪತ್ರಿಕೆಯ ಮೂಲಕ ನಿತ್ಯ ಸಾವಿರಾರು ಜನರ ನಡುವೆ ಸಂಪರ್ಕ ಸೇತುವಾಗಿ ಕಾರ್ಯನಿರ್ವಹಿಸುತ್ತ, ಎಲ್ಲರ ಸಹಕಾರದೊಂದಿಗೆ ಜನರ ವಿಶ್ವಾಸ ಗಳಿಸಿದೆ ಎಂದರು. 
    ಸ್ಪರ್ಧೆಯ ನಿರ್ಣಾಯಕರಾಗಿ ಸಹಕರಿಸಿದ ಶಿಕ್ಷಕ ರಾಘವೇಂದ್ರ ಹೆಗಡೆ, ಪತ್ತಾರ್ ಸ್ಟುಡಿಯೊದ ಗಣೇಶ ಪತ್ತಾರ ಅವರನ್ನು ಗೌರವಿಸಲಾಯಿತು. 
   ಸಮಾರಂಭದಲ್ಲಿ ಸುಜ್ಞಾನ ವಾಹಿನಿ ಪತ್ರಿಕೆಯಲ್ಲಿ ಪ್ರಕಟಿಸಲಾದ ವಿಶೇಷ ಪುರವಣಿಯನ್ನು ಗಣ್ಯರು ಬಿಡುಗಡೆಗೊಳಿಸಿದರು. 
   ವಿಶ್ರಾಂತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ, ಗೌತಮ ಜ್ಯುವೆಲರ್ಸ್ನ ಮಾಲೀಕ ಪ್ರಕಾಶ ಶೇಟ್, ಸಾಮಾಜಿಕ ಕಾರ್ಯಕರ್ತರ ವಿಜಯ ಮಿರಾಶಿ, ವಿಕಾಸ ಬ್ಯಾಂಕ್ ಅಧ್ಯಕ್ಷ ಮುರಳಿ ಹೆಗಡೆ, ಮಲೆನಾಡು ಸೊಸೈಟಿ ಅಧ್ಯಕ್ಷ ಎಂ ಆರ್ ಹೆಗಡೆ, ಅಡಿಕೆ ವರ್ತಕರ ಸಂಘದ ಅಧ್ಯಕ್ಷ ರವಿ ಹೆಗಡೆ, ಜಿಲ್ಲಾ ಬಿಜೆಪಿ ರೈತಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಲಿಂಗಯ್ಯ ಅಲ್ಲಯ್ಯನಮಠ ಉಪಸ್ಥಿತರಿದ್ದರು. 
   ಸುಜ್ಞಾನ ಸೇವಾ ಫೌಂಡೇಷನ್ ಕಾರ್ಯದರ್ಶಿ ಜ್ಯೋತಿರಾದಿತ್ಯ ಭಟ್ಟ ಸ್ವಾಗತಿಸಿದರು. ಪತ್ರಕರ್ತ ಶ್ರೀಧರ ಅಣಲಗಾರ ಸನ್ಮಾನಪತ್ರ ವಾಚಿಸಿದರು. ಶಿಕ್ಷಕ ಸಣ್ಣಪ್ಪ ಭಾಗ್ವತ ನಿರ್ವಹಿಸಿದರು. ಶಿಕ್ಷಕ ಎಂ.ರಾಜಶೇಖರ ವಂದಿಸಿದರು. 
    ಶ್ರೀಪಾದ ಭಟ್ಟ ಅವರು ಕೃಷ್ಣನ ಕುರಿತಾದ ಭಕ್ತಿ ಗೀತೆಗಳನ್ನು ಹಾಡಿದರು. ವಿದುಷಿ ವಿನುತಾ ಹೆಗಡೆ ಅವರ ಭರತನಾಟ್ಯ ಗಮನ ಸೆಳೆಯಿತು.

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಟವಾಳ ಶಾಲೆಯಲ್ಲಿ ಸಸಿ ನೆಟ್ಟು ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿದ ಶಾಸಕ ಹೆಬ್ಬಾರ್

IMG-20240915-225928 ಯಲ್ಲಾಪುರ‌: ಯಲ್ಲಾಪುರ ತಾಲೂಕಿನ ತಾಟವಾಳ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಶಿವರಾಮ ಹೆಬ್ಬಾರ್ ಸಸಿ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. 
  ಪರಿಸರ ಸಂರಕ್ಷಣೆಯ ಮಹತ್ವವನ್ನು ನೆನೆಸಿದ ಶಾಸಕ ಶಿವರಾಮ ಹೆಬ್ಬಾರ್, ಪ್ರಕೃತಿಯ ಸಮತೋಲನ ಕಾಪಾಡುವುದು ಮತ್ತು ಪರಿಸರದ ಮೇಲೆ ಮಾನವೀಯ ಚಟುವಟಿಕೆಗಳ ಪರಿಣಾಮವನ್ನು ಕಡಿಮೆ ಮಾಡುವುದು ಅತ್ಯವಶ್ಯಕವಾಗಿದೆ. ಹಸಿರು ಅಭಿಯಾನವು ಮಾತ್ರ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ನಿರ್ಧಾರವಲ್ಲ, ಅದು ಜನರಿಗೆ ಪ್ರಜಾಪ್ರಭುತ್ವದ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಒಂದು ವಿನೂತನ ವಿಧಾನವೂ ಆಗಿದೆ. ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ಪ್ರತಿಯೊಬ್ಬ ನಾಗರಿಕನ ಪಾಲಿನ ಜವಾಬ್ದಾರಿಯನ್ನು ನೆನಪಿಸುವ ಮತ್ತು ಪರಿಸರದ ಕುರಿತು ಅಗತ್ಯ ಕ್ರಮ ಕೈಗೊಳ್ಳುವ ಸಂದೇಶವನ್ನು ಅವರ ಸಸಿ ನೆಡುವ ಕಾರ್ಯಕ್ರಮದ ಮೂಲಕ ಹಂಚಿಕೊಂಡರು. IMG-20240915-225918 ಈ ಸಂದರ್ಭದಲ್ಲಿ ಶಾಸಕರು ಶಾಲೆಯ ಮೂಲ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು. ಶಾಲೆಯ ಮೂಲಭೂತ ಸೌಕರ್ಯಗಳನ್ನು ಸುಧಾರಿಸಲು ಮತ್ತು ಮಕ್ಕಳಿಗೆ ಉತ್ತಮ ಶಿಕ್ಷಣ ಸೌಲಭ್ಯಗಳನ್ನು ಒದಗಿಸಲು ಬೇಕಾದ ನಿರ್ಧಾರಗಳನ್ನು ಮುಖ್ಯ ಶಿಕ್ಷಕಿ ಗಂಗಾ ಟಾಕೂರ್ ಮತ್ತು ಸಹ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಊರ ನಾಗರಿಕರೊಂದಿಗೆ ಚರ್ಚೆ ನಡೆಸಿದರು. ಶಾಲೆಯ ಮೂಲಭೂತ ಸೌಕರ್ಯಗಳ ಕೊರತೆಗಳನ್ನು ನಿವಾರಿಸಲು ಅಗತ್ಯತೆ ಬಗ್ಗೆ ತಮಗೆ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರುಗಳ ಗಮನಕ್ಕೆ ತರಬೇಕೆಂದು ಸೂಚಿಸಿದರು. IMG-20240915-225908 ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಊರಿನ ನಾಗರಿಕರು ಹಾಗೂ ಗ್ರಾಮೀಣ ಪ್ರದೇಶದ ಪ್ರಮುಖರು ಭಾಗವಹಿಸಿದ್ದರು. ಕ್ಷೇತ್ರದ ಅಧಿಕಾರಿಗಳು ಕೂಡ ಈ ಸಮಾರಂಭದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು, ಸ್ಥಳೀಯ ಆಡಳಿತವನ್ನು ಬಲಪಡಿಸಲು ಶಾಸಕರೊಂದಿಗೆ ಚರ್ಚೆ ನಡೆಸಿದರು. 
 ಯಲ್ಲಾಪುರ ತಹಶೀಲ್ದಾರ್ ಯಲ್ಲಪ್ಪ ಗೊನೆಣ್ಣನವರ, ಮುಂಡಗೋಡ ತಹಶೀಲ್ದಾರ ಶಂಕರ ಗೌಡ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ವಿಜಯ ಮಿರಾಶಿ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಸುನಂದಾ ದಾಸ್ ಮೊದಲಾದ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅವರ ಉಪಸ್ಥಿತಿಯಿಂದ ಸ್ಥಳೀಯ ಸಮಸ್ಯೆಗಳ ಕುರಿತು ಚರ್ಚೆ ನಡೆಯಿತು. IMG-20240915-225856 ತಾಟವಾಳ ಶಾಲೆಯ ಮಕ್ಕಳು ಮಾನವ ಸರಪಳಿಯಲ್ಲಿ ಭಾಗವಹಿಸಿದ್ದ ಈ ಕಾರ್ಯಕ್ರಮವು ತಾಟವಾಳ ಗ್ರಾಮದ ಜನತೆಗೆ ಶಾಶ್ವತವಾಗಿ ನೆನಪಾಗುವಂತಹದ್ದಾಗಿದ್ದು, ಮಕ್ಕಳಿಗೆ ಪರಿಸರದ ಮಹತ್ವವನ್ನು ತಿಳಿಸುವ ಜೊತೆಗೆ, ಶಾಲೆಗೆ ಸಂಬಂಧಿಸಿದ ಸೌಲಭ್ಯಗಳನ್ನು ಸುಧಾರಿಸುವ ಕುರಿತ ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡಿತು.
.
.
.

ಕೇರಳ ಮೂಲದವರಿಂದ ಯಲ್ಲಾಪುರದಲ್ಲಿ ಓಣಂ ಆಚರಣೆ. ಸಾಂಪ್ರದಾಯಿಕ ಖುಷಿಯಲ್ಲಿ ಮಿಂದೆದ್ದ ಮಲಯಾಳಿಗಳು !

IMG-20240915-214308 ಯಲ್ಲಾಪುರ : ಕೇರಳ ಮೂಲದ ಮಲಯಾಳಿ ಸಮಾಜದವರು ಭಾನುವಾರ ಓಣಂ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. 
  ಓಣಂ ಹಬ್ಬವು ಕೇರಳ ರಾಜ್ಯದ ಸಂಸ್ಕೃತಿಯ ಪ್ರತೀಕವಾಗಿದೆ. ಆಕರ್ಷಕ ಹೂವಿನ ರಂಗೋಲಿ ಹಾಕುವುದು ಹಬ್ಬದ ವಿಶೇಷತೆಗಳಲ್ಲೊಂದಾಗಿದೆ. ಸಾಂಪ್ರದಾಯಿಕ ಉಡುಗೆ ತೊಟ್ಟು, ಕೇರಳ ಸಮಾಜದ ಸ್ತ್ರೀ ಪುರುಷರು ಮನೆಗಳಲ್ಲಿ ವರ್ಣರಂಜಿತ ರಂಗೋಲಿ ಹಾಕಿ ಗಮನ ಸೆಳೆದರು. IMG-20240915-214259 ಓಣಂ ಕೇರಳ ರಾಜ್ಯದ ಪ್ರಮುಖ ಹಬ್ಬಗಳಲ್ಲಿ ಒಂದು, ಇದನ್ನು ಕೇರಳದ ಮಲಯಾಳಿ ಸಮುದಾಯದವರು ಬಹಳ ಉತ್ಸವದ ಜೊತೆಗೆ ಆಚರಿಸುತ್ತಾರೆ. ಸಾಮಾನ್ಯವಾಗಿ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಿನಲ್ಲಿ ಬರುವ ಓಣಂ ಹಬ್ಬವು ರೈತರ ಹಬ್ಬವಾಗಿದ್ದು, ಬೆಳೆಗೆ ಕೃತಜ್ಞತೆ ಸಲ್ಲಿಸುವ ಉದ್ದೇಶವನ್ನು ಕೂಡ ಈ ಹಬ್ಬ ಹೊಂದಿದೆ. ಇದನ್ನು ಧನದ ವೃದ್ದಿಯ ಸಂತೋಷದ ಹಾಗೂ ಸಮೃದ್ಧಿಯ ಹಬ್ಬವೆಂದು ಪರಿಗಣಿಸಲಾಗುತ್ತದೆ. 
    ಓಣಂ ಹಬ್ಬದ ಮೂಲವು ಮಹಾಬಲಿಚಕ್ರವರ್ತಿ ಎಂಬ ದಾನಿಯ ನೆನಪಿಗೆ ಸೇರಿದೆ. ಪುರಾಣ ಪ್ರಕಾರ, ಮಹಾಬಲಿಚಕ್ರವರ್ತಿ ತನ್ನ ಪ್ರಜೆಗಳಿಗೆ ಬಹಳ ಒಳ್ಳೆಯ ಹಾಗೂ ನ್ಯಾಯಪ್ರದ ಆಡಳಿತವನ್ನು ನೀಡಿದ್ದನು ಎಂದು ಐಹಿತ್ಯವಿದೆ. ಅವನ ಸಾಮ್ರಾಜ್ಯದಲ್ಲಿ ಎಲ್ಲರೂ ಸಮಾನತೆ, ಶಾಂತಿ ಮತ್ತು ಸಂತೋಷದಿಂದ ಜೀವನ ನಡೆಸುತ್ತಿದ್ದರು. ಆದರೆ, ದೇವತೆಗಳು ಮಹಾಬಲಿಯು ಹೆಚ್ಚು ಶಕ್ತಿಶಾಲಿಯಾಗುತ್ತಾನೆ ಎಂಬ ಭಯದಿಂದ ಅವನನ್ನು ಪಾತಾಳ ಲೋಕಕ್ಕೆ ಕಳಿಸುತ್ತಾರೆ. ಆದರೂ, ಮಹಾಬಲಿ ತನ್ನ ಪ್ರಜೆಗಳನ್ನು ವರ್ಷದಲ್ಲಿ ಒಂದು ಬಾರಿ ಭೇಟಿಯಾಗಲು ಅವಕಾಶ ಪಡೆಯುತ್ತಾನೆ ಎಂಬ ನಂಬಿಕೆ ಇದೆ. ಈ ಸಮಾರಂಭವೇ ಓಣಂ ಹಬ್ಬ. IMG-20240915-214247 ಓಣಂ ಹಬ್ಬವನ್ನು ದಶದಿನಗಳ(ಹತ್ತು ದಿನ) ಉತ್ಸವದ ರೂಪದಲ್ಲಿ ಆಚರಿಸಲಾಗುತ್ತದೆ. ಮೊದಲ ದಿನ 'ಅಥಮ್' ದಿನವೆಂದು ಕರೆಯಲಾಗುತ್ತದೆ, ಇದರಿಂದ ಹಬ್ಬದ ಆರಂಭವಾಗುತ್ತದೆ. ಮನೆಗಳ ಮುಂಭಾಗದಲ್ಲಿ ಪೂಕಳಂ ಎಂಬ ಹೂವಿನಿಂದ ಅಲಂಕಾರ ಮಾಡುವುದು ಓಣಂ ಹಬ್ಬದ ಪ್ರಮುಖ ಅಂಗವಾಗಿದೆ. ಪ್ರತಿ ದಿನವೂ ಹೊಸ ಹೊಸ ಹೂಗಳಿಂದ ಪೂಕಳಂ ಅಲಂಕಾರವನ್ನು ಹೆಚ್ಚಿಸುತ್ತಾರೆ. ವಿಶೇಷ ಬೋಜನವೂ ಹಬ್ಬದ ಮುಖ್ಯ ಆಕರ್ಷಣೆ, ಇದರಲ್ಲಿ ವಿವಿಧ ಸವಿರುಚಿಯ ಅಡುಗೆಗಳು ಬಾಳೆಯ ಎಲೆಗಳ ಮೇಲೆ ಸೇವಿಸಲಾಗುತ್ತದೆ. 
    ಹಬ್ಬದ ಸಂದರ್ಭಗಳಲ್ಲಿ ಸಾಂಪ್ರದಾಯಿಕ ಕೇರಳ ಕಲೆ, ಸಾಂಪ್ರದಾಯಿಕ ನೃತ್ಯಗಳು, ಇತ್ಯಾದಿ ವಿವಿಧ ಕ್ರೀಡಾಕೂಟಗಳನ್ನು ನಡೆಸಲಾಗುತ್ತದೆ. ಒಟ್ಟಿನಲ್ಲಿ, ಓಣಂ ಮಲಯಾಳಿಗಳಲ್ಲಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಭಿವ್ಯಕ್ತಿ ಪಡಿಸುವ ಹಬ್ಬವಾಗಿದ್ದು, ಅದರಲ್ಲಿ ಎಲ್ಲರೂ ಒಂದಾಗಿ ಶಾಂತಿ, ಸಂತೋಷ ಹಾಗೂ ನೆಮ್ಮದಿ ಹಂಚಿಕೊಳ್ಳುತ್ತಾರೆ. IMG-20240915-214236 ಯಲ್ಲಾಪುರ ತಾಲೂಕಿನಲ್ಲಿ ಹಲವಾರು ಕೇರಳ ಮೂಲದ ಕುಟುಂಬಗಳಿದ್ದು, ಕಳೆದ ಹತ್ತು ದಿನಗಳಿಂದ ಆರಬೈಲ ಗ್ರಾಮದ ಪ್ರಭಾಕರ್ ನಾಯರ್ ಅವರ ಮನೆಯಲ್ಲಿ ಓಣಂ ಹಬ್ಬದ ತಯಾರಿಗಳು ನಡೆದವು. ಭಾನುವಾರ ಎಲ್ಲ ಕೇರಳ ಮೂಲದ ಕುಟುಂಬದವರು ಸೇರಿ ಅದ್ದೂರಿಯಾಗಿ ಒಣ ಹಬ್ಬವನ್ನು ಆಚರಿಸಿದರು. 
