Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Thursday, 5 September 2024

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ಶಿಕ್ಷಕ ನಾರಾಯಣ ಕಾಂಬಳೆ


ಯಲ್ಲಾಪುರ: ಶಿರಸಿ ಶೈಕ್ಷಣಿಕ ಜಿಲ್ಲೆಯ ಶಿಕ್ಷಕರ ದಿನಾಚರಣೆಯಲ್ಲಿ ಬೈಲಂದೂರ ಗೌಳಿವಾಡ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ನಾರಾಯಣ ಕಾಂಬಳೆ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಮಾಡಲಾಯಿತು. 


 ಈ ಸಂದರ್ಭದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಮೊಮ್ಮಗ ಡಾಕ್ಟರ್ ಸುಬ್ರಹ್ಮಣ್ಯ ಶರ್ಮಾ, ಶಾಸಕ ಭೀಮಣ್ಣ ನಾಯ್ಕ, ಉಪವಿಭಾಗಾಧಿಕಾರಿ ಕಾವ್ಯರಾಣಿ ಕೆ.ವಿ. ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸತೀಶ ಹೆಗಡೆ, ತಾಲೂಕು ದಂಡಾಧಿಕಾರಿ ಶ್ರೀಧರ್ ಮುಂದಿನಮನಿ, ನಿವೃತ್ತ ಪ್ರಾಚಾರ್ಯ ಪ್ರೊಫೆಸರ್ ಪಂಚಾಕ್ಷರಯ್ಯ,  ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಶಿಕ್ಷಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನಾರಾಯಣ ಕಾಂಬಳೆ : 

ನಾರಾಯಣ ಕಾಂಬಳೆ ಅವರು ಬಹುಮುಖ ಪ್ರತಿಭಾನ್ವಿತ ಮತ್ತು ಕ್ರಿಯಾಶೀಲ ಶಿಕ್ಷಕರಾಗಿದ್ದು, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಅವರು 1998ರಲ್ಲಿ ಯಲ್ಲಾಪುರ ತಾಲೂಕಿನ ಹುಣಸಗೇರಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ತಮ್ಮ ಸೇವೆಯನ್ನು ಆರಂಭಿಸಿದರು. ಮಕ್ಕಳೊಂದಿಗೆ ಮಕ್ಕಳಾಗಿರುವಂತೆ ಹಾಡು, ನೃತ್ಯಗಳ ಮೂಲಕ ಕಲಿಸುವ ಅವರ ವಿಧಾನ ವಿಶಿಷ್ಟವಾಗಿದೆ. ಶಿಕ್ಷಣ ಇಲಾಖೆಯ ಚಿಣ್ಣರ ಅಂಗಳ ಮತ್ತು ಬೇಸಿಗೆ ಶಿಬಿರಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತಾರೆ.

 

 2004ರಲ್ಲಿ ಅವರನ್ನು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಬೈಲಂದೂರ ಗೌಳಿವಾಡಕ್ಕೆ ವರ್ಗಾಯಿಸಲಾಯಿತು. ಅಲ್ಲಿ ಗೌಳಿ ಸಮುದಾಯದ ಮಕ್ಕಳಿಗೆ ವಿಶೇಷ ಗಮನ ನೀಡಿ, ಅವರ ಶಿಕ್ಷಣದಲ್ಲಿ ತೊಡಗಿಸಿಕೊಂಡರು. ಶಾಲೆಗೆ ಅಗತ್ಯವಾದ ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಮಕ್ಕಳ ಕಲಿಕೆಗೆ ಅಗತ್ಯವಾದ ಕಲಿಕಾ ಸಾಮಗ್ರಿಗಳನ್ನು ದಾನಿಗಳಿಂದ ಸಂಗ್ರಹಿಸಿದರು. ಡೆಸ್ಕ್‌ಗಳು, ದೂರದರ್ಶನ, ಧ್ವನಿವರ್ಧಕ, ಶಾಲಾ ಮಕ್ಕಳಿಗೆ ಬ್ಯಾಗ್‌ಗಳು, ನೋಟ್‌ಬುಕ್‌ಗಳು, ಬಟ್ಟೆಗಳು ಹೀಗೆ ಹಲವಾರು ವಸ್ತುಗಳನ್ನು ಸಂಗ್ರಹಿಸಿ ಶಾಲೆಗೆ ನೀಡಿದರು. 

   ಶಾಲಾ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಸಂಗ್ರಹಿಸಿ ಮಕ್ಕಳಿಗೆ ಓದುವ ಅವಕಾಶವನ್ನು ಕಲ್ಪಿಸಿದರು. ರಾಷ್ಟ್ರೀಯ ಹಬ್ಬಗಳ ವೇಳೆ ಮಕ್ಕಳಿಗೆ ಸಿಹಿ ವಿತರಣೆ ಮತ್ತು ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ.

   ಶಾಲಾ ಕಂಪೌಂಡ್ ಗೋಡೆಯನ್ನು ನಿರ್ಮಿಸಿ, ಊರವರ ಸಹಾಯದಿಂದ ಪ್ರೇಕ್ಷಣೀಯ ಸ್ಥಳಗಳ ಚಿತ್ರಗಳು ಮತ್ತು ವರ್ಲಿ ಕಲೆಯ ಚಿತ್ರಗಳನ್ನು ಬಿಡಿಸಿ ಶಾಲೆಯನ್ನು ಆಕರ್ಷಕವಾಗಿಸಿದ್ದಾರೆ. ನಲಿ ಕಲಿ ಕೊಠಡಿಯನ್ನು ಸುಂದರಗೊಳಿಸಿ, ಶಾಲೆಗೆ ಒಂದು ಸುಂದರ ಕೈತೋಟವನ್ನು ಸಹ ಅಭಿವೃದ್ಧಿಪಡಿಸಿದ್ದಾರೆ.

   ಜಿಲ್ಲಾ ಮಟ್ಟದ ಪ್ರಶಸ್ತಿ ಯೋಗ್ಯ ಶಿಕ್ಷಕನಿಗೆ ಸಂದ ಗೌರವವಾಗಿದೆ.


.

ಯಲ್ಲಾಪುರದಲ್ಲಿ ಗ್ರಾಮದೇವಿಯರಿಗೆ ಕಿರೀಟಕ್ಕೆ ಚಿನ್ನ ದೇಣಿಗೆ


ಯಲ್ಲಾಪುರ: ಸೆಪ್ಟೆಂಬರ್ 4 ರಂದು ಪಟ್ಟಣದ ಚಿನ್ನ-ಬೆಳ್ಳಿ ವ್ಯಾಪಾರಸ್ಥರ ಅಶೋಷಿಯನ್ ಮತ್ತು ದೈವಜ್ಞ ಬ್ರಾಹ್ಮಣ ಸಮಾಜದ ಸದಸ್ಯರು ಸೇರಿ ಯಲ್ಲಾಪುರ ಗ್ರಾಮದೇವಿಯರ ಕಿರೀಟ ಧಾರಣೆಗೆ ಅಗತ್ಯವಿರುವ 27 ಗ್ರಾಂ 530 ಮಿಲಿ ಶುದ್ಧ ಚಿನ್ನವನ್ನು ಶ್ರೀದೇವಿಯರಿಗೆ ಉಡಿ ತುಂಬಿಸಿ ಪೂಜೆ ಸಲ್ಲಿಸಿದರು.


