Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Friday, 16 August 2024

ಮಲೆನಾಡಿನಲ್ಲಿ ಡಿಜಿಟಲ್ ಕ್ರಾಂತಿ : ಕಳವೆಯಲ್ಲಿ 4ಜಿ ಸಂಪರ್ಕ ಸಾಧ್ಯಕಳವೆಯಲ್ಲಿ ಬಿಎಸ್‌ಎನ್‌ಎಲ್ ಟಾವರ್ ಲೋಕಾರ್ಪಣೆ

ಯಲ್ಲಾಪುರ : ಶಿರಸಿ ತಾಲೂಕಿನ ಕಳವೆಯಲ್ಲಿ ನಿರ್ಮಾಣಗೊಂಡ ಬಿಎಸ್‌ಎನ್‌ಎಲ್ ಟಾವರ್ ಕರ್ನಾಟಕದಲ್ಲಿ ಮೊದಲ 4G ಸ್ಯಾಚುರೇಶನ್ ಪ್ರಾಜೆಕ್ಟ್ ಚೌಕಟ್ಟಿನ ಅಡಿಯಲ್ಲಿ ನಿರ್ಮಿಸಲಾಗಿದೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವರಮಹಾಲಕ್ಷ್ಮೀ ಹಬ್ಬದಂದು ಟಾವರ್ ಅನ್ನು ಲೋಕಾರ್ಪಣೆ ಮಾಡಿದರು.
ಯುಎಸ್‌ಎಫ್‌ಓ ಯೋಜನೆಯ ಭಾಗ
ಮಲೆನಾಡಿನಂತಹ ಗುಡ್ಡಗಾಡು ಪ್ರದೇಶಗಳಲ್ಲಿ ನೆಟ್‌ವರ್ಕ್ ಸಂಪರ್ಕ ಸುಧಾರಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಯುಎಸ್‌ಎಫ್‌ಓ (ಯೂನಿವರ್ಸಲ್ ಸರ್ವೀಸ್ ಫಂಡ್) ಯೋಜನೆಯಲ್ಲಿ ಟಾವರ್ ನಿರ್ಮಾಣಕ್ಕೆ ಚಾಲನೆ ನೀಡಿದ್ದರು.
ಜಿಲ್ಲೆಯಲ್ಲಿ 233 4G ಟಾವರ್‌ಗಳು
ಜಿಲ್ಲೆಯಲ್ಲಿ ಒಟ್ಟು 233 4G ಟಾವರ್‌ಗಳನ್ನು ಕಾರ್ಯಾರಂಭ ಮಾಡಲು ಯೋಜಿಸಲಾಗಿದೆ. ಶಿರಸಿ, ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಸೂಪಾ, ಹಳಿಯಾಳ, ಯಲ್ಲಾಪುರ ಸೇರಿದಂತೆ 9 ತಾಲೂಕುಗಳಲ್ಲಿ 242 ಸಾಧ್ಯತೆಯ ಸ್ಥಳಗಳನ್ನು ಗುರುತಿಸಲಾಗಿದೆ.
ಅರಣ್ಯ ಜಾಗೆಯಲ್ಲಿ ಟಾವರ್‌ಗಳು
242 ಸ್ಥಳಗಳಲ್ಲಿ 161 ಸ್ಥಳಗಳು ಅರಣ್ಯ ಜಾಗೆಯಲ್ಲಿವೆ. ಅರಣ್ಯ ಇಲಾಖೆಯು 78 ಜಮೀನುಗಳನ್ನು ಈಗಾಗಲೇ ಮಂಜೂರು ಮಾಡಿದೆ. ಕೆಲವು ದಿನಗಳಲ್ಲಿ ಟಾವರ್ ನಿರ್ಮಾಣ ಕಾರ್ಯ ಆರಂಭವಾಗಲಿದೆ.
ಕುರಿತು ಸಂಸದರ ಹೇಳಿಕೆ
"ನಮ್ಮ ಜನರಿಗೆ ಅತ್ಯಗತ್ಯವಾದ ಸಂಪರ್ಕವನ್ನು ಒದಗಿಸುವ ನಿಟ್ಟಿನಲ್ಲಿ ನಾವು ಮಹತ್ವದ ಹೆಜ್ಜೆಗಳನ್ನು ಇಟ್ಟಿದ್ದೇವೆ. 4G ಸ್ಯಾಚುರೇಶನ್ ಯೋಜನೆಯು ಮಲೆನಾಡಿನ ಸಂಪರ್ಕ ಕೊರತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ" ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
   ಬಿಎಸ್‌ಎನ್‌ಎಲ್ ಅಧಿಕಾರಿಗಳಾದ ನವೀನಕುಮಾರ ಗುಪ್ತಾ, ಬಿಂದು ಸಂತೋಷ, ಅವಿನಾಶ ಪೂಜಾರ, ವಿಕ್ರಮ್, ನಾಗರಾಜ, ಸಂತೋಷ ಚೌವ್ಹಾಣ್, ಸ್ಥಳೀಯರಾದ ಶಿವಾನಂದ ಕಳವೆ, ಆರ್.ಡಿ.ಹೆಗಡೆ ಜಾನ್ಮನೆ ಸೇರಿದಂತೆ ಮತ್ತಿತರರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹೆಗ್ಗಾಪುರ ಗ್ರಾಮದಲ್ಲಿ ಆನೆಗಳ ದಾಳಿ: ರೈತನ ಲಕ್ಷಾಂತರ ರೂಪಾಯಿ ಬೆಳೆ ಹಾನಿ

ಯಲ್ಲಾಪುರ: ಮದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಾಪುರ ಗ್ರಾಮದಲ್ಲಿ ಗುರುವಾರ ರಾತ್ರಿ 9 ರಿಂದ 10 ಆನೆಗಳ ಹಿಂಡು ಗೋವಿನ ಜೋಳದ ಗದ್ದೆಗೆ ದಾಳಿ ಮಾಡಿದ್ದು, ರೈತ ಮೋಹನ ಕೃಷ್ಣ ದೇಸಾಯಿಯವರಿಗೆ ಲಕ್ಷಾಂತರ ರೂಪಾಯಿ ಹಾನಿ ಉಂಟುಮಾಡಿದೆ. 
   ಮೋಹನ ದೇಸಾಯಿ, ಕಳೆದ ಕೆಲವು ತಿಂಗಳ ಹಿಂದೆ 5 ಎಕರೆ ಗದ್ದೆಯಲ್ಲಿ ಗೋವಿನ ಜೋಳ ಬೆಳೆದಿದ್ದರು. ಈ ಗದ್ದೆಗೆ 2 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿತ್ತು, ಇನ್ನೂ ಕೆಲವೇ ದಿನಗಳಲ್ಲಿ ಅವರು ಉತ್ತಮ ಫಲ ಬರುವ ನಿರೀಕ್ಷಿಸುತ್ತಿದ್ದರು. ಆದರೆ, ಆನೆಗಳ ದಾಳಿಯಿಂದ ಎಲ್ಲಾ ಬೆಳೆಯು ಸಂಪೂರ್ಣವಾಗಿ ನೆಲಸಮವಾಗಿದ್ದು, ರೈತನ ಕನಸುಗಳು ಒಡೆದು ಹೋಗಿದೆ. 
ಅಧಿಕಾರಿಗಳಿಂದ ಸ್ಥಳ ಸಮೀಕ್ಷೆ :
   ಕಿರವತ್ತಿ ವಲಯ ಅರಣ್ಯಾಧಿಕಾರಿ ದಿನೇಶ ಮಿರ್ಜಾನಕರ್, ಡಿಆರ್‌ಎಫ್‌ಓ ವಿನಯ ರಂಗೋನಟ್ಟಿ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ರೈತನಿಗೆ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸುವ ಭರವಸೆ ನೀಡಿದ್ದಾರೆ. 
   ಸ್ಥಳೀಯರು, ಮದನೂರು ಹುಣಶೆಟ್ಟಿಕೊಪ್ಪ ಮತ್ತು ಕಳಸೂರು ಗ್ರಾಮಗಳಲ್ಲಿ ಕಳೆದ ಕೆಲವು ದಿನಗಳಿಂದ 10-12 ಆನೆಗಳ ಹಿಂಡು ಪ್ರತಿದಿನವೂ ಗದ್ದೆ ಮತ್ತು ತೋಟಗಳಿಗೆ ದಾಳಿ ಮಾಡುತ್ತಿವೆ ಎಂದು ತಿಳಿಸಿದ್ದಾರೆ. 
    ಕಳೆದ ಹಲವಾರು ವರ್ಷಗಳಿಂದ ಈ ಭಾಗದ ರೈತರ ಹೊಲಗಳಿಗೆ ಆನೆಗಳ ನಿರಂತರ ದಾಳಿ ನಡೆಯುತ್ತಿದೆ. ಈ ಪರಿಸ್ಥಿತಿಯು ರೈತರ ಜೀವನವನ್ನು ಕಷ್ಟಗೊಳಿಸುತ್ತಿದ್ದು, ಹತ್ತರಿಂದ ಹದಿನಾರರ ಸಂಖ್ಯೆಯಲ್ಲಿರುವ ಆನೆಗಳ ತಂಡಗಳನ್ನು ಸ್ಥಳಾಂತರಿಸುವ ಅಗತ್ಯವಿದೆ ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
ಹೆಗ್ಗಾಪುರ ಗ್ರಾಮದ ರೈತ ಮೋಹನ ದೇಸಾಯಿಗೆ ಹಾನಿಯ ಪರಿಹಾರ ನೀಡಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು, ಈ ಘಟನೆ ರೈತರ ಮೇಲೆ ಕೆಟ್ಟ ಪರಿಣಾಮ ಬೀರಿದ್ದು, ಸರ್ಕಾರ ಮತ್ತು ಅರಣ್ಯ ಇಲಾಖೆಯು ಶೀಘ್ರದಲ್ಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಎಂದು ಶ್ರೀ ಗ್ರಾಮದೇವಿ ಸಹಕಾರಿ ಸಂಘದ ಅಧ್ಯಕ್ಷ ಮಹೇಶ ದೇಸಾಯಿ ಮತ್ತು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ. 

ಯಲ್ಲಾಪುರದಲ್ಲಿ ಸ್ಮಶಾನಕ್ಕೆ ಕಟ್ಟಿಗೆ ಕೊರತೆ: ಹಿಂದೂ ಸಮುದಾಯದ ಆತಂಕ !

ಜಗದೀಶ ನಾಯಕ
ಯಲ್ಲಾಪುರ : ಯಲ್ಲಾಪುರದಲ್ಲಿ ಹಿಂದೂ ಸಮುದಾಯದ ಜನರು ಅಂತ್ಯಕ್ರಿಯೆಗಳಿಗೆ ಕಟ್ಟಿಗೆ ಕೊರತೆಯನ್ನು ಎದುರಿಸುತ್ತಿದ್ದಾರೆ. ಪಟ್ಟಣದಲ್ಲಿ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಎರಡು ಕಟ್ಟಿಗೆ ಡಿಪೋಗಳು ಮುಚ್ಚಲ್ಪಟ್ಟಿದ್ದು, ಖಾಸಗಿ ಮೂಲಗಳಿಂದ ಕಟ್ಟಿಗೆ ಪಡೆಯುವುದು ಕಷ್ಟಕರವಾಗಿದೆ.
ಯಲ್ಲಾಪುರದಲ್ಲಿ ಟಿಂಬರ್ ವ್ಯವಹಾರ ಹೆಚ್ಚು :
    ಯಲ್ಲಾಪುರ ಟಿಂಬರ್ ವ್ಯವಹಾರಕ್ಕೆ ಹೆಸರುವಾಸಿಯಾಗಿದ್ದರೂ, ಪಟ್ಟಣದೊಳಗೆ ಕಟ್ಟಿಗೆ ಕೊರತೆ ತೀವ್ರವಾಗಿದೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಮತ್ತು ಸಬಗೇರಿ ನರ್ಸರಿ ಬಳಿ ಇದ್ದ ಕಟ್ಟಿಗೆ ಡಿಪೋಗಳು ಬಂದ್ ಆಗಿವೆ. ಹೆಚ್ಚುತ್ತಿರುವ ಕೂಲಿ, ಸಾಗಾಣಿಕೆ ವೆಚ್ಚಗಳು ಮತ್ತು ಕಡಿಮೆ ಬೇಡಿಕೆಯಿಂದಾಗಿ ಉರುವಲು ಕಟ್ಟಿಗೆ ಮಾರಾಟ ಮಾಡಲು ಟೆಂಡರ್‌ಗಳಿಗೆ ಸ್ಪಂದನೆ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ.
   ಕೆಲವು ಖಾಸಗಿ ವ್ಯಕ್ತಿಗಳು ತಮ್ಮ ಜಮೀನಿನಲ್ಲಿ ಬೆಳೆದ ಮರಗಳ ಕಟ್ಟಿಗೆಗಳನ್ನು ಮಾರಾಟ ಮಾಡುತ್ತಿದ್ದರೂ, ಅವರಲ್ಲಿಯೂ ಸಹ ಕಟ್ಟಿಗೆ ದೊರೆಯುವ ಖಾತ್ರಿ ಇಲ್ಲ. ಇದರಿಂದಾಗಿ ಅಂತ್ಯಕ್ರಿಯೆ ನೆರವೇರಿಸಲು ಜನರು ಪರದಾಡುವಂತಾಗಿದೆ.
ಹಿಂದೂ ಮುಖಂಡರ ಅಸಮಾಧಾನ : 
   ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಗಜಾನನ ನಾಯ್ಕ ತಳ್ಳಿಕೇರಿ ಅವರು ಅಭಿಪ್ರಾಯಪಟ್ಟು, ಕಳೆದ ಕೆಲವು ವರ್ಷಗಳಿಂದ ಈ ಸಮಸ್ಯೆ ತೀವ್ರವಾಗಿದೆ ಎಂದು ಹೇಳಿದ್ದಾರೆ. "ಅಂತ್ಯಕ್ರಿಯೆಗೆ ಕಟ್ಟಿಗೆ ಪಡೆಯುವುದು ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ತಾಲೂಕು ಆಡಳಿತ, ಪಟ್ಟಣ ಪಂಚಾಯಿತಿ ಮತ್ತು ಜನಪ್ರತಿನಿಧಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಅಂತ್ಯಕ್ರಿಯೆಗಳಿಗೆ ಅಗತ್ಯವಾದ ಕಟ್ಟಿಗೆಯನ್ನು ಸಂಗ್ರಹಿಸಿ ಇಡಲು ಕ್ರಮ ಕೈಗೊಳ್ಳಬೇಕು", "ಪಟ್ಟಣದಲ್ಲಿ ಶೇ.60 ರಷ್ಟು ಜನಸಂಖ್ಯೆ ಹೊಂದಿರುವ ಹಿಂದೂ ಸಮುದಾಯಕ್ಕೆ ಸೇರಿದ ರುದ್ರಭೂಮಿಯನ್ನು ಈ ರೀತಿ ನಿರ್ಲಕ್ಷಿಸಿರುವುದು ದುರಂತ" ಎಂದು ಅವರು ಹೇಳಿದ್ದಾರೆ.
 ಹಿಂದೂ ರುದ್ರ ಭೂಮಿಯೂ ನಿರ್ಲಕ್ಷ :
  ಯಲ್ಲಾಪುರದ ಹಿಂದೂ ರುದ್ರಭೂಮಿಯ ನಿರ್ಲಕ್ಷ್ಯದ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸ್ಮಶಾನದಲ್ಲಿ ಮೂಲ ಸೌಕರ್ಯಗಳ ಕೊರತೆ ಇದ್ದು, ಶವಸಂಸ್ಕಾರಕ್ಕೆ ಬಳಸುವ ಕಟ್ಟೆಗಳು ದುರ್ಬಲಗೊಂಡಿವೆ. ಸ್ವಚ್ಛತೆ ಇಲ್ಲದೆ ಗಿಡಗಂಟಿಗಳು ಬೆಳೆದು ನಿಂತಿವೆ. ಈ ಹಿಂದೆ ಪತ್ರಿಕೆಗಳಲ್ಲಿ ವರದಿಯಾದ ನಂತರ ಸ್ಮಶಾನದ ಅಭಿವೃದ್ಧಿಗೆ 5 ಲಕ್ಷ ರೂ. ಅನುದಾನ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ವರ್ಷ ಕಳೆದರೂ ಯಾವುದೇ ಕೆಲಸ ನಡೆದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
    ಅಂತ್ಯಕ್ರಿಯೆಗಳಿಗೆ ಕಟ್ಟಿಗೆ ಪೂರೈಕೆ ಮಾಡುವುದರ ಜೊತೆಗೆ, ರುದ್ರಭೂಮಿಯಲ್ಲಿ ಸ್ವಚ್ಛತೆ ಕಾಪಾಡಲು ಹಾಗೂ ಮೂಲ ಸೌಕರ್ಯಗಳನ್ನು ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಯಲ್ಲಾಪುರದಲ್ಲಿ ಇಲಿ ಜ್ವರದ 2 ಹೊಸ ಪ್ರಕರಣಗಳು: ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವ ಅಗತ್ಯ

ಯಲ್ಲಾಪುರ: ಕಳೆದ ವರ್ಷದೊಂದಿಗೆ ಹೋಲಿಸಿದರೆ, ಇಳಿ ಜ್ವರದ (ಲೆಪ್ಟೊಸ್ಪೈರೋಸಿಸ್) ಪ್ರಕರಣಗಳು ಈ ವರ್ಷ ಅತ್ಯಧಿಕವಾಗಿವೆ. ಈ ತಿಂಗಳಲ್ಲಿ ಮಂಚಿಕೇರಿ-1 ಮತ್ತು ಹುಣಶೆಟ್ಟಿಕೊಪ್ಪ-1 ಹಿನ್ನಲೆ ಎರಡು ಹೊಸ ಪ್ರಕರಣಗಳು ವರದಿಯಾಗಿವೆ. ಈ ವರ್ಷ ಒಟ್ಟು 4 ಪ್ರಕರಣಗಳು ವರದಿಯಾಗಿದೆ. ತಾಲೂಕಾ ಆರೋಗ್ಯಾಧಿಕಾರಿಗಳು, ಡಾ. ನರೇಂದ್ರ ಪವಾರ, ಸಾರ್ವಜನಿಕರಿಗೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ವಿನಂತಿಸಿದ್ದಾರೆ.
 