   ಈ ಸಂದರ್ಭದಲ್ಲಿ ಪ್ರಭಾಕರ್ ನಾಯರ್ ಮತ್ತು ಕುಟುಂಬದವರು, ಯಲ್ಲಾಪುರದ ಕೃಷ್ಣ ನಾಯರ್ ಮತ್ತು ಕುಟುಂಬದವರು ಹಾಗೂ ಶಿವಕುಮಾರ್ ಮತ್ತು ಕುಟುಂಬದವರು ಹಾಗೂ ಎಲ್ಲಾ ಕುಟುಂಬದ ಸದಸ್ಯರು ಉಪಸ್ಥಿತರಿದ್ದು ಹಬ್ಬವನ್ನು ಆಚರಿಸಿದರು. 
   ಹಬ್ಬದ ಹಿನ್ನೆಲೆಯಲ್ಲಿ ಮನೆಗಳಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಯಿತು. ವಿವಿಧ ರೀತಿಯ ಭಕ್ಷ್ಯ, ಭೋಜನಗಳನ್ನು ತಯಾರಿಸಿ ಸ್ನೇಹಿತರು, ಬಂಧುಗಳೊಂದಿಗೆ ಸವಿಯಲಾಯಿತು’ ಎಂದು ಕೇರಳ ಸಮಾಜದ ಪ್ರಮುಖರಾದ ಶಿವಕುಮಾರ್ ಅವರು ತಿಳಿಸಿದ್ದಾರೆ.
.
.
.

ಶಾಸಕ ಶಿವರಾಮ ಹೆಬ್ಬಾರ್ ಅವರು ಗಣೇಶೋತ್ಸವ ಸಮಿತಿಯ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದರು

IMG-20240915-171308 ಯಲ್ಲಾಪುರ: ಶಾಸಕರಾದ ಶಿವರಾಮ ಹೆಬ್ಬಾರ್ ಅವರು ರವಿವಾರ ಪಟ್ಟಣದ ವಿವಿಧ ಪ್ರದೇಶಗಳಲ್ಲಿ ಸ್ಥಳೀಯ ಗಜಾನನೋತ್ಸವ ಸಮಿತಿಯ ವತಿಯಿಂದ ಪ್ರತಿಷ್ಠಾಪಿಸಲಾದ ಶ್ರೀ ಗಣಪತಿ ಮೂರ್ತಿಗಳ ದರ್ಶನ ಪಡೆದು, ಪೂಜೆ ಸಲ್ಲಿಸಿದರು. IMG-20240915-171259 ಶಾಸಕರು ಮೊದಲು ಪಟ್ಟಣದ ತಿಲಕ ಚೌಕ್‌ನಲ್ಲಿರುವ ಗಣೇಶ ಮೂರ್ತಿಯನ್ನು ದರ್ಶನ ಪಡೆದರು. ನಂತರ ದೇವಿ ಮೈದಾನ, ಕಾಳಮ್ಮನಗರ, ಉದ್ಯಮ ನಗರ, ಬಾಳಗಿಮನೆ ಹಾಗೂ ತಟಗಾರ್ ಕ್ರಾಸ್ ನಲ್ಲಿರುವ ಗಣೇಶ ಮೂರ್ತಿಗಳನ್ನು ಭೇಟಿ ಮಾಡಿ, ಪೂಜೆ ಸಲ್ಲಿಸಿ, ಕ್ಷೇತ್ರದ ಒಳಿತಿಗಾಗಿ ಪ್ರಾರ್ಥಿಸಿದರು. 
   ಗಣೇಶೋತ್ಸವದ ಅವಧಿಯಲ್ಲಿ ಶಾಸಕರು ಕ್ಷೇತ್ರದ ವಿವಿಧ ಭಾಗಗಳಲ್ಲಿರುವ ಗಣೇಶ ಮೂರ್ತಿಗಳನ್ನು ಪೂಜೆ ಸಲ್ಲಿಸಿದ ನಂತರ, ಅಲ್ಲಿಯ ಜನರೊಂದಿಗೆ ಸಂವಾದ ನಡೆಸಿದರು. ಅವರ ಸಮಸ್ಯೆಗಳನ್ನು ಆಲಿಸಿದರು IMG-20240915-172009 ಶಿವರಾಮ ಹೆಬ್ಬಾರ್ ಅವರು ರವಿವಾರ ಪಟ್ಟಣದ ನೂತನ ನಗರದಲ್ಲಿ ಸ್ಥಳೀಯ ಗಜಾನನೋತ್ಸವ ಸಮಿತಿಯ ವತಿಯಿಂದ ಪ್ರತಿಷ್ಠಾಪಿಸಿರುವ ಶ್ರೀ ಗಣಪತಿ ಮೂರ್ತಿಯ ದರ್ಶನವನ್ನು ಪಡೆದರು. 
   ನಂತರದ ಗಜಾನನೋತ್ಸವ ಸಮಿತಿಯ ವತಿಯಿಂದ ಆಯೋಜಿಸಿದ್ದ ಅನ್ನ ಪ್ರಸಾದ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ತಾವು ಸಹ ಕೆಲ ಕಾಲ ಭಕ್ತಾದಿಗಳಿಗೆ ಅನ್ನ ಪ್ರಸಾದವನ್ನು ವಿತರಿಸಿದರು. 
    ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ವಿಜಯ ಮಿರಾಶಿ, ವಿಕಾಸ ಬ್ಯಾಂಕ್ ಅಧ್ಯಕ್ಷರಾದ ಮುರಳಿ ಹೆಗಡೆ ಸೇರಿದಂತೆ ಸ್ಥಳೀಯ ಪ್ರಮುಖರು, ಗಜಾನನೋತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
.
.
.

ಕರಡು ಕಸ್ತೂರಿರಂಗನ್ ವರದಿ ವಿರೋದಕ್ಕೆ ಬದ್ಧ: ಸರ್ಕಾರಕ್ಕೆ ಗಾಂಭೀರ್ಯತೆ ಅರಿವಿದೆ, ನಿಲುವು ಜನಪರವಾಗಿರುವದು: ಮಂಕಾಳ ವೈದ್ಯ.

IMG-20240915-134218 ಹೊನ್ನಾವರ: ಅವೈಜ್ಞಾನಿಕ ಕಸ್ತೂರಿರಂಗನ್ ವರದಿಯ ಕುರಿತು ಸರಕಾರಕ್ಕೆ ಗಾಂಭೀರ್ಯತೆಯ ಅರಿವಿದೆ. ಸರಕಾರದ ನಿಲುವು ಜನಪರವಾಗಿರುವದು. ಅಲ್ಲದೇ, ಕರಡು ಕಸ್ತೂರಿರಂಗನ್ ವರದಿ ವಿರೋಧಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು. 
   ಸೆ.19 ರಂದು ಕಸ್ತೂರಿರಂಗನ್ ವರದಿ ಕುರಿತು, ಬೆಂಗಳೂರಿನಲ್ಲಿ ಜನಪ್ರತಿನಿಧಿಗಳ ಸಭೆ ಹಾಗೂ ಸೆ.25 ರಂದು ರಾಜ್ಯ ಸರಕಾರ ವರದಿಯ ಕುರಿತು ನಿಲುವು ಪ್ರಕಟಿಸುವದರಿಂದ, ಅರಣ್ಯವಾಸಿಗಳ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಇಂದು ಸಚಿವರ ಹೊನ್ನಾವರ ತಾಲೂಕಿನ ಕಛೇರಿಯಲ್ಲಿ ನಿಯೋಗ ಭೇಟಿಯಾಗಿ ಮನವಿ ನೀಡಿದ ಸಂದಂರ್ಭದಲ್ಲಿ ಮೇಲಿನಂತೆ ಹೇಳಿದರು. IMG-20240915-134203 ಕಸ್ತೂರಿರಂಗನ್ ವರದಿ ಸಚಿವ ಸಂಪುಟ ಉಪಸಮಿತಿ ಸದ್ಯಸರು ಆಗಿರುವ ಸಚಿವರು, ವರದಿ ತಿರಸ್ಕರಿಸಲು ತೀವ್ರ ಒತ್ತಡ ರಾಜ್ಯಾದಂತ ಇದ್ದು, ವರದಿ ತಿರಸ್ಕರಿಸಲು ಒತ್ತಡ ತರಲಾಗುವದು ಎಂದು ಅವರು ನಿಯೋಗಕ್ಕೆ ಭರವಸೆ ನೀಡಿದರು. 
   ಉತ್ತರ ಕನ್ನಡದಲ್ಲಿ ವರದಿಯಿಂದ ಜನರ ಮೂಲಭೂತ ಸೌಕರ್ಯ ಮತ್ತು ಅರಣ್ಯವಾಸಿಗಳ ಹಕ್ಕಿಗೆ ಆತಂಕ ಉಂಟಾಗುವದು ಎಂದು ಅವರು ತಿಳಿಸಿದರು.  
  ಚರ್ಚೆಯಲ್ಲಿ ಪ್ರಧಾನ ಸಂಚಾಲಕ ಜೆ.ಎಮ್.ಶೆಟ್ಟಿ, ಮಾತನಾಡಿ ವರದಿ ಜಾರಿಯಿಂದ ಜನರ ಸ್ವಾತಂತ್ರ ಜೀವನಕ್ಕೆ ಭಾದಕ ಉಂಟಾಗುವದು ಎಂದು ಅವರು ಹೇಳಿದರು. IMG-20240915-134153 ನಿಯೋಗದಲ್ಲಿ ದೇವರಾಜ್ ಗೊಂಡ, ಬಾಲಚಂದ್ರ ಶೆಟ್ಟಿ ಅಚವೆ, ಮಹಾಬಲೇಶ್ವರ ನಾಯ್ಕ ಬೇಡ್ಕಣಿ, ಸಂಕೇತ್ ಹೊನ್ನಾವರ, ದಿನೇಶ್ ನಾಯ್ಕ್ ಸಿದ್ದಾಪುರ, ವಿನೋದ ನಾಯ್ಕ ಎಲ್ಲೋಟ್ಗಿ, ಚಂದು ಬೆಳಕೆ, ಸುರೇಶ ಕರ್ಕೋ, ಅಯೂಬನಗರ, ಉತ್ತರಕನ್ನಡ ಮುಂತಾದವರು ಉಪಸ್ಥಿತರಿದ್ದರು. 
 ಅವೈಜ್ಞಾನಿಕ ವರದಿ: 
 ಕಸ್ತೂರಿರಂಗನ್ ವರದಿ ಅವೈಜ್ಞಾನಿಕವಾಗಿದ್ದು, ಸೆಟಲೈಟ್ ಚಿತ್ರಣದ ಮೂಲಕ ತಯಾರಿಸಿದ ವರದಿಯು ವಾಸ್ತವಿಕ ಮತ್ತು ನೈಜತೆಯ ಚಿತ್ರಣಕ್ಕೆ ವೈತಿರಿಕ್ತವಾಗಿದೆ. ಅಲ್ಲದೇ ಗ್ರಾಮದ ಶೇ. 20 ಕ್ಕಿಂತ ಹೆಚ್ಚು ಭೌಗೋಳಿಕ ಪ್ರದೇಶ ಜೀವಿವೈವಿಧ್ಯ ಪರಿಸರ ಸೂಕ್ಷ್ಮವಾಗಿರುವ ಮಾನದಂಡದ ಅಡಿಯಲ್ಲಿ ಸೂಕ್ಷ್ಮ ಪ್ರದೇಶವೆಂದು ಗುರುತಿಸುವುದು ಅವೈಜ್ಞಾನಿಕ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಚರ್ಚೆಯ ಸಂದಂರ್ಭದಲ್ಲಿ ಹೇಳಿದರು.
.
.
.