ಈ ಚಿನ್ನವನ್ನು ದೇವಸ್ಥಾನದ ಕಾರ್ಯದರ್ಶಿ ಕೊಂಬೆಯಯವರಿಗೆ ಹಸ್ತಾಂತರಿಸಲಾಯಿತು.

  ಈ ಸಂದರ್ಭದಲ್ಲಿ ಚಿನ್ನ-ಬೆಳ್ಳಿ ಆಶೋಷಿಯನ್ ಅಧ್ಯಕ್ಷ ಸುರೇಶ ಎಂ ರೇವಣಕರ ಹಾಗೂ ಸದಸ್ಯರು ಮತ್ತು ತಾಲೂಕಾ ದೈವಜ್ಞ ಬ್ರಾಹ್ಮಣ ಹಿತ ವರ್ಧಕ ಸಂಘದ ಅಧ್ಯಕ್ಷ ಸುಬ್ರಾಯ ಶೇಟ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಯಲ್ಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಆಚರಣೆ

 

ಯಲ್ಲಾಪುರ : ಯಲ್ಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ವಿಜೃಂಭಣೆಯಿಂದ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಆರ್.ಡಿ. ಜನಾರ್ಧನ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಗೌರವಾರ್ಪಣೆ ಸಲ್ಲಿಸಿದರು. 

   ನಂತರ ಮಾತನಾಡಿದ ಅವರು, ಇಂದಿನ ತಂತ್ರಜ್ಞಾನ ಯುಗದಲ್ಲಿ ಶಿಕ್ಷಕರ ಜವಾಬ್ದಾರಿ ಮತ್ತಷ್ಟು ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ಗುರಿಯನ್ನು ಸ್ಪಷ್ಟವಾಗಿಟ್ಟುಕೊಂಡು, ಶಿಕ್ಷಕರ ಮಾರ್ಗದರ್ಶನದೊಂದಿಗೆ ಮುಂದುವರಿದರೆ ಯಶಸ್ಸನ್ನು ಸಾಧಿಸಬಹುದು ಎಂದು ಹೃತ್ಪೂರ್ವಕವಾಗಿ ನುಡಿದರು. ಅವರ ಮಾತಿನಲ್ಲಿ, ಶಿಕ್ಷಕರು ವಿದ್ಯಾರ್ಥಿಗಳ ಜೀವನ ರೂಪಿಸಲು ಪಣತೊಡಬೇಕು ಎಂಬ ಸಂದೇಶವನ್ನು ನೀಡಿದರು.


 

ಕಾರ್ಯಕ್ರಮದಲ್ಲಿ ನಿವೃತ್ತ ಸಾಧಕ ಶಿಕ್ಷಕರಾದ ಗೋಪಾಲಕೃಷ್ಣ ತಾಂಡುರಾಯನ್ ಹಾಗೂ ಯೋಗಪ್ಪ ಎಸ್ ಗೋಕುಲ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. 

    ಅನಂತರ, ಕಾರ್ಯಕ್ರಮದಲ್ಲಿ ಆಯ್ಕ್ಯೂಎಎಸ್ ಸಂಚಾಲಕರಾದ ಶರತ್ ಕುಮಾರ, ಎನ್‌ಎಸ್ಎಸ್ ಕಾರ್ಯಕ್ರಮಾಧಿಕಾರಿಗಳಾದ ಸುರೇಖಾ ಎಸ್ ತಡವಲ ಮತ್ತು ಸವಿತಾ ನಾಯ್ಕ ಸೇರಿದಂತೆ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದರು.

    ವೇದಾ ಭಟ್ಟ ಅವರು ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ದಿನೇಶ ನಾಯ್ಕ ವಂದಿಸಿದರು, ಮತ್ತು ನಂದಿತಾ ಭಾಗ್ವತ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದರು.

ಗೃಹಲಕ್ಷ್ಮಿ ಹಣ ಮಕ್ಕಳ ಶಿಕ್ಷಣ, ಪೌಷ್ಠಿಕ ಆಹಾರ ಮತ್ತು ವೈಯಕ್ತಿಕ ಕೆಲಸಗಳಿಗೆ ಬಳಸಿಕೊಳ್ಳಿ : ದೇಶಪಾಂಡೆ


ಯಲ್ಲಾಪುರ: ಗೃಹಲಕ್ಷ್ಮಿ ಯೋಜನೆಯ ಹಣವನ್ನು ಮಕ್ಕಳ ಶಿಕ್ಷಣ, ಪೌಷ್ಠಿಕ ಆಹಾರ ಮತ್ತು ವೈಯಕ್ತಿಕ ಕೆಲಸಗಳಿಗೆ ಈ ಹಣವನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದರು. "ಸರ್ಕಾರ ಹೆಣ್ಣು ಮಕ್ಕಳ ಕೈಗೆ ಮನೆಯ ಚಾವಿ ನೀಡಿದೆ. ಅವರು ಈ ಹಣವನ್ನು ಸರಿಯಾಗಿ ಬಳಸಿಕೊಳ್ಳಬೇಕು," ಎಂದು ಹಳಿಯಾಳ ಶಾಸಕ ಆರ್.ವಿ ದೇಶಪಾಂಡೆ ಹೇಳಿದರು.


 ಅವರು ಬುಧವಾರ ಸಂಜೆ ಯಲ್ಲಾಪುರ ತಾಲೂಕಿನ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಚೇರಿ ಉದ್ಘಾಟಿಸಿ ಮಾತನಾಡುತ್ತಿದ್ದರು, ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರ ಉಪಯೋಗಕ್ಕಾಗಿ ಮಾತ್ರ ಎಂದು ಹಳಿಯಾಳ ಶಾಸಕ ಆರ್.ವಿ ದೇಶಪಾಂಡೆ ಸ್ಪಷ್ಟಪಡಿಸಿದ ಅವರು, "ಗಂಡನಿಗೆ ಈ ಹಣವನ್ನು ಕೊಡಬೇಡಿ. ಅದಕ್ಕಾಗಿ ಜಗಳ ಮಾಡಬೇಡಿ," ಎಂದು ಕೂಡ ಮಹಿಳೆಯರಿಗೆ ಕಿವಿಮಾತು ಹೇಳಿದರು. ಜಿಲ್ಲೆಯಲ್ಲಿ 4070 ಜನ ಮಾತ್ರ ಯುವನಿಧಿ ಹಣ ಪಡೆಯುತ್ತಿರುವುದು ಕುರಿತು ಅವರು ಅಚ್ಚರಿ ವ್ಯಕ್ತಪಡಿಸಿದರು. "ಜಿಲ್ಲೆಯಲ್ಲಿ ಯುವಕರಿಲ್ಲವೇ" ಎಂದು ಪ್ರಶ್ನಿಸಿದ ಅವರು, ಈ ಯೋಜನೆ ಜನರಿಗೆ ತಲುಪುವಂತೆ ಗ್ಯಾರಂಟಿ ಸಮಿತಿಯ ಸದಸ್ಯರು ಕಾರ್ಯೋನ್ಮುಖರಾಗಬೇಕು ಎಂದು ಸೂಚಿಸಿದರು.


 ಶಕ್ತಿ ಯೋಜನೆ ಅಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಲಾಗಿದೆ. ಶಾಲಾ ಮಕ್ಕಳ ಬಗ್ಗೆ ಕಾಳಜಿ ವಹಿಸಿ ಅವರಿಗೆ ಆಸನ ಬಿಟ್ಟುಕೊಡಬೇಕು ಎಂದು ಅವರು ಮನವಿ ಮಾಡಿದರು. ಉಚಿತ ವಿದ್ಯುತ್ ಬಿಲ್ ನೀಡಲಾಗುತ್ತಿರುವ ಗೃಹಜ್ಯೋತಿ ಯೋಜನೆ, ಅನ್ನಭಾಗ್ಯ ಯೋಜನೆ ಮತ್ತು ಇತರ ಯೋಜನೆಗಳ ಬಗ್ಗೆಯೂ ಅವರು ಮಾಹಿತಿ ನೀಡಿದರು.

     ಸಭೆಯಲ್ಲಿ ಮಾತನಾಡಿದ ಶಾಸಕ ಶಿವರಾಮ ಹೆಬ್ಬಾರ್, "ಆರ್ಥಿಕವಾಗಿ ಸಬಲರಾಗಿದ್ದವರು ಈ ಯೋಜನೆ ಪಡೆಯಬಾರದು. ನಿಜವಾಗಿಯೂ ಬಡತನ ರೇಖೆಗಿಂತ ಕೆಳಗಿದ್ದವರು ಮಾತ್ರ ಈ ಯೋಜನೆ ಪಡೆಯಬೇಕು. ಎಲ್ಲರಿಗೂ ಫಲಾನುಭವಿ ಆಗುವ ಅರ್ಹತೆ ಇದೆ. ಅದರೆ, ನಾವು ಈ ಯೋಜನೆಗೆ ಅರ್ಹರೇ ಎಂದು ಅವರೇ ನಿರ್ಣಯಿಸಿಕೊಳ್ಳಬೇಕು. ಸ್ವಯಂ ಪ್ರೇರಣೆಯಿಂದ ಯೋಜನೆ ಬಿಟ್ಟುಕೊಡುವವರೇ ದೊಡ್ಡವರು" ಎಂದು ಹೇಳಿದರು.

    ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಮಾತನಾಡಿ, "ಕೊರೊನಾ ಹಾಗೂ ಆರ್ಥಿಕ ಸಂಕಷ್ಟದ ನಡುವೆಯೂ ಕಾಂಗ್ರೆಸ್ ನಾಯಕರು ಪಂಚ ಗ್ಯಾರಂಟಿಯ ನಿರ್ಣಯ ಕೈಗೊಂಡಿದ್ದು, ಸರ್ಕಾರ ರಚನೆಯಾದ 8 ತಿಂಗಳ ಒಳಗೆ ಪಂಚ ಗ್ಯಾರಂಟಿ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ. ಅಧಿಕಾರಿಗಳು ಹಾಗೂ ಗ್ಯಾರಂಟಿ ಸಮಿತಿ ಸದಸ್ಯರು ಮನೆ ಮನೆಗೆ ತೆರಳಿ ಈ ಯೋಜನೆಯನ್ನು ಅರ್ಹರಿಗೆ ತಲುಪಿಸಬೇಕು" ಎಂದರು.

   "ಗ್ಯಾರಂಟಿ ಯೋಜನೆ ಬಗ್ಗೆ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದಾಗ ವಿರೋಧ ಪಕ್ಷಗಳು ಸಾಕಷ್ಟು ಅಪಪ್ರಚಾರ ಮಾಡಿದ್ದವು. ಆದರೆ, ಸರ್ಕಾರ ರಚನೆಯಾದ ನಂತರ 58 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗೆ ಮೀಸಲಿಟ್ಟು ಸರ್ಕಾರ ನುಡಿದಂತೆ ನಡದಿದೆ" ಎಂದು ಸಚಿವರು ಸಮರ್ಥಿಸಿಕೊಂಡರು.

   ಈ ಸಭೆಯಲ್ಲಿ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಸತೀಶ ನಾಯ್ಕ, ಉಪಾಧ್ಯಕ್ಷ ಡಿ.ಎನ್. ಗಾಂವ್ಕರ, ಸಹಾಯಕ ಆಯುಕ್ತರಾದ ಕಾವ್ಯಾರಾಣಿ, ಯಲ್ಲಾಪುರ ಪ.ಪಂ. ಅಧ್ಯಕ್ಷೆ ನರ್ಮದಾ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕೆ. ಭಟ್ಟ, ಪಂಚ ಗ್ಯಾರಂಟಿ ತಾಲೂಕಾ ಅಧ್ಯಕ್ಷ ಉಲ್ಲಾಸ ಶಾನಭಾಗ, ತಹಸೀಲ್ದಾ‌ರ್ ಅಶೋಕ ಭಟ್ಟ, ತಾ.ಪಂ. ಆಡಳಿತಾಧಿಕಾರಿ ನಟರಾಜ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ ಧನವಾಡಕರ ಇನ್ನಿತರರು ಇದ್ದರು.  

.

.

ತಿಲಕ ಚೌಕದಲ್ಲಿ ಅದ್ಧೂರಿ ಗಣೇಶೋತ್ಸವ !ಇತಿಹಾಸ ಹಾಗೂ ಸಿದ್ಧತೆ!


ಯಲ್ಲಾಪುರ : ತಿಲಕ ಚೌಕದ ಶ್ರೀ ಗಜಾನನೋತ್ಸವ ಸಮಿತಿಯು ಈ ವರ್ಷ 58 ನೇ ವರ್ಷದ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿದೆ. 1966 ರಲ್ಲಿ ಸ್ಥಾಪನೆಯಾದ ಈ ಸಮಿತಿಯು ಬಿ.ಆರ್. ಕವಳಿ ಯವರ ಜಾಗದಲ್ಲಿ ಚಂದ್ರು ಗುಡಿಗಾರ್ ಮತ್ತು ವಿ ಪಿ ಭಟ್ಟ ಕಣ್ಣಿಮನೆ ಯವರ ನೇತೃತ್ವದಲ್ಲಿ ಪ್ರಾರಂಭವಾಯಿತು.

    1990 ರಲ್ಲಿ 25 ನೇ ವರ್ಷದ ರಜತ್ ಮಹೋತ್ಸವವನ್ನು ಶಿವಾನಂದ ಹರಿ ಕುದುಳೆ ಯವರ ನೇತೃತ್ವದಲ್ಲಿ ಆಚರಿಸಲಾಯಿತು. 2015 ರಲ್ಲಿ ಸ್ವರ್ಣ ಮಹೋತ್ಸವವನ್ನು ಗಣಪತಿ ಪ್ರಸನ್ನ ನರಹರಿ ಗುಡಿಗಾರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು ಮತ್ತು ಸುಮಾರು 45 ಲಕ್ಷ ರೂಪಾಯಿಗಳಲ್ಲಿ ಸುಂದರ ಕಟ್ಟಡವನ್ನು ನಿರ್ಮಿಸಲಾಯಿತು. 1990 ರಲ್ಲಿ ಯಲ್ಲಾಪುರ ಗೆಳೆಯರ ಬಳಗದವರು ಬೆಳ್ಳಿ ಕಿರೀಟವನ್ನು ನೀಡಿದರು. ಅಷ್ಟೆ ಅಲ್ಲದೇ ಸದಾನಂದ ಬೀಡಿಕರ್, ರಾಮಚಂದ್ರ ಬೀಡಿಕರ್, ಪ್ರಸನ್ನ ಗುಡಿಗಾರ ಸಿಂಘ ಕುಟುಂಬದವರ ಸೇವೆ ಹಾಗೂ ಮುಂಚೂಣಿ ಕೂಡ ಮಹತ್ವದ್ದಾಗಿದೆ.



  2022 ರಿಂದ ಉದ್ಯಮಿ ಬಾಲಕೃಷ್ಣ ನಾಯಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ವರ್ಷ ಉತ್ಸವ ಗಣಪತಿ (ದೊಡ್ಡ) ಮತ್ತು ಪೂಜಾ ಗಣಪತಿಗೆ ಬೆಳ್ಳಿ ಕಿರೀಟ ಮತ್ತು ಬೆಳ್ಳಿ ಪ್ರಭಾವಳಿಯನ್ನು ಅಂದಾಜು 20 ಲಕ್ಷ ರೂಪಾಯಿಗಳಲ್ಲಿ ಸ್ಥಾಪಿಸಲಾಗಿದೆ. 2012 ರಿಂದ ಪ್ರತಿ ವರ್ಷ ಸುಮಾರು 5000 ರಿಂದ 6000 ಜನರಿಗೆ ಮಹಾ ಅನ್ನಸಂತರ್ಪಣೆ ನಡೆಯುತ್ತದೆ.

    2022-23 ರಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಮತ್ತು ಉದ್ಯಮಿ ವಿವೇಕ ಹೆಬ್ಬಾರ ಯವರ ಸಹಕಾರದೊಂದಿಗೆ ವಿಂಪ್ ಕಂಪನಿವತಿಯಿಂದ ನಮ್ಮ ಕಟ್ಟಡಕ್ಕೆ 4 ಲಕ್ಷ ರೂಪಾಯಿಗಳಲ್ಲಿ ಮೇಲ್ಚಾವಣಿ ನಿರ್ಮಾಣ ಮಾಡಲಾಯಿತು. 2023 ರಲ್ಲಿ 12 ಲಕ್ಷ ವೆಚ್ಚದಲ್ಲಿ ಪಕ್ಕದ ಜಾಗದಲ್ಲಿ ಮೂರು ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲಾಗಿದೆ.

     ಈ ವರ್ಷ 9 ದಿನಗಳ ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳು, ಗಣಹವನ ಮತ್ತು ಸಹಸ್ರ ದುರ್ವರ್ಚನೆ ಕಾರ್ಯಕ್ರಮಗಳು ನಡೆಯಲಿದೆ. ಸಮಿತಿಗೆ ದಿ. ನಾಗೇಶ್ ವಿಠೋಬ ಶಾನಭಾಗ ಕುಟುಂಬದವರು, ಕುದುಳೆ ಕುಟುಂಬದವರು ಮತ್ತು ಕಿತ್ತೂರು ಕುಟುಂಬದವರು ಸದಾ ಬೆಂಬಲಿಸುತ್ತಿದ್ದಾರೆ.

     ಮೋಹನ ಹರಿ ಕುದುಳೆ, ಮನೋಹರ ದೇಸಾಯಿ ಮಾಸ್ತರ್, ರೇವಣಕರ್ ಮಾಸ್ತರ್, ಪಾಂಡುರಂಗ ಕಿತ್ತೂರು, ಉಲ್ಲಾಸ ಶಾನಭಾಗ, ನಾರಾಯಣ ಕಾಮತ, ವೆಂಕಟ್ರಾವ ಮಂತ್ರಿ ಮತ್ತು ಮಾರುತಿ ರೇವಣಕರ ಯವರು ಈ ಸಮಿತಿಯ ಮಾಜಿ ಅಧ್ಯಕ್ಷರಾಗಿದ್ದಾರೆ.

     ಈ ವರ್ಷ 07-09-2024 ರಂದು ಗಣಪತಿ ಪ್ರತಿಷ್ಟಾಪನೆ ನಡೆಯಲಿದೆ. 13-09-2024 ರಂದು ಶುಕ್ರವಾರ ಮಹಾ ಅನ್ನಸಂತರ್ಪಣೆ ಮತ್ತು 17-09-2024 ರಂದು ವಿಸರ್ಜನಾ ಮಹಾಪೂಜೆ ನಡೆಯಲಿದೆ. 18-09-2024 ರಂದು ಬುಧವಾರ ವಿಸರ್ಜನಾ ಮೆರವಣಿಗೆ ಇರುತ್ತದೆ.

     ಅದ್ದೂರಿ ಗಣೇಶೋತ್ಸವ ನಡೆಸಲು ಈಗಾಗಲೇ ಸಿದ್ಧತೆಯಲ್ಲಿ ತೊಡಗಿಸಿಕೊಂಡಿರುವ ಸಮಿತಿಯ ಸಕ್ರಿಯ ಅಧ್ಯಕ್ಷ ಬಾಲಕೃಷ್ಣ ನಾಯಕ, ಪದಾಧಿಕಾರಿಗಳಾದ ರವಿ ಶಾನಭಾಗ, ಸುಧಾಕರ ಪ್ರಭು, ಗಿರೀಶ ಪೈ, ಸಿದ್ಧಾರ್ಥ ನಂದೊಳ್ಳಿಮಠ, ರಜತ ಬದ್ದಿ, ಕೌರವ ಬದ್ದಿ, ಹೇಮಂತ ಗುಂಜೀಕರ, ನಯನ ಇಂಗಳೆ, ವಿಕ್ರಮ ಸಾಲಗಾಂವ್ಕರ, ಮಾರುತಿ ಪ್ರಭು, ಸದಾನಂದ ಶಾನಭಾಗ, ಮಾದವ ನಾಯಕ, ದತ್ತಾ ಬದ್ದಿ, ಪವನ ಕಾಮತ, ಮೂರ್ತಿ ಗುಡಿಗಾರ, ನಮೀತಾ ಬೀಡಿಕರ, ಲಕ್ಯಾ‌ ಕಿತ್ತೂರು, ಚಂದ್ರಕಾಂತ ಕಿತ್ತೂರು, ನಾಗರಾಜ ಆಚಾರಿ, ಬಾಬು ಗುಡಿಗಾರ, ರಮಣ ಅಸೂಕರ ಅವರು, ರಾತ್ರಿ ಹಗಲು ಎನ್ನದೆ ಸುಣ್ಣ ಬಣ್ಣ ಅಲಂಕಾರ ಮಂಟಪ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.

.

.

ಶಿಕ್ಷಕರ ದಿನಾಚರಣೆ: ಶಿಕ್ಷಣದಲ್ಲಿ ಶಿಸ್ತು ಮುಖ್ಯ: ಶಾಸಕ ಶಿವರಾಮ ಹೆಬ್ಬಾರ್


ಯಲ್ಲಾಪುರ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಅಂಕೋಲಾ ಅರ್ಬನ್ ಕೋ-ಆಪ್ ಬ್ಯಾಂಕ್‌ ಇವರ ಸಂಯುಕ್ತ ಆಶ್ರಯದಲ್ಲಿ 'ಶಿಕ್ಷಕರ ದಿನಾಚರಣೆ ಮತ್ತು ಗುರು ಗೌರವಾರ್ಪಣಾ ಸಮಾರಂಭ 2024' ವೇದವ್ಯಾಸ ಕಲ್ಯಾಣ ಮಂಟಪದಲ್ಲಿ ಸೆಪ್ಟೆಂಬರ್ 5 ರಂದು ನಡೆಯಿತು.



   ಶಾಸಕ ಶಿವರಾಮ್ ಹೆಬ್ಬಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಕ ವೃತ್ತಿಯು ಪವಿತ್ರ ಕ್ಷೇತ್ರವಾಗಿದ್ದು, ಇದರಲ್ಲಿ ಸಿಗುವ ಆತ್ಮಸ್ಥೈರ್ಯ ಅಪಾರ. ಶಿಕ್ಷಣ ಕ್ಷೇತ್ರದಲ್ಲಿನ ಸಣ್ಣ ಲೋಪವು ಮಕ್ಕಳ ಭವಿಷ್ಯ ಹಾಳು ಮಾಡಬಹುದು. ಶಿಕ್ಷಕರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದಾಗ ಮಾತ್ರ ಮಕ್ಕಳು ಉನ್ನತ ಸ್ಥಾನಗಳನ್ನು ತಲುಪಲು ಸಾಧ್ಯ ಎಂದರು. ಅಲ್ಲದೆ, ನಮ್ಮ ಜಿಲ್ಲೆ- ತಾಲೂಕಿನಲ್ಲಿ ಒಳ್ಳೆಯ ಶಿಕ್ಷಕರಿದ್ದಾರೆ ಎಂದು ಹೆಮ್ಮೆಯಿಂದ ಹೇಳಿದರು.


  ರಾಜ್ಯ ವಿಕೇಂದ್ರೀಕರಣ ಮತ್ತು ಯೋಜನಾ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಅತಿಥಿಯಾಗಿ ಮಾತನಾಡಿ, ಇಂದಿನ ಮಕ್ಕಳು ದಾರಿ ತಪ್ಪುತ್ತಿರುವುದು ಕಂಡುಬರುತ್ತಿದೆ. ಶಿಕ್ಷಕರು ಮಕ್ಕಳನ್ನು ಅಪರಾಧ ಹಾಗೂ ಮಾದಕ ದ್ರವ್ಯಗಳಿಂದ ದೂರವಿರಿಸಿ, ಶಿಸ್ತಿನಿಂದ ಬೆಳೆಸಲು ಪ್ರಯತ್ನಿಸಬೇಕು. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ವಿಜ್ಞಾನಿ ಎನಿಸಿಕೊಳ್ಳುವುದಕ್ಕಿಂತ ಶಿಕ್ಷಕರೆಂದು ಕರೆಯಿಸಿಕೊಳ್ಳಲು ಇಷ್ಟಪಡುತ್ತಿದ್ದರು ಎಂದು ಹೇಳಿದರು.

    ತಹಶೀಲ್ದಾರ ಅಶೋಕ ಭಟ್, ಯಲ್ಲಾಪುರ ಶೈಕ್ಷಣಿಕ ಕ್ಷೇತ್ರದಲ್ಲಿ ಬಿಇಓ ಎನ್ ಆರ್ ಹೆಗಡೆ ನೇತೃತ್ವದ ಉತ್ತಮ ತಂಡವಿದೆ ಎಂದು ಹೇಳಿ, ಶಿಕ್ಷಕರು ತಮ್ಮನ್ನು ತಾವು ದಹಿಸಿಕೊಂಡು ಮಕ್ಕಳಿಗೆ ಬೆಳಕು ನೀಡುವ ದೀಪದಂತೆ ಎಂದು ಪ್ರಶಂಸಿಸಿದರು.

     ಪಟ್ಟಣ ಪಂಚಾಯತಿಯ ಅಧ್ಯಕ್ಷೆ ನರ್ಮದಾ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


  ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶಿಕ್ಷಕರಾದ ಸುರೇಶ್ ಎನ್ ನಾಯ್ಕ,  ಶ್ರೀಕಾಂತ ವೈದ್ಯ, ಗಾಯತ್ರಿ ಗದ್ದೆಮನೆ, ಪ್ರೌಢ ಶಾಲೆ ವಿಭಾಗದಲ್ಲಿ  ವೀರಭದ್ರ ಭಟ್ಟ ಹಾಗೂ ಡಾ.ನವಿನಕುಮಾರ ಎ ಜೆ, ತಾಲೂಕಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದರು.

  ನಿವೃತ್ತ ಶಿಕ್ಷಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಇಲಾಖೆಯ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಶಿಕ್ಷಕರಿಗೆ ಬಹುಮಾನ ವಿತರಿಸಲಾಯಿತು.

    ಮುಖ್ಯ ಅತಿಥಿಗಳಾಗಿ ಪ.ಪಂ ಉಪಾಧ್ಯಕ್ಷ ಅಮಿತ್ ಅಂಗಡಿ, ಅಂಕೋಲಾ ಅರ್ಬನ್ ಬ್ಯಾಂಕ್ ಅಧ್ಯಕ್ಷ ಭಾಸ್ಕರ್ ನಾರ್ವೇಕರ, ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್ ಆರ್ ಭಟ್ಟ, ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ರಾಜೇಶ್ ಧನವಾಡಕರ್, ಪ್ರಕಾಶ ಕುಂಞ ಅಂಕೋಲಾ,  ಮಲೇನಾಡು ಸೊಸೈಟಿ ಅಧ್ಯಕ್ಷ ಎಂ ಆರ್ ಹೆಗಡೆ ಕುಂಬ್ರಿಗುಡ್ಡೆ, ಕ್ಷೇತ್ರ ಸಂಪನ್ಮೂಲ ಅಧಿಕಾರಿ  ಶ್ರೀರಾಮ ಹೆಗಡೆ,  ಚಂದ್ರಶೇಖರ ಎಸ್ ಸಿ ವೇದಿಕೆಯಲ್ಲಿದ್ದರು.

     ಸುಜಯ ದುರಂದರ್ ಪ್ರಾರ್ಥಿಸಿದರು. ಶಿಕ್ಷಕಿ ಎಮ್ ಎ ಬಾಗೇವಾಡಿ ಹಾಗೂ ತಂಡದಿಂದ ನಾಡಗೀತೆ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ ಸ್ವಾಗತಿಸಿದರು. ಚಂದ್ರಹಾಸ ನಾಯ್ಕ, ಸುಮಂಗಲಾ ಭಟ್ಟ, ಭಾಸ್ಕರ ನಾಯ್ಕ ನಿರೂಪಿಸಿದರು.

.

.

ನೂರು ಒಳ್ಳೆಯ ಶಿಕ್ಷಕ ಹಣ್ಣಿನ‌ ಮಧ್ಯ, ಒಂದೆರಡು ಕೆಟ್ಟ ಮನಸ್ಸಿನ ಕೊಳೆತ ಹಣ್ಣುಗಳು ಇರುತ್ತವೆ !


ಯಲ್ಲಾಪುರ : ಮಕ್ಕಳ ಶೈಕ್ಷಣಿಕ ನೈತಿಕ ಅಭಿವೃದ್ಧಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡು, ದೇಶದ ಜಗತ್ತಿನ ಗಣ್ಯ ನಾಗರಿಕನನ್ನು ಸೃಷ್ಟಿಸುವ ಎಲ್ಲ ಗುರುಗಳಿಗೂ, ಗುರು ಮಾತೆಯರಿಗೂ ಶಿಕ್ಷಕ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತಾ. ನನ್ನ ಬದುಕಿನ ಒಂದೆರಡು ಕಹಿ ಅನುಭವಗಳನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. 

    ಒಂದು ಮಾವಿನ ಹಣ್ಣಿನ ಬುಟ್ಟಿಯಲ್ಲಿ ಎಲ್ಲಾ ಹಣ್ಣುಗಳು ಚೆನ್ನಾಗಿದ್ದು ಅದರಲ್ಲೂ ಕೆಲವು ಒಂದೆರಡು ಹಣ್ಣುಗಳು ಕೆಟ್ಟಿರುತ್ತದೆ. ಅದೇ ರೀತಿ ದೊಡ್ಡ ಪ್ರಮಾಣದ ಶಿಕ್ಷಕ ವೃಂದದಲ್ಲಿ ಎಲ್ಲವೂ ಸರಿಯಾಗಿದ್ದು ಕೆಲವೊಂದು ಸ್ವಾರ್ಥಿ ಶಿಕ್ಷಕರ ಕಾರಣಕ್ಕಾಗಿ ಮಕ್ಕಳ ಭವಿಷ್ಯವೇ ಹಳ್ಳ ಹಿಡಿದು ಹೋಗುತ್ತಿದೆ.

   1986ರ ಸಂಗತಿ ನಾನು ಆಗ ಎಸ್ ಎಸ್ ಎಲ್ ಸಿ, ಬಯಲಸೀಮೆಯ ಒಂದು ಪರೀಕ್ಷಾ ಕೇಂದ್ರ, ಅದು ನನಗೆ ಶಾಲೆ ಕೂಡ ಅಲ್ಲಿ ಪರೀಕ್ಷೆ ಬರೆಯುತ್ತಿದ್ದೆ. ನನ್ನ ಮೇಲೆ ಯಾವ ರೀತಿಯ ಹಗೆ ಇತ್ತೊ ಗೊತ್ತಿಲ್ಲ. ಅದೇ ಶಾಲೆಯ ಶಿಕ್ಷಕನೋರ್ವ ತನಗೆ ಸಂಬಂಧವಿಲ್ಲದ ಪರೀಕ್ಷಾ ಕೇಂದ್ರದಲ್ಲಿ ಪ್ರವೇಶಿಸಿ ಬೆಳಿಗ್ಗೆ ಹಾಗೂ ಸಂಜೆಯ ಎರಡು ಪರೀಕ್ಷೆಯಲ್ಲೂ ಪ್ರತಿ ಬಾರಿ ಐದೈದು ಸಲ ನನ್ನನ್ನು ಚೆಕ್ ಮಾಡಿದ್ದ, ಕೇವಲ ನನ್ನನ್ನೇ ಗುರಿಯಾಗಿಸಿಕೊಂಡು ಚೆಕ್ ಮಾಡುತ್ತಿದ್ದ ಆತ, ಬೇರೆ ವಿಧ್ಯಾರ್ಥಿಗಳು ಕಾಪಿ ಮಾಡುತ್ತಿದ್ದರು ಕೂಡ ಕಣ್ಣೆತ್ತಿ ನೋಡುತ್ತಿರಲಿಲ್ಲ. ನಾನು ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶಿಸುತ್ತಿದ್ದಂತೆ ಉಳಿದ ವಿದ್ಯಾರ್ಥಿಗಳೆಲ್ಲ ನನ್ನನ್ನು ನೋಡಿ ನಗುವುದು ನನಗೆ ಕಣ್ಣಲ್ಲಿ ನೀರು ತರಿಸುವಂತೆ ಮಾಡಿತ್ತು. ಹೀಗಾಗಿ ಮಾನಸಿಕ ಕುಗ್ಗಿ ಹೋಗಿದ್ದ ನಾನು ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಬಹಳಷ್ಟು ಕಡಿಮೆ ಅಂಕವನ್ನು ಪಡೆದೆ. ಕನಿಷ್ಠ ಟಿಸಿಎಚ್ ಕೋರ್ಸ್ ಆಯ್ಕೆಯಾಗದಷ್ಟು ಕಡಿಮೆ ಅಂಕ ಪಡೆದು ಈಗ ಈ ಸ್ಥಿತಿಯಲ್ಲಿ ಇದ್ದೇನೆ.