  ಇಲಿ ಜ್ವರವು ಲೆಪ್ಟೊಸ್ಪೈರಾ ಎಂಬ ಬ್ಯಾಕ್ಟೀರಿಯದಿಂದ ಉಂಟಾಗುತ್ತದೆ ಮತ್ತು ಇದು ಮನುಷ್ಯರು ಮತ್ತು ಪ್ರಾಣಿಗಳಿಗೆ ಹಾನಿಕಾರಕವಾಗುತ್ತದೆ. ಈ ರೋಗವು ಜ್ವರ, ತಲೆನೋವು, ಸುಸ್ತು, ಮತ್ತು ಮೈ-ಕೈ ನೋವು ಲಕ್ಷಣಗಳೊಂದಿಗೆ ಬರುತ್ತದೆ. ಈ ರೋಗದ ಆರಂಭಿಕ ನಿರ್ಣಯ ಮತ್ತು ಕಾಲಮಿತಿಯ ಚಿಕಿತ್ಸೆಯು ಮಹತ್ವಪೂರ್ಣವಾಗಿದೆ. ರೋಗ ಲಕ್ಷಣಗಳನ್ನು ಅನುಭವಿಸಿದರೆ, ತಕ್ಷಣವೇ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆಯುವುದು ಅಗತ್ಯ.
   ಇಲಿ ಜ್ವರದಿಂದ ಪಾರಾಗಲು ಜನರು ತಮ್ಮ ಪರಿಸರದಲ್ಲಿ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕಾಗಿದೆ:
ಕಲುಷಿತ ನೀರಿನ ಮೂಲಗಳ ಸಂಪರ್ಕವನ್ನು ತಪ್ಪಿಸುವುದು, ನಿಂತ ನೀರು ಮತ್ತು ಪ್ರವಾಹ ಪೀಡಿತ ಪ್ರದೇಶಗಳಿಂದ ದೂರವಿರುವುದು, ಇಲಿ ಮತ್ತು ಇತರ ದಂಶಕಗಳಿರುವ ಪ್ರದೇಶಗಳಲ್ಲಿ ಕೈಗವಸು ಮತ್ತು ಬೂಟುಗಳನ್ನು ಧರಿಸುವುದು. ಕಲುಷಿತ ನೀರಿನಿಂದ ಅಥವಾ ಪರಿಸರದಿಂದ ಬರುವ ಬಳಿಕ ಶುದ್ಧತೆಯನ್ನು ಕಾಯ್ದುಕೊಳ್ಳಿ. ಶುದ್ಧ ಕುಡಿಯುವ ನೀರು ಮತ್ತು ಆಹಾರ ಸೇವನೆಯ ಕುರಿತಾದ ಎಚ್ಚರಿಕೆಯನ್ನು ಪಾಲಿಸುವುದು ಮನೆ ಅಥವಾ ವಸತಿ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಿ ಮತ್ತು ಇಲಿಗಳಿಗೆ ಮನೆಯೊಳಗೆ ಪ್ರವೇಶಿಸದಂತೆ ಗಮನವಿಡಬೇಕು. ಈ ಎಲ್ಲ ಕ್ರಗಲಕನ್ನು ಅನುಸರಿಸುವ ಮೂಲಕ, ಇಲಿ ಜ್ವರದಿಂದ ರಕ್ಷಣೆ ಸಾಧಿಸಬಹುದು ಎಂದು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.

ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ: ಹೊಸಳ್ಳಿಯಲ್ಲಿ 330 ಜನರಿಗೆ ಉಪಯೋಗ
ಯಲ್ಲಾಪುರ : ತಾಲೂಕಿನ ಹೊಸಳ್ಳಿ ಗ್ರಾಮದ ಮಾರುತಿ ದೇವಸ್ಥಾನದಲ್ಲಿ ನಡೆದ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸೆ ಶಿಬಿರದಲ್ಲಿ 330 ಜನರು ಭಾಗವಹಿಸಿ ಉಪಯೋಗ ಪಡೆದರು. ಮೇಕ್ ಸಂ-ಒನ್ ಸ್ಮೈಲ್ ಹೆಲ್ಪಿಂಗ್ ಹ್ಯಾಂಡ್, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ಉತ್ತರಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,, ಯಲ್ಲಾಪುರ ತಾಲೂಕಾ ಆರೋಗ್ಯಾಧಿಕಾರಿಗಳ ಕಛೇರಿ ಮತ್ತು ಕಿರವತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಈ ಶಿಬಿರ ನಡೆಸಲಾಯಿತು.
  ಈ ಶಿಬಿರದಲ್ಲಿ, 8 ಜನರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. 64 ಜನರಿಗೆ ಉಚಿತ ಕನ್ನಡಕ ವಿತರಿಸಲಾಯಿತು. ಸಾರ್ವಜನಿಕರ ಉತ್ತಮ ಸಹಕಾರದಿಂದ ಶಿಬಿರ ಯಶಸ್ವಿಯಾಗಿದೆ.


ಕೊಲ್ಕತ್ತಾ ವೈದ್ಯೆಯ ಕೊಲೆ ಖಂಡಿಸಿ ನಾಳೆ ಯಲ್ಲಾಪುರದಲ್ಲಿ ವೈದ್ಯರ ಪ್ರತಿಭಟನೆ

ಯಲ್ಲಾಪುರ: ಕೋಲ್ಕತ್ತಾದ ಆರ್.ಜಿ.ಕರ್ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕರ್ತವ್ಯ ನಿರತ ಯುವ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಘಟನೆಗೆ ಉತ್ತರಕನ್ನಡದ ವೈದ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಅಮಾನವೀಯ ಘಟನೆಯನ್ನು ಖಂಡಿಸಲು, ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ವೈದ್ಯರು ಆಗಸ್ಟ್ 17 ರಂದು ರಾಜ್ಯಾದ್ಯಾಂತ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ. 
   ಉತ್ತರಕನ್ನಡ ಜಿಲ್ಲೆಯ ವೈದ್ಯರೂ ಈ ಪ್ರತಿಭಟನೆಗೆ ಬೆಂಬಲ ಸೂಚಿಸಲಿದ್ದು, ತುರ್ತು ಸೇವೆಗಳನ್ನು ಹೊರತುಪಡಿಸಿ ಇತರೆ ಆರೋಗ್ಯ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಸಂಘದ ಅಧ್ಯಕ್ಷ ಡಾ. ನರೇಂದ್ರ ಪವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
   ಈ ಕೊಲೆ ಘಟನೆ ವೈದ್ಯ ಸಮುದಾಯದ ಮನೋಸ್ಥಿತಿಗೆ ದೊಡ್ಡ ಆಘಾತ ತಂದಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಭದ್ರತೆ ಒದಗಿಸುವ ಅಗತ್ಯವಿದೆ ಎಂದು ವೈದ್ಯರು ಒತ್ತಾಯಿಸಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಗೌಳಿ ಹುಡುಗಿ ಜನ್ನಿ ಹುಂಬೆ ಸಾಧನೆ : ಸ್ವ ಸಮಾಜದಿಂದ ಸನ್ಮಾನ ಹಾಸಣಗಿ ಗ್ರಾಮ ಪಂಚಾಯತದಲ್ಲಿ ಸಾಮಾಜಿಕ ಭದ್ರತೆ ಕುರಿತು ಅರಿವು ಕಾರ್ಯಕ್ರಮ