ಚಂದ್ಗುಳಿಯ ಸಣ್ಣ ಗ್ರಾಮದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಜಯಕರ್ನಾಟಕ ಸಂಘಟನೆ ಮಾನವ ಸರಪಳಿ ನಿರ್ಮಾಣ ಪರಿಸರ ದಿನಾಚರಣೆ ಆಚರಣೆ

ಜಯಕರ್ನಾಟಕ ಸಂಘಟನೆ ಮಾನವ ಸರಪಳಿ ನಿರ್ಮಾಣ ಪರಿಸರ ದಿನಾಚರಣೆ ಆಚರಣೆ IMG-20240915-124405 ಯಲ್ಲಾಪುರ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮವು ತಾಟವಾಳ ಗ್ರಾಮದಲ್ಲಿ ಯಶಸ್ವಿಯಾಗಿ ನಡೆಯಿತು. ಜಯಕರ್ನಾಟಕ ತಾಲೂಕ ಸಂಘಟನೆ ಅಧ್ಯಕ್ಷರು ಮತ್ತು ಸಂಘಟನೆಯ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾನವ ಸರಪಳಿ ನಿರ್ಮಿಸಿದರು. IMG-20240915-124415 ಈ ಸಂದರ್ಭದಲ್ಲಿ, ಸಂಘಟನೆಯ ಸದಸ್ಯರು ಪರಿಸರದ ರಕ್ಷಣೆಗೆ ಪ್ರಾಮುಖ್ಯತೆ ನೀಡುವ ಉದ್ದೇಶದಿಂದ ಸಸಿ ನೆಟ್ಟು ಪರಿಸರ ದಿನಾಚರಣೆ ಆಚರಿಸಿದರು. ಈ ಕಾರ್ಯಕ್ರಮವು ಸ್ಥಳೀಯ ಸಮುದಾಯದಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡಿತು. IMG-20240915-124427 ಕಾರ್ಯಕ್ರಮದಲ್ಲಿ ತಾಟವಾಳ ಗ್ರಾಮದಲ್ಲಿ ತಾಲೂಕ ಅಧ್ಯಕ್ಷ ವಿಲ್ಸನ್ ಅರ್ ಫರ್ನಾಂಡೀಸ್, ಎಸ್‌ಸಿ-ಎಸ್‌ಟಿ ಅಧ್ಯಕ್ಷ ಚನ್ನಪ ಡಿ ಎಚ್, ಪ್ರಮುಖರಾದ ರಜಬ್ ಅಲಿ ಒಂಟಿ; ಬಸವರಾಜ್ ಧೂಳಿಕೊಪ್ಪ; ಸುಭಾಷ್ ಡಿ ಎಚ್; ಸಾದಿಕ್ ಖಾಜಿ; ಸಂತೋಷ್ ಪೆಡ್ನೇಕರ್; ಮತ್ತು ವಿಠ್ಠಲ್ ಪಾಟೀಲ್ ಸೇರಿದಂತೆ ಹಲವು ಸಂಘಟನೆ ಕಾರ್ಯಕರ್ತರು ಪಾಲ್ಗೊಂಡಿದ್ದರು.   

 ಚಂದ್ಗುಳಿಯ ಸಣ್ಣ ಗ್ರಾಮದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ IMG-20240915-124534 ಯಲ್ಲಾಪುರ: ಚಂದ್ಗುಳಿಯ ಸಣ್ಣ ಗ್ರಾಮ ಪಂಚಾಯತದ ಸದಸ್ಯರು, ಸ್ಥಳಿಯ ಶಾಲಾ ಮಕ್ಕಳು, ಅಂಗನವಾಡಿ ಕಾರ್ಯಕರ್ತೆಯರು, ಸ್ವ ಸಹಾಯ ಸಂಘದ ಸದಸ್ಯರು ಹಾಗೂ ಶಿಕ್ಷಕರು ಸೇರಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ವಿಶೇಷ ರೀತಿಯಲ್ಲಿ ಆಚರಿಸಿದರು. 250 ಕ್ಕೂ ಹೆಚ್ಚು ಜನರು ಮಾನವ ಸರಪಳಿ ನಿರ್ಮಿಸಿ ಪ್ರಜಾಪ್ರಭುತ್ವದ ಮಹತ್ವವನ್ನು ಜಾಗೃತಗೊಳಿಸಿದರು. 
  ಕಾರ್ಯಕ್ರಮದ ಅಂಗವಾಗಿ ಸರಕಾರದ ಸುತ್ತೋಲೆಯಂತೆ ನಾಡಗೀತೆ, ಮಾನವ ಸರಪಳಿ ಮತ್ತು ಜೈಕಾರ ನಡೆಯಿತು. ನಂತರ, ಸ್ವಚ್ಚತೆ ಮತ್ತು ಸಸಿನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವಿವಿಧ ಗ್ರಾಮಗಳ ಮಕ್ಕಳು, ಅಂಗನವಾಡಿ ಸಹಾಯಕರು, ಧ.ಗ್ರಾ ಯೋಜನೆಯ ಕಾರ್ಯಕರ್ತರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು. IMG-20240915-124525 ಮುಖ್ಯಾಧ್ಯಾಪಕ ಸತೀಶ ಶೆಟ್ಟಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಗ್ರಾ.ಪಂ. ಅಧ್ಯಕ್ಷೆ ಶಿಲ್ಪಾ ನಾಯ್ಕ, ಶಿಕ್ಷಕರಾದ ಸುರೇಶ ನಾಯ್ಕ, ರಾಘವೇಂದ್ರ ಮಳಲಗಾಂವ್, ಪತ್ರಕರ್ತ ನರಸಿಂಹ ಸಾತೊಡ್ಡಿ ಮತ್ತು ಹಾಲು ಉತ್ಪಾದಕ ಸಂಘದ ಅಧ್ಯಕ್ಷ ದತ್ತಾತ್ರಯ ಭಟ್ಟ ಸೇರಿದಂತೆ ಹಲವರು ಉಪಸ್ಥಿತರಿದ್ದರು. 
  ಪಂಚಾಯತ ಪಿಡಿಓ ರಾಜೇಶ ಶೇಟ್ ಮತ್ತು ಕಾರ್ಯದರ್ಶಿ ತುಕಾರಾಮ ನಾಯ್ಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದರು.

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಯಲ್ಲಾಪುರದಲ್ಲಿ ಬೃಹತ್ ಮಾನವ ಸರಪಳಿ ನಿರ್ಮಾಣ!

IMG-20240915-112837 ಯಲ್ಲಾಪುರ: "ಪ್ರಜಾಪ್ರಭುತ್ವದ ಅಡಿಗಲ್ಲು ಅಲುಗಾಡುತ್ತಿರುವುದರ ನಡುವೆ ಪ್ರಜಾಪ್ರಭುತ್ವದ ಮಹತ್ವವನ್ನು ನಾವೆಲ್ಲರೂ ಅರ್ಥೈಸಿಕೊಂಡು, ಅದನ್ನು ರಕ್ಷಿಸಲು ಜಾಗೃತರಾಗಬೇಕು" ಎಂದು ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು. ಅವರು ತಾಟವಾಳದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಮಾನವ ಸರಪಳಿಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು. IMG-20240915-112856 ಇಂದಿನ ಯುವ ಜನಾಂಗ ಹಾಗೂ ಮಕ್ಕಳಿಗೆ ಪ್ರಜಾಪ್ರಭುತ್ವದ ಮಹತ್ವವನ್ನು ವಿವರಿಸುವ ನಿಟ್ಟಿನಲ್ಲಿ ಈ ದಿನಾಚರಣೆ ಕನ್ನಡಿಗರಿಗೆ ಮಹತ್ವದ ದಿನವಾಗಿದೆ ಎಂದು ಅವರು ಹೇಳಿದರು. ಇತ್ತೀಚಿನ ದಿನಗಳಲ್ಲಿ ಪ್ರಜಾಪ್ರಭುತ್ವದ ಮುಖ್ಯ ಅಂಶಗಳು ಕುಸಿಯುತ್ತಿವೆ ಎಂಬ ವಾದಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ, ಪ್ರಜಾಪ್ರಭುತ್ವದ ಆಶಯಗಳ ರಕ್ಷಣೆ, ಆದರ್ಶಗಳ ಪಾಲನೆ, ಹಾಗೂ ಸದ್ಯದ ವಾಸ್ತವಿಕತೆಗಳನ್ನು ಸೂಕ್ಷ್ಮವಾಗಿ ನೋಡಬೇಕಾಗಿದೆ. ಈ ಉದ್ದೇಶಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮುತವರ್ಜಿ ವಹಿಸಿ, ರಾಜ್ಯಾದ್ಯಂತ ಜನರಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಅರಿವು ಮೂಡಿಸಲು ಬೃಹತ್ ಮಾನವ ಸರಪಳಿಯ ನಿರ್ಮಾಣಕ್ಕೆ ಕರೆ ನೀಡಿದ್ದಾರೆ ಎಂದು ಹೆಬ್ಬಾರ್ ಹೇಳಿದರು. IMG-20240915-113047 ರಾಜ್ಯ ವಿಕೇಂದ್ರೀಕರಣ ಮತ್ತು ಯೋಜನಾ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ, "ಬ್ರಿಟಿಷರು ಭಾರತೀಯರನ್ನು ಅನಕ್ಷರಸ್ತರು ಎಂದು ನಿರೂಪಿಸಿದರೂ, ಪ್ರಜಾಪ್ರಭುತ್ವದ ಸ್ವೀಕಾರದಿಂದ ಭಾರತವು ಇಂದು ಜಾಗತಿಕ ಮಟ್ಟದಲ್ಲಿ ಮೂರನೇ ಅಭಿವೃದ್ಧಿ ಪರವಾದ ದೇಶವಾಗಿ ಗುರುತಿಸಿಕೊಂಡಿದೆ. ಧರ್ಮ, ಜಾತಿ, ಭಾಷೆ, ನೀರಿಗಾಗಿ ನಡೆಯುವ ಆಂತರಿಕ ಜಗಳವನ್ನು ಮುಕ್ತಗೊಳಿಸಿದಾಗ, ದೇಶ ಇನ್ನಷ್ಟು ಪ್ರಗತಿ ಸಾಧಿಸಲಿದೆ" ಎಂದು ಹೇಳಿದರು. IMG-20240915-112847   ಯಲ್ಲಾಪುರ ತಹಶೀಲ್ದಾರ ಯಲ್ಲಪ್ಪ ಗೊನೆಣ್ಣನವರ, "ಬೀದರದಿಂದ ಚಾಮರಾಜನಗರದವರೆಗೆ ಮಾನವ ಸರಪಳಿ ನಿರ್ಮಾಣ ಮಾಡುವ ಯೋಜನೆಗೆ ಸರ್ಕಾರದ ನಿರ್ದೇಶನದಂತೆ ಯಲ್ಲಾಪುರ ತಾಲ್ಲೂಕು ಸಂಪೂರ್ಣ ಸಜ್ಜಾಗಿದೆ. ಕಾಡು ಪ್ರದೇಶವನ್ನು ಹೊರತುಪಡಿಸಿ, ಜನ ವಸತಿ ಪ್ರದೇಶದಲ್ಲಿ ಈ ಮಾನವ ಸರಪಳಿಯನ್ನು ರೂಪಿಸಲಾಗಿದೆ" ಎಂದು ಹೇಳಿದರು. ತಾಟವಾಳದಿಂದ ತಡುಗುಣಿಯವರೆಗೆ ಸರಪಳಿಯನ್ನು ನಿರ್ಮಿಸಲು ಸ್ಥಳೀಯರು ಮತ್ತು ಶಾಲಾ ಮಕ್ಕಳು ಭಾರಿ ಸಂಖ್ಯೆಯಲ್ಲಿ ಪಾಲ್ಗೊಂಡರು. 
   ಮುಂಡಗೋಡ ತಹಶೀಲ್ದಾರ ಶಂಕರ ಗೌಡ ಅವರು, "ಭಾರತವು ಶ್ರೇಷ್ಠ ಸಂವಿಧಾನವನ್ನು ಹೊಂದಿದೆ, ಅದರ ಆಶಯಗಳಿಗೆ ನಾವು ಗೌರವ ನೀಡಬೇಕು" ಎಂದು ನುಡಿದರು. IMG-20240915-113038 ಈ ಸಂದರ್ಭದಲ್ಲಿ, ಯಲ್ಲಾಪುರ ಪ.ಪಂ ಅಧ್ಯಕ್ಷೆ ನರ್ಮದಾ ನಾಯ್ಕ, ಸಾಮಾಜಿಕ ಕಾರ್ಯಕರ್ತ ವಿಜಯ ಮಿರಾಶಿ, ಮಾಜಿ ತಾ.ಪಂ ಅಧ್ಯಕ್ಷ ಲಾರೇನ್ಸ್ ಸಿದ್ದಿ, ಪೊಲೀಸ್ ಇನ್ಸಪೆಕ್ಟರ್ ರಮೇಶ್ ಹಾನಾಪುರ, ಹಾಗೂ ವಿವಿಧ ಇಲಾಖೆಗಳ ತಹಶೀಲ್ದಾರರು, ಸ್ಥಳೀಯ ಜನಪ್ರತಿನಿಧಿಗಳು, ಶಾಲಾ-ಕಾಲೇಜು ಮುಖ್ಯಸ್ಥರು, ಎನ್.ಸಿಸಿ ವಿದ್ಯಾರ್ಥಿಗಳು ಸೇರಿದಂತೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. 
   ಸಮಾಜ ಕಲ್ಯಾಣ ತಾಲೂಕಾಧಿಕಾರಿ ಜ್ಯೋತಿ ನರೋಟಿ ಸಂವಿಧಾನ ಪ್ರಸ್ತಾವನೆಯ ವಿವರಣೆ ನೀಡಿ, ಪ್ರತಿಜ್ಞಾ ವಿಧಿ ಭೋದಿಸಿದರು. ಶಿಕ್ಷಕ ಚಂದ್ರಹಾಸ ನಾಯ್ಕ ಕಾರ್ಯಕ್ರಮವನ್ನು ನಿರೂಪಿಸಿದರು. 
    ಯಲ್ಲಾಪುರ ಪಟ್ಟಣದಲ್ಲಿ ಬೀಸ್ಗೋಡ್ ಕ್ರಾಸ್ ನಿಂದ ಶಿರಸಿ ರಸ್ತೆಯ ಎಪಿಎಂಸಿ ಕೊನೆಯವರೆಗೆ ಬೃಹತ್ ಮಾನವ ಸರಪಳಿಯ ನಿರ್ಮಾಣ ನಡೆಯಿತು. ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳ ಪ್ರಮುಖರು, ಸರ್ಕಾರಿ ನೌಕರರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಈ ಮಾನವ ಸರಪಳಿಯಲ್ಲಿ ಭಾಗವಹಿಸಿದರು.
.
.
.
  .

ಮಲೆನಾಡು ಕೃಷಿ ಅಭಿವೃದ್ಧಿ ಸೇವಾ ಸಹಕಾರಿ ಸಂಘದ 26 ನೇ ವರ್ಷದ ಸರ್ವ ಸಾಧಾರಣ ಸಭೆ

IMG-20240915-030701 ಯಲ್ಲಾಪುರ : ಸಹಕಾರಿ ಸಂಘಗಳು ರೈತರ ಕೃಷಿ ಚಟುವಟಿಗಳಿಗೆ ಉತ್ತೇಜನ ನೀಡುವ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು. ರೈತರ ಅಭಿವೃದ್ಧಿಯ ಜೊತೆಗೆ ಸಾಮಾಜಿಕ ಕಳಕಳಿ, ಸಂಘಟನೆಗಾಗಿ ದುಡಿಯಬೇಕು. ಪರಂಪರಾಗತ ಕೃಷಿ ಚಟುವಟಿಕೆಗಳೊಂದಿಗೆ ಆಧುನಿಕ ಪದ್ದತಿಯನ್ನು ಉತ್ತೇಜಿಸಬೇಕು.ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ತರುವಂತಹ ಕೃಷಿ ಸಂಶೋಧನೆ ಅಗತ್ಯವಿದೆಯೆಂದು ಮಲೆನಾಡು ಕೃಷಿ ಅಭಿವೃದ್ಧಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ ಹೇಳಿದರು.IMG-20240915-030653 ಅವರು ಈ ಸಂಸ್ಥೆಯ 26 ನೇ ವರ್ಷದ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ದೀಪ ಬೆಳಗಿಸಿ ಮಾತನಾಡಿದ ಸಂಘದ ಲೆಕ್ಕ ಪರಿಶೋಧಕರಾದ ಎಸ್. ಜಿ. ಹೆಗಡೆ ಬೆದೆಹಕ್ಕಲ ಮಾತನಾಡಿ ಯಾವುದೇ ಆರ್ಥಿಕ ಸಂಸ್ಥೆ ಪಾರದರ್ಶಕವಾಗಿ ಕಾರ್ಯ ನಿರ್ವಹಿಸಬೇಕು. ಜನರ ನಾಡಿಮಿಡಿತ ಅರಿತಿರಬೇಕು. ಪ್ರಾಮಾಣಿಕತೆಗೆ ಆದ್ಯತೆ ನೀಡಬೇಕೆಂದರು. 
    ಈ ಸಂದರ್ಭದಲ್ಲಿ 12 ಜನ ಕೃಷಿ ಸಾಧರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ವಿ. ಎನ್. ಭಟ್ಟ ಏಕಾನ್, ಸದಾಶಿವ ದೇಸಾಯಿ, ರವಿ ಹೆಗಡೆ ಮಾತನಾಡಿದರು. 
     ಸಂಘದ ನಿರ್ದೇಶಕರಾದ ದತ್ತಾತ್ರಯ ಬೊಳಗುಡ್ಡೆ ಸ್ವಾಗತಿಸಿದರು. ವ್ಯವಸ್ಥಾಪಕರಾದ ವಿನಾಯಕ ಹೆಗಡೆ ವರದಿ ಓದಿದರೆ, ಉಪಾದ್ಯಕ್ಷರಾದ ಎಂ ಜಿ ಭಟ್ಟ ವಂದಿಸಿದರು. ಸಣ್ಣಪ್ಪ ಭಾಗ್ವತ ಕಾರ್ಯಕ್ರಮ ನಿರ್ವಹಿಸಿದ್ದರು.
.
.
.

ಓಜೋನ್ ಪದರದ ನಾಶದ ಕುರಿತು ಅರಿವು : ಯಲ್ಲಾಪುರದಲ್ಲಿ ವಿಜ್ಞಾನ ಕಾರ್ಯಕ್ರಮ

 IMG-20240915-023240

ಯಲ್ಲಾಪುರ: ತಂತ್ರಜ್ಞಾನವು ಇಂದು ಜಗತ್ತಿನ ಪ್ರತಿಯೊಬ್ಬರ ಜೀವನದ ಭಾಗವಾಗಿ ಪರಿಣಮಿಸಿದೆ. ಆದರೆ, ತಂತ್ರಜ್ಞಾನವನ್ನು ಬಳಸುವಾಗ ಪರಿಸರದ ಮೇಲೆ ಅದರ ಪರಿಣಾಮಗಳನ್ನು ಗಮನಿಸುವುದು ಅತ್ಯಂತ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಅಜಯ ನಾಯಕ ಅವರು ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನದ ಅಳವಡಿಕೆಗೆ ಸಂಬಂಧಿಸಿದಂತೆ ಎಚ್ಚರಿಕೆ ನೀಡಿದರು.

IMG-20240915-023231

ಯಲ್ಲಾಪುರದ ಹೊಲಿ ರೋಜರಿ ಪ್ರೌಢಶಾಲೆಯಲ್ಲಿ ಶನಿವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಹೋಲಿ ಪ್ರೌಢಶಾಲೆ ಮತ್ತು ವಿಜ್ಞಾನ ಬಳಗದ ಆಶ್ರಯದಲ್ಲಿ 'ಓಜೋನ್ ಪದರದ ನಾಶ ಮನುಕುಲಕ್ಕೆ ಮಾರಕ' ಎಂಬ ವಿಷಯದ ಕುರಿತು ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಜಯ ನಾಯಕ, ವಿಜ್ಞಾನ ವಸ್ತು ಪ್ರದರ್ಶನ ಮತ್ತು ಇತರ ಚಟುವಟಿಕೆಗಳು ಮಕ್ಕಳ ಅಭಿವ್ಯಕ್ತಿಗೆ ಸಹಾಯ ಮಾಡುತ್ತವೆ ಎಂದು ಹೇಳಿದರು.

IMG-20240915-023220

   ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಇಸಿಓ ಪ್ರಶಾಂತ್ ಜಿ ಎನ್, ಸಿಆರ್‌ಪಿ ಎಸ್ ಬಿ ವರ್ಣೇಕರ, ತಾಲೂಕು ಸಹ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್, ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಂಚಾಲಕ ಎಂ ರಾಜಶೇಖರ ಉಪಸ್ಥಿತರಿದ್ದರು. 

    ತಾಲೂಕಿನ ಎಲ್ಲಾ ಪ್ರೌಢಶಾಲೆಗಳ ವಿದ್ಯಾರ್ಥಿಗಳು ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದರು. ಸುಮಾರು 50ಕ್ಕೂ ಹೆಚ್ಚು ಮಾದರಿಗಳನ್ನು ವಿದ್ಯಾರ್ಥಿಗಳು ತಯಾರಿಸಿ ಪ್ರದರ್ಶಿಸಿದರು. ಈ ಸಂದರ್ಭದಲ್ಲಿ, ವೈಜ್ಞಾನಿಕ ಅಂಶಗಳ ಆಧಾರದ ಮೇಲೆ ನಡೆಯುವ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ತಾಲ್ಲೂಕಿನ ತಂಡಗಳು ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದವು.

IMG-20240915-023211

ಕಾರ್ಯಕ್ರಮದಲ್ಲಿ ಓಜೋನ್ ಪದರದ ನಾಶ ಮತ್ತು ಅದರ ಸಂರಕ್ಷಣೆ ಕುರಿತಾದ ಪಾತ್ರಗಳ ಮಹತ್ವದ ಸ್ಪರ್ಧೆ ಏರ್ಪಡಿಸಲಾಯಿತು. ವಿಜೇತರಿಗೆ ಪ್ರಶಸ್ತಿಗಳನ್ನು ನೀಡಲಾಯಿತು. 

ಆಗಸ್ಟ್ 28ರಂದು ನಡೆದ ಪ್ರಬಂಧ ಸ್ಪರ್ಧೆಗಳ ಫಲಿತಾಂಶ ಹೀಗಿದೆ:

'ಇಸ್ರೋದ ಸಾಧನೆಯ ಹಾದಿ' :

  - ಪ್ರಥಮ ಸ್ಥಾನ: ವಿಕಾಸ ವಿನಾಯಕ ಹೆಗಡೆ (ಸರಕಾರಿ ಪ್ರೌಢಶಾಲೆ ನಂದೊಳ್ಳಿ)

  - ದ್ವಿತೀಯ ಸ್ಥಾನ: ಸುಜನಾ ಮಳಲಗಾಂವ್ (ರಾ.ರಾ ಪ್ರೌಢಶಾಲೆ ಮಂಚಿಕೇರಿ)

  - ತೃತೀಯ ಸ್ಥಾನ: ನಾಗಶ್ರೀ ಶೇಟ್ (ಮದರ್ ತೆರೇಸಾ ಪ್ರೌಢಶಾಲೆ, ಯಲ್ಲಾಪುರ)

'ಚಂದ್ರಯಾನ 3 ರ ಉದ್ದೇಶ ಮತ್ತು ಮಹತ್ವ'

  - ಪ್ರಥಮ ಸ್ಥಾನ: ಜಾಹ್ನವಿ ಹೆಗಡೆ (ವೈ.ಟಿ.ಎಸ್.ಎಸ್.ಆಂಗ್ಲ ಮಾಧ್ಯಮ ಶಾಲೆ, ಯಲ್ಲಾಪುರ)

  - ದ್ವಿತೀಯ ಸ್ಥಾನ: ಅನನ್ಯಾ ಕೆ.ಭಟ್ (ಸರಕಾರಿ ಪ್ರೌಢಶಾಲೆ ಮಲವಳ್ಳಿ)

  - ತೃತೀಯ ಸ್ಥಾನ: ನಿಕಿತಾ ಎನ್. ನಾಯ್ಕ ( ಪ್ರಗತಿ ವಿದ್ಯಾಲಯ ಭರತನಹಳ್ಳಿ)

ವಸ್ತು ಪ್ರದರ್ಶನದ ವೈಯಕ್ತಿಕ ವಿಭಾಗದಲ್ಲಿ:

- ಪ್ರಥಮ: ಕೇಶವ್ ಗೌಡ (ಪ್ರಗತಿ ವಿದ್ಯಾಲಯ ಭರತನಹಳ್ಳಿ)

- ದ್ವಿತೀಯ: ಶ್ರೀರಕ್ಷ ವೆರ್ಣೇಕರ (ವೈ.ಟಿ.ಎಸ್.ಎಸ್. ಪ್ರೌಢಶಾಲೆ ಯಲ್ಲಾಪುರ)

- ತೃತೀಯ: ಸಂಜಯ್ ಭಾಗ್ವತ (ಸರಕಾರಿ ಪ್ರೌಢಶಾಲೆ, ನಂದೊಳ್ಳಿ)

ಗುಂಪು ವಿಭಾಗದಲ್ಲಿ:

- ಪ್ರಥಮ: ಆಕಾಶ್ ಮತ್ತು ಚೇತನ್ (ಸರಕಾರಿ ಪ್ರೌಢಶಾಲೆ, ಬಿಸಗೋಡ)

- ದ್ವಿತೀಯ: ಸ್ಪಂದನ ಶ್ವೇತ (ಸರಕಾರಿ ಪ್ರೌಢಶಾಲೆ, ಹಂಸನಗದ್ದೆ)

- ತೃತೀಯ: ನಾಗ ಚೈತನ್ಯ ಮತ್ತು ಯೋಗೀಶ್ (ಸರಕಾರಿ ಪ್ರೌಢಶಾಲೆ, ಹಿತ್ಲಳ್ಳಿ)

ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ:

- ಪ್ರಥಮ: ರಾಜರಾಜೇಶ್ವರಿ ಪ್ರೌಢಶಾಲೆ (ಕನ್ನಡ ಮಾಧ್ಯಮ)

- ದ್ವಿತೀಯ: ಸರ್ವೋದಯ ಪ್ರೌಢಶಾಲೆ (ವಜ್ರಳ್ಳಿ)

- ತೃತೀಯ: ಕೆಪಿಎಸ್ ಕಿರವತ್ತಿ

 ಆಶುಭಾಷಣ ಸ್ಪರ್ಧೆಯಲ್ಲಿ:

- ಪ್ರಥಮ: ಪನ್ನಗ ಶಾಸ್ತ್ರಿ (ರಾಜರಾಜೇಶ್ವರಿ ಪ್ರೌಢಶಾಲೆ ಮಂಚಿಕೇರಿ)

- ದ್ವಿತೀಯ: ಆಯಿಶಾ ಬಾನು (ಹೋಲಿ ರೋಜರಿ ಪ್ರೌಢಶಾಲೆ ಯಲ್ಲಾಪುರ)

- ತೃತೀಯ: ವಿಕಾಸ್ ಹೆಗಡೆ (ಸರಕಾರಿ ಪ್ರೌಢಶಾಲೆ, ನಂದೊಳ್ಳಿ)

ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಅರಿವು ಮತ್ತು ಆಸಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡಿತು. ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸುವ ಅವಕಾಶವನ್ನು ಪಡೆದು, ವಿಜ್ಞಾನ ಕ್ಷೇತ್ರದಲ್ಲಿ ತಮ್ಮ ಭವಿಷ್ಯವನ್ನು ರೂಪಿಸಲು ಪ್ರೇರಿತರಾದರು. 

.

.

.