Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Thursday, 15 August 2024

News: ✒️✒️ ಶಿರನಾಲಾ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮNews: ✒️✒️ ಯಲ್ಲಾಪುರದ ಮಾದರಿ ಶಾಲೆಯಲ್ಲಿ ದ್ವಜಾರೋಹಣNews: ✒️✒️ ಯಲ್ಲಾಪುರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ 78ನೇ ಸ್ವಾತಂತ್ರ್ಯೋತ್ಸವ ಆಚರಣೆ

ಶಿರನಾಲಾ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ
ಯಲ್ಲಾಪುರ : ಶಿರನಾಲಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯು ವಿಜೃಂಭಣೆಯೊಂದಿಗೆ ಆಚರಿಸಲಾಯಿತು. ಈ ಸಂದರ್ಭ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಪ್ರಭಾಕರ ಮರಾಠಿ ಅವರು ಧ್ವಜಾರೋಹಣ ನೆರವೇರಿಸಿದರು. 
    ಪುಟಾಣಿ ಮಕ್ಕಳ ಕಲಾವಿದರಾಗಿ ಸ್ವಾತಂತ್ರ್ಯ ಹೋರಾಟಗಾರರ ಛದ್ಮ ವೇಷದಲ್ಲಿ ಪ್ರದರ್ಶಿಸಿದ ನಾಟಕವು ಸಕಲರ ಗಮನ ಸೆಳೆದಿತು. ನಿಕಟ ಪೂರ್ವ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಂಜುನಾಥ ಮರಾಠಿ ಮತ್ತು ಉಪಾಧ್ಯಕ್ಷೆ ರೇಷ್ಮಾ ಬಂಕಾಪುರ ಅವರ ನಿಸ್ವಾರ್ಥ ಸೇವೆ ಹಾಗೂ ಕಾರ್ಯವೈಖರಿಗೆ  ನೂತನ ಎಸ್ ಡಿ ಎಂ ಸಿ ಹಾಗೂ ಶಿಕ್ಷಕರು ಮತ್ತು ಪಾಲಕರು ಅವರನ್ನು ಸನ್ಮಾನಿಸಿದರು.
    ಮುಖ್ಯ ಶಿಕ್ಷಕರಾದ ಎಸ್ ಜಿ ಭಟ್ ಸ್ವಾಗತಿಸಿದರು, ಸತೀಶ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು ಮತ್ತು ಆಶಾ ಶೆಟ್ಟಿ ವಂದನೆ ಸಲ್ಲಿಸಿದರು. ಉಪಾಧ್ಯಕ್ಷೆ ಮಂಜುಳಾ ಮರಾಠಿ, ಅತಿಥಿ ಶಿಕ್ಷಕ ಸುಬ್ರಮಣ್ಯ ಪೂಜಾರಿ, ಪಾಲಕ ವರ್ಗ ಹಾಗೂ ಮಕ್ಕಳು ಭಾಗವಹಿಸಿದ್ದರು.

ಯಲ್ಲಾಪುರದ ಮಾದರಿ ಶಾಲೆಯಲ್ಲಿ ದ್ವಜಾರೋಹಣ
ಯಲ್ಲಾಪುರ: ಪಟ್ಟಣದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಎಸ್ ಡಿ ಎಂ ಸಿ ಅಧ್ಯಕ್ಷ ಶಂಕರ್ ಗೊಂದ್ಲಿಯವರು ಧ್ವಜಾರೋಹಣ ನೆರವೇರಿಸಿ, ತ್ಯಾಗ ಬಲಿದಾನಗಳಿಂದ ಪಡೆದ ಸ್ವಾತಂತ್ರ್ಯವನ್ನು ಸ್ಮರಿಸಿದರು.
 "ದೇಶಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ, ಬಲಿದಾನಗಳಿಂದ ನಾವಿಂದು ಸ್ವಾತಂತ್ರ್ಯ ಅನುಭವಿಸುತ್ತಿದ್ದೇವೆ. ದೇಶದ ಪ್ರಗತಿಗೆ ನಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುವ ಮೂಲಕ ಸ್ವಾತಂತ್ರ್ಯ ಸೇನಾನಿಗಳಿಗೆ ಗೌರವ ಸಲ್ಲಿಸೋಣ" ಎಂದರು.
  ಶಾಲೆಯ ಮುಖ್ಯ ಶಿಕ್ಷಕಿ ಅನುಸೂಯಾ ಹಾರವಾಡೇಕರ ಅಧ್ಯಕ್ಷತೆವಹಿಸಿದ್ದರು.
   ಎಸ್‌ಡಿಎಂಸಿ ಉಪಾಧ್ಯಕ್ಷೆ ಶಶಿಕಲಾ ಅಂಬೀಗ, ಸದಸ್ಯರಾದ ದ್ಯಾಮಣ್ಣ ಬೋವಿವಡ್ಡರ, ಮಾರುತಿ ಭೋವಿವಡ್ಡರ್, ಸಂದೀಪ ವಡ್ಡರ್ ನಾಗರಾಜ ಕೊರ್ನಳ್ಳಿ, ರವಿ ನಾಯ್ಕ, ಸುಚಿತ್ರಾ ಮರಾಠೆ, ಶ್ರೀನಿವಾಸ, ಪಾಲಕರಾದ ಪ್ರಕಾಶ ಕಟ್ಟಿಮನಿ, ಶಿಕ್ಷಕರಾದ ಶೋಭಾ ಗಣಪತಿ ಹಾಗೂ ಮಕ್ಕಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಯಲ್ಲಾಪುರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ 78ನೇ ಸ್ವಾತಂತ್ರ್ಯೋತ್ಸವ ಆಚರಣೆ
ಯಲ್ಲಾಪುರ: ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಗುರುವಾರ ಪಟ್ಟಣದ ಸಾಹಿತ್ಯ ಭವನದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು.
  ತಾಲೂಕಾ ಕಸಾಪ ಅಧ್ಯಕ್ಷರಾದ ವಿದ್ವಾನ್ ಸುಬ್ರಹ್ಮಣ್ಯ ಭಟ್ ಅವರು ಧ್ವಜಾರೋಹಣ ನೆರವೇರಿಸಿ, ನೆರೆದಿದ್ದ ಸದಸ್ಯರಿಗೆ ಶುಭಾಶಯ ತಿಳಸೀದರು. ಆಜೀವ ಸದಸ್ಯರಾದ ಬೀರಣ್ಣ ನಾಯಕ ಮೊಗಟಾ, ಶ್ರೀರಂಗ ಕಟ್ಟಿ, ಡಿ.ಜಿ.ಹೆಗಡೆ, ಕೃಷ್ಣ ಭಟ್ಟ ನಾಯಕನಕೆರೆ, ಸುರೇಶ ಬೋರ್ಕರ್, ಜಿ.ಕೆ.ಭಟ್ಟ ಜಂಬೆ,  ಎನ್.ಎಸ್.ಭಟ್ಟ, ವಿಶಾಲಾಕ್ಷಿ ಭಟ್ಟ, ಕೆ.ಜಿ.ನಾಯಕ, ಶ್ರೀಧರ ಅಣಲಗಾರ, ಶಂಕರ ಭಟ್ಟ ತಾರಿಮಕ್ಕಿ, ವಿಶ್ವೇಶ್ವರ ಗಾಂವ್ಕಾರ್, ಎಂ.ಡಿ.ಗೌಸ್ ಹಾಗೂ ಖಜಾಂಚಿಗಳಾದ ಡಿ.ಎನ್.ಗಾಂವ್ಕಾರ್ ಇದ್ದರು.
   ಕಾರ್ಯಕ್ರಮವನ್ನು ಪರಿಷತ್ತಿನ ಗೌರವ ಕಾರ್ಯದರ್ಶಿ ಜಿ.ಎನ್.ಭಟ್ ತಟ್ಟಿಗದ್ದೆ ನಿರ್ವಹಿಸಿ, ಸಂಜೀವ ಹೊಸ್ಕೇರಿ ವಂದನಾರ್ಪಣೆ ಮಾಡಿದರು.

ಸ್ವಾತಂತ್ರ್ಯೋತ್ಸವದಂದು ವಡೆಹುಕ್ಕಳಿ ಶಾಲೆಯಲ್ಲಿ 'ಮಾತೆಗೊಂದು ಮರ'/ ಅರಬೈಲ್ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ/ ಕಿರವತ್ತಿ ಐಕ್ಯತಾ ಸಂಘಟನೆಯಿಂದ ಧ್ವಜಾರೋಹಣ / ಕಂಪ್ಲಿ ಗ್ರಾಮ ಪಂಚಾಯತಿಯಲ್ಲಿ ಧ್ವಜಾರೋಹಣ/ ಮಂಚಿಕೇರಿ ಕೆನರಾ ಬ್ಯಾಂಕನಲ್ಲಿ‌ ದ್ವಜಾರೋಹಣ / ಕುಂದೂರು ಶಾಲೆಯಲ್ಲಿ ಎಂ ಕೆ ಭಟ್ ಧ್ವಜಾರೋಹಣ


ಸ್ವಾತಂತ್ರ್ಯೋತ್ಸವದಂದು ವಡೆಹುಕ್ಕಳಿ ಶಾಲೆಯಲ್ಲಿ 'ಮಾತೆಗೊಂದು ಮರ'
ಯಲ್ಲಾಪುರ: ವಡೆಹುಕ್ಕಳಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ 'ಮಾತೆಗೊಂದು ಮರ' ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಕ್ಕಳು ತಮ್ಮ ತಾಯಂದಿರಿಗೆ ಸಸಿಗಳನ್ನು ನೀಡುವ ಮೂಲಕ ವನಮಹೋತ್ಸವವನ್ನು ವಿಶಿಷ್ಟವಾಗಿ ಆಚರಿಸಿದರು.
  ಶಾಲಾ ಆವರಣದಲ್ಲಿ ನೆಟ್ಟ ಸಸಿಗಳನ್ನು ಮುಂದೆ ಮರವಾಗುವವರೆಗೆ ಪೋಷಿಸುವ ಜವಾಬ್ದಾರಿಯನ್ನು ತಾಯಂದಿರಿಗೆ ವಹಿಸಲಾಯಿತು. ಡಿಆರ್‌ಎಫ್‌ಒ ಸಂತೋಷ್, ಶಿಕ್ಷಕರಾದ ತನುಜಾ ದೇಸಾಯಿ, ಮಾರುತಿ ಎಂ ನಾಯ್ಕ ಪ್ರಕೃತಿ ಹಾಗೂ ಮರಗಳ ಮಹತ್ವ ತಿಳಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ರವಿ ದೇಸಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸ್ವಾತಂತ್ರ್ಯ ಸ್ಮರಣೆ: ಯುವಕರು ದೇಶದ ಚುಕ್ಕಾಣಿ ಹಿಡಿಯಲಿ - ವೇಣುಗೋಪಾಲ ಮದ್ಗುಣಿ
ಯಲ್ಲಾಪುರ: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ತಾಲೂಕು ಸಮಿತಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಸಂಘದ ಅಧ್ಯಕ್ಷರಾದ ವೇಣುಗೋಪಾಲ ಮದ್ಗುಣಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೆಣಗಾಡಿದ ಮಹನೀಯರನ್ನು ಸ್ಮರಿಸಿದರು.
   ದೇಶದ ಚುಕ್ಕಾಣಿ ಹಿಡಿದು ಮುನ್ನಡೆಸುವ ಸಾಮರ್ಥ್ಯ ಯುವಕರಲ್ಲಿ ಬೆಳೆಯಬೇಕು ಎಂದು ಕರೆ ನೀಡಿದರು. ಬ್ರಿಟಿಷರ ದಬ್ಬಾಳಿಕೆಯಿಂದ ಮುಕ್ತಿ ಪಡೆಯಲು ದಶಕಗಳೇ ಬೇಕಾಯಿತು. ಸ್ವಾತಂತ್ರ್ಯಕ್ಕಾಗಿ ಅಸಂಖ್ಯ ಮಂದಿ ಪ್ರಾಣ ತ್ಯಾಗ ಮಾಡಿದ್ದಾರೆ ಎಂದರು.
  ನಿವೃತ್ತ ಶಿಕ್ಷಕರಾದ ಎಸ್.ಎಲ್.ಜಾಲಿಸತ್ಗಿ, ಮಧು ಭಟ್ಟ, ಎಂ.ಆರ್.ಕುಂಬ್ರಿಗುಡ್ಡೆ, ವಿನಾಯಕ ಹೆಗಡೆ ಸೇರಿದಂತೆ ಅನೇಕ ಗಣ್ಯರು ಮತ್ತು ವಿದ್ಯುತ್ ಗುತ್ತಿಗೆದಾರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅರಬೈಲ್ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ
ಯಲ್ಲಾಪುರ: ಸ.ಹಿ.ಪ್ರಾ ಶಾಲೆ ಅರಬೈಲ್ ನಲ್ಲಿ ೭೮ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ರೂಪಾ ಬಾಂದಿಯವರು ಧ್ವಜಾರೋಹಣ ನೆರವೇರಿಸಿ ಶುಭ ಕೋರಿದರು.
   ಶಾಲೆಯ ಮುಖ್ಯಾಧ್ಯಾಪಕಿ ಶಿವಲೀಲಾ ಹುಣಸಗಿಯವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ಚೇತನಗಳನ್ನು ಸ್ಮರಿಸಿ, ದೇಶದ ಏಕತೆ ಮತ್ತು ಅಭಿವೃದ್ಧಿಗೆ ಪ್ರತಿಯೊಬ್ಬರ ಕೊಡುಗೆ ಮುಖ್ಯ ಎಂದು ಬಲಿಷ್ಠ ಭಾರತ ನಿರ್ಮಾಣದ ಕರೆ ನೀಡಿದರು.
   ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣಗಳನ್ನು ಧರಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ವಿವಿಧ ಭಾಷೆಗಳಲ್ಲಿ ದೇಶಭಕ್ತಿ ಗೀತೆಗಳನ್ನು ಹಾಡಿದರು.
   ಎಸ್.ಡಿ.ಎಮ್.ಸಿ ಉಪಾಧ್ಯಕ್ಷ ಗುರುರಾಜ ಆಚಾರಿ,ಸದಸ್ಯರಾದ ವಿಘ್ನೇಶ್ವರ ಭಟ್,ನಾಗರತ್ನಾ ಸಿದ್ದಿ,ಶಾಂತಲಾ ದೇವಾಡಿಗ,ಮಂಗಲಾ ಸಿದ್ದಿ,ರಾಮಚಂದ್ರ ಭಟ್,ಗಣಪತಿ ಹೆಗಡೆ,ಗೌರಿ ಮಡಿವಾಳ,ಸ್ವಾತಿ ರಂಗೈಶೇಣ್ವಿ,ಮುರುಗೇಶ ಶೆಟ್ಟಿ,ವಿದ್ಯಾ ಭಟ್,ಭಾರತಿ ಮರಾಠಿ,ಮಹೇಶ ಸಿದ್ದಿ,ಶಾಲಿನಿ ಗೌಡ‌,ಗೀತಾ ಸಿದ್ದಿ, ನಯನಾ ಭಟ್,ಮಂಜುನಾಥ ಭಟ್, ಹಾಗೂ ಗ್ರಾ.ಪಂ ಸದಸ್ಯರಾದ ವಿಶ್ವೇಶ್ವರ ಹೆಗಡೆ,ಆಶಾ ನಾಯರ್, ನೂತನ ನಾಯ್ಕ ಆರೋಗ್ಯ ಕಾರ್ಯಕರ್ತೆ, ಮಧು ನಾಯ್ಕ ಆಶಾ ಕಾರ್ಯಕರ್ತೆ, ತ್ರೇಷಾ ನೋಹಾ ಅಂಗನವಾಡಿ ಕಾರ್ಯಕರ್ತೆ ಹಾಗೂ‌ ಶಂಕರ ನಾಯಕ,ಜೈರಾಮ ನಾಯಕ,ರಾಮಕೃಷ್ಣ ಹೆಗಡೆ,ದಾಮೋದರ ಭಟ್ಟ್,ಕಿಶೋರ ನಾಯ್ಕ,ಕಿರಣ ರಾಣೆ,ಅನಂತ ಸಿದ್ದಿ,ನಾಗರಾಜ ನಾಯ್ಕ, ನಾಗರಾಜ ಹೆಗಡೆ,ಶಾಂತಿ ನೋಹಾ,(ದಿವಂಗತ ಕೆ.ಆರ್ ನಾಯ್ಕ) ನವೀನ ನಾಯ್ಕ,ಗಣಪತಿ ಗೌಡ,ಅರವಿಂದ ಹೆಬ್ಬಾರ್, ದಿನೇಶ ನಾಯ್ಕ, ದಾಮೋದರ ಶೆಟ್ಟಿ,ಸಹಶಿಕ್ಷಕರಾದ ರಾಮ ಗೌಡ, ಶಾಲೆಯ ಶಿಕ್ಷಕರಾದ ನಾಗರಾಜ ಆಚಾರಿ, ಮಹೇಶ ಭಟ್ ಇದ್ದರು. ಉಪಸ್ಥಿತರಿದ್ದರು.

ಕಿರವತ್ತಿ ಐಕ್ಯತಾ ಸಂಘಟನೆಯಿಂದ  ಧ್ವಜಾರೋಹಣ

 ಯಲ್ಲಾಪುರ: ತಾಲೂಕಿನ ಕಿರವತ್ತಿಯಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಐಕ್ಯತಾ ಸಂಘಟನೆ ಸಂಭ್ರಮದಿಂದ ಆಚರಿಸಿತು. ಸಂಘಟನೆಯ ಪ್ರಮುಖರಾದ ಮಹೇಶ್ ಪೂಜಾರ್ ಅವರು ಧ್ವಜಾರೋಹಣ ನೆರವೇರಿಸಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸಿದರು. 
   ಈ ಸಂದರ್ಭದಲ್ಲಿ ಮಹೇಶ ದಿಂಡವಾಡ್, ಬಸವರಾಜ ಹರಿಜನ್, ದತ್ತು ಹೇಂದ್ರೆ, ರಬ್ಬಾನಿ ಪಟೇಲ್, ಹರೂನ್ ಶೇಖ್, ಅಂತೋನ್ ಕೊಂಗನವರ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಕಂಪ್ಲಿ ಗ್ರಾಮ ಪಂಚಾಯತಿಯಲ್ಲಿ ಧ್ವಜಾರೋಹಣ
ಯಲ್ಲಾಪುರ : ಕಂಪ್ಲಿ ಗ್ರಾಮ ಪಂಚಾಯತಿಯಲ್ಲಿ  ಪಂಚಾಯತಿ ಅಧ್ಯಕ್ಷೆ ರೇಣುಕಾ ಭೋವಿವಡ್ಡರ 78ನೇ ಸ್ವತಂತ್ರೋತ್ಸವದ ಧ್ವಜಾರೋಹಣ ಮಾಡಿದರು.
   ಈ ಸಂದರ್ಭದಲ್ಲಿ ಪಂಚಾಯಿತಿ ಸದಸ್ಯರು ಸಿಬ್ಬಂದಿಗಳು ಶಿಬಿರ ಶಾಲಾ ಕಾಲೇಜು ವಿದ್ಯಾರ್ಥಿಗಳು ಊರ ನಾಗರಿಕರು ವಿವಿಧ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.

 ಮಂಚಿಕೇರಿ ಕೆನರಾ ಬ್ಯಾಂಕನಲ್ಲಿ‌ ದ್ವಜಾರೋಹಣ 

ಯಲ್ಲಾಪುರ : ಮಂಚಿಕೇರಿ ಕೆನರಾ ಬ್ಯಾಂಕ್ ನಲ್ಲಿ ಪಂಚಾಯಿತಿ ಸದಸ್ಯ ಗಣೇಶ್ ರೋಕಡೆ 78ನೇ ಸ್ವತಂತ್ರೋತ್ಸವದ ಧ್ವಜಾರೋಹಣವನ್ನು ಮಾಡಿದರು. 
   ಈ ಸಂದರ್ಭದಲ್ಲಿ ಬ್ಯಾಂಕಿನ ವ್ಯವಸ್ಥಾಪಕರು ಸಿಬ್ಬಂದಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.

ಕುಂದೂರು ಶಾಲೆಯಲ್ಲಿ ಎಂ ಕೆ ಭಟ್ ಧ್ವಜಾರೋಹಣ
ಯಲ್ಲಾಪುರ : ಯಡಳ್ಳಿ ಕುಂದೂರು ಶಾಲೆಯಲ್ಲಿ ಪಂಚಾಯಿತಿ ಸದಸ್ಯ ಹಾಗೂ ರಂಗಕರ್ಮಿ ಎಂ ಕೆ ಭಟ್ ಯಡಳ್ಳಿ  ಧ್ವಜಾರೋಹಣ ಮಾಡಿದರು.
    ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರು, ಸಹಶಿಕ್ಷಕರು, ಗ್ರಾಮಸ್ಥರು, ಮಕ್ಕಳ ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಐವತ್ತು ವರ್ಷಗಳ ಸೇವೆ - ಹಿರಿಯ ನ್ಯಾಯವಾದಿ ಎನ್. ಆರ್. ಭಟ್ ಕೊಡ್ಲಗದ್ದೆ ಸನ್ಮಾನ

ಯಲ್ಲಾಪುರ: ಯಲ್ಲಾಪುರ ನ್ಯಾಯಾಲಯದಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಹಿರಿಯ ಸಿವಿಲ್ ನ್ಯಾಯಾಧೀಶ ಜಿ.ಬಿ. ಹಳ್ಳಾಕಾಯಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಯಲ್ಲಾಪುರ ವಕೀಲರ ಸಂಘದ ವತಿಯಿಂದ 50 ವರ್ಷಗಳಿಂದ ವಕೀಲಿ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ನ್ಯಾಯವಾದಿ ಎನ್. ಆರ್. ಭಟ್ ಕೊಡ್ಲಗದ್ದೆ ಇವರನ್ನು ಸನ್ಮಾನಿಸಲಾಯಿತು.
  ಹಿರಿಯ ಸಿವಿಲ್ ನ್ಯಾಯಾಧೀಶ ಜಿ.ಬಿ. ಹಳ್ಳಾಕಾಯಿ ಮಾತನಾಡಿ, ನ್ಯಾಯಾಲಯದಲ್ಲಿ ಹಿರಿಯ ಮತ್ತು ನುರಿತ ಅನುಭವವುಳ್ಳ ನ್ಯಾಯವಾದಿಗಳ ಅವಶ್ಯಕತೆ ಇದ್ದು, ಇದರಿಂದ ಕಿರಿಯ ವಕೀಲರಿಗೆ ವೃತ್ತಿಗೆ ಸಂಬಂಧಪಟ್ಟ ಮಾರ್ಗದರ್ಶನ ಸಿಗುತ್ತದೆ ಎಂದು  ಅಭಿಪ್ರಾಯಪಟ್ಟರು.
   ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ವಕೀಲ ಎನ್. ಆರ್. ಭಟ್ ಕೊಡ್ಲಗದ್ದೆ ಮಾತನಾಡಿ, ವಕೀಲರಾದವರು ವೃತ್ತಿಯಲ್ಲಿ ತಮ್ಮನ್ನು ಸರಿಯಾದ ರೀತಿಯಲ್ಲಿ ತೊಡಗಿಸಿಕೊಂಡು ನಿರಂತರ ಅಧ್ಯಯನ ಮಾಡಿ ಕಾನೂನಿನ ಜ್ಞಾನವನ್ನು ಹೊಂದಿರಬೇಕು. ನಮ್ಮನ್ನು ನಂಬಿ ನ್ಯಾಯ ಬಯಸಿ ಬರುವ ಪಕ್ಷಗಾರರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸಂಪೂರ್ಣ ಜವಾಬ್ದಾರಿ ಹೊಂದಿರಬೇಕು. ಆ ಮೂಲಕ ವೃತ್ತಿಯ ಘನತೆಯನ್ನು ಕಾಪಾಡಬೇಕು ಎಂದು ಕಿವಿಮಾತು ಹೇಳಿದರು.
  ತಾನು ಇಂದಿಗೆ ವಕೀಲಿ ವೃತ್ತಿಯಲ್ಲಿ 50 ವರ್ಷಗಳನ್ನು ಪೂರೈಸಿದ್ದೇನೆ. ಈ ಸುದೀರ್ಘ ವೃತ್ತಿ ಜೀವನದಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಕಕ್ಷಿದಾರರಿಗೆ ನ್ಯಾಯ ದೊರಕಿಸಿದ್ದೇನೆ ಎನ್ನುವ ಸಮಾಧಾನ ತನಗಿದೆ ಎಂದು ತಿಳಿಸಿದರು. 
 ಹಿರಿಯ ನ್ಯಾಯವಾದಿಗಳಾದ ಜಿ.ಎಸ್. ಭಟ್ ಹಳವಳ್ಳಿ, ಎನ್. ಟಿ. ಗಾಂವ್ಕರ್, ಆರ್. ಕೆ. ಭಟ್, ಡಿ. ಕೆ. ಭಟ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
   ವಕೀಲರಾದ ವಿ.ಪಿ. ಭಟ್ ಕಣ್ಣಿಮನೆ, ಅಧ್ಯಕ್ಷೆ ಸರಸ್ವತಿ ಭಟ್, ಕಾರ್ಯದರ್ಶಿ ಜಿ.ಜಿ. ಪಾಠಣಕರ್, ಎನ್.ಕೆ. ಭಾಗ್ವತ್, ಆರ್.ಕೆ. ಭಟ್, ಬೀಬೀ ಅಮೀನಾ ಶೇಖ ಸೇರಿ ಎನ್.ಆರ್.ಭಟ್ ಅವರನ್ನು ಸನ್ಮಾನಿಸಿದರು.
   ವಕೀಲರಾದ ಕೆ.ಎನ್. ಹೆಗಡೆ, ಜಿ. ಎಸ್. ಭಟ್ ಕಣ್ಣಿಮನೆ, ಪಿ. ಜಿ. ಭಟ್, ವಿ.ಟಿ. ಭಟ್, ಪಿ.ಜಿ. ಭಟ್, ಶುಭಾಸ ಭಟ್, ಗಣೇಶ್ ಭಟ್, ವಿ.ಎನ್. ನಾಯ್ಕ, ಜೆ.ಪಿ. ನಾಯ್ಕ, ಮಹೇಶ್ ನಾಯ್ಕ, ಜಿ.ವಿ. ಭಾಗ್ವತ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
   ವಕೀಲ ತೇಜಸ್ವಿ ಹೆಗಡೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಪ್ಯಾನಲ್ ವಕೀಲೆ ಬೀಬೀ ಅಮೀನಾ ಶೇಖ ಇವರ ಭಕ್ತಿಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ವಕೀಲರ ಸಂಘದ ಅಧ್ಯಕ್ಷೆ ಸರಸ್ವತಿ ಭಟ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಹೆಸ್ಕಾಂ ಸಿಬ್ಬಂದಿಗಳಿಗೆ ದ್ವಿಚಕ್ರ ವಾಹನಗಳ ತಂತ್ರಜ್ಞರ ಬಳಗದಿಂದ ಸನ್ಮಾನ /ಮದರ್ ತೆರೇಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ / ವಿಶ್ವದರ್ಶನದಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ / ವಜ್ರಳ್ಳಿ ಬಸ್ ನಿಲ್ದಾಣದಲ್ಲಿ ಜೋತು ಬಿದ್ದ ವಿದ್ಯುತ್ ಫಲಕ: ಸ್ಥಳಾಂತರಕ್ಕೆ ಆಗ್ರಹ / ಸ್ವಾತಂತ್ರ್ಯೋತ್ಸವ: ಸಿಹಿ ಹಂಚಿ ಸಂಭ್ರಮಿಸಿದ ಆಟೋ, ಗೂಡ್ಸ್ ಲಾರಿ, ಟ್ಯಾಕ್ಸಿ ವಾಹನ ಚಾಲಕರು


ಸ್ವಾತಂತ್ರ್ಯೋತ್ಸವ: ಸಿಹಿ ಹಂಚಿ ಸಂಭ್ರಮಿಸಿದ ಆಟೋ, ಗೂಡ್ಸ್ ಲಾರಿ, ಟ್ಯಾಕ್ಸಿ ವಾಹನ ಚಾಲಕರು

ಯಲ್ಲಾಪುರ: ತಾಲೂಕಿನಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿತ್ತು. ತಾಲೂಕ ಕ್ರೀಡಾಂಗಣದಲ್ಲಿ ಆಟೋ ಚಾಲಕರ ಸಂಘ, ಗೂಡ್ಸ್ ರಿಕ್ಷಾ ಚಾಲಕರ ಸಂಘ, ಲಾರಿ ಚಾಲಕರ ಸಂಘ ಹಾಗೂ ಟ್ಯಾಕ್ಸಿ ಚಾಲಕರ ಸಂಘದ ವತಿಯಿಂದ ಸಿಹಿ ಹಂಚಿ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
 ಈ ಸಂದರ್ಭದಲ್ಲಿ ಮಾತನಾಡಿದ ಸಂಘಗಳ ಅಧ್ಯಕ್ಷರಾದ ಸಂತೋಷ್ ನಾಯ್ಕ, "ಸ್ವಾತಂತ್ರ್ಯ ಎಂಬುದು ನಮಗೆಲ್ಲರಿಗೂ ಹಬ್ಬ. ನಮ್ಮ ಹಿರಿಯರು ಮಾಡಿದ ತ್ಯಾಗದ ಪರಿಣಾಮವಾಗಿ ನಾವು ಇಂದು ಸ್ವತಂತ್ರ ಭಾರತದಲ್ಲಿ ಬದುಕು ಸಾಗಿಸುತ್ತಿದ್ದೇವೆ. ಭಾರತ ಇಂದು ವಿಶ್ವದ ಯಾವುದೇ ಪ್ರಗತಿಪರ ದೇಶಕ್ಕೆ ಕಡಿಮೆ ಇಲ್ಲದಂತೆ ಅಭಿವೃದ್ಧಿ ಸಾಧಿಸುತ್ತಿದೆ. ಈ ಪ್ರಗತಿಯ ಹಿಂದೆ ಸೈನಿಕರು, ರೈತರು, ಕಾರ್ಮಿಕರು ಸೇರಿದಂತೆ ಹಲವಾರು ಜನರ ಸ್ವಾತಂತ್ರ್ಯ ಹೋರಾಟದ ಸೇವಾ ಮನೋಭಾವ ಕಾರಣವಾಗಿದೆ. ಇಂತಹ ಸುಸಂದರ್ಭದಲ್ಲಿ ನಾವು ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಸಿಹಿ ಹಂಚಿ ಸಂಭ್ರಮಿಸುತ್ತಿದ್ದೇವೆ" ಎಂದು ತಿಳಿಸಿದರು.
   ಈ ಸಂದರ್ಭದಲ್ಲಿ ಆಟೋ, ಗೂಡ್ಸ್ ರಿಕ್ಷಾ, ಲಾರಿ ಮತ್ತು ಟ್ಯಾಕ್ಸಿ ಚಾಲಕರ ಸಂಘದ ಸದಸ್ಯರು ಉಪಸ್ಥಿತರಿದ್ದು, ಸುಮಾರು 60 ಕೆ.ಜಿ ಗೂ ಅಧಿಕ ಸಿಹಿಯನ್ನು ಹಂಚಲಾಯಿತು.

ಹೆಸ್ಕಾಂ ಸಿಬ್ಬಂದಿಗಳಿಗೆ ದ್ವಿಚಕ್ರ ವಾಹನಗಳ ತಂತ್ರಜ್ಞರ ಬಳಗದಿಂದ ಸನ್ಮಾನ 
ಯಲ್ಲಾಪುರ :  ಹೆಸ್ಕಾಂ ಉಪ ವಿಭಾಗದಲ್ಲಿ ನಡೆದ 78 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಯಲ್ಲಾಪುರದ ದ್ವಿಚಕ್ರ ವಾಹನಗಳ ತಂತ್ರಜ್ಞರ ಬಳಗದವರು ತಾಲೂಕಿನ ವಿದ್ಯುತ್ ನಿಗಮದ ಸಿಬ್ಬಂದಿಗಳಿಗೆ ಸನ್ಮಾನಿಸಿ ಗೌರವಿಸಿದರು.
    ಈ ವರ್ಷದ ವಿಪರೀತ ಮಳೆಯ ನಡುವೆಯೂ ಜೀವದ ಹಂಗು ತೊರೆದು ಜನಸಾಮಾನ್ಯರಿಗಾಗಿ ಹೆಸ್ಕಾಂ ಸಿಬ್ಬಂದಿಗಳು ಮಾಡಿದ ಸೇವೆಯನ್ನು ಪರಿಗಣಿಸಿ ಗೌರವ ಸಮರ್ಪಣೆ  ಮತ್ತು ಸನ್ಮಾನ ಮಾಡಿ ಅವರನ್ನು ಪ್ರೋತ್ಸಾಹಿಸಲಾಯಿತು.
  ಹೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ರಮಾಕಾಂತ‌ ನಾಯ್ಕ ಹಾಗೂ ವಿವಿಧ ಸ್ಥರದ ಅಧಿಕಾರಿಗಳು, ಯಲ್ಲಾಪುರದ ದ್ವಿಚಕ್ರ ವಾಹನಗಳ ತಂತ್ರಜ್ಞರ ಬಳಗದ(ಕೆಟಿಡಬ್ಲೂ‌ಓಟಿಎ)ದ ಗ್ಯಾರೇಜ್ ಮೂರ್ತಿ, ಮಧುಕೇಶವ ಭಾಗ್ವತ, ದೀಪಕ್ ಮರಾಠಿ, ಶ್ರೀಪತಿ ಭಟ್, ಚಕ್ರ ವಿನಾಯಕ, ಗಿರೀಶ್ ಮರಾಠಿ, ಪ್ರಶಾಂತ, ಗ್ಯಾರೇಜ್ ರಾಘು ಹಾಗೂ ಮನೋಜ್ ಬಿಷ್ಣೋಯಿ ಇದ್ದರು.
  ಸುಮಾರು 60ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.

ವಜ್ರಳ್ಳಿ ಬಸ್ ನಿಲ್ದಾಣದಲ್ಲಿ ಜೋತು ಬಿದ್ದ ವಿದ್ಯುತ್ ಫಲಕ: ಸ್ಥಳಾಂತರಕ್ಕೆ ಆಗ್ರಹ
ಯಲ್ಲಾಪುರ: ತಾಲೂಕಿನ ವಜ್ರಳ್ಳಿ ಬಸ್ ನಿಲ್ದಾಣದ ಸಮೀಪದ ವಿದ್ಯುತ್ ಕಂಬಕ್ಕೆ ಜೋತು ಬಿದ್ದಿರುವ ಬೀದಿ ದೀಪದ ಮರದ ಫಲಕ ಅಪಾಯದ ಮುನ್ಸೂಚನೆ ನೀಡುತ್ತಿದೆ. ಅನೇಕ ವರ್ಷಗಳಿಂದ ಬಸ್ ನಿಲ್ದಾಣದೊಳಗೆ ಪ್ರಯಾಣಿಕರು ಸಾಗುವ ದಾರಿಯಲ್ಲಿ ಜೋತು ಬಿದ್ದಿರುವ ಈ ಫಲಕ ತಕ್ಷಣ ಸ್ಥಳಾಂತರಿಸುವ ಅಗತ್ಯವಿದೆ.
   ಆಕಸ್ಮಿಕವಾಗಿ ಯಾರಿಗಾದರೂ ಈ ಮರದ ಪೆಟ್ಟಿಗೆಯ ಸುತ್ತ ಜೋತು ಬಿದ್ದಿರುವ ವಿದ್ಯುತ್ ತಂತಿ ತಗುಲಿದರೆ ಜೀವಕ್ಕೆ ಅಪಾಯವಿದೆ. ಪ್ರತಿನಿತ್ಯ ಶಾಲಾ ಮಕ್ಕಳು, ಮಹಿಳೆಯರು, ಸಾರ್ವಜನಿಕರು ಓಡಾಡಲು ಬಸ್ ತಂಗುದಾಣ ಆಶ್ರಯಿಸುತ್ತಾರೆ. ಈ ಅಪಾಯದ ಬಗ್ಗೆ ಅವರಿಗೆ ಅರಿವಿಲ್ಲದೆ ಅನಾಹುತ ಸಂಭವಿಸುವ ಸಾಧ್ಯತೆ ಇದೆ.
   ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಈ ಕುರಿತು ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರ ಗಮನಕ್ಕೆ ತಂದು ಸಾರ್ವಜನಿಕ ಮನವಿ ನೀಡಲಾಗಿದೆ. "ಹೆಸ್ಕಾಂ ಅಧಿಕಾರಿಗಳು ತಕ್ಷಣ ಈ ಕುರಿತು ಕ್ರಮ ಕೈಗೊಂಡು ಮುಂದಾಗುವ ಅನಾಹುತಗಳನ್ನು ತಪ್ಪಿಸಬೇಕು" ಎಂದು ಸ್ಥಳೀಯರೊಂದಿಗೆ ರಾಜೇಶ್ ಸೈರು ನಾಯ್ಕ ಮನವಿ ಮಾಡಿದ್ದಾರೆ.

ಮದರ್ ತೆರೇಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ
ಯಲ್ಲಾಪುರ : ಪಟ್ಟಣದ ಮದರ್ ತೆರೇಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಗಸ್ಟ್ 15 ರಂದು ಸಂಭ್ರಮದಿಂದ ಆಚರಿಸಲಾಯಿತು. ಫಾದರ್ ಪೀಟರ್ ಕನೇರಿಯೋ ದ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯದ ಮಹತ್ವವನ್ನು ಕುರಿತು ಸ್ಪೂರ್ತಿದಾಯಕ ಭಾಷಣ ಮಾಡಿದರು.
   ಶಾಲಾ ಮುಖ್ಯೋಪಾಧ್ಯಾಯರಾದ ಫಾದರ್ ರೊಯ್ಯಸ್ಟನ ಗೊನ್ಸಾಲ್ವಿಸ್ ಮತ್ತು ಸಿಸ್ಟರ್ ರೋಜಾರವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಉನ್ನತಿ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳನ್ನು ಸ್ಮರಿಸಿದರು.
   ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ, ರಾಷ್ಟ್ರಭಕ್ತಿಯ ಗೀತೆಗಳನ್ನು ಹಾಡುವ ಮೂಲಕ ದೇಶಭಕ್ತಿಯನ್ನು ಮೆರೆದರು.

ವಿಶ್ವದರ್ಶನದಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ
ಯಲ್ಲಾಪುರ: ಪಟ್ಟಣದ ವಿಶ್ವದರ್ಶನ ಕೇಂದ್ರೀಯ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಹರಿಪ್ರಕಾಶ್ ಕೋಣೆಮನೆಯವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
  ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಯೋಧ ಪ್ರಭಾಕರ ನಾಯ್ಕ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. 
   ಶಿಕ್ಷಕಿ ಪ್ರೇಮಾ ಗಾಂವ್ಕರ್ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಮಾಧ್ಯಮ ಪ್ರೌಢಶಾಲೆಯ ಪ್ರಾಂಶುಪಾಲರಾದ ಮುಕ್ತಾ ಶಂಕರ್ ಸ್ವಾಗತಿಸಿದರು, ದೈಹಿಕ ಶಿಕ್ಷಣ ಶಿಕ್ಷಕರಾದ ಮಹೇಶ್ ನಾಯ್ಕ ವಂದಿಸಿದರು.
   ಸಂಸ್ಥೆಯ ಎಲ್ಲಾ ವಿಭಾಗದ ಮುಖ್ಯಸ್ಥರು, ಉಪನ್ಯಾಸಕ ವರ್ಗ, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಮತ್ತು ಪಾಲಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಜಿಎಫ್‌ಜಿಸಿ ಕಾಲೇಜಿನಲ್ಲಿ 78ನೇ ಸ್ವಾತಂತ್ರೋತ್ಸವ: ಗಾಂಧಿ-ಅಂಬೇಡ್ಕರ್ ಕನಸು ನನಸಾಗಿಸುವ ಕರ್ತವ್ಯ : ಶಾಸಕ ಶಿವರಾಮ ಹೆಬ್ಬಾರ್

ಯಲ್ಲಾಪುರ : ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 78ನೇ ಸ್ವಾತಂತ್ರೋತ್ಸವ ದಿನದಂದು ಹಮ್ಮಿಕೊಂಡ ದ್ವಜಾರೋಹಣ ಸಮಾರಂಭದಲ್ಲಿ, ಶಾಸಕರು ಹಾಗೂಬಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಿವರಾಮ ಹೆಬ್ಬಾರ್ ಅವರು ದ್ವಜಾರೋಹಣ ನೆರವೇರಿಸಿದರು. 
  ನಂತರ ಮಾತನಾಡಿದ ಅವರು, “ಸ್ವಾತಂತ್ರ್ಯ ಪಡೆಯುವ ಹೋರಾಟದ ಹಿಂದೆ ಮಹಾತ್ಮ ಗಾಂಧಿ ಮತ್ತು ಇತರ ಹೋರಾಟಗಾರರ ತ್ಯಾಗವನ್ನು ನಾವು ಎಂದಿಗೂ ಮರೆಯುವಂತಿಲ್ಲ. ಇಂದು ನಾವು ಅನುಭವಿಸುತ್ತಿರುವ ಈ ಸ್ವಾತಂತ್ರ್ಯದ ಫಲ, ಸ್ವತಂತ್ರ ಹೋರಾಟದ ಪರಿಣಾಮ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರೇ ವಿನ್ಯಾಸಗೊಳಿಸಿದ ಸಂವಿಧಾನದ ಮೂಲಕವೇ ಸಾಧ್ಯವಾಗಿದೆ” ಸ್ವತಂತ್ರ ಭಾರತದ 78 ವರ್ಷಗಳ ದೀರ್ಘಯಾನವು ಜಾಗತಿಕ ಮಟ್ಟದಲ್ಲಿ ಭಾರತದ ಹೆಮ್ಮೆ ಹೆಚ್ಚಿಸುತ್ತಿದೆ. ಸ್ವತಂತ್ರ ಹೋರಾಟಗಾರರ ಕನಸು ಕೇವಲ ಸ್ವಾತಂತ್ರ್ಯ ಕೊಡಿಸುವುದಷ್ಟೆ ಅಲ್ಲ, ಭಾರತೀಯರು ಜಗತ್ತಿನ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಎಲ್ಲ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿರಬೇಕು ಎಂದು ಅವರು ಬಯಸಿದ್ದರು.
ಆ ಕನಸು ನನಸಾಗಿಸಲು ಪ್ರತಿಯೊಬ್ಬರಿಗೂ ತಮ್ಮ ಕರ್ತವ್ಯ ನಿರ್ವಹಿಸುವುದು ಅವಶ್ಯವಾಗಿದೆ." ಎಂದ ಅವರು, ದೇಶದ ಸೈನಿಕರ ತ್ಯಾಗವನ್ನು ಸ್ಮರಿಸಿದರು."ನಮ್ಮ ದೇಶದ ಸರ್ವಾಂಗೀಣ ಭದ್ರತೆ ಮತ್ತು ಏಕತೆಗಾಗಿ ನಮ್ಮ ಸೈನಿಕರು ಮಾಡಿರುವ ತ್ಯಾಗ ನಮಗೆ ಮಾದರಿಯಾಗಿದೆ. ದೇಶವು ಗಟ್ಟಿಯಾಗಿದ್ದರೆ, ನಾವೆಲ್ಲರೂ ಗಟ್ಟಿಯಾಗಿರುತ್ತೇವೆ. ಸ್ವತಂತ್ರ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳು ಇಂದು ಭಾರತವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಮಾಡಿದ್ದು, ಅದನ್ನು ಕಾಪಾಡುವುದು ನಮ್ಮೆಲ್ಲರ ಹೊಣೆ" ಈ ದೇಶ ಈ ನೆಲ ಈ ಜಲ ಎಲ್ಲವೂ ನಿಮ್ಮದು ನಿಮ್ಮ ಹಕ್ಕು ಅದರ ಬಗ್ಗೆ ಪ್ರೀತಿ ಹಾಗೂ ಅಭಿಮಾನ ಬೆಳೆಸಿಕೊಳ್ಳಿ ಎಂದು ಕರೆ ನೀಡಿ, 78ನೇ ಸ್ವತಂತ್ರೋತ್ಸವದ ಶುಭಾಶಯ ಕೋರಿದರು.
   ಕಾರ್ಯಕ್ರಮದ  ಅಧ್ಯಕ್ಷತೆಯನ್ನು ಪ್ರಾಂಶುಪಾಲ ಆರ್.ಡಿ. ಜನಾರ್ದನ ವಹಿಸಿದ್ದರು.
   ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯರುಗಳಾದ ಉಲ್ಲಾಸ್ ಶಾನಭಾಗ, ರಾಜೇಂದ್ರ ಬದ್ಧಿ, ಎಸ್.ಕೆ. ಹೆಗಡೆ, ಗೋಪಾಲಕೃಷ್ಣ ನೇತ್ರೆಕರ್, ಉಪಸ್ಥಿತರಿದ್ದರು. ಪತ್ರಕರ್ತರಾದ ಶಂಕರ ಭಟ್ಟ ತಾರೀಮಕ್ಕಿ, ನಾಗರಾಜ ಮದ್ಗುಣಿ, ಜಗದೀಶ ನಾಯಕ, ಶಾಸಕರ ಆಪ್ತ ಕಾರ್ಯದರ್ಶಿ ಕಮಲಾಕರ ನಾಯ್ಕ, ಆಪ್ತ ಸಹಾಯಕ ನಾಗರಾಜ ನಾಯ್ಕ, ಸಾಮಾಜಿಕ ಕಾರ್ಯಕರ್ತ ಡಾ. ರವಿ ಭಟ್ಟ ಬರಗದ್ದೆ, ಹಿರಿಯ ಮತ್ತು ಕಿರಿಯ ಉಪನ್ಯಾಸಕರು, ಬೋದಕೇತರ ಸಿಬ್ಬಂದಿಗಳು, ಕಾಲೇಜಿನ ವಿದ್ಯಾರ್ಥಿಗಳು ಮತ್ತು ಐಟಿಐ ಸಂಸ್ಥೆಯ ವಿದ್ಯಾರ್ಥಿಗಳು ಇದ್ದರು. 
   ಕಾರ್ಯಕ್ರಮವು ವೇದಾ ಭಟ್ಟ ಪ್ರಾರ್ಥನೆ ಮುಖಾಂತರ ಪ್ರಾರಂಭವಾಯಿತು. ಪ್ರಾಂಶುಪಾಲ ಆರ್.ಡಿ. ಜನಾರ್ದನ ಸ್ವಾಗತಿಸಿದರು. ವಿದ್ಯಾರ್ಥಿ ದಿನೇಶ ಗೌಡ ನಿರೂಪಿಸಿದರು. ಕೊನೆಗೆ, ವಿದ್ಯಾರ್ಥಿನಿ ಗೀತಾ ವಂದಿಸಿದರು.

78ನೇ ಸ್ವಾತಂತ್ರ್ಯೋತ್ಸವ: ಯಲ್ಲಾಪುರ ತಾಲೂಕಿನಲ್ಲಿ ಸಂಭ್ರಮದ ಆಚರಣೆ

ಯಲ್ಲಾಪುರ : ತಾಲೂಕಾ ಆಡಳಿತ, ತಾಲೂಕಾ ಪಂಚಾಯತ, ಪಟ್ಟಣ ಪಂಚಾಯತ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಕಾಳಮ್ಮನಗರ ತಾಲೂಕಾ ಕ್ರೀಡಾಂಗಣದಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
    ತಹಶೀಲ್ದಾರ ಅಶೋಕ ಭಟ್ ದ್ವಜಾರೋಹಣ ನೆರವೇರಿಸಿ ಮಾತನಾಡಿ, "ಇಂದು ನಾವು ಭಾರತ ದೇಶದ ಸ್ವಾತಂತ್ರ್ಯ ಪಡೆದ ದಿನವನ್ನು ಆಚರಿಸುತ್ತಿದ್ದೇವೆ. ