Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Monday, 2 September 2024

ಯಲ್ಲಾಪುರ - ಶಿಡ್ಲಗುಂಡಿ ರಸ್ತೆ: ಅಪಘಾತಗಳ ಕೇಂದ್ರ!


ಯಲ್ಲಾಪುರ : ಯಲ್ಲಾಪುರದಿಂದ ಶಿಡ್ಲಗುಂಡಿವರೆಗಿನ ರಾಜ್ಯ ಹೆದ್ದಾರಿಯು ಹಳ್ಳ ಹಿಡಿದು ಅಪಘಾತಗಳ ಕೇಂದ್ರವಾಗಿ ಮಾರ್ಪಟ್ಟಿದೆ. ಈ ರಸ್ತೆಯಲ್ಲಿ ಪ್ರತಿ ದಿನ ನಾಲ್ಕರಿಂದ ಐದು ವಾಹನ ಅಪಘಾತಗಳು ನಡೆಯುತ್ತಿವೆ. ಸಣ್ಣ ಮಳೆಯಲ್ಲಿಯೂ ರಸ್ತೆಯು ಕೆರೆಯಂತೆ ಭಾಸವಾಗುತ್ತಿದ್ದು, ವಾಹನ ಸವಾರರು ಹಾಗೂ ಚಾಲಕರು ಗೊಂದಲಕ್ಕೆ ಈಡಾಗುತ್ತಿದ್ದಾರೆ.

    ಸೋಮವಾರ ಸಂಜೆ ಸುರಿದ ಭಾರಿ ಮಳೆಗೆ ಯಲ್ಲಾಪುರ-ಮುಂಡಗೋಡ ರಸ್ತೆಯ ಹೊಂಡಗಳು ತುಂಬಿದ್ದು, ಟಾರು ರಸ್ತೆಗಿಂತ ನೀರು ತುಂಬಿದ ಹೊಂಡಗಳೇ ಹೆಚ್ಚು ಕಂಡುಬಂದವು. ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು, "ಯಲ್ಲಾಪುರದಿಂದ ಶಿಡ್ಲಗುಂಡಿವರೆಗಿನ ರಸ್ತೆಯಲ್ಲಿ ಅತಿ ಹೆಚ್ಚು ಹೊಂಡ ಇದೆ, ರಾಷ್ಟ್ರೀಯ ಪ್ರಶಸ್ತಿ ಸಿಗಬೇಕು!" ಎಂದು ಜನ ವ್ಯಂಗ್ಯವಾಗಿ ಹೇಳುತ್ತಿದ್ದಾರೆ.


  ಪ್ರತಿ ವರ್ಷ ಹಣ ವ್ಯಯವಾಗುತ್ತಿದ್ದರೂ ರಸ್ತೆಯ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಇಲಾಖೆಯ ಹಿರಿಯ ಅಧಿಕಾರಿಗಳು ಈ ಬಗ್ಗೆ ಕಣ್ಣುಮುಚ್ಚಿ ಕೂತಿದ್ದಾರೆ ಎಂಬುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.

   ಪ್ರತಿ ದಿನ ಬೆಳಿಗ್ಗೆ ಈ ರಸ್ತೆಯಲ್ಲಿ ನಾಲ್ಕು ಬಸ್ಸುಗಳಲ್ಲಿ ಸುಮಾರು 180-200 ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದಾರೆ. ದೊಡ್ಡ ಅನಾಹುತ ಸಂಭವಿಸುವ ಮೊದಲು ಸಂಬಂಧಪಟ್ಟ ಅಧಿಕಾರಿಗಳು ರಸ್ತೆಯನ್ನು ಸರಿಪಡಿಸಬೇಕೆಂದು ವಾಹನ ಸವಾರರು, ಚಾಲಕರು ಮತ್ತು ಮಕ್ಕಳ ಪಾಲಕರು ಒತ್ತಾಯಿಸಿದ್ದಾರೆ.

    ಯಲ್ಲಾಪುರ-ಮುಂಡಗೋಡ ರಸ್ತೆಯ ಜಡ್ಡಿಗದ್ದೆ ಹತ್ತಿರ ದೊಡ್ಡ ಹೊಂಡ ಬಿದ್ದಿದ್ದು, ವಾಹನಗಳು ತೊಳಲಾಡುತ್ತಾ ಸಾಗುತ್ತಿವೆ. ಅಪಾಯ ಸಂಭವಿಸುವ ಮೊದಲು ಸಣ್ಣ ಹೊಂಡಗಳನ್ನು ಮುಚ್ಚುವದಕ್ಕಿಂತ‌ ತಾತ್ಕಾಲಿಕವಾಗಿ ದೊಡ್ಡ ಹೊಂಡಗಳನ್ನು ಮುಚ್ಚಬೇಕೆಂದು ಹುಣಶೆಟ್ಟಿಕೊಪ್ಪ ಗ್ರಾಮದ ಅನೇಕರು ಆಗ್ರಹಿಸಿದ್ದಾರೆ.

ವೀರಭದ್ರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಭಜನೆ/ಹಿಲ್ಡಾ ಫರ್ನಾಂಡಿಸ್ ಅವರ ಬೀಳ್ಕೊಡುಗೆ/ಆಸಿಮ್ ಆಸಿಫ್ ಅಲಿ ರಾಜ್ಯ ಮಟ್ಟಕ್ಕೆ ಆಯ್ಕೆ


ವೀರಭದ್ರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಭಜನೆ

ಯಲ್ಲಾಪುರ: ತಾಲೂಕಿನ ಹೊನ್ನಗದ್ದೆಯ ವೀರಭದ್ರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರದಂದು ವಿಶೇಷ ಪೂಜೆ ಮತ್ತು ಭಜನಾ ಕಾರ್ಯಕ್ರಮ ನಡೆಯಿತು.

 

 ದೂರದ ಊರುಗಳಿಂದ ಭಕ್ತರು ಬಂದು ದೇವರ ದರ್ಶನ ಮಾಡಿ ಪೂಜೆ ಸಲ್ಲಿಸಿದರು. ಅರ್ಚಕ ರಾಮಚಂದ್ರ ಭಟ್ಟರು ಪೂಜಾ ಕಾರ್ಯಕ್ರಮ ನಡೆಸಿದರು. ಭಗವದ್ಗೀತೆ ಪಠಣ, ಶಂಕರಾಚಾರ್ಯರ ಸ್ತುತಿ, ದೇವಿ ಸ್ತುತಿ, ಶಿವಾರಾಧನೆ ಶ್ಲೋಕ, ದಾಸಸಾಹಿತ್ಯದ ಕೀರ್ತನೆಗಳನ್ನು ಮಹಿಳೆಯರು ಪ್ರಸ್ತುತಪಡಿಸಿದರು.

   ಭಜನಾ ಕಾರ್ಯಕ್ರಮದಲ್ಲಿ ಭಾರತಿ ಭಟ್ಟ, ದುಂಢಿ, ಮಹಾಲಕ್ಷ್ಮಿ ಗಾಂವ್ಕರ ಸಾಂಬೇಮನೆ, ಶಾರದಾ ಗಾಂವ್ಕರ, ಸೀತಾ ಭಟ್ಟ, ಮಂಗಲಾ ಹೆಗಡೆ, ನೇತ್ರಾವತಿ ಭಟ್ಟ, ಭಾಗೀರಥಿ ಭಟ್ಟ, ಲಕ್ಷ್ಮೀ ಭಟ್ಟ ಸೇರಿದಂತೆ ಇತರ ಸದಸ್ಯರು ಪಾಲ್ಗೊಂಡಿದ್ದರು. ನಂತರ ಮಹಾಮಂಗಳಾರತಿ ಮತ್ತು ಪ್ರಸಾದ ವಿತರಣೆ ನಡೆಯಿತು.