    ನಮ್ಮದೇ ಶಾಲೆಯ ಶಿಕ್ಷಕರನ್ನಾಗಿದ್ದರು ಕೂಡ ಆತ ನನ್ನ ಮೇಲೆ ಯಾಕೆ ಹೀಗೆ ಹಗೆ ಸಾಗಿಸಿದ ಎನ್ನುವುದು ಇದುವರೆಗೂ ನನಗೆ ತಿಳಿದು ಬಂದಿಲ್ಲ. ನನಗೆ ಬುದ್ಧಿ ಬಂದ ನಂತರ ಅಥವಾ ಶಿಕ್ಷಕರ ದಿನಾಚರಣೆಯ ಮಹತ್ವ ಅರಿತ ನಂತರ, ಪ್ರತಿ ಸೆಪ್ಟೆಂಬರ್ 5ರಂದು ಒಂದು ಹಾಳೆಯ ಮೇಲೆ ಆ ಮಾಸ್ತರನ ಚಿತ್ರ ಬಿಡಿಸಿ ಅದಕ್ಕೆ ನನ್ನ ಎಡಗಾಲು ಎಕ್ಕಡದಿಂದ ಪೂಜೆ ಮಾಡುತ್ತೇನೆ. ಆ ಮಾಸ್ತರ್ ಇದ್ದಾನೋ ಸತ್ತಿದಾನೊ ನನಗೆ ಗೊತ್ತಿಲ್ಲ. ಎಡಗಾಲು ಎಕ್ಕಡದಿಂದ ಪೂಜೆ ಮಾಡಿದ ಕಾಲ್ಪನಿಕವಾಗಿ ಬಿಡಿಸಿದ ಚಿತ್ರವನ್ನು ನಂತರ ಸುಟ್ಟು ಹಾಕುತ್ತೇನೆ. ಆಗ ನನಗಾದ ಅನ್ಯಾಯಕ್ಕೆ, ನನ್ನ ಭವಿಷ್ಯ ಹಾಳು‌ಮಾಡಿದ ಸೂ*** ಮಗ ಶಿಕ್ಷಕನ ಮೇಲೆ ಸೇಡು ತಿರಿಸಿಕೊಂಡ ತೃಪ್ತಿಯಾಗುತ್ತದೆ.

   ಬಹಳ ಹಿಂದೆಯೇ ಇದನ್ನು ಬರೆದು ಕೊಳ್ಳಬೇಕು ಎಂದು ನನಗೆ ಅನಿಸಿತ್ತು. ಅಂತಹುದೇ ಕಹಿ ಘಟನೆ ಇನ್ನೊಮ್ಮೆ ನನ್ನಲ್ಲಿ ನಡೆದಿದೆ. ಇತ್ತೀಚೆಗೆ ನಮ್ಮ ಪರಿಚಯದವರೊಬ್ಬರು ಪರೀಕ್ಷೆ ಬರೆಯುವ ಸಂದರ್ಭದಲ್ಲಿ, ಉಪನ್ಯಾಸಕನೋರ್ವ ಉದ್ದೇಶಪೂರ್ವಕವಾಗಿ ಆತನನ್ನೇ ಕೇವಲ ಆತನನ್ನು ಚೆಕ್ ಮಾಡಿರುವುದು ನನ್ನನ್ನು ಇನ್ನೊಮ್ಮೆ ಆ ಘಟನೆ ಬರಿಯಬೇಕು ಎನಿಸುವ ಮಟ್ಟಿಗೆ ನೆನಪು ಮಾಡಿಕೊಟ್ಟಿತು. 

   ಏನೇ ಇರಲಿ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಮಕ್ಕಳ ಭವಿಷ್ಯವನ್ನು ಹೊಡೆದು, ಬೈದು, ತಿದ್ದಿ, ತೀಡಿ ಬಡ ಮಕ್ಕಳಿಗಾದರೆ ಪಟ್ಟಿ ಪುಸ್ತಕವನ್ನು ನೀಡಿ, ಅವರನ್ನು ಶೈಕ್ಷಣಿಕವಾಗಿ ಸಿದ್ದ ಪಡಿಸುವ ನೂರಾರು ಶಿಕ್ಷಕರನ್ನು ನನ್ನ ಬದುಕಿನಲ್ಲಿ ಕಂಡಿದ್ದೇನೆ. ಕೆಲವರು ಪ್ರಚಾರ ಬಯಸಿದರೆ ಇನ್ನೂ ಕೆಲವರು ಪ್ರಚಾರ ಬಯಸದೆ ತಮ್ಮ ಸೇವೆಯನ್ನು ಮಾಡುತ್ತಿರುತ್ತಾರೆ. ಇಂತಹ ಎಲ್ಲ ಉತ್ತಮ ಪ್ರಶಸ್ತಿ ಯೋಗ್ಯ ಶಿಕ್ಷಕರಿಗೆ ಮತ್ತೊಮ್ಮೆ ನಾನು ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಕೋರಿ ತಮ್ಮಿಂದ ತಯಾರಾದ ಮೂರ್ತಿಗಳು ಜಗತ್ತಿನ ತುಂಬಾ ತಮ್ಮ ಹೆಸರು ನೆನಪಿಸುವಂತೆ ಪ್ರಚಾರ ಪಡಲಿ ಎಂದು ಆಶಿಸುತ್ತೇನೆ. 

          ....ಜಗದೀಶ ನಾಯಕ

ಸೆ.5 ಇಂದು ಶಿಕ್ಷಕರ ದಿನಾಚರಣೆ : ಗುರು ಗೌರವ, ಪ್ರಶಸ್ತಿ ಪ್ರದಾನ ಮತ್ತು ನಿವೃತ್ತಿ ಸನ್ಮಾನ


ಯಲ್ಲಾಪುರ : ವೇದವ್ಯಾಸ ಕಲ್ಯಾಣ ಮಂಟಪದಲ್ಲಿ ಸೆಪ್ಟೆಂಬರ್ 5 ಇಂದು ಶಿಕ್ಷಕರ ದಿನಾಚರಣೆ ಹಾಗೂ ಗುರು ಗೌರವಾರ್ಪಣಾ ಸಮಾರಂಭ ನಡೆಯಲಿದೆ. 




ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಅಂಕೋಲಾ ಅರ್ಬನ್ ಕೋ-ಆಪ್ ಬ್ಯಾಂಕ್ ಲಿ, ಶಾಖೆ ಯಲ್ಲಾಪುರ ಸಂಯುಕ್ತಾಶ್ರಯದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು  ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಉದ್ಘಾಟಿಸಲಿದ್ದಾರೆ. ಶಾಸಕ ಶಿವರಾಮ ಹೆಬ್ಬಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. 

   ಮುಖ್ಯ ಅತಿಥಿಗಳಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ತಿನ ಶಾಸಕ ಶಾಂತಾರಾಮ ಸಿದ್ದಿ, ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಮತ್ತು ಯೋಜನಾ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ, ಪಟ್ಟಣ ಪಂಚಾಯತಿಯ ಅಧ್ಯಕ್ಷೆ ನರ್ಮದಾ ರವಿ ನಾಯ್ಕ ಹಾಗೂ ಉಪಾಧ್ಯಕ್ಷ ಅಮಿತ್ ಅಂಗಡಿ ಭಾಗವಹಿಸಲಿದ್ದಾರೆ.

   ಕಾರ್ಯಕ್ರಮಕ್ಕೆ ಅಂಕೋಲಾ ಅರ್ಬನ್ ಬ್ಯಾಂಕ್ ಅಧ್ಯಕ್ಷ ಭಾಸ್ಕರ್ ನಾರ್ವೇಕರ, ತಾ.ಪಂ. ಆಡಳಿತಾಧಿಕಾರಿ ನಟರಾಜ ಟಿ.ಎಚ್, ಪ.ಪಂ ಮುಖ್ಯಾಧಿಕಾರಿ ಸುನಿಲ್ ಗಾವಡೆ, ಜಿ..ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ನಾರಾಯಣ ನಾಯಕ, ಜಿ.ಪ್ರೌ.ಶಾ.ಸ.ಶಿ.ಸಂಘದ ಅಧ್ಯಕ್ಷ ಅಜಯ ನಾಯಕ, ಜಿ.ಪ್ರೌ.ಶಾ.ದೈ.ಶಿ.ಸಂಘದ ಅಧ್ಯಕ್ಷ ನಾರಾಯಣ ನಾಯಕ, ತಾಲೂಕಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಕಾಶ ನಾಯಕ ವಿಶೇಷ ಅವ್ವಾನಿತರಾಗಿದ್ದಾರೆ ಎಂದು ತಾಲೂಕ ದಂಡಾಧಿಕಾರಿ ಅಶೋಕ ಭಟ್  ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ ವಿಶೇಷ ಆಹ್ವಾನಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಆರ್ ಎನ್ ಗೌಡ; ಉತ್ತಮ ವ್ಯಕ್ತಿತ್ವಕ್ಕೆ ಸಂದ ನೈಜ ಗೌರವ


ಯಲ್ಲಾಪುರ: ತಾಲೂಕಿನ ಇಡ್ಗುಂದಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ ಆರ್ ಎನ್ ಗೌಡ ಅವರಿಗೆ 2024-25 ನೇ ಸಾಲಿನ ಶಿರಸಿ ಶೈಕ್ಷಣಿಕ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯು ಅವರ 35 ವರ್ಷಗಳ ಶಿಕ್ಷಣ ಕ್ಷೇತ್ರದ ಸೇವೆ ಮತ್ತು ಪ್ರಾಮಾಣಿಕತೆಯನ್ನು ಗುರುತಿಸಿ ನೀಡಲಾಗಿದೆ.

   ಆರ್ ಎನ್ ಗೌಡ ಅವರು 1964ರ ಅಕ್ಟೋಬರ್ 1ರಂದು ಬೀರಗದ್ದೆಯ ಕಾವೇರಿ ಮತ್ತು ನಾರಾಯಣಗೌಡ ಇವರ ಮಗನಾಗಿ ಜನಿಸಿದರು. ಬಾಲ್ಯದಲ್ಲಿ ಬೀರಗದ್ದೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ನಂತರ ವಜ್ರಳ್ಳಿಯಲ್ಲಿ ಹಿರಿಯ ಪ್ರಾಥಮಿಕ ಶಿಕ್ಷಣ ಪಡೆದರು. ಯಲ್ಲಾಪುರದ ವೈಟಿಎಸ್‌ಎಸ್‌ ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢಶಾಲೆ ಮತ್ತು ಪದವಿಪೂರ್ವ ಶಿಕ್ಷಣ ಪೂರೈಸಿದ ಅವರು, ಯಲ್ಲಾಪುರದಲ್ಲಿಯೇ ಪದವಿ ಮತ್ತು ಶಿಕ್ಷಕರ ತರಬೇತಿ ಕೋರ್ಸ್‌ ಪಡೆದರು. 

 ತಮ್ಮ ಶಾಲಾ ದಿನಗಳಿಂದಲೂ ಚುರುಕು ಮತ್ತು ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದ್ದ ಅವರು, ಎಲ್ಲರೊಂದಿಗೆ ಸರಳವಾಗಿ ಬೆರೆಯುವ ಗುಣ ಹೊಂದಿದ್ದರು. ನಿಸರ್ಗ ತಾಣಗಳಿಗೆ ಭೇಟಿ ನೀಡುವುದು, ಯಕ್ಷಗಾನ ಪಾತ್ರ ಧರಿಸುವುದು ಹಾಗೂ ತಾಳಮದ್ದಲೆಯನ್ನು ಆಲಿಸುವುದು ಅವರ ಹವ್ಯಾಸಗಳಾಗಿವೆ.

   1990ರ ಜೂನ್ 1ರಂದು ಶಿಕಾರಿಪುರ ತಾಲೂಕಿನ ಅಷಿನಕಟ್ಟೆ ಶಾಲೆಯಲ್ಲಿ ತಮ್ಮ ಶಿಕ್ಷಕ ವೃತ್ತಿ ಆರಂಭಿಸಿದ ಅವರು, ಐದು ವರ್ಷಗಳ ನಂತರ ಯಲ್ಲಾಪುರಕ್ಕೆ ವರ್ಗಾವಣೆ ಪಡೆದರು. ಯಲ್ಲಾಪುರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ದಬ್ಬೆಸಾಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೀರಗದ್ದೆ, ಚಿಮ್ನಳ್ಳಿ, ಜೋಗದಮನೆ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಅವರು, ಇದೀಗ ಇಡಗುಂದಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

   ಮಕ್ಕಳಿಗೆ ಅಚ್ಚು ಮೆಚ್ಚಿನ ಶಿಕ್ಷಕರಾಗಿರುವ ಅವರು, ಪಾಲಕರು, ಸ್ಥಳೀಯ ಸಮುದಾಯ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. 2008ರಲ್ಲಿ ತಾಲೂಕಿನ ಉತ್ತಮ ಶಿಕ್ಷಕರ ಪ್ರಶಸ್ತಿಯನ್ನು ಪಡೆದ ಅವರು, 2011-12 ರಲ್ಲಿ ಜೋಗಿನಮನೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ, ಕ್ಲಸ್ಟರ್ ಮಟ್ಟದ ಉತ್ತಮ ಗುಣಮಟ್ಟದ ಶಾಲೆ ಎಂಬ ಪ್ರಶಸ್ತಿಯನ್ನು ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದರು.

   ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಅನೇಕ ಸಾಧನೆಗಳನ್ನು ಮಾಡಿರುವ ಅವರು, ಗಂಗಾ ಅವರನ್ನು ಬಾಳ ಸಂಗತಿಯಾಗಿ ಸ್ವೀಕರಿಸಿ ಸೀಮಾ ಮತ್ತು ಸಂದೀಪ್ ಎಂಬ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಸೀಮಾ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರೆ, ಸಂದೀಪ್ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

   ಆರ್ ಎನ್ ಗೌಡ ಅವರ ಈ ಪ್ರಶಸ್ತಿಯು ಅವರ ಶ್ರಮ, ಪ್ರಾಮಾಣಿಕತೆ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗುರುತಿಸುತ್ತದೆ.