Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Saturday, 17 August 2024

ದತ್ತ ಜಯಂತಿಗೆ ಶಿಲಾಮಯ ದೇವಾಲಯ ಮರು ನಿರ್ಮಾಣ

ಯಲ್ಲಾಪುರ : ಪಟ್ಟಣದ ನಾಯಕನಕೆರೆಯ ದತ್ತಾತ್ರೇಯ ಮಂದಿರವು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಶಿಲಾಮಯ ದೇವಾಲಯವನ್ನಾಗಿ ಮರು ನಿರ್ಮಾಣಗೊಳ್ಳುತ್ತಿದೆ. ಡಿಸೆಂಬರ್ 14ರಂದು ನಡೆಯುವ ದತ್ತ ಜಯಂತಿಯ ಸಂದರ್ಭದಲ್ಲಿ ಇದರ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ.
   ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಈ ವಿಷಯವನ್ನು ಬಹಿರಂಗಪಡಿಸಿದರು. ಅವರು ಆಗಸ್ಟ್ 17ರಂದು ಮಂದಿರದ ನಿರ್ಮಾಣ ಹಂತದಲ್ಲಿರುವ ಕೆತ್ತನೆ ಕಾರ್ಯವನ್ನು ಪರಿಶೀಲಿಸುತ್ತಿದ್ದರು.
  17 ಅಡಿ ಆಳದ ಕಲ್ಲಿನ ಅಡಿಪಾಯವನ್ನು ಸುಮಾರು 15 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಬೆಂಗಳೂರಿನ ವಾಸ್ತು ತಜ್ಞ ಮಹೇಶ್ ಮುನಿಯಂಗಳ ಈ ನಿರ್ಮಾಣ ಕಾರ್ಯದ ನೇತೃತ್ವ ವಹಿಸಿದ್ದಾರೆ. ಅವರು ಈಗಾಗಲೇ ಮೂರು ಸಾವಿರಕ್ಕೂ ಹೆಚ್ಚು ಗುಡಿಗಳನ್ನು ನಿರ್ಮಿಸಿದ್ದಾರೆ ಮತ್ತು ಅಮೆರಿಕದಲ್ಲೂ ಶಿಲಾಮಯ ಮಂದಿರ ನಿರ್ಮಾಣ ಮಾಡಿದ್ದಾರೆ. ಮಂಗಳೂರಿನ ಪ್ರಸಿದ್ಧ ಶಿಲ್ಪಿ ವೆಂಕಟರಮಣ ಭಟ್ ಸುರಾಲು ಮಂದಿರಕ್ಕೆ ಬೇಕಾಗಿರುವ ಕಲ್ಲುಗಳನ್ನು ಕೆತ್ತಿ ಜೋಡಿಸುವ ಕೆಲಸ ಮಾಡುತ್ತಿದ್ದಾರೆ.
   ನೂರಾರು ವರ್ಷಗಳ ಹಿಂದೆ ಬ್ರಹ್ಮಾನಂದ ಗಣೇಶ ಯೋಗಿಗಳು ಈ ಮಂದಿರವನ್ನು ಸ್ಥಾಪಿಸಿದ್ದರು. ನಂತರ ಶಿವಾನಂದ ಯೋಗಿಗಳು ಇಲ್ಲಿ ತಪಸ್ಸನ್ನು ಆಚರಿಸಿ ಪುಣ್ಯ ಭೂಮಿಯನ್ನಾಗಿ ಪರಿವರ್ತಿಸಿದ್ದರು. ಈಗ ಶ್ರೀ ರಾಘವೇಶ್ವರ ಸ್ವಾಮಿಗಳ ಆಶೀರ್ವಾದದೊಂದಿಗೆ ಮಂದಿರ ಅಭಿವೃದ್ಧಿ ಪಡಿಸಲಾಗುತ್ತಿದೆ.
   ತಾಲೂಕಿನ ಜನರ ಸಹಾಯದಿಂದ ಈ ಮಂದಿರ ನಿರ್ಮಾಣಗೊಳ್ಳಬೇಕಾಗಿದೆ. ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಗರ್ಭಗುಡಿ ನಿರ್ಮಾಣದ ನಂತರ ಇನ್ನೆರಡು ಕೋಟಿ ರೂಪಾಯಿ ವೆಚ್ಚದಲ್ಲಿ ಚಂದ್ರಶಾಲೆ, ಕಲ್ಯಾಣ ಮಂಟಪ, ವಸತಿಗ್ರಹ ಮುಂತಾದ ವ್ಯವಸ್ಥೆಗಳನ್ನು ನಿರ್ಮಿಸಲು ಯೋಜನೆ ಇದೆ. ಭಕ್ತರು ಸಹಾಯ ಮಾಡಿ, ಗುರುವಿನ ಕೃಪೆಗೆ ಪಾತ್ರರಾಗಲು ವಿನಂತಿಸಿದರು. 
    ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಹರಿಪ್ರಕಾಶ ಕೋಣೆಮನೆ, ಶ್ರೀರಂಗ ಕಟ್ಟಿ, ನಾಗೇಶ ಯಲ್ಲಾಪುರಕರ್, ಕಾರ್ಯದರ್ಶಿ ಶಾಂತಾರಾಮ ಹೆಗಡೆ, ಖಜಾಂಚಿ ಪ್ರಶಾಂತ ಹೆಗಡೆ, ನಿರ್ದೇಶಕ ಕೆ ಟಿ ಭಟ್ಟ ಗುಂಡ್ಕಲ್ ಉಪಸ್ಥಿತರಿದ್ದರು.


14 ಅಡಿ ಕಾಳಿಂಗ ಸರ್ಪ ರಕ್ಷಣೆ: ಯುವಕ ಸೂರಜ್ ಶೆಟ್ಟಿಯ ಧೈರ್ಯ!

ಯಲ್ಲಾಪುರ : ತೆಲಂಗಾರದಲ್ಲಿರುವ ವಿಶ್ವೇಶ್ವರ ನಾಯ್ಕ ಅವರ ಮನೆಯ ಹತ್ತಿರದ ಹುಲ್ಲಿನ‌ಬಣಿವೆಯಲ್ಲಿ ಅವಿತುಕೊಂಡಿದ್ದ 14 ಅಡಿಗಿಂತ ಹೆಚ್ಚು ಉದ್ದ ಮತ್ತು 12 ಕೆಜಿ ತೂಕದ ಕಾಳಿಂಗ ಸರ್ಪವನ್ನು ಅರಬೈಲ್ ಗ್ರಾಮದ ಯುವಕ ಸ್ನೇಕ್ ಸೂರಜ್ ಶೆಟ್ಟಿ ಶನಿವಾರ ಮಧ್ಯಾಹ್ನ ರಕ್ಷಿಸಿದರು. ಸುರಿಯುತ್ತಿದ್ದ ಮಳೆಯ ಮಧ್ಯೆಯೂ ಶೆಟ್ಟಿ ಅವರು ಧೈರ್ಯದಿಂದ ಸರ್ಪವನ್ನು ರಕ್ಷಿಸಿದ್ದಾರೆ.
  ಬೀರಗದ್ದೆಯ ಹರೀಶ್ ಮಡಿವಾಳ ಮತ್ತು ಗೋಪಾಲ್ ಗೌಡ ಅವರು ಕಾರ್ಯಾಚರಣೆಯಲ್ಲಿ ಸಹಕಾರ ನೀಡಿದರು. ಸೂರಜ ಶೆಟ್ಟಿ ಇದುವರೆಗೆ 15 ಕ್ಕಿಂತ ಹೆಚ್ಚು ಕಿಂಗ್ ಕೋಬ್ರಾ ಮತ್ತು 500 ಕ್ಕಿಂತ ಹೆಚ್ಚು ನಾಗರ ಹಾವುಗಳನ್ನು ರಕ್ಷಿಸಿದ್ದಾರೆ. ಅವರ ಧೈರ್ಯ ಮತ್ತು ಸರ್ಪಗಳ ಬಗ್ಗೆ ಅವರ ಜ್ಞಾನವು ಪ್ರಶಂಸಾರ್ಹವಾಗಿದೆ.

ಉಮ್ಮಚಗಿಯಲ್ಲಿ ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ

ಯಲ್ಲಾಪುರ: ಉಮ್ಮಚಗಿ ಗ್ರಂಥಾಲಯ ಸಭಾಭವನದಲ್ಲಿ ಆಗಸ್ಟ್ 17ರಂದು ಹಿರಿಯ ನಾಗರಿಕರಿಗೆ ಉಚಿತ ಆಯುಷ್ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಯಿತು.
  ಶಿಬಿರದಲ್ಲಿ ಉಮ್ಮಚಗಿ ಸರಕಾರಿ ಆಯುರ್ವೇದ ಚಿಕಿತ್ಸಾಲಯ ವೈದ್ಯಾಧಿಕಾರಿ, ಡಾ.ಯೋಗೇಶ ಮಾಡಗಾಂವಕರ ಮಾತನಾಡಿ,  ಹಿರಿಯ ನಾಗರಿಕರ ಆರೋಗ್ಯ ಕಾಳಜಿ ಮತ್ತು ಆಯುರ್ವೇದದ ಪ್ರಯೋಜನಗಳ ಬಗ್ಗೆ ತಿಳಿಸಿದರು. 
  ಹಿತ್ಲಳ್ಳಿ  ಸರಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ಚಂದ್ರಶೇಖರ, ಡೆಂಗ್ಯೂ ಮತ್ತು ಚಿಕನ್‌ ಗುನ್ಯಾ ತಡೆಗಟ್ಟುವಲ್ಲಿ ಆಯುರ್ವೇದದ ಪಾತ್ರದ ಬಗ್ಗೆ ವಿವರಿಸಿದರು.
   ಯೋಗಶಿಕ್ಷಕಿ ಪ್ರಿಯಾ ಹೆಗಡೆ, ಹಿರಿಯ ನಾಗರಿಕರಿಗೆ ಸೂಕ್ತವಾದ ಯೋಗಾಭ್ಯಾಸಗಳ ಬಗ್ಗೆ ಮಾಹಿತಿ ನೀಡಿದರು. 
   ಗ್ರಾಮ ಪಂಚಾಯತ ಅಧ್ಯಕ್ಷ ಕುಪ್ಪಯ್ಯ ಪೂಜಾರಿ, ಹಿರಿಯ ನಾಗರಿಕರಿಗೆ ಆರೋಗ್ಯಕ್ಕೆ ಶಿಬಿರದ ಪ್ರಯೋಜನ ಹಾಗೂ ಮಹತ್ವವನ್ನು ತಿಳಿಸಿದರು.
   ಶಿಬಿರದಲ್ಲಿ ಗ್ರಾಮ ಪಂಚಾಯತ ಸದಸ್ಯ ಮೋಹನ ಪೂಜಾರಿ, ಮಾಜಿ ಸದಸ್ಯೆ ಲಲಿತಾ ವಾಲಿಕಾರ, ಭಾರತಿ ಹೆಗಡೆ ಮತ್ತು ಪ್ರಿಯಾ ಹೆಗಡೆ ಉಪಸ್ಥಿತರಿದ್ದರು. ಭಾರತಿ ಹೆಗಡೆ ಪ್ರಾರ್ಥಿಸಿದರು, ಪ್ರಿಯಾ ಹೆಗಡೆ ಸ್ವಾಗತಿಸಿ ನಿರೂಪಿಸಿದರು.

ಅನುದಾನಿತ ಪಿಂಚಣಿ ವಂಚಿತ ಶಿಕ್ಷಕರ ಸಂಘದಿಂದ ಡಿಸಿಗೆ ಮನವಿ

ಯಲ್ಲಾಪುರ /ಕಾರವಾರ : ಅನುದಾನಿತ ಪಿಂಚಣಿ ವಂಚಿತ ಶಿಕ್ಷಕರ ಸಂಘವು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರಿಗೆ ಶನಿವಾರ ಮನವಿ ಸಲ್ಲಿಸಿದೆ. ಕಾರವಾರ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಯ ನೂರಕ್ಕೂ ಹೆಚ್ಚು ಶಿಕ್ಷಕರು ಆಗಮಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.
  ಖಾಸಗಿ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿಯ ವೇತನ ನಿವೃತ್ತಿ ವೇತನ ವಿಧೇಯಕ 2014 ರದ್ದುಪಡಿಸುವುದು. ಸರ್ಕಾರದ ಪ್ರಣಾಳಿಕೆಯಂತೆ ಓ ಪಿ ಎಸ್ ಜಾರಿಗೆ ತರುವುದು. 1-4-2004 ಪೂರ್ವದ ನೇಮಕಾತಿಗಳಿಗೆ ಹಳೆಯ ನಿಶ್ಚಿತ ಪಿಂಚಣಿ ನೀಡುವುದು. ಅನುದಾನಿತ ನೌಕರಿಗೂ ಸರಕಾರಿ ನೌಕರಿಗಳಿಗೆ ನೀಡುವಂತೆ ವೈದ್ಯಕೀಯ ಸೌಲಭ್ಯಗಳನ್ನು ಜಾರಿಗೊಳಿಸುವುದು ಶಿಕ್ಷಕರ ಪ್ರಮುಖ ಬೇಡಿಕೆಗಳಾಗಿವೆ. 
   ಸಂಘಟನಾ ಕಾರ್ಯದರ್ಶಿ ಉಮೇಶ್ ಭಟ್, ಜಿಲ್ಲಾ ಉಪಾಧ್ಯಕ್ಷ ಎಂ ರಾಜಶೇಖರ್, ಸಂಘದ ಅಧ್ಯಕ್ಷ ಜೈ ರಂಗನಾಥ್ ಹಾಗೂ ಎಲ್ಲಾ ಶಿಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶಿರಸಿ ಹಾಗೂ ಕಾರವಾರದ ಎಲ್ಲಾ ತಾಲೂಕುಗಳಿಂದ ಪದಾಧಿಕಾರಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು. ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಈ ಮನವಿಯನ್ನು ಸಲ್ಲಿಸಲಾಯಿತು.

ವಜ್ರಳ್ಳಿಯಲ್ಲಿ ಕೃತಕ ಬುದ್ಧಿಮತ್ತೆ (ಏಐ) ತರಬೇತಿ

ಯಲ್ಲಾಪುರ: ವಜ್ರಳ್ಳಿ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಇತ್ತೀಚೆಗೆ ಕೃತಕ ಬುದ್ಧಿಮತ್ತೆ (ಏಐ) ಕುರಿತಾದ ತರಬೇತಿ ಕಾರ್ಯಕ್ರಮ ನಡೆಯಿತು. ಶಿವಯ್ಯ ಗೋಡಿಮನಿ, ಕೃತಕ ಬುದ್ಧಿಮತ್ತೆ ತರಬೇತಿ ನೀಡಿದರು. 
   ಈ ತರಬೇತಿಯ ಮುಖ್ಯ ಉದ್ದೇಶವು ಯುವಜನರಿಗೆ ಏಐ ಕೌಶಲ್ಯಗಳನ್ನು ಕಲಿಸುವುದು ಮತ್ತು ಅವರ ವೃತ್ತಿ ಆಯ್ಕೆಗಳಿಗೆ ಸಹಾಯ ಮಾಡುವುದು. ಈ ತರಬೇತಿಯು ಉದ್ಯೋಗ ಸಂದರ್ಶನಗಳಿಗೆ ತಯಾರಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮತ್ತು ಉದ್ಯೋಗ ಅವಕಾಶಗಳನ್ನು ಹೆಚ್ಚಿಸುವ ಗುರಿ ಹೊಂದಿತ್ತು.
   ಚಾಟ್‌ ಜಿಪಿಟಿ, ಜೇಮಿನಿ, ಮೈಕ್ರೋಸಾಫ್ಟ್‌ ಸುನೋ ಮತ್ತು ಇನ್‌ವಿಡೀಯೊ ಗಳಂತಹ ಆಪ್‌ಗಳನ್ನು ಬಳಸಿಕೊಂಡು ಏಐ ಕುರಿತಾದ ಮೂಲಭೂತ ಅಂಶಗಳನ್ನು 4 ಅಧಿವೇಶನಗಳಲ್ಲಿ ಕಲಿಸಲಾಗುತ್ತಿದೆ. ಈ ತರಬೇತಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್‌ ಇಲಾಖೆ, ಡೆಲ್‌ ಕಂಪನಿ ಹಾಗೂ ಶಿಕ್ಷಣ ಫೌಂಡೇಶನ್‌ ಜಿಲ್ಲಾ ಪಂಚಾಯತ ಸಹಯೋಗದೊಂದಿಗೆ ನೀಡಲಾಗುತ್ತಿದೆ. ಈ ತರಬೇತಿಯಲ್ಲಿ 20 ಯುವಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಲೈಬ್ರರಿಯನ್ ದತ್ತಾತ್ರೇಯ ಕಣ್ಣಿಪಾಲ‌ ಇದ್ದರು.

ವಿಶ್ವದರ್ಶನ ವಿದ್ಯಾರ್ಥಿಗಳಿಗೆ ಕೃಷಿಯ ಅನುಭವ/ ಕಿರವತ್ತಿ ಮತ್ತು ಮದ್ನೂರ್ ಕ್ಲಸ್ಟರ್ ಶಾಲೆಗಳಿಗೆ ಪಿಎಂಶ್ರೀ ಸಮಾಲೋಚನೆ

ಗದ್ದೆ ನಾಟಿ: ವಿಶ್ವದರ್ಶನ ವಿದ್ಯಾರ್ಥಿಗಳಿಗೆ ಕೃಷಿಯ ಅನುಭವ
ಯಲ್ಲಾಪುರ: ವಿಶ್ವದರ್ಶನ ಪಿಯು ಕಾಲೇಜಿನ ವಿದ್ಯಾರ್ಥಿಗಳು ಸ್ವಾತಂತ್ರ್ಯೋತ್ಸವದ ನಂತರ ಕೃಷಿಯಲ್ಲಿ ತೊಡಗಿಸಿಕೊಂಡು ಅನನ್ಯ ಅನುಭವ ಪಡೆದರು. ಕಲಗದ್ದೆ ಗ್ರಾಮದ ಉಪನ್ಯಾಸಕ ಸಚಿನ್ ಭಟ್ ಅವರ ಗದ್ದೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಗದ್ದೆ ನಾಟಿ ಮಾಡಿದರು.
   ಪ್ರಾಚಾರ್ಯ ಡಾ. ದತ್ತಾತ್ರಯ ಗಾಂವಕರ ವಿದ್ಯಾರ್ಥಿಗಳಿಗೆ ಕೃಷಿಯ ಮಹತ್ವವನ್ನು ವಿವರಿಸಿ, ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕೃಷಿಯ ಅಭಿವೃದ್ಧಿಯತ್ತ ಆಸಕ್ತಿ ಬೆಳೆಸಲು ಒತ್ತಾಯಿಸಿದರು.
   ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಜಗನ್ನಾಥ ಬಾಸುತ್ಕರ, ರವೀಂದ್ರ ಶರ್ಮ, ರಮೇಶ ನಾಯಕ ಮತ್ತು ಉಪಪ್ರಾಂಶುಪಾಲ ನಾಗರಾಜ ಹೆಗಡೆ ಪಾಲ್ಗೊಂಡರು. ಕೆಸರುಗದ್ದೆಯಲ್ಲಿ ಖುಷಿಯಿಂದ ನಡೆದ ನಾಟಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕೃಷಿಯ ಕುರಿತು ಅರಿತುಕೊಂಡರು.
   ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಕೋಣೆಮನೆ ವಿದ್ಯಾರ್ಥಿಗಳಿಗೆ ಕೃಷಿಯ ಬಗ್ಗೆ ಪ್ರೀತಿ ಹುಟ್ಟಿಸುವ ಪ್ರಯತ್ನ ಮಾಡಿದರು. ಕಚೇರಿ ಸಿಬ್ಬಂದಿ ಮತ್ತು ಉಪನ್ಯಾಸಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
  
ಕಿರವತ್ತಿ ಮತ್ತು ಮದ್ನೂರ್ ಕ್ಲಸ್ಟರ್ ಶಾಲೆಗಳಿಗೆ ಪಿಎಂಶ್ರೀ ಸಮಾಲೋಚನೆ
ಯಲ್ಲಾಪುರ : ತಾಲೂಕಿನ ಮಾದೇವಕೊಪ್ಪದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಿರವತ್ತಿ ಮತ್ತು ಮದ್ನೂರ್ ಕ್ಲಸ್ಟರ್ ಶಾಲೆಗಳ ಸಮಾಲೋಚನ ಸಭೆ ಶನಿವಾರ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಆರ್. ಹೆಗಡೆಯವರು ಸಭೆಯನ್ನು ಉದ್ಘಾಟಿಸಿ, ಪಿಎಂಶ್ರೀ ಯೋಜನೆ ಮತ್ತು ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರ ಬಗ್ಗೆ ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು.. 
   ಶಿಕ್ಷಣ ಸಂಯೋಜಕ ಪ್ರಶಾಂತ್ ಜಿ ಎನ್ ಮತ್ತು ಪ್ರೌಢ ವಿಭಾಗದ ಬಿ ಆರ್ ಪಿ ಪ್ರಶಾಂತ್ ಪಟಗಾರ ಸಭೆಯಲ್ಲಿ ಭಾಗವಹಿಸಿದರು.
   ಪ್ರಶಾಂತ್ ಪಟಗಾರ ಭಾರತದಲ್ಲಿ ಪ್ರಧಾನ ಮಂತ್ರಿ ಶಾಲೆ (ಪಿಎಂಶ್ರೀ) ಯೋಜನೆ, ಕಲಿಕಾ ಫಲಗಳು ಮತ್ತು ನಿರಂತರ ಮತ್ತು ಸಮಗ್ರ ಮೌಲ್ಯಮಾಪನ ನಿರ್ವಹಣೆಗಳ ಬಗ್ಗೆ ವಿವರಣಾತ್ಮಕವಾಗಿ ಮಾಹಿತಿ ನೀಡಿದರು. ಪ್ರಶಾಂತ್ ಜಿ ಎನ್ ಶಾಲೆಗಳಲ್ಲಿ ಪಠ್ಯ ಪುಸ್ತಕ ಮತ್ತು ದಾಖಲೆಗಳ ನಿರ್ವಹಣೆಯ ಬಗ್ಗೆ ಸೂಚನೆಗಳನ್ನು ನೀಡಿದರು. ಸಿಆರ್‌ಪಿಗಳು ವಿಶ್ವನಾಥ ಮರಾಠೆ ಮತ್ತು ನಾಗರಾಜ್ ಡಿ ನಾಯ್ಕ ಇವರ ನೇತೃತ್ವದಲ್ಲಿ ಸಮಾಲೋಚನಾ ಸಭೆಯು ಶಿಕ್ಷಕರ ಸಹಕಾರದೊಂದಿಗೆ ಯಶಸ್ವಿಯಾಗಿ ನೆರವೇರಿತು.