ಹಿಲ್ಡಾ ಫರ್ನಾಂಡಿಸ್ ಅವರ ಬೀಳ್ಕೊಡುಗೆ

ಯಲ್ಲಾಪುರ: ಮದರ ತೇರೆಜಾ ಶಾಲೆಯ ಹಿಲ್ಡಾ ಫರ್ನಾಂಡಿಸ್ ಅವರು 21 ವರ್ಷಗಳ ಸೇವೆ ಮುಗಿಸಿ ನಿವೃತ್ತರಾದರು. ಈ ಸಂದರ್ಭದಲ್ಲಿ ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.

 

 ಫಾದರ್ ಪೀಟರ್ ಕನೇರಿಯೋ, ಫಾದರ್ ರೊಯ್ಯಸ್ಟನ ಗೊನ್ಸಾಲ್ವಿಸ್, ಸಿಸ್ಟರ್‌ಗಳು ಮತ್ತು ಶಿಕ್ಷಕ ವೃಂದ ಉಪಸ್ಥಿತರಿದ್ದರು. ಶಿಕ್ಷಕ ಲೀಲೇಶ್ ಮತ್ತು ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.


ಆಸಿಮ್ ಆಸಿಫ್ ಅಲಿ ರಾಜ್ಯ ಮಟ್ಟಕ್ಕೆ ಆಯ್ಕೆ


ಯಲ್ಲಾಪುರ: ಮದರ ತೇರೆಜಾ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಆಸಿಮ್ ಆಸಿಫ್ ಅಲಿ, ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಪ್ರೌಢಶಾಲೆ ಕರಾಟೆ ಸ್ಪರ್ಧೆಯಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಮೂಲಕ ಆಸಿಮ್ ಶಾಲೆಗೆ ಕೀರ್ತಿ ತಂದಿದ್ದಾರೆ.

ಎಲ್.ಐ.ಸಿ. 68ನೇ ಹುಟ್ಟುಹಬ್ಬ: ಗ್ರಾಹಕರ ವಿಶ್ವಾಸಕ್ಕೆ ಧಕ್ಕೆ ಬರಬಾರದು ; ಅರ್ಚಕ ನಾರಾಯಣ ಭಟ್ಟ


ಯಲ್ಲಾಪುರ : ಭಾರತೀಯ ಜೀವವಿಮಾ ನಿಗಮ (ಎಲ್.ಐ.ಸಿ.) 68ನೇ ಹುಟ್ಟುಹಬ್ಬವನ್ನು ಸೆ. 1ರಂದು ಯಲ್ಲಾಪುರದ ಶಾಖೆಯಲ್ಲಿ ಆಚರಿಸಲಾಯಿತು. 

   ಈ ಸಂದರ್ಭದಲ್ಲಿ, ವೆಂಕಟರಮಣ ಮಠದ ಅರ್ಚಕ ನಾರಾಯಣ ಭಟ್ಟ, ಎಲ್.ಐ.ಸಿ. ಒಂದು ಸಾಗರವಿದ್ದಂತೆ. ಅವರ ಪ್ರತಿನಿಧಿಗಳು ಕಣ್ಣಿಗೆ ಕಾಣದ ವ್ಯವಹಾರವಾಗಿದ್ದರೂ, ಮಾತುಗಾರಿಕೆಯಿಂದಲೇ ಹೆಚ್ಚಿನ ವಿಮಾ ವ್ಯವಹಾರ ಮಾಡುತ್ತಾರೆ. ದೇಶದ ಅಭಿವೃದ್ಧಿಯಲ್ಲಿ ಎಲ್.ಐ.ಸಿ.ಯ ಕೊಡುಗೆ ಅನುಪಮವಾದದ್ದು ಎಂದು ಹೇಳಿದರು ಅವರು, ಗ್ರಾಹಕರು ಎಲ್.ಐ.ಸಿ. ಬಗ್ಗೆ ಅಪಾರ ವಿಶ್ವಾಸ ಹೊಂದಿದ್ದಾರೆ. ಅವರ ವಿಶ್ವಾಸಕ್ಕೆ ಧಕ್ಕೆ ಬರಬಾರದು. ಅಂತೆಯೇ ಉತ್ತಮ ಸೇವೆಯೂ ಸಿಗುತ್ತಿದೆ. ಇನ್ನೂ ಹೆಚ್ಚಿನ ಸೇವೆ ಗ್ರಾಹಕರಿಗೆ ಸಿಗುವಂತಾಗಬೇಕು ಎಂದು ಅವರು ಆಶಿಸಿದರು.

   ಶಾಖಾಧಿಕಾರಿ ಗೋಪಾಲಕೃಷ್ಣ ಆಚಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮದು ಒಂದು ವ್ಯಾವಹಾರಿಕ ಸಂಸ್ಥೆ. ಗ್ರಾಹಕರ ಸೇವೆಯೇ ಮಹತ್ವವಾದದ್ದು. ಪ್ರತಿ ವರ್ಷವೂ ಸೆ.1 ಹುಟ್ಟುಹಬ್ಬದ ಜೊತೆ 7 ದಿನಗಳ ಕಾಲ ಹತ್ತಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇವೆ ಎಂದರು.

     ನಿವೃತ್ತ ಅಭಿವೃದ್ಧಿ ಅಧಿಕಾರಿ ರವೀಂದ್ರ ಪ್ರಭು ಮಾತನಾಡಿದರು. ಎಲ್.ಐ.ಸಿ. ಗ್ರಾಹಕರಾದ ಮಲವಳ್ಳಿಯ ರಾಮಾ ಗೌಡ ದೀಪ ಬೆಳಗಿಸಿ, ಸಪ್ತಾಹವನ್ನು ಉದ್ಘಾಟಿಸಿದರು. ನಂತರ ತಮಗಿತ್ತ ಸನ್ಮಾನ ಸ್ವಿಕರಿಸಿ, ಶುಭಹಾರೈಸಿದರು.

    ಆಡಳಿತಾಧಿಕಾರಿ ಜಿ.ವಿ.ಭಟ್ಟ, ಪ್ರಸಾದ, ಅಭಿವೃದ್ಧಿ ಅಧಿಕಾರಿಗಳಾದ ರಾಘವೇಂದ್ರ ಕಣಗಿಲ್, ಮಧುಕೇಶ್ವರ ಹೆಗಡೆ, ಕೌಶಿಕ್ ನದಾಫ್, ಪ್ರತಿನಿಧಿಗಳಾದ ಆರ್.ಎನ್.ಕೋಮಾರ್. ಡಿ.ಜಿ.ಭಟ್ಟ, ರಾಘವೇಂದ್ರ ಪೂಜಾರಿ, ಗುರಪ್ಪನವರ್, ಸುಧೀಂದ್ರ ಪೈ, ನೀಲವ್ವ ಮತ್ತಿತರರು ಉಪಸ್ಥಿತರಿದ್ದರು.

   ಎಲ್‌ಐಸಿ ಪ್ರತಿನಿಧಿಗಳಾದ ಎನ್.ವಿ.ಸಭಾಹಿತ ಸ್ವಾಗತಿಸಿ, ನಿರ್ವಹಿಸಿದರು. ಶಂಕರ ಭಟ್ಟ ತಾರೀಮಕ್ಕಿ ವಂದಿಸಿದರು.

ಮಹಿಳಾ ಸಹಕಾರಿ ಸಂಘದ ದಶಮಾನೋತ್ಸವ: ಆರ್ಥಿಕ ಸಬಲತೆಗೆ ಒಂದು ಹೆಜ್ಜೆ/ ಸೆ.4ರಂದು ತಾಲೂಕಾ ಗ್ಯಾರಂಟಿಗಳ ಯೋಜನೆ ಅನುಷ್ಠಾನ ಸಮಿತಿ ಕಾರ್ಯಾಲಯ ಉದ್ಘಾಟನೆ


ಮಹಿಳಾ ಸಹಕಾರಿ ಸಂಘದ ದಶಮಾನೋತ್ಸವ: ಆರ್ಥಿಕ ಸಬಲತೆಗೆ ಒಂದು ಹೆಜ್ಜೆ

ಯಲ್ಲಾಪುರ : ಪಟ್ಟಣ ಪಂಚಾಯತ ಮಾಜಿ ಅಧ್ಯಕ್ಷೆ ಸುನಂದಾ ದಾಸ್ ಅವರು ಪ್ರಿಯದರ್ಶೀನಿ ಮಹಿಳಾ ವಿವಿಧೋದ್ದೇಶಗಳ ಸಹಕಾರಿ ಸಂಘದ ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಹಿಳೆಯರಲ್ಲಿ ಉಳಿತಾಯ ಯೋಜನೆಯ ಕುರಿತು ಜಾಗೃತಿ ಮೂಡಿಸುವಲ್ಲಿ ಸಂಘದ ಕೊಡುಗೆ ಮಹತ್ವದಾಗಿದೆ ಎಂದು ಹೇಳಿದರು.


 ಈ ಕಾರ್ಯಕ್ರಮವು ಇತ್ತೀಚೆಗೆ ಪಟ್ಟಣದ ಅಂಬೇಡ್ಕರ ಸಭಾಭವನದಲ್ಲಿ ನಡೆಯಿತು. ವಿಶ್ವದರ್ಶನ ಪ್ರೌಢಶಾಲೆಯ ಮುಖ್ಯೋಪಾದ್ಯಾಪಕಿ ಮುಕ್ತಾ ಶಂಕರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲೂ ಸಮಯ ಪಾಲನೆ ಮತ್ತು ಕ್ರಮನಿಷ್ಠೆಯಿಂದ ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು. ಪ್ರಿಯದರ್ಶೀನಿ ಸಹಕಾರ ಸಂಘ ದಶಮಾನೋತ್ಸವದಲ್ಲಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

   ಪ.ಪಂ ಮಾಜಿ ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ ಸೇರಿದಂತೆ ಪ.ಪಂ ಸದಸ್ಯರಾದ ಗೀತಾ ದೇಶಭಂಡಾರಿ, ಜ್ಯೋತಿ ನಾಯ್ಡು, ಸಾಮಾಜಿಕ ಕಾರ್ಯಕರ್ತೆ ತನುಜಾ ಬದ್ದಿ, ಪತ್ರಕರ್ತೆ ಪ್ರಭಾವತಿ ಗೋವಿ, ಕೆಡಿಡಿಸಿ ಸಂಸ್ಥೆ ಸಂಯೋಜಕ ಹರಿಶ್ಚಂದ್ರ ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಾಧಕ ಮಹಿಳೆಯರಿಗೆ, ವಿಕಲಚೇತನರಿಗೆ, ಪಿಗ್ಮಿದಾರರಿಗೆ ಮತ್ತು ಸದಸ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು.

  ವನಿತಾ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಮಿಲನ್ ಸ್ವಾಗತಿಸಿದರು ಮತ್ತು ಫತೇಜಾ ಕಾರ್ಯಕ್ರಮ ನಿರ್ವಹಿಸಿದರು.

ಸೆ.4ರಂದು ತಾಲೂಕಾ ಗ್ಯಾರಂಟಿಗಳ ಯೋಜನೆ ಅನುಷ್ಠಾನ ಸಮಿತಿ ಕಾರ್ಯಾಲಯ ಉದ್ಘಾಟನೆ

ಯಲ್ಲಾಪುರ: ತಾಲೂಕಾ ಗ್ಯಾರಂಟಿಗಳ ಯೋಜನೆ ಅನುಷ್ಠಾನ ಪ್ರಾಧಿಕಾರ, ಯಲ್ಲಾಪುರದ ಕಾರ್ಯಾಲಯವು ಸೆಪ್ಟೆಂಬರ್ 4, ರಂದು ಮಧ್ಯಾಹ್ನ 4 ಗಂಟೆಗೆ ಉದ್ಘಾಟನೆಗೊಳ್ಳಲಿದೆ. 


    ತಾಲೂಕಾ ಪಂಚಾಯತ್ ಭವನದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಹಾಗ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳು ವೈದ್ಯ, ಹಳಿಯಾಳ ಶಾಸಕ ಹಾಗೂ ರಾಜ್ಯ ಆಡಳಿತ ಸುಧಾರಣಾ ಸಮಿತಿ ಅಧ್ಯಕ್ಷರಾದ ಆರ್ ವಿ ದೇಶಪಾಂಡೆ, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್, ವಿಧಾನ ಪರಿಷತ್ ಸದಸ್ಯ ಶಾಂತಾರಾಮ್ ಸಿದ್ಧಿ ಹಾಗೂ ಜಿಲ್ಲಾ ಗ್ಯಾರಂಟಿಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸತೀಶ್ ಪಿ ನಾಯ್ಕ ಉಪಸ್ಥಿತರಿರುವರು ಎಂದು ತಾಲೂಕಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ದೇವಿದಾಸ ನಾಗೇಶ ಶಾನಭಾಗ್ ತಿಳಿಸಿದ್ದಾರೆ.


ಸಂಸ್ಕೃತ ಕ್ಷೇತ್ರದ ಗುರುಗಳಿಗೆ 'ಪ್ರಾಚ್ಯವಿದ್ಯಾ ಭೂಷಣ' ಪ್ರಶಸ್ತಿ

 

ಯಲ್ಲಾಪುರ/ನವದೆಹಲಿ : ದೆಹಲಿಯಲ್ಲಿ ಇತ್ತೀಚೆಗೆ ನಡೆದ "ಉತ್ಕರ್ಷ ಮಹೋತ್ಸವ 2024" ನಲ್ಲಿ, ಕೇಂದ್ರ ಜವಳಿ ಖಾತೆಯ ಸಚಿವ ಗಿರಿರಾಜ್ ಸಿಂಗ್ ಅವರು ಸಂಸ್ಕೃತ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ಐವರಿಗೆ "ಪ್ರಾಚ್ಯವಿದ್ಯಾ ಭೂಷಣ" ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

    ಈ ಪ್ರಶಸ್ತಿಯನ್ನು ಯಲ್ಲಾಪುರದ ಹಿರಿಯ ಸಂಶೋಧಕರು ಹಾಗೂ ವಿದ್ವಾಂಸ ಸೂರ್ಯನಾರಾಯಣ ನಾಗೇಂದ್ರ ಭಟ್ಟ ಹಿತ್ಲಳ್ಳಿ ಅವರಿಗೂ ನೀಡಲಾಯಿತು.

    ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ನವದೆಹಲಿ; ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ನವದೆಹಲಿ; ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ತಿರುಪತಿ - ಈ ಮೂರು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯಗಳು ಈ ಮಹೋತ್ಸವವನ್ನು ಸಹಯೋಗದಲ್ಲಿ ಆಯೋಜಿಸಿದವು.


  ಈ ಸಂದರ್ಭದಲ್ಲಿ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಶ್ರೀನಿವಾಸ ವರಖೇಡಿ, ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಮುರಳಿಮನೋಹರ ಪಾಠಕ್, ತಿರುಪತಿ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಜಿ. ಎಸ್. ಆರ್. ಕೃಷ್ಣಮೂರ್ತಿ, ಭಾರತೀಯ ಭಾಷಾ ಸಮಿತಿಯ ಅಧ್ಯಕ್ಷ, ಸಂಸ್ಕೃತ ಪ್ರಮೋಷನ್ ಫೌಂಡೇಷನ್ ಕಾರ್ಯದರ್ಶಿ ಚ. ಮೂ. ಕೃಷ್ಣಶಾಸ್ತ್ರಿ ಉಪಸ್ಥಿತರಿದ್ದರು.

   2020ರಲ್ಲಿ ಇವು ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯಗಳಾಗಿ ಘೋಷಿಸಲ್ಪಟ್ಟ ನೆನಪಿಗೆ ಪ್ರತಿ ವರ್ಷ "ಉತ್ಕರ್ಷ ಮಹೋತ್ಸವ"ವನ್ನು ಆಚರಿಸಲಾಗುತ್ತದೆ. ಸಂಸ್ಕೃತ ಭಾಷೆಯನ್ನು ಭಾರತ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮಾಡುವುದು ಈ ಮಹೋತ್ಸವದ ಮುಖ್ಯ ಉದ್ದೇಶವಾಗಿದೆ.

ವಿ. ಸೂರ್ಯನಾರಾಯಣ ನಾಗೇಂದ್ರ ಭಟ್ಟ ಹಿತ್ಲಳ್ಳಿ ಬಗ್ಗೆ:

 ಹಿತ್ಲಳ್ಳಿ ಸೂರ್ಯನಾರಾಯಣ ಭಟ್ಟರು ಮೀಮಾಂಸಾ, ವೇದಾಂತ, ನ್ಯಾಯ ಮುಂತಾದ ಶಾಸ್ತ್ರ ಗ್ರಂಥಗಳ ಅಧ್ಯಯನ ಮಾಡಿದವರು. ವಿದ್ವತ್, ಸಂಸ್ಕೃತ ಎಂ.ಎ., ಪಿಎಚ್.ಡಿ. ಪದವೀಧರರು. ಮೈಸೂರು, ಕೇರಳ, ಪುದುಚೇರಿ ಮುಂತಾದೆಡೆಗಳಲ್ಲಿ ಸಂಸ್ಕೃತ ಪಂಡಿತ, ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ ಅವರು; ಕಲ್ಲಿಕೋಟೆ ಮತ್ತು ತಿರುಪತಿಯ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶನ ಪ್ರಾಧ್ಯಾಪಕರೂ ಹೌದು. ಕನ್ನಡ, ಸಂಸ್ಕೃತ ಭಾಷೆಗಳ ಹಲವಾರು ಪುಸ್ತಕಗಳ ಲೇಖಕರಾದ ಅವರು ಪತ್ರಿಕೆಗಳಲ್ಲಿ ಆಗೀಗ ಲೇಖನಗಳನ್ನೂ ಬರೆದಿದ್ದಾರೆ. ಪಾಣಿನಿಯನ್ನು ಕುರಿತ ಸಿ.ಡಿ.ಯನ್ನು ಭಾರತೀಯ ಭಾಷಾ ಸಂಸ್ಥಾನ ಹೊರತಂದಿದೆ.


ಐಐಐಟಿಗೆ ಯಲ್ಲಾಪುರದ ತೇಜಸ್ವಿ ಮದ್ಗುಣಿ ಆಯ್ಕೆ


ಯಲ್ಲಾಪುರ : ಧಾರವಾಡದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಕಂಪ್ಯೂಟರ್ ಸಾಯನ್ಸ್ ಬಿ.ಟೆಕ್. ಪದವಿಗೆ ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವೈ.ಟಿ.ಎಸ್.ಎಸ್. ಶಿಕ್ಷಣ ಸಂಸ್ಥೆಯ‌ ಮಾಜಿ ವಿದ್ಯಾರ್ಥಿ ತೇಜಸ್ವಿ ಮದ್ಗುಣಿ ಆಯ್ಕೆಯಾಗಿ ತಾಲೂಕಿಗೆ, ಕಲಿತ ಶಿಕ್ಷಣ ಸಂಸ್ಥೆಗಳಿಗೆ ಕೀರ್ತಿ ತಂದಿದ್ದಾನೆ.

   ಆರಂಭದಿಂದಲೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಈತ, ಸಾಂಸ್ಕೃತಿಕ, ಕ್ರೀಡೆ, ರಸಪ್ರಶ್ನೆ  ವಿವಿದ ಕ್ಷೇತ್ರಗಳಲ್ಲಿ ಪ್ರತಿಭೆ ಹೊಂದಿದ್ದು ಹಲವು ಪ್ರಶಸ್ತಿ ಗಳಿಸಿದ್ದನು. ಈತನ ಬಹುಮುಖ ಪ್ರತಿಭೆಯನ್ನು ಗುರುತಿಸಿದ ಅಖಿಲ ಹವ್ಯಕ ಮಹಾಸಭಾ ರಾಜ್ಯಮಟ್ಟದ 'ಹವ್ಯಕ ಪಲ್ಲವ' ಪ್ರಶಸ್ತಿ ನೀಡಿ ಗೌರವಿಸಿತ್ತು. ಪ್ರತಿಭಾ ಕಾರಂಜಿ‌ ರಸಪ್ರಶ್ನೆ ವಿಭಾಗದಲ್ಲಿ, ಟೇಬಲ್ ಟೆನ್ನೀಸ್, ಬ್ಯಾಡ್ ಮಿಂಟನ್ ನಲ್ಲಿ‌ ಜಿಲ್ಲಾಮಟ್ಟದಲ್ಲಿ ಪ್ರಶಸ್ತಿಗಳಿಸಿದ್ದಾನೆ. ಅಲ್ಲದೇ ಕೇಂದ್ರ ಸರಕಾರದ ದೀನ ದಯಾಳ ಪಿಲೆಟಲಿ ( ಅಂಚೇ ಚೀಟಿ ಸಂಗ್ರಹ)  ನಲ್ಲಿ ಎರಡು ಬಾರಿ ಪ್ರಾಜೆಕ್ಟ ರೂಪಿಸಿ ಸ್ಕಾಲರ್ಶಿಪ್ ಗೆ ಆಯ್ಕೆಯಾಗಿದ್ದನು. ಅಲ್ಲದೇ ಶೊಟೋಕಾನ್ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪದವಿ ಗಳಿಸಿದ್ದಾನೆ.
   ಎಲ್.ಕೆ.ಜಿ.ಯಿಂದ ಹತ್ತನೇ ತರಗತಿಯವರೆಗೆ ಪಟ್ಟಣದ ವೈ.ಟಿ.ಎಸ್.ಎಸ್. ಶಿಕ್ಷಣ ಸಂಸ್ಥೆಯ ಆಂಗ್ಲಮಾಧ್ಯಮ ಶಾಲೆಯಲ್ಲಿ‌ ಕಲಿತ ಈತ ಸಂಸ್ಥೆಯ ಆದರ್ಶ ವಿದ್ಯಾರ್ಥಿ ಪ್ರಶಸ್ತಿ ಕೂಡ ಗಳಿಸಿದ್ದನು. ಪದವಿ ಪೂರ್ವ ಶಿಕ್ಷಣವನ್ನು ಧಾರವಾಡದ ಅರ್ಜುನ ವಿಜ್ಞಾನ ಪದವಿ‌ ಪೂರ್ವ ಕಾಲೇಜಿನಲ್ಲಿ ಪಿಯು ಶಿಕ್ಷಣವನ್ನು ಪೂರೈಸಿದ್ದಾನೆ.

     ಈತ ಯಲ್ಲಾಪುರ ತಾಲೂಕಿನ‌ ಪ್ರಥಮ  ವೈದ್ಯರಾದ ದಿ. ಡಾ. ಜಿ.ಪಿ.ಭಟ್ಟ ಮದ್ಗುಣಿ ಇವರ ಮೊಮ್ಮಗನಾಗಿದ್ದು, ಆಯುರ್ ಸೇವಾ ಭವನದ ವೈದ್ಯೆ ಡಾ. ಸುಚೇತಾ ಹಾಗೂ ವಿಜಯ ಕರ್ನಾಟಕ ವರದಿಗಾರ ನಾಗರಾಜ ಮದ್ಗುಣಿ ಇವರ ಪುತ್ರನಾಗಿದ್ದಾನೆ.

    ಈತನ ಸಾಧನೆಗೆ ವೈ.ಟಿ.ಎಸ್.ಎಸ್. ಶಿಕ್ಷಣ ಸಂಸ್ಥೆ ಹಾಗೂ ಅರ್ಜುನ ಪದವಿ ಪೂರ್ವ ವಿಜ್ಞಾನ ಕಾಲೇಜಿನ ಅಧ್ಯಕ್ಷರು, ಪದಾಧಿಕಾರಿಗಳು,ಆಡಳಿತ ಮಂಡಳಿ, ನಿರ್ದೇಶಕರು, ಪ್ರಾಂಶುಪಾಲರು, ಉಪನ್ಯಾಸಕರು, ಶಿಕ್ಷಕರು ಶುಭ ಹಾರೈಸಿದ್ದಾರೆ.