ವಾಣಿಜ್ಯ ವಿಭಾಗದಲ್ಲಿ ಗೌಳಿ ಹುಡುಗಿ ಜನ್ನಿ ಹುಂಬೆ ಸಾಧನೆ :  ಸ್ವ ಸಮಾಜದಿಂದ ಸನ್ಮಾನ 
 ಯಲ್ಲಾಪುರ: 2023-24 ಸಾಲಿನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ಶೇ. 94.5 ಅಂಕಗಳೊಂದಿಗೆ ದನಗರಗೌಳಿ ಸಮುದಾಯದಲ್ಲಿ ಅತ್ಯಂತ ಹೆಚ್ಚು ಅಂಕಗಳನ್ನು ಪಡೆದು ಸಮಾಜಕ್ಕೆ ಕೀರ್ತಿ ತಂದಿರುವ ಹೊಳೆನಂದಿಕಟ್ಟಾ ಗೌಳಿವಾಡ ಗ್ರಾಮದ ಜನ್ನಿ ಬಾಬು ಹುಂಬೆ ಅವರಿಗೆ ಅವರ ನಿವಾಸದಲ್ಲಿ ಕರ್ನಾಟಕ ರಾಜ್ಯ ದನಗರಗೌಳಿ ಯುವ ಸೇನೆಯಿಂದ ಶುಕ್ರವಾರ ಸನ್ಮಾನಿಸಲಾಯಿತು. 
  ಸನ್ಮಾನಿಸಿ ಮಾತನಾಡಿದ ದನಗರಗೌಳಿ ಯುವ ಸೇನೆಯ ರಾಜ್ಯ ಅಧ್ಯಕ್ಷ ಸಂತೋಷ ವರಕ್, "ಜನ್ನಿ ಹುಂಬೆ, ದಟ್ಟ ಕಾಡಿನ ಮಧ್ಯೆ ಇರುವ ಹೊಳೆನಂದಿಕಟ್ಟಾ ಗ್ರಾಮದ ಅತ್ಯಂತ ಕಡು ಬಡತನದ ಕುಟುಂಬದಲ್ಲಿ ಹುಟ್ಟಿ ಬೆಳೆದಳು. ತನ್ನ ಪರಿಶ್ರಮದ ಮೂಲಕ, ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಯಲ್ಲಾಪುರ ತಾಲ್ಲೂಕಿನಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುವುದು ಹೆಮ್ಮೆ ಮತ್ತು ಗೌರವದ ವಿಷಯವಾಗಿದೆ" ಎಂದು ಹೇಳಿದರು. 
   ಜನ್ನಿಯ ಸಾಧನೆ, ಬಡತನವು ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ. ಊರಿನಿಂದ ಬಸ್ ಸೌಲಭ್ಯವಿಲ್ಲದೇ ಪ್ರತಿದಿನವೂ ಏಳೇಳು ಕಿಮೀ ನಡೆದು ಕಾಲೇಜ್‌ಗೆ ಬರುವ ಕಷ್ಟದಲ್ಲೂ, ಅವಳು ಉತ್ತಮವಾಗಿ ಓದಿ ಇತರರ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ. ಈ ಸಾಧನೆಯ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ದನಗರಗೌಳಿ ಯುವ ಸೇನೆಯಿಂದ ಅವಳನ್ನು ಗುರುತಿಸಿ, ಸಮಾಜಕ್ಕೆ ಪರಿಚಯಿಸಲು ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ
  ಈ ಸಂದರ್ಭದಲ್ಲಿ ಜನ್ನಿ ತಂದೆ ಬಾಬು ಹುಂಬೆ ತಾಯಿ ನಾಗೂಬಾಯಿ ಹುಂಬೆ, ಯುವ ಸೇನೆಯ ಸದಸ್ಯರಾದ ಬಮ್ಮು ಫೋಂಡೆ, ಲಕ್ಷ್ಮಣ ಕೋಕರೆ ಕರಡೊಳ್ಳಿ, ಸಮೀಧಾ ಫೌಂಡೇಷನ್ ಸದಸ್ಯ ರಾಮು ಮಲಗೊಂಡೆ ಊರಿನ ಗ್ರಾಮಸ್ಥರಾದ ಧೋಂಡು ಪಟಕಾರೆ, ಧೋಂಡು ಕಾತ್ರಟ್, ರಾಮು ಎಡಗೆ, ಬಾಬು ಹುಂಬೆ, ಯುವಕರು, ಮಾತೆಯರು ಇದ್ದರು. ಬಮ್ಮು ಫೋಂಡೆ ನಿರೂಪಿಸಿ, ವಂದಿಸಿದರು.

ಹಾಸಣಗಿ ಗ್ರಾಮ ಪಂಚಾಯತದಲ್ಲಿ ಸಾಮಾಜಿಕ ಭದ್ರತೆ ಕುರಿತು ಅರಿವು ಕಾರ್ಯಕ್ರಮ
ಯಲ್ಲಾಪುರ: ಹಾಸಣಗಿ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆದ ಸಾಮಾಜಿಕ ಭದ್ರತೆ ಕುರಿತಾದ ಸಾರ್ವಜನಿಕ ಅರಿವು ಕಾರ್ಯಕ್ರಮವು ಸ್ಥಳೀಯ ಸಮುದಾಯದ ಸದಸ್ಯರಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯಿತು.
   ಈ ಕಾರ್ಯಕ್ರಮದಲ್ಲಿ, ಬ್ಯಾಂಕಿಂಗ್ ವ್ಯವಹಾರಗಳು, ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುವ ವಂಚನೆಗಳು, ಎಟಿಎಂ ಕಾರ್ಡ್‌ಗಳ ಉಪಯೋಗಗಳು ಮತ್ತು  ಮುದ್ರಾ ಯೋಜನೆ, ಪ್ರಧಾನ ಮಂತ್ರಿ ಓಡಿ ಯೋಜನೆ, ಹಾಗೂ ಜನಧನ ಯೋಜನೆಗಳ ಕುರಿತು ಮಾಹಿತಿಯನ್ನು ಕೆನರಾ ಬ್ಯಾಂಕ್‌ನ ಮ್ಯಾನೇಜರ್‌ರಾದ ಶ್ರೀನಾಥ್ ಕೊತಳೆ ಅವರು ಹಂಚಿಕೊಂಡರು. 
   ಈ ಕಾರ್ಯಕ್ರಮವು ಸ್ಥಳೀಯ ಜನರಲ್ಲಿ ಸಾಮಾಜಿಕ ಭದ್ರತೆ ಮತ್ತು ಬ್ಯಾಂಕಿಂಗ್ ಸೇವೆಗಳ ಬಗ್ಗೆ ಅರಿವು ಮೂಡಿಸಲು ಸಹಾಯ ಮಾಡಿತು. ಸಾರ್ವಜನಿಕರು ತಮ್ಮ ಪ್ರಶ್ನೆಗಳನ್ನು ಕೇಳಲು ಅವಕಾಶ ಪಡೆದಿದ್ದು, ಈ ಮೂಲಕ ಅವರಿಗೆ ತಮ್ಮ ಹಣಕಾಸು ವ್ಯವಹಾರಗಳನ್ನು ಸುಗಮವಾಗಿ ನಿರ್ವಹಿಸಲು ಮತ್ತು ವಂಚನೆಗಳಿಂದ ದೂರ ಉಳಿಯಲು ಮಾರ್ಗದರ್ಶನ ನೀಡಲಾಯಿತು. 
   ಹಾಸಣಗಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿನೋದಾ ಚಂದ್ರಶೇಖರ ಬಿಲ್ಲವ, ಸದಸ್ಯರಾದ ಎಂ.ಕೆ. ಭಟ್ಟ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶಿವಕುಮಾರ ವಿರಕ್ತಮಠ, ಹಾಗೂ ಧಾನ್ ಫೌಂಡೇಶನ್‌ನ ಶ್ರುತಿ ನೆಲವಾಡಿ, ಹಿರಿಯಾ ಪೂಜಾರಿ ಉಪಸ್ಥಿತರಿದ್ದರು. 
(ವರದಿ: ವಿಕಾಸ ನಾಯ್ಕ ಮಂಚಿಕೇರಿ)

ರೋಗಿಗಳಿಗೆ ಹಾಲು, ಹಣ್ಣು ವಿತರಣೆ/ಸ್ವಾತಂತ್ರ್ಯ ಸ್ಮರಣೆ: ವಿಶೇಷ ಸಂಚಿಕೆ ಬಿಡುಗಡೆ

ವಿಶ್ವದರ್ಶನ ಮಿಡಿಯಾ ಸ್ಕೂಲ್ : ಸ್ವಾತಂತ್ರ್ಯ ಸ್ಮರಣೆ:  ವಿಶೇಷ ಸಂಚಿಕೆ ಬಿಡುಗಡೆ
ಯಲ್ಲಾಪುರ: ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ,  ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಮೂಹದ ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ ವಿದ್ಯಾರ್ಥಿಗಳು ರೂಪಿಸಿರುವ ವಿಶೇಷ ಸಂಚಿಕೆ, ವಿಡಿಯೋ ಮತ್ತು ರೇಡಿಯೋ ಕಾರ್ಯಕ್ರಮಗಳ ಅನಾವರಣ ಕಾರ್ಯಕ್ರಮ ಆಗಸ್ಟ್ 15ರಂದು ನಡೆಯಿತು. 
    ಸ್ವಾತಂತ್ರ್ಯ ಸಂಗ್ರಾಮದ ಸಮಗ್ರ ಚಿತ್ರಣವನ್ನು ಇವುಗಳಲ್ಲಿ ನೀಡಲಾಗಿದೆ. ವಿಶ್ವದರ್ಶನ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ, ನಿವೃತ್ತ ಪ್ರಾಂಶುಪಾಲ, ಮೀಡಿಯಾ ಸ್ಕೂಲ್ ಉಪನ್ಯಾಸಕ ಬೀರಣ್ಣ ನಾಯಕ ಮೊಗಟಾ ಮತ್ತು ಮೀಡಿಯಾ ಸ್ಕೂಲ್ ಪ್ರಾಂಶುಪಾಲ ನಾಗರಾಜ ಇಳೆಗುಂಡಿ ಉಪಸ್ಥಿತರಿದ್ದರು.  ವಿದ್ಯಾರ್ಥಿನಿ ಶೋಭಾ ಗೌಡ ಸ್ವಾಗತಿಸಿ ನಿರ್ವಹಿಸಿದರು.

ಮಾತೃಭೂಮಿ ಪ್ರತಿಷ್ಠಾನ: ರೋಗಿಗಳಿಗೆ ಹಾಲು, ಹಣ್ಣು ವಿತರಣೆ
ಯಲ್ಲಾಪುರ : ಮಾತೃಭೂಮಿ ಸೇವಾ ಪ್ರತಿಷ್ಠಾನದ ಆಶ್ರಯದಲ್ಲಿ 78ನೇ ಸ್ವಾತಂತ್ರ್ಯ ದಿನೋತ್ಸವದಂದು ಸರಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಉಚಿತ ಹಾಲು, ಹಣ್ಣು ಮತ್ತು ಬ್ರೆಡ್ ವಿತರಣಾ ಕಾರ್ಯಕ್ರಮ ನಡೆಯಿತು.
    ಪ್ರತಿಷ್ಠಾನದ ಅಧ್ಯಕ್ಷ ಶ್ರೀರಂಗ ಕಟ್ಟಿ, ಕಾರ್ಯದರ್ಶಿ ಕೃಷ್ಣ ಭಟ್ಟ ನಾಯ್ಕನಕೆರೆ, ಸಂಚಾಲಕ ಸುರೇಶ ಬೋರಕರ, ಉಪ ಸಂಚಾಲಕ ಸತೀಶ ಹೆಬ್ಬಾರ, ಅಶ್ವಿನಿ ಸಿಎ, ವೈದ್ಯಾಧಿಕಾರಿಗಳಾದ ಡಾ. ದೀಪಕ ಭಟ್ಟ, ಡಾ. ಸೌಮ್ಯಾ, ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಶಿಕ್ಷಣ ಪ್ರೇಮಿ ಉಮೇಶ ಭಟ್ಟರ ಪುಣ್ಯಸ್ಮರಣೆಯಲ್ಲಿ ಅನಾಥಾಶ್ರಮಕ್ಕೆ ಖುರ್ಚಿ ದೇಣಿಗೆ

ಯಲ್ಲಾಪುರ : ಶಿಕ್ಷಣ ಪ್ರೇಮಿ ಮತ್ತು ಮಾಜಿ ಶಾಸಕ ದಿ.ಉಮೇಶ ಭಟ್ಟರವರ ಐದನೇಯ ಪುಣ್ಯಸ್ಮರಣೆ ನುಡಿ-ನಮನ ಕಾರ್ಯಕ್ರಮ ದ.ಕ ಜಿಲ್ಲೆ ಕಾರ್ಕಳದ ಹತ್ತಿರ ಬೈಲೂರ ಹೊಸ ಬೆಳಕು ಅನಾಥಾಶ್ರಮದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಯಲ್ಲಾಪುರದ ಉಮೇಶ ಭಟ್ಟ ಅಭಿಮಾನಿಗಳ ಬಳಗ ಆಶ್ರಮಕ್ಕೆ ಐವತ್ತು ಡಿಲೇಕ್ಸ ದೊಡ್ಡ ಖುರ್ಚಿಗಳನ್ನು ಸಮರ್ಪಿಸಿತು.
   ಖುರ್ಚಿಗಳನ್ನು ಸ್ವೀಕರಿಸಿದ ಆಶ್ರಮದ ಅಧ್ಯಕ್ಷೆ ತನುಲಾ ತರುಣ ಮಾತನಾಡಿ, ಕಳೆದ ಕೆಲವು ವರ್ಷಗಳಿಂದ ದಾನಿಗಳ ಸಹಾಯದಿಂದ ಆಶ್ರಮ ನಡೆಸುತ್ತಿದ್ದೇವೆ. ಈ ಆಶ್ರಮದಲ್ಲಿ ನಿರ್ಗತಿಕರಿಗೆ, ಅನಾಥರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಅವರಿಗೆ ಯಾವುದೇ ಆಶ್ರಯವಿಲ್ಲದೇ ಅನಾಥರಾಗಿರಬೇಕು ಅಂತವರಿಗೆ ನಮ್ಮ ಆಶ್ರಮದಲ್ಲಿ ಆಶ್ರಯವಿದೆ ಎಂದ ಅವರು 50 ಖುರ್ಚಿಗಳನ್ನು ಆಶ್ರಮಕ್ಕೆ ದೇಣಿಗೆಯಾಗಿ ನೀಡಿರುವುದಕ್ಕೆ ಭಟ್ಟ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.
   ಉಮೇಶ ಭಟ್ಟ ಅಭಿಮಾನಿ ಬಳಗದ ಸದಸ್ಯರಾದ ಹಳವಳ್ಳಿ ಡಿ.ಎನ್.ಹೆಗಡೆ ಮಾತನಾಡಿ, ನಾವು ಈ ಸ್ಥಳಕ್ಕೆ ಬೆಟ್ಟಿ ನೀಡಿದ್ದು ಸಾರ್ಥಕವಾಯಿತು. ನಾವು ನೀಡಿದ ಸೇವೆ ಸಮರ್ಪಕವಾಗಿ ಬಳಕೆಯಾಗುತ್ತಿದೆ ಎಂದರು. 
    ಕಸಾಪ ಕೇಂದ್ರ ಮಾರ್ಗದರ್ಶಿ ಸಮಿತಿಯ ಸದಸ್ಯ ವೇಣುಗೋಪಾಲ ಮದ್ಗುಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಉಮೇಶ ಭಟ್ಟರವರು ಅಜಾತಶತ್ರುವಾಗಿದ್ದರು. ಯಾವುದೇ ಬೇದ ಭಾವ ಇಲ್ಲದೆ ಜನರನ್ನು ಪ್ರೀತಿಯಿಂದ ನೋಡುತ್ತಿದ್ದರು. ಇಂದು ಅವರು ಕಟ್ಟಿದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಂಗಭಾಗವಾದ ಡಿ.ಇಡ್ ಕಾಲೇಜು, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ನರ್ಸಿಂಗ್ ಕಾಲೇಜು ದೊಡ್ಡದಾಗಿ ಬೆಳೆದು ತನ್ಮೂಲಕ ಇಪ್ಪತ್ತೈದು ಸಾವಿರಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ಜೀವನೋಪಾಯ ಕಂಡುಕೊಂಡಿದ್ದಾರೆ. ಉಮೇಶ ಭಟ್ಟ ಅಭಿಮಾನಿಗಳ ಬಳಗ ಪ್ರತಿ ವರ್ಷ ಅವರು ನೆನಪಿಗಾಗಿ ನಿರ್ಗತಿಕರಿಗೆ, ಅನಾಥರಿಗೆ ಸಹಾಯ ಮಾಡುವ ಕಾರ್ಯವನ್ನು ಏರ್ಪಡಿಸುತ್ತೇವೆ ಎಂದರು.
   ಈ ಸಂದರ್ಭದಲ್ಲಿ ಕಾರ್ಕಳ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ರಾಜೇಶ್ ಕೊಟ್ಯಾನ್, ರಘುರಾಮ ಚಂದ್ರ ಮುಂತಾದವರು ಉಪಸ್ಥಿತರಿದ್ದರು. 
   ಉಡುಪಿ ಜಿಲ್ಲಾ ಉಪಾಧ್ಯಕ್ಷರಾದ ಅಶೋಕ ಸುವರ್ಣ ನಿರೂಪಿಸಿದರು. ವಿದ್ಯುತ್ ಗುತ್ತಿಗೆದಾರರ ಸಂಘ ಕೋಶಾಧ್ಯಕ್ಷ ಮನ್ಸೂರ್ ಅಹ್ಮದ್ ವಂದಿಸಿದರು.

ವಜ್ರಳ್ಳಿಯಲ್ಲಿ ಪ್ರೌಢಶಾಲಾ ವಲಯ ಮಟ್ಟದ ಕ್ರೀಡಾಕೂಟ: ಕ್ರೀಡೆಗೆ ಪ್ರೋತ್ಸಾಹ

ಯಲ್ಲಾಪುರ: ವಜ್ರಳ್ಳಿಯ ಸರ್ವೋದಯ ಕ್ರೀಡಾಂಗಣದಲ್ಲಿ ಗುರುವಾರ ಪ್ರೌಢಶಾಲಾ ವಲಯ ಮಟ್ಟದ   ಇಲಾಖಾ ಕ್ರೀಡಾಕೂಟವನ್ನು ಉದ್ಘಾಟಿಸಲಾಯಿತು. 
   ಕ್ರೀಡಾ ಧ್ವಜಾರೋಹಣ ನೆರವೇರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ. ಕ್ರೀಡೆಯ ಮಹತ್ವವನ್ನು ವಿವರಿಸಿ, "ಕ್ರೀಡೆ ನಮ್ಮ ಮಾನಸಿಕ ಕ್ಷಮತೆಯನ್ನು ಹೆಚ್ಚಿಸುತ್ತದೆ. ದೈಹಿಕ ಶ್ರಮವು ವ್ಯಕ್ತಿಯನ್ನು ಶಕ್ತಿಶಾಲಿಯಾಗಿಸುತ್ತದೆ" ಎಂದು ಹೇಳಿದರು.
   ಗ್ರಾಮ ಪಂಚಾಯಿತಿ ಅಧ್ಯಕ್ಷ ಭಗೀರಥ ನಾಯ್ಕ ಕ್ರೀಡಾ ಜ್ಯೋತಿ ಬೆಳಗಿಸಿ, "ಕ್ರೀಡಾಕೂಟವು ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಲು ಮತ್ತು ಆರೋಗ್ಯವನ್ನು ಉತ್ತೇಜಿಸಲು ಸಹಕಾರಿಯಾಗಲಿದೆ" ಎಂದು ಹೇಳಿದರು. 
    ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸರ್ವೋದಯ ಶಿಕ್ಷಣ ಸಮಿತಿಯ ಸದಸ್ಯ ಅಪ್ಪಣ್ಣ ಭಟ್ಟ ಬೆಣ್ಣೆಜಡ್ಡಿ, "ಕ್ರೀಡೆಯು ಗ್ರಾಮೀಣ ಭಾಗದಲ್ಲಿ ನಶಿಸುತ್ತಿರುವುದನ್ನು ವಿಷಾದಕರ" ಎಂದು ಅಭಿಪ್ರಾಯಪಟ್ಟರು. 
   ಅತಿಥಿಗಳಾದ ದೈಹಿಕ ಶಿಕ್ಷಣ ಪರಿವೀಕ್ಷಕ ಎಂ ಎನ್ ತಾರೀಕೊಪ್ಪ, ಸರ್ವೋದಯ ಸಂಸ್ಥೆಯ ಉಪಾಧ್ಯಕ್ಷ ಟಿ ಸಿ ಗಾಂವ್ಕರ್, ಮತ್ತು ಹಿರಿಯರಾದ ಜಿ ಎನ್. ಕೋಮಾರ ಉಪಸ್ಥಿತರಿದ್ದರು. 
   ಶಿಕ್ಷಕ ಎಸ್ ಟಿ ಬೇವಿನಕಟ್ಟಿ ಸ್ವಾಗತಿಸಿ, ದೈಹಿಕ ಶಿಕ್ಷಕ ವಿನೋದ ಗಾಯನ್ನನವರ್ ಪ್ರತಿಜ್ಞಾ ವಿಧಿ ಬೋಧಿಸಿದರು. ಚಿದಾನಂದ ಹಳ್ಳಿ ನಿರೂಪಿಸಿದರು. ಗಿರೀಶ್ ಹೆಬ್ಬಾರ್ ವಂದಿಸಿದರು.

ಯಲ್ಲಾಪುರದಲ್ಲಿ ನಿಮ್ಮ ಹಳೆಯ ಬಂಗಾರವನ್ನು ಯೋಗ್ಯ ಬೆಲೆಗೆ ಖರೀದಿಸುವ ಧನೀಷ್ ಎಂಟರಪ್ರೈಸಸ್

ಯಲ್ಲಾಪುರ: ಪಟ್ಟಣದ ಡಿಟಿ ರಸ್ತೆಯ ಬಾಳಗಿ ಕಾಂಪ್ಲೆಕ್ಸ್ ನಲ್ಲಿ ಜುಲೈ 1ರಿಂದ ಪ್ರಾರಂಭವಾಗಿರುವ ಧನೀಷ್ ಎಂಟರಪ್ರೈಸಸ್ (ಬಂಗಾರದ ಖರೀದಿದಾರರು) ಗ್ರಾಹಕರು ಮಾರಲು ಇಚ್ಚಿಸುವ ಬಂಗಾರದ ಆಭರಣಗಳಿಗೆ ಉತ್ತಮವಾದ ಬೆಲೆಯನ್ನು ನೀಡಿ ಕೊಂಡು ಕೊಳ್ಳುತ್ತಾರೆ.
   ನಾಲ್ಕು ವರ್ಷಗಳಿಂದ ಹುಬ್ಬಳ್ಳಿಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಧನೀಷ್ ಎಂಟರಪ್ರೈಸಸ್ ಸಂಸ್ಥೆ, ಯಲ್ಲಾಪುರದಲ್ಲಿ ಡಿಟಿ ರಸ್ತೆಯ ಪೊಲೀಸ್ ಸ್ಟೇಷನ್ ಹಿಂಬದಿಯಲ್ಲಿ ಹೊಸ ಶಾಖೆಯನ್ನು ಪ್ರಾರಂಭಿಸಿದ್ದಾರೆ. ಕಡಿಮೆ ಕಾಗದ ಪತ್ರಗಳ ವ್ಯವಹಾರ ಮತ್ತು ಸಂಪೂರ್ಣ ನಿಯಮಬದ್ದವಾಗಿ(ಕಳ್ಳತನ ಕಾನೂನು ಬಾಹೀರವಲ್ಲದ) ಬಂಗಾರವನ್ನು ಖರೀದಿಸುವ ಮೂಲಕ, ಗ್ರಾಹಕರ ವಿಶ್ವಾಸಾರ್ಹತೆ ಪಡೆದುಕೊಂಡು ಉಳಿಸಿಕೊಂಡಿದ್ದಾರೆ. 
ಆನ್ಲೈನ್ ದರದಲ್ಲಿ ನಿಮ್ಮ ಚಿನ್ನವನ್ನು ಖರೀದಿಸುತ್ತಾರೆ:
ಧನೀಷ್ ಎಂಟರಪ್ರೈಸಸ್, ಆನ್ಲೈನ್ ದರವನ್ನು ಅನುಸರಿಸಿ ನಿಮ್ಮ ಚಿನ್ನಕ್ಕೆ ಯೋಗ್ಯ ಬೆಲೆಯನ್ನು ನೀಡುತ್ತದೆ. ಇದು ಗ್ರಾಹಕರಿಗೆ ಬಹಳ ಪ್ರಯೋಜನಕಾರಿಯಾಗುತ್ತದೆ.

ನಿಮ್ಮ ಚಿನ್ನಕ್ಕೆ ಉತ್ತಮ ಬೆಲೆಯನ್ನು ನೀಡುತ್ತಾರೆ:
 ಗ್ರಾಹಕರು ತಮ್ಮ ಹಳೆಯ ಬಂಗಾರದ ಆಭರಣಗಳನ್ನು ಮಾರಲು ಬಂದಾಗ, ಧನೀಷ್ ಎಂಟರಪ್ರೈಸಸ್ ಅತ್ಯುತ್ತಮ ಬೆಲೆಯನ್ನು ನೀಡುತ್ತದೆ, ಇದು ಬಂಗಾರದ ಮೌಲ್ಯವನ್ನು ಸಮರ್ಪಕವಾಗಿ ಗುರುತಿಸುವುದಕ್ಕೆ ಸಹಾಯ ಮಾಡುತ್ತದೆ.

ಅಡವಿಟ್ಟ ಚಿನ್ನವನ್ನು ಬಿಡಿಸಿ ಉಳಿದ ಹಣವನ್ನು ನೀಡುತ್ತಾರೆ:
ನೀವು ಅಡವಿಟ್ಟಿರುವ ಚಿನ್ನವನ್ನು ಬಿಡುಗಡೆ ಮಾಡಿಸುವ ಸೇವೆಯನ್ನು ಕೂಡ ಧನೀಷ್ ಎಂಟರಪ್ರೈಸಸ್ ಒದಗಿಸುತ್ತದೆ. ಈ ಮೂಲಕ, ನಿಮಗೆ ಉಳಿದ ಹಣವನ್ನು ಕೂಡ ಪಡೆಯಬಹುದು.

ಯಾವುದೇ ಸರ್ವಿಸ್ ಚಾರ್ಜ್ ತೆಗೆದುಕೊಳ್ಳುವುದಿಲ್ಲ:
ಧನೀಷ್ ಎಂಟರಪ್ರೈಸಸ್ ಯಾವುದೇ ಸರ್ವಿಸ್ ಚಾರ್ಜ್ ಅನ್ನು ಗ್ರಾಹಕರಿಂದ ವಸೂಲು ಮಾಡುವುದಿಲ್ಲ ಎಂದು ಮಾಲಿಕರಾದ ಕಿರಣ ಭೋವಿ ತಿಳಿಸಿದ್ದಾರೆ. 

ಧನೀಷ್ ಎಂಟರ್ಪ್ರೈಸಸ್ ‌ನಲ್ಲಿ, ಬ್ಯಾಂಕ್ ಅಥವಾ ಸಹಕಾರಿ ಸಂಘ ಸಂಸ್ಥೆಗಳಲ್ಲಿ ಅಡವಿಟ್ಟ ಬಂಗಾರಗಳ ಹರಾಜು ಪ್ರಕ್ರಿಯೆಯ ಪೂರ್ವದಲ್ಲಿ ಆಭರಣ ಬಿಡಿಸಿಕೊಂಡು,  ಬಂಗಾರಕ್ಕೆ ಅಸಲು, ಬಡ್ಡಿ, ಇತರೆ‌ ಖರ್ಚುಗಳನ್ನು ತೆಗೆದು ನ್ಯಾಯಯುತ ಬೆಲೆಗೆ ಬಂಗಾರದ ಆಭರಣ ಖರೀದಿ ಮಾಡುತ್ತೆವೆ. 

ಧನೀಷ್ ಎಂಟರಪ್ರೈಸಸ್ ನಲ್ಲಿ ವಿಶ್ವಾಸಾರ್ಹ ಮತ್ತು ಸಮರ್ಪಿತ ಸೇವೆಯನ್ನು ನೀವು ನಿರೀಕ್ಷಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಯಲ್ಲಾಪುರ ಧನೀಷ್ ಎಂಟರಪ್ರೈಸಸ್ ಮಾಲಿಕರಾದ ಕಿರಣ ಭೋವಿ ಅವರನ್ನು ಸಂಪರ್ಕಿಸಿ. ಮೊಬೈಲ್ : 
+91 9711047983
dhanish-july-24pyd dhanish-july24pyd1

ಶನಿವಾರ ಬೆಳಿಗ್ಗೆ 6 ಗಂಟೆಯಿಂದ ರವಿವಾರ‌ ಬೆಳಿಗ್ಗೆ 6 ಗಂಟೆಯವರೆಗೆ ವೈದ್ಯರ ಮುಷ್ಕರ: ಯಲ್ಲಾಪುರದಲ್ಲಿಯೂ 24 ಗಂಟೆಗಳ ವೈದ್ಯಕೀಯ ಮುಷ್ಕರ ?

ಯಲ್ಲಾಪುರ : ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಆಗಸ್ಟ್ 17 ಮತ್ತು 18, 2024ರಂದು 24 ಗಂಟೆಗಳ ಮುಷ್ಕರಕ್ಕೆ ಕರೆ ನೀಡಿದೆ. ಯಲ್ಲಾಪುರದ ಖಾಸಗಿ ಆಸ್ಪತ್ರೆಗಳು ಹಾಗೂ ಸರ್ಕಾರಿ ಆಸ್ಪತ್ರೆಯ ವೈದ್ಯರೂ ಮುಷ್ಕರ ನಡೆಸಲಿದ್ದಾರೆ ಎನ್ನಲಾಗಿದ್ದು, ಇದುವರೆಗೂ ಸ್ಪಷ್ಟವಾಗಿ ಮಾಹಿತಿ ತಿಳಿದು ಬಂದಿಲ್ಲ. 
   ಈ 24 ಗಂಟೆಯ ಮುಷ್ಕರವು ಕೋಲ್ಕತ್ತಾದ ಆರ್ ಜಿ ಕಾರ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ಕ್ರೂರ ಘಟನೆಗೆ ಪ್ರತಿಕ್ರಿಯೆಯಾಗಿ ನಡೆಯಲಿದೆ, ಅಲ್ಲಿಯ ಯುವ ವೈದ್ಯರನ್ನು ರೇಪ್ ಮತ್ತು ಹತ್ಯೆ ಮಾಡಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಐಎಂಎ ಕರೆಗೆ, ವೈದ್ಯಕೀಯ ಸಂಸ್ಥೆಗಳು, ಖಾಸಗಿ ಆಸ್ಪತ್ರೆಗಳು, ಮತ್ತು ವೈದ್ಯಕೀಯ ಕಾಲೇಜುಗಳು ಮುಷ್ಕರದಲ್ಲಿ ಭಾಗವಹಿಸಲು ನಿರ್ಧರಿಸಿವೆ.
   ಮುಷ್ಕರದ ಸಮಯದಲ್ಲಿ ತುರ್ತು ಸೇವೆಗಳ ಹೊರತುಪಡಿಸಿ, ಎಲ್ಲಾ ಅಗತ್ಯವಲ್ಲದ ವೈದ್ಯಕೀಯ ಸೇವೆಗಳು ಸ್ಥಗಿತಗೊಳ್ಳುತ್ತವೆ. ಗಾಯಾಳುಗಳನ್ನು ನಿರ್ವಹಿಸಲು ವೈದ್ಯರು ಕಾರ್ಯನಿರ್ವಹಿಸುತ್ತಾರೆ, ಆದರೆ ದಿನನಿತ್ಯದ ಓಪಿಡಿ ಮತ್ತು ಶಸ್ತ್ರಚಿಕಿತ್ಸೆಗಳನ್ನು ನಡೆಸುವುದಿಲ್ಲ ಎನ್ನಲಾಗಿದೆ. 
   ಕೋಲ್ಕತ್ತಾದ ಘಟನೆ ವೈದ್ಯರ ಸುರಕ್ಷತೆಗೆ ಸಂಬಂಧಿಸಿದಂತೆ ಗಂಭೀರ ಚಿಂತೆಗಳನ್ನು ಹುಟ್ಟಿಸಿದೆ. ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸುರಕ್ಷತೆ ಒದಗಿಸಲು ಸರ್ಕಾರದ ಕ್ರಮಗಳನ್ನು ತೀವ್ರವಾಗಿ ಅಗತ್ಯವಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಾಗಿ ಹಿಂಸೆಗೆ ಗುರಿಯಾಗುತ್ತಿದ್ದಾರೆ, ಇದರಿಂದಾಗಿ ಆರೋಗ್ಯ ಸೇವೆಗಳ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯ ಮೇಲೆ ಪರಿಣಾಮ ಬೀರುತ್ತದೆ. 
  ಈ ಮುಷ್ಕರವು ವೈದ್ಯಕೀಯ ವೃತ್ತಿಯ ವಿರುದ್ಧದ ಹಿಂಸಾಚಾರವನ್ನು ತಡೆಗಟ್ಟಲು ಮತ್ತು ವೈದ್ಯರ ಹಕ್ಕುಗಳನ್ನು ರಕ್ಷಿಸಲು ಒಂದು ಮಹತ್ವದ ಹಂತವಾಗಿದೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಪತ್ರಿಕಾ‌ ಪ್ರಕಟಣೆಯಲ್ಲಿ‌ ತಿಳಿಸಿದೆ. 
      ಯಲ್ಲಾಪುರದಲ್ಲಿ ಬಹುತೇಕ ಎಲ್ಲಾ ಆಸ್ಪತ್ರೆಗಳು ಶನಿವಾರ ದಿನದಂದು ಹೆಚ್ಚು ಕಡಿಮೆ ಬಂದಾಗಿರುತ್ತದೆ, ಯಲ್ಲಾಪುರದಲ್ಲಿ ವೈದ್ಯರ ಮುಷ್ಕರದ ಬಗ್ಗೆ ಇದುವರೆಗೂ ಯಾವುದೇ ಸ್ಪಷ್ಟನೆ ಸಿಗಲಿಲ್ಲ ಆದರೆ, ಶುಕ್ರವಾರ ಮಧ್ಯಾಹ್ನ 3:00ಯ ನಂತರ ಖಾಸಗಿ ವೈದ್ಯರು ಹಾಗೂ ಸರ್ಕಾರಿ ವೈದ್ಯರು ಪತ್ರಿಕೆಗಳಿಗೆ ಮಾಹಿತಿ ನೀಡುವ ನಿರೀಕ್ಷೆ ಇದೆ.

ಸರ್ವೋದಯ ಶಾಲಾ ಸಂಸತ್ತು ಉದ್ಘಾಟನೆ: ವಿದ್ಯಾರ್ಥಿಗಳ ಸಂಘಟನಾ ಶಕ್ತಿ ಬೆಳೆಸಲು ಕರೆ

ಯಲ್ಲಾಪುರ ; ತಾಲೂಕಿನ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ  78ನೇ ಸ್ವಾತಂತ್ರ್ಯೋತ್ಸವದ  ಕಾರ್ಯಕ್ರಮ ನಂತರ ಶಾಲಾ ಸಂಸತ್ತು ಉದ್ಘಾಟನೆ ಕಾರ್ಯಕ್ರಮ ಜರುಗಿತು.
 ಧ್ವಜಾರೋಹಣ ನೆರವೇರಿಸಿ, ಪ್ರಸಕ್ತ ಶೈಕ್ಷಣಿಕ ಸಾಲಿನ ಸರ್ವೋದಯ ಪ್ರೌಢಶಾಲೆಯ ಸಂಸತ್ತನ್ನು ಉದ್ಘಾಟಿಸಿದ  ಸಾಮಾಜಿಕ ಕಾರ್ಯಕರ್ತ ಹಾಗೂ ಸಂಸ್ಥೆಯ ಉಪಾಧ್ಯಕ್ಷರಾದ ಟಿ.ಸಿ.ಗಾಂವ್ಕಾರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಬಾಲ್ಯದಿಂದಲೇ ಸಂಘಟನಾ ಶಕ್ತಿ ಹೆಚ್ಚಾಗಬೇಕು. ಸಮಾಜವನ್ನು ಸದಾ ಪರಿಚಯಿಸಿಕೊಳ್ಳುತ್ತಾ  ಬೆಳೆಯಬೇಕು. ಸಮಾಜ ಸೇವೆಯ ಕಾರ್ಯದಲ್ಲಿ ತಾನು ಏನನ್ನು ಕೊಡುಗೆಯಾಗಿ ನೀಡಬೇಕು ಎನ್ನುವ ಚಿಂತನೆಯಾಗಬೇಕು. ಜನರ ಮನಸ್ಸು ಗೆಲ್ಲುವುದು ಸಾಧನೆಯ ಪಥದ ಯಶಸ್ಸು. ಪ್ರಜಾಪ್ರಭುತ್ವದ ಮಾದರಿಗೆ ನಾವು ಸಾಕ್ಷಿಯಾಗಬೇಕೆಂದು ಹೇಳಿದರು.
    ಕಾರ್ಯಕ್ರಮದಲ್ಲಿ ಸರ್ವೋದಯ ಶಿಕ್ಷಣ ಸಮಿತಿಯ ಸದಸ್ಯರಾದ  ಗಿರೀಶ ಗಾಂವ್ಕರ್, ವೆಂಕಟ್ರಮಣ ಕಿರಗಾರೆ. ಜಿ ಎನ್ ಕೋಮಾರ ಮಾತನಾಡಿದರು.
  ಬನಾಗಶ್ರೀ ಹೆಬ್ಬಾರ್ ಪ್ರಾರ್ಥಿಸಿದರು.  ಮುಖ್ಯಾಧ್ಯಾಪಕ ಎಂ ಕೆ ಭಟ್ಟ ಸ್ವಾಗತಿಸಿದರು. ಶಿಕ್ಷಕ ಎಸ್ ಟಿ ಬೇವಿನಕಟ್ಟಿ ನಿರ್ವಹಿಸಿದರು. ಸೀಮಾ ಗೌಡ ವಂದಿಸಿದರು.  ಇದೇ ಸಂದರ್ಭದಲ್ಲಿ ನೂತನ ಸಂಸತ್ತಿಗೆ ಆಯ್ಕೆಯಾಗಿರುವ  ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಲಾಯಿತು.

ಕಾಳಿ ಸೇತುವೆ ಕುಸಿತ: ಲಾರಿ ಮೇಲೇತ್ತುವ ಕಾರ್ಯಾಚರಣೆ ಯಲ್ಲಾಪುರದ ಇಮ್ರಾನ್ ಸನದಿ‌ ಕ್ರೇನ್ ಬಳಕೆ

ಯಲ್ಲಾಪುರ: ಕಾಳಿ ನದಿ ಸೇತುವೆ ಕುಸಿತದಿಂದಾಗಿ ನದಿಯಲ್ಲಿ ಬಿದ್ದ ಲಾರಿಯನ್ನು ಗುರುವಾರ ಸಂಜೆ ಯಶಸ್ವಿಯಾಗಿ ಮೇಲೇರಿಸಲಾಗಿದೆ. ಈ ಕಾರ್ಯಾಚರಣೆ ಯಲ್ಲಾಪುರದ ಇಮ್ರಾನ್ ಸನದಿ ಕ್ರೇನ್ ಮತ್ತು ಸ್ಥಳೀಯ ಕಾರ್ಮಿಕರ ಸಹಾಯದಿಂದ ನಡೆಯಿತು. 
   ಆಗಸ್ಟ್ 7 ರಂದು ಮಧ್ಯರಾತ್ರಿ ಕೋಡಿಭಾಗದ ಗೋವಾ ಸಂಪರ್ಕಿಸುವ ಸೇತುವೆ ಕುಸಿದು ಬಿದ್ದಾಗ, ತಮಿಳುನಾಡು ಮೂಲದ ಲಾರಿ ನದಿಗೆ ಬಿದ್ದಿತ್ತು. ಚಾಲಕ ಬಾಲಮುರುಗನ್ ಪ್ರಾಣಾಪಾಯದಿಂದ ಪಾರಾಗಿದ್ದರೂ, ನದಿಯ ಹರಿವಿನ ಮಟ್ಟ ಹೆಚ್ಚಾಗಿರುವ ಕಾರಣ ಲಾರಿ ಮೇಲೇರಿಸಲು ಸಾಧ್ಯವಾಗದ ಕಾರಣ ಕಾರ್ಯಾಚರಣೆ ವಿಳಂಬವಾಯಿತು.  ಇದು ಜಿಲ್ಲಾಡಳಿತಕ್ಕೆ ತೀವ್ರ ತಲೆ ನೋವು ಮೂಡಿಸಿತ್ತು.
  ನದಿಯ ಹರಿವಿನ ಮಟ್ಟ ಕಡಿಮೆ ಆಗುತ್ತಿದ್ದಂತೆ, ಜಿಲ್ಲಾಡಳಿತ ಮತ್ತು ಐಆರ್‌ಬಿ ಕಂಪನಿಯ ತಂಡ ಕಾರ್ಯಾಚರಣೆಗೆ ಮುಂದಾಗಿತ್ತು. ಆದರೆ, ಕಬ್ಬಿಣದ ಹಗ್ಗ ತುಂಡಾಗುತ್ತಿರುವುದರಿಂದ ಕಾರ್ಯಾಚರಣೆ ವಿಳಂಬವಾಗಿತ್ತು. ಗುರುವಾರ ಬೆಳಿಗ್ಗೆ ಎರಡು ಕ್ರೇನ್‌ಗಳ ಮೂಲಕ ಕಾರ್ಯಾಚರಣೆ ಪುನಾರಂಭವಾಯಿತು. 
   ಈಶ್ವರ್ ಮಲ್ಪೆ ಮತ್ತು ಸ್ಥಳೀಯ ಮೀನುಗಾರರ ಸಹಾಯದಿಂದ ಲಾರಿ ದಡಕ್ಕೆ ತರಲು ಮುಳುಗು ತಜ್ಞರ ತಂಡ ಯಶಸ್ವಿಯಾಗಿ ಕಾರ್ಯನಿರ್ವಹಿಸಿತು. ಸ್ಥಳೀಯರು ಈ ಸಾಧನೆಗೆ ಪಟಾಕಿ ಸಿಡಿಸಿ ಗೌರವ ಸೂಚಿಸಿದರು. 
  ಹಿಂದೆ ಅಂಕೋಲಾ ಶಿರೂರು ಬಳಿ ನಡೆದ ಗುಡ್ಡ ಕುಸುತದಿಂದಾಗಿ ಗಂಗಾವಳಿ ನದಿಯಲ್ಲಿ ತೇಲಿ‌ಹೋಗಿದ್ದ ಗ್ಯಾಸ್ ಟ್ಯಾಂಕರ್ ಅನ್ನು ದಡಕ್ಕೆ ತರಲು ಯಲ್ಲಾಪುರದ ಇಮ್ರಾನ್ ಸನದಿ ಕ್ರೇನ್ ಹಾಗೂ ಕಾರ್ಮಿಕರನ್ನು ಬಳಕೆ ಮಾಡಿಕೊಂಡು ಯಶಸ್ವಿಯಾಗಿರುವುದು ಇಲ್ಲಿ‌ನೆನಪಿಸಬಹುದು.