ಕುಂದರಗಿ: ಕೂಲಿ ಕಾರ್ಮಿಕ ಮಂಜುನಾಥ ಅನಂತ ಸಿದ್ದಿ ಆತ್ಮಹತ್ಯೆ

ಯಲ್ಲಾಪುರ : ತಾಲೂಕಿನ ಕುಂದರಗಿ ಗ್ರಾಮದಲ್ಲಿ ಕೂಲಿ ಕಾರ್ಮಿಕ ಮಂಜುನಾಥ ಅನಂತ ಸಿದ್ದಿ (30) ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

   ಮಂಜುನಾಥ ಅವರು ಸುಮಾರು ಎರಡು ವರ್ಷಗಳಿಂದ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಅವರು ವೈದ್ಯರು ಸೂಚಿಸಿದಂತೆ ಮಾತ್ರೆಗಳನ್ನು ನಿಯಮಿತವಾಗಿ ಸೇವಿಸುತ್ತಿರಲಿಲ್ಲ. ಹಲವು ಬಾರಿ ಮಾನಸಿಕ ಅಸ್ವಸ್ಥತೆಗೆ ಒಳಗಾಗುತ್ತಿದ್ದ ಅವರು ಆಗಾಗ್ಗೆ ಅನಾರೋಗ್ಯದಿಂದ ಬಳಲುತ್ತಿದ್ದರು.

  ಆಗಸ್ಟ್ 16 ರ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ನಡುವೆ ಯಲ್ಲಾಪುರ ತಾಲೂಕು ಬಾಳೆಗದ್ದೆಯ ಜಾಜಿಮನೆ ಶಿವರಾಮ ಹೆಗಡೆ ಅವರ ಜಮೀನಿನಲ್ಲಿರುವ ಬಾವಿಯಲ್ಲಿ ಹಾರಿ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಮಂಜುನಾಥರ ಮರಣದಲ್ಲಿ ಯಾವುದೇ ಸಂಶಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಪೊಲೀಸ್ ಉಪನಿರೀಕ್ಷಕ ಶೇಡಜಿ ಚೌವ್ಹಾಣ ತನಿಖೆ ಕೈಗೊಂಡಿದ್ದಾರೆ. 


ಇಂದಿರಾ ಕ್ಯಾಂಟೀನ್ ಮೇಲ್ಚಾವಣಿ ಶೀಟ್ ಅಳವಡಿಕೆ :ಕಾಮಗಾರಿ ಆದೇಶಕ್ಕೂ ಮುನ್ನ ಕೆಲಸ ಪ್ರಾರಂಭ! ಸೋಮು ನಾಯ್ಕ ಆರೋಪ


ಇಂದಿರಾ ಕ್ಯಾಂಟೀನ್ ಮೇಲ್ಚಾವಣಿ ಶೀಟ್ ಅಳವಡಿಕೆ :ಕಾಮಗಾರಿ ಆದೇಶಕ್ಕೂ ಮುನ್ನ ಕೆಲಸ ಪ್ರಾರಂಭ! ಸೋಮು ನಾಯ್ಕ ಆರೋಪ

ಯಲ್ಲಾಪುರ: ಪಟ್ಟಣದ ಇಂದಿರಾ ಕ್ಯಾಂಟೀನ್‌ನ ಮೇಲ್ಚಾವಣಿ ರಿಪೇರಿ ಕಾಮಗಾರಿಯನ್ನು ಕಾಮಗಾರಿ ಆದೇಶ ನೀಡುವ ಮೊದಲೇ ಪ್ರಾರಂಭಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ರವೀಂದ್ರನಗರ್ ವಾರ್ಡ್ ಸದಸ್ಯ ಸೋಮೇಶ್ವರ ನಾಯ್ಕ ಆರೋಪಿಸಿದ್ದಾರೆ. 



 ಅವರು ಈ ಕುರಿತು ಹೇಳಿಕೆ ನೀಡಿ, ದಾಖಲೆಗಳ ಪ್ರಕಾರ, 16.8.2024 ರಂದು ಕಾಮಗಾರಿ ಆದೇಶ ನೀಡಲಾಗಿದೆ. ಆದರೆ, ಗುತ್ತಿಗೆದಾರ 12.8.2024 ರಂದು ಕೆಲಸ ಪ್ರಾರಂಭಿಸಿದ್ದಾನೆ. ಕಾಮಗಾರಿ ಆದೇಶ ಬರುವ ಮೊದಲೇ ಗುತ್ತಿಗೆದಾರನಿಗೆ ಕೆಲಸದ ಆರ್ಡರ್ ತನಗೆ ಸಿಗಲಿದೆ ಎಂಬ ಮಾಹಿತಿ ಇತ್ತೆ? ವರ್ಕ್ ಆರ್ಡರ್ ಸಿಗುವ ನಾಲ್ಕು ದಿನಗಳ ಮೊದಲೇ ಕೆಲಸ ಪ್ರಾರಂಭಿಸಿರುವುದು ಯಾರ ಕೃಪಾ ಕಟಾಕ್ಷದಿಂದ ಎಂದು ಸೋಮೇಶ್ವರ ನಾಯ್ಕ ಪ್ರಶ್ನಿಸಿದ್ದಾರೆ.

ವಿದ್ಯುತ್ ಸಂಪರ್ಕದಲ್ಲಿ ನಿಯಮ ಉಲ್ಲಂಘನೆ?

ಈ ಕಾಮಗಾರಿ ನಿರ್ವಹಣೆಗೆ ಹೆಸ್ಕಾಂನಿಂದ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯಬೇಕಿತ್ತು. ಆದರೆ, ಗುತ್ತಿಗೆದಾರ ಈ ನಿಯಮವನ್ನು ಪಾಲಿಸದೆ, ಇಂದಿರಾ ಕ್ಯಾಂಟೀನ್‌ನಿಂದ ವಿದ್ಯುತ್ ಸಂಪರ್ಕ ಪಡೆದು ವೆಲ್ಡಿಂಗ್ ಕಟಿಂಗ್ ಮುಂತಾದ ಕೆಲಸಗಳನ್ನು ಮಾಡುತ್ತಿದ್ದಾನೆ. ಇದರಿಂದ ಇಂದಿರಾ ಕ್ಯಾಂಟೀನ್‌ಗೆ ಬರುವ ಹೆಚ್ಚುವರಿ ಬಿಲ್ ಪಟ್ಟಣ ಪಂಚಾಯಿತಿ ಬರಿಸಬೇಕಾಗಿದೆ ಎಂದು ಸೋಮೇಶ್ವರ ನಾಯ್ಕ ಹೇಳಿದರು.

ಇತರ ಕಾಮಗಾರಿಗಳಲ್ಲಿಯೂ ಅನುಮಾನ!

ವಾರ್ಡ್ ನಂಬರ್ 17 ರವೀಂದ್ರ ನಗರದಲ್ಲಿ ಗಟಾರ ಮೇಲಿನ ಮುಚ್ಚಳಿಕೆ, ಸಿಸಿ ರಸ್ತೆ, ಮಿನಿ ಹೈ ಮಸ್ಟ್ ದೀಪದ ಕಂಬ ಇತ್ಯಾದಿ ಕೆಲಸಗಳು ಒಂದೇ ಅವಧಿಗೆ ಟೆಂಡರ್ ಆಗಿವೆ. ಆದರೆ, ತಮ್ಮ ವಾರ್ಡ್‌ನಲ್ಲಿಯ ಕೆಲಸಗಳಿಗೂ ವರ್ಕ್ ಆರ್ಡರ್ ನೀಡಲಾಗಿದೆಯೇ ಎಂಬ ಪ್ರಶ್ನೆಗೆ ಜನಪ್ರತಿನಿಧಿಯಾಗಿರುವ ತಮಗೆ ಅಸಮರ್ಪಕ ಉತ್ತರ ಪಟ್ಟಣ ಪಂಚಾಯಿತಿಯಿಂದ ಲಭ್ಯವಾಗಿದೆ ಎಂದು ಆರೋಪಿಸಿದ್ದಾರೆ.

ಸಾಮಗ್ರಿಗಳಲ್ಲಿಯೂ ಅನುಮಾನ!

ಇಂದಿರಾ ಕ್ಯಾಂಟೀನ್ ಮೇಲ್ಚಾವಣಿ ಟ್ರಸ್ ಮತ್ತು ಶೀಟ್ ಅಳವಡಿಕೆಗೆ, ಮುಂಡಗೋಡದಿಂದ ಒಬ್ಬ ಕಾಂಟ್ರಾಕ್ಟರ್ ಮತ್ತು ಯಲ್ಲಾಪುರದಿಂದ ಐದು ಜನ ಕಾಂಟ್ರಾಕ್ಟರ್‌ಗಳು ಟೆಂಡರ್ ಹಾಕಿದ್ದರು. ಆದರೆ, ಅವರಿಗೆ ಮಾಹಿತಿ ಇಲ್ಲದೆಯೇ ಕಾಮಗಾರಿ ಆದೇಶ ಭದ್ರಾವತಿಯಲ್ಲಿರುವ ಗುತ್ತಿಗೆದಾರರಿಗೆ ಲಭ್ಯವಾಗಿದೆ. ಕಾಮಗಾರಿ ಆದೇಶ ಬರುವ ನಾಲ್ಕು ದಿನಗಳ ಮೊದಲೇ ಗುತ್ತಿಗೆದಾರರು ಕೆಲಸ ಪ್ರಾರಂಭ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಇಂದಿರಾ ಕ್ಯಾಂಟೀನ್ ಮೇಲ್ಚಾವಣಿ ಟ್ರಸ್ ಮತ್ತು ಶೀಟ್ ಅಳವಡಿಕೆಯ ಸಾಮಗ್ರಿಗಳು ನಿಯಮಾನುಸಾರ ಇರುವಂತೆ ಕಂಡು ಬರುತ್ತಿಲ್ಲ. ಹೀಗಾಗಿ, ಕಾಮಗಾರಿ ಬಿಲ್ ನೀಡುವಾಗ ಸಂಪೂರ್ಣವಾಗಿ ಪರಿಶೀಲಿಸಿ ನೀಡಬೇಕು.

ಜಿಲ್ಲಾಧಿಕಾರಿಗಳಿಗೆ ದೂರು ನೀಡಲಿರುವ ಸೋಮೇಶ್ವರ  ನಾಯ್ಕ.

ಪಟ್ಟಣ ಪಂಚಾಯಿತಿಯಲ್ಲಿ ಕಾಮಗಾರಿ ಆದೇಶ ಆಗುವ ಮೊದಲೇ ಕೆಲಸ ಪ್ರಾರಂಭಿಸಿರುವ ಕುರಿತು ತಾವು ಜಿಲ್ಲಾಧಿಕಾರಿಗಳು, ಸಂಬಂಧಪಟ್ಟ ಸಚಿವರು ಮತ್ತು ವಿಭಾಗಗಳಿಗೆ ದೂರು ನೀಡುವುದಾಗಿ ಸೋಮೇಶ್ವರ ನಾಯ್ಕ ಹೇಳಿದ್ದಾರೆ. ಕಾಮಗಾರಿ ಪ್ರಾರಂಭಿಸಿದ ದಿನದಂದು ತೆಗೆದ ಫೋಟೋದ ಜಿಪಿಎಸ್ ದಾಖಲೆ ಮತ್ತು ಕಾಮಗಾರಿ ಆದೇಶ ಪಟ್ಟಣ ಪಂಚಾಯಿತಿಯಲ್ಲಿ ನೀಡಿದ ದಿನಾಂಕ ಎರಡು ವ್ಯತ್ಯಾಸವಾಗಿದ್ದು, ಈ ಕಾಮಗಾರಿ ನೀಡುವಲ್ಲಿ ನಿಯಮಗಳನ್ನು ಪಾಲಿಸಿಲ್ಲ ಎಂಬ ಸಂಶಯವನ್ನು ಸೋಮೇಶ್ವರ ನಾಯ್ಕ ವ್ಯಕ್ತಪಡಿಸಿದ್ದಾರೆ.

ಯಲ್ಲಾಪುರ ಹಾಗೂ ಜಿಲ್ಲೆಯ ಡಿಜಿಟಲ್‌ ಜಗತ್ತಿನಲ್ಲಿ‌ ಪೂರ್ವಿ ಕಂಪ್ಯೂಟರ್ಸ್‌ನ ಪ್ರಭಾವ!


ಯಲ್ಲಾಪುರ ಹಾಗೂ ಜಿಲ್ಲೆಯ ಡಿಜಿಟಲ್‌ ಜಗತ್ತಿನಲ್ಲಿ‌ ಪೂರ್ವಿ ಕಂಪ್ಯೂಟರ್ಸ್‌ನ ಪ್ರಭಾವ!

ಯಲ್ಲಾಪುರ: ಕಳೆದ 15 ವರ್ಷಗಳಿಂದ ಡಿಜಿಟಲ್‌ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪೂರ್ವಿ ಕಂಪ್ಯೂಟರ್‌ಗಳು ಉತ್ತರ ಕನ್ನಡದಲ್ಲಿ 2010 ರಿಂದ ಹೊನ್ನಾವರದಿಂದ ಪ್ರಾರಮಭವಾಗಿ  ಜಿಲ್ಲೆಯಾಧ್ಯಂತೆ ತನ್ನ ಸೇವೆಯನ್ನು ವಿಸ್ತರಿಸಿಕೊಂಡಿದೆ. 

ಪೂರ್ವಿ ಕಂಪ್ಯೂಟರ್ಸ್ ನ ವಿಶ್ವಾಸಾರ್ಹ ಸೇವೆಗಳು: 

ಡೆಸ್ಕ್‌ಟಾಪ್ ದುರಸ್ತಿ ಮತ್ತು ಅಪ್‌ಗ್ರೇಡ್‌ನಿಂದ ಹಿಡಿದು ಲ್ಯಾಪ್‌ಟಾಪ್ ಸ್ಕ್ರೀನ್ ಮತ್ತು ಕೀಪ್ಯಾಡ್‌ನ ಬದಲಾವಣೆ, ವೈರಸ್ ತೆಗೆಯುವಿಕೆ ಮತ್ತು ಡೇಟಾ ಮರುಪಡೆಯುವಿಕೆ, ಪ್ರಿಂಟರ್ ಸ್ಥಾಪನೆ ಮತ್ತು ಸೇವೆ, ಸಿಸಿಟಿವಿ ಅಳವಡಿಕೆ ಮತ್ತು ಸೇವೆ, ಬಯೋಮೆಟ್ರಿಕ್ ಸಾಧನ ಸ್ಥಾಪನೆ, ಎಲ್‌ಎಎನ್ ಕೇಬಲ್ಲಿಂಗ್‌ವರೆಗೆ ಪೂರ್ವಿ ಕಂಪ್ಯೂಟರ್‌ಗಳು ನಿಮಗೆ ಎಲ್ಲಾ ರೀತಿಯ ಸೇವೆಗಳನ್ನು ನೀಡುತ್ತದೆ.

ಫೈಬರ್ ಆಪ್ಟಿಕ್ ಸಂಪರ್ಕ: 

ಯಲ್ಲಾಪುರದಲ್ಲಿ ಎಫ್‌ಟಿಟಿ‌ಎಚ್ FTTH ಇಂಟರ್ನೆಟ್ ಸೇವೆಯನ್ನು ಒದಗಿಸುವಲ್ಲಿ ಪೂರ್ವಿ ಕಂಪ್ಯೂಟರ್ಸ್ ಪ್ರಮುಖ ಪಾತ್ರವಹಿಸುತ್ತದೆ. ಯಲ್ಲಾಪುರ ಪಟ್ಟಣ ಅಷ್ಟೆ ಅಲ್ಲದೇ ಗ್ರಾಮೀಣ ಭಾಗದಲ್ಲಿ ವಿಶ್ವಸಾರ್ಹನೀಯ ಕಂಪನಿಗಳ ಎಫ್‌ಟಿಟಿಎಸ್ ಕೇಬಲ್ ಅಳವಡಿಸಿ ಇಂಟರನೆಟ್ ಹಾಗೂ ಕೆಬಲ್ ಟಿವಿ‌ ಸಂಪರ್ಕ ನೀಡುತ್ತಿದೆ. ಸಮಸ್ಯೆಗಳು ಎದುರಾದಾಗ ಶೀಘ್ರವಾಗಿ ಸ್ಥಳಕ್ಕೆ‌ ಭೇಟಿ ನೀಡುವ ತಂತ್ರಜ್ಞರು ಸಮಸ್ಯೆಯನ್ನು ಬಗೆಹರಿಸುತ್ತಾರೆ.

ಪೂರ್ವಿ ಕಂಪ್ಯೂಟರ್ಸ್ ನಲ್ಲಿ ವಿವಿಧ ಉತ್ಪನ್ನಗಳು: 


ಪೂರ್ವಿ ಕಂಪ್ಯೂಟರ್ಸ್ ನಲ್ಲಿ ಬ್ರಾಂಡೆಡ್ ಕಂಪ್ಯೂಟರ್‌ಗಳು ಮತ್ತು ಭಾಗಗಳು ಲಭ್ಯವಿದೆ. ಎಲ್ಲಾ ರೀತಿಯ ಡೆಸ್ಕ್‌ಟಾಪ್ ಮತ್ತು ಲ್ಯಾಪ್‌ಟಾಪ್‌ಗಳು, ಲೇಸರ್ಜೆಟ್ ಮತ್ತು ಇಂಕ್‌ಜೆಟ್ ಮುದ್ರಕಗಳು, ಸಿಸಿಟಿವಿ, ಎನ್‌ವಿ‌ಆರ್ ಮತ್ತು ಡಿವಿಆರ್, ಆಂಟಿವೈರಸ್ ಮತ್ತು ಬಿಲ್ಲಿಂಗ್ ಸಾಫ್ಟ್‌ವೇರ್, ಬಯೋಮೆಟ್ರಿಕ್ ಫಿಂಗರ್‌ಪ್ರಿಂಟ್ ಸಾಧನ, ಡೆಸ್ಕ್‌ಟಾಪ್ ಮತ್ತು ಲ್ಯಾಪ್‌ಟಾಪ್ ಬಿಡಿಭಾಗಗಳು, ಯುಪಿಎಸ್ ಮತ್ತು ಇನ್ವರ್ಟರ್, ಎಪ್ಸನ್ ಮತ್ತು ಕ್ಯಾನನ್ ಇಂಕ್ ಬಾಟಲ್‌ಗಳು, ಎಚ್‌ಪಿ ಮತ್ತು ಕ್ಯಾನನ್ ಟೋನರ್ ಕಾರ್ಟ್ರಿಜ್‌ಗಳು, ಬ್ರಾಡಬ್ಯಾಂಡ್ ರೂಟರ್ ಮತ್ತು ಸ್ವಿಚ್‌ಗಳು ಇವೆಲ್ಲವೂ ಪೂರ್ವಿ ಕಂಪ್ಯೂಟರ್‌ನಲ್ಲಿ ಲಭ್ಯವಿದೆ.

ಗ್ರಾಹಕರ ತೃಪ್ತಿ: 

2010 ರಿಂದ, ಪೂರ್ವಿ ಕಂಪ್ಯೂಟರ್ಸ್ ತಮ್ಮ ಅಮೂಲ್ಯವಾದ ಸೇವೆಯನ್ನು ಒದಗಿಸುತ್ತಿದೆ ಮತ್ತು ಗ್ರಾಹಕರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ.

ಮನೆ ಬಾಗಿಲಿಗೆ ಸೇವೆ: 



ಗ್ರಾಮೀಣ ಪ್ರದೇಶಗಳಿಗೆ ಮನೆ ಬಾಗಿಲಿಗೆ ಸೇವೆ ಒದಗಿಸುವುದು ಪೂರ್ವಿ ಕಂಪ್ಯೂಟರ್‌ನ ಮುಖ್ಯ ಕಾರ್ಯಸೂಚಿಯಾಗಿದೆ.

ಸಾಧನೆಗಳು: 

ಜಿಲ್ಲೆಯಾದ್ಯಂತ 200+ ಐಪಿ ಕ್ಯಾಮೆರಾ ಸ್ಥಾಪನೆ ಮತ್ತು 500+ ಗ್ರಾಹಕರಿಂದ ಡೆಸ್ಕ್‌ಟಾಪ್, ಲ್ಯಾಪ್‌ಟಾಪ್ ಮತ್ತು ಪ್ರಿಂಟರ್‌ಗಳಿಗೆ ಸೇವೆಯನ್ನು ಪಡೆಯುವುದು ಪೂರ್ವಿ ಕಂಪ್ಯೂಟರ್‌ನ ಸಾಧನೆಗಳಾಗಿವೆ.

ಪ್ರಮುಖ ಡೀಲರ್‌ಗಳು:

ಸಿಪಿ ಪ್ಲಸ್, ಅನ್ವಿ, ಲೆನೊವೊ, ಕ್ವಿಕ್ ಹೀಲ್ ಸೆಕ್ಯುರಿಟಿ ಸರಳೀಕೃತ, ಮತ್ತು ಇತರ ಪ್ರಮುಖ ಕಂಪನಿಗಳ ಡೀಲರ್‌ಶಿಪ್ ಪೂರ್ವಿ ಕಂಪ್ಯೂಟರ್‌ಗೆ ಇದೆ.

   ಪೂರ್ವಿ ಕಂಪ್ಯೂಟರ್ಸ್‌ನ ವ್ಯಾಪಾರವು ತ್ವರಿತ ಸೇವೆ, ಗುಣಮಟ್ಟದ ಉತ್ಪನ್ನಗಳು ಮತ್ತು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯ ಮೇಲೆ ನಿರ್ಮಾಣಗೊಂಡಿದೆ.



ಯಲ್ಲಾಪುರ: ಪಟ್ಟಣ ಪಂಚಾಯಿತಿಯಲ್ಲಿ ಕಡತಗಳ ಕಳ್ಳತನ?, ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆ ಸಂಶಯಾಸ್ಪದ!


ಯಲ್ಲಾಪುರ : ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಮಿಗೆ ಬಂಗಾರದ ಬೆಲೆ ಬಂದಿರುವ ಹಿನ್ನೆಲೆಯಲ್ಲಿ ವ್ಯವಹಾರಕ್ಕೆ ಸಂಬಂಧಿಸಿದಂತೆ, ಇಲ್ಲಿಯ ಪಟ್ಟಣ ಪಂಚಾಯಿತಿಯಲ್ಲಿ ಮೂರು ಕಡತಗಳ ಕಳ್ಳತನದ ಘಟನೆ ಸಂಭವಿಸಿದೆ ಎಂದು ವದಂತಿ ಹಬ್ಬಿದೆ. ಈ ಕಳ್ಳತನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎನ್ನಲಾಗಿದ್ದರೂ, ಕ್ಯಾಮೆರಾ ಪೂಟೇಜ್ ಅಳಿಸಲ್ಪಟ್ಟಿದೆ ಎಂದು ಕೂಡ ಹೇಳಲಾಗುತ್ತಿದೆ. 

  ಪಟ್ಟಣ ಪಂಚಾಯತಿಯು ಹಲವಾರು ವ್ಯವಹಾರಗಳಿಗೆ ಸಂಬಂಧಿಸಿದಂತೆ ಉತ್ತಮ‌ ಹೆಸರು ಪಡೆದಿಲ್ಲ, ಆಯ್ಕೆಯಾದ ಜನಪ್ರತಿನಿಧಿಗಳಿಗೆ ಅಧಿಕಾರವಿಲ್ಲದೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ದರ್ಬಾರ್ ಹೆಚ್ಚಾಗಿದೆ ಎನ್ನಲಾಗುತ್ತಿದೆ.  ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಳ್ಳತನ ಮಾಡಲಾಗಿದೆ ಎಂದು ವದಂತಿ ಹಬ್ಬಿದೆ. ಈ ಹಿನ್ನೆಲೆಯಲ್ಲಿ ಕಳ್ಳತನದ ಹಿಂದೆ ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಅಥವಾ ಸಿಬ್ಬಂದಿಗಳ ಕೈವಾಡ ಇರಬಹುದು ಎಂಬ ಸಂಶಯ ವ್ಯಕ್ತವಾಗುತ್ತಿದೆ.


 ಭೂ ದಾಖಲೆಯ ಕಡತಗಳ ಕಾಣೆಯಾದ ದಾಖಲೆಗಳನ್ನು ಪತ್ತೆ ಹಚ್ಚಲು ಜಿಲ್ಲೆಯ ಹಿರಿಯ ಅಧಿಕಾರಿಗಳು ಕಚೇರಿಗೆ ಭೇಟಿ ನೀಡಿ ತನಿಖೆ ನಡೆಸಬೇಕಿದೆ. ಈ ತನಿಖೆಯಿಂದ ಇನ್ನಷ್ಟು ಅವ್ಯವಹಾರಗಳು ಹೊರಬರುವ ಸಾಧ್ಯತೆ ಇದೆ.

   ಸಿಸಿಟಿವಿ ಕ್ಯಾಮೆರಾಗಳು ಕಚೇರಿಯಲ್ಲಿ ಸ್ಥಾಪಿಸಲ್ಪಟ್ಟಿದ್ದರೂ, ಅವು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದು ಸಂಶಯಾಸ್ಪದವಾಗಿದೆ.  ಕಚೇರಿಗೆ ಯಾರು ಯಾವಾಗ ಎಲ್ಲಿ ಹೇಗೆ ಪ್ರವೇಶಿಸಿದರು ಮತ್ತು ಹೊರಗೆ ಹೋದರು ಎಂಬುದರ ಕುರಿತು ಖಚಿತವಾದ ಮಾಹಿತಿ ಲಭ್ಯವಿಲ್ಲ.

ಈ ಕುರಿತು ದೂರವಾಣಿಯ ಮೂಲಕ ಯಲ್ಲಾಪುರ ನ್ಯೂಸ್ ಜೊತೆ ಮಾತನಾಡಿದ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಸುನಿಲ್ ಗಾವಡೆ, ತಾವು ಶನಿವಾರ ಬೆಳಿಗ್ಗೆ ಹುಬ್ಬಳ್ಳಿಯ ಇಲಾಖೆಯ ಮೀಟಿಂಗ್ ಒಂದರಲ್ಲಿ ಭಾಗಿಯಾಗಿದ್ದು ವಿಷಯ ಈಗಷ್ಟೇ ತಿಳಿದು ಬಂದಿದೆ.  ಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿ ನಾನು ಬಲ್ಲಾಪುರ ಕಚೇರಿಗೆ ಬರುತ್ತಿದ್ದೇನೆ. ಸಿಸಿಟಿವಿ ಕ್ಯಾಮೆರಾ ಪೂಟೇಜ್ ನಾನು ಕಚೇರಿಗೆ ಬಂದ ನಂತರವೇ, ನೋಡಬೇಕಾಗಿದ್ದು, ಅಂತಹ ಯಾವುದೇ ಸಂಶಯ ಆಸ್ಪದ ಚಟುವಟಿಕೆಗಳು ಕಂಡುಬಂದರೆ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ಹೇಳಿದರು.

  ಕಡತಗಳ ಕಳ್ಳತನಕ್ಕೆ ಸಂಬಂಧಿಸಿದಂತೆ ಯಲ್ಲಾಪುರ ಪಟ್ಟಣದಲ್ಲಿ ಶನಿವಾರ ಹಬ್ಬಿರುವ ಈ ವದಂತಿ ಸತ್ಯವೂ ಆಗಿರಬಹುದು ಅಥವಾ ಸುಳ್ಳು ಆಗಿರಬಹುದು, ಏನೇ ಆದರೂ ಕೂಡ ಪಟ್ಟಣ ಪಂಚಾಯಿತಿ ಸಂಬಂಧಿಸಿದ ಅಧಿಕಾರಿಗಳು ಪೊಲೀಸ್ ಠಾಣೆಗೆ ದೂರು ನೀಡಿ, ಸಿಸಿ ಕ್ಯಾಮೆರಾ ಪೋಟೇಜ್ ಗಳನ್ನು ಅಳಿಸದಂತೆ, (ಅಳಿಸಿದಾಗಲೂ ಕೂಡ, ವಿಧಿ ವಿಜ್ಞಾನ‌ ಪ್ರಯೋಗಾಲಯದವರು ಪೂಟೇಜ್ ರಿಟ್ರೀವ್  ಮಾಡುತ್ತಾರೆ) ಈ ಸಂಶಯಾಸ್ಪದ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು, ತನಿಖೆಗೆ ಒಪ್ಪಿಸಬೇಕಾಗಿದೆ. 



ಕಲೆ ಮತ್ತು ಮಾಡಲಿಂಗ್‌ನಲ್ಲಿ ಹೊಸ ಆಯಾಮ! ಮೂಲ ಯಲ್ಲಾಪುರದ, ಸದ್ಯ ಉಡುಪಿಯಲ್ಲಿರುವ ತ್ರಿವರ್ಣ:

ಯಲ್ಲಾಪುರ: ಒಬ್ಬ ಕಲಾವಿದನಾಗಿ, ಒಬ್ಬ ಮಾಡೆಲಾಗಿ, ಮತ್ತು ಒಬ್ಬ ಸಾಮಾಜಿಕ ಮಾಧ್ಯಮ ಪ್ರಭಾವಿತನಾಗಿ ತನ್ನದೇ ಆದ  ಗುರುತನ್ನು ಸೃಷ್ಟಿಸಿಕೊಂಡಿರುವ ತ್ರಿವರ್ಣ, ಯಲ್ಲಾಪುರದ ಹೆಮ್ಮೆಯಾಗಿದ್ದಾರೆ. ಬಾಲ್ಯದಿಂದಲೂ ಕಲೆಯಲ್ಲಿ ಆಸಕ್ತಿ ಹೊಂದಿದ್ದ ತ್ರಿವರ್ಣ, ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಪ್ರಯತ್ನ ನಡೆಸುತ್ತಾ ಇಂದು ರಾಜ್ಯದಲ್ಲಿ ಹೆಸರು ಮಾಡಿದ್ದಾರೆ.
  ಮೂಲತಃ ಯಲ್ಲಾಪುರದ ರವೀಂದ್ರನಗರ ನಿವಾಸಿಯಾದ ತ್ರಿವರ್ಣ, ತಂದೆ ವೈಟಿಎಸ್ಎಸ್ ಗಣಿತ ವಿಷಯದ ಶಿಕ್ಷಕರಾಗಿದ್ದ ವಿ.ಎಂ ಮೇದಾರ (ಮೇದಾರ ಮಾಸ್ತರ್) ಮತ್ತು ತಾಯಿ ಯಲ್ಲಾಪುರ ಸರಕಾರಿ‌ ಪದವಿ‌ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಆಶಾ ಸಿ ಇಂಗಳಗಿ, ಅವರ ಪ್ರೋತ್ಸಾಹದೊಂದಿಗೆ ತ್ರೀವರ್ಣ ತಮ್ಮ ಕಲಾ ಪ್ರತಿಭೆಯನ್ನು ಬೆಳೆಸಿಕೊಂಡರು. ಅವರ ಅಣ್ಣ ಭಾರತಶ್ರೀ ಭಾರತೀಯ ಸೈನ್ಯದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಟ್ಟಾರೇ ಸಮಾಜ ಸೇವೆಯಲ್ಲಿ ಶೈಕ್ಷಣಿಕ‌ಕ್ಷೇತ್ರದಲ್ಲಿ ಕುಟುಂಬ ಗುರುತಿಸಿಕೊಂಡಿದೆ.
   ಉಡುಪಿಯ ಚಿತ್ರಕಲಾ ಮಂದಿರದಲ್ಲಿ ಬಿವಿಎ ಪದವಿಯನ್ನು ಪಡೆದ ತ್ರಿವರ್ಣ, 2017ರಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕಾಲೇಜು ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಗೆದ್ದುಕೊಂಡರು. ತದನಂತರ, ಅನೇಕ ಚಿತ್ರಕಲಾ ಶಿಬಿರಗಳನ್ನು ನಡೆಸಿಕೊಟ್ಟು ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದರು. 
 ಮಾಡಲಿಂಗ್ ಕ್ಷೇತ್ರದಲ್ಲೂ ತಮ್ಮನ್ನು ಗುರುತಿಸಿಕೊಂಡ ತ್ರಿವರ್ಣ, 2021ರಲ್ಲಿ ನಡೆದ ಗ್ಲೋಬಲ್ ಮಿಸ್ಟರ್ ಇಂಡಿಯಾ ಹಾಗೂ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮಣಿಪಾಲ್‌ನಲ್ಲಿ ನಡೆದ ಫ್ಯಾಶನ್ ಶೋನಲ್ಲಿ ಪ್ರಥಮ ಬಹುಮಾನವನ್ನು ಪಡೆದುಕೊಂಡು ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದರು. ಮಂಗಳೂರಿನ ಪ್ರಸಿದ್ಧ ಟಿವಿ ಚಾನೆಲ್ ಸ್ಪಂದನದಲ್ಲಿ ಗುಡ್ ಮಾರ್ನಿಂಗ್ ಸ್ಪಂದನ ಎಂಬ ಕಾರ್ಯಕ್ರಮದಲ್ಲಿ ತಮ್ಮ ವಿಶೇಷ ಮಾತಿನ ಶೈಲಿಯಿಂದ ಪ್ರೇಕ್ಷಕರ ಮನ ಗೆದ್ದರು.
   ಪ್ರಸ್ತುತ, ಗದುಗಿನ ವಿಜಯ ಕಾಲೇಜಿನಲ್ಲಿ ಪೇಂಟಿಂಗ್ಸ್‌ನಲ್ಲಿ ಎಂವಿಎ ಪದವಿಯನ್ನು ಪಡೆದಿರುವ ತ್ರಿವರ್ಣ, ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿ ತಮ್ಮ ಕಲಾಕೃತಿಗಳನ್ನು ಹಂಚಿಕೊಳ್ಳುತ್ತಾರೆ. ತಮ್ಮ ಹವ್ಯಾಸವನ್ನು ಒಂದು ವೃತ್ತಿಯನ್ನಾಗಿ ಮಾಡಿಕೊಂಡ ತ್ರಿವರ್ಣ, ಯುವ ಜನರಿಗೆ ಪ್ರೇರಣೆಯಾಗಿದ್ದಾರೆ.
   ತ್ರಿವರ್ಣ ಮಾತನಾಡಿ, :"ಕಲೆ ನನ್ನ ಜೀವನ. ಚಿತ್ರಕಲೆ ಮತ್ತು ಮಾಡಲಿಂಗ್ ಎರಡೂ ನನ್ನನ್ನು ಸಂತೋಷಗೊಳಿಸುತ್ತವೆ. ಯಲ್ಲಾಪುರ ನನ್ನ ಹುಟ್ಟೂರು. ಇಲ್ಲಿಂದಲೇ ನನಗೆ ಪ್ರೋತ್ಸಾಹ ಸಿಕ್ಕಿತು. ನಾನು ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು ಎಂಬ ಆಸೆ ನನ್ನಲ್ಲಿದೆ."
   ಯಲ್ಲಾಪುರದ ತ್ರಿವರ್ಣ ಅವರ ಈ ಸಾಧನೆಗೆ ನಾವೆಲ್ಲರೂ ಅಭಿನಂದಿಸೋಣ ಮತ್ತು ಅವರ ಭವಿಷ್ಯಕ್ಕೆ ಶುಭ ಹಾರೈಸೋಣ. 

( *** ಜಗದೀಶ ನಾಯಕ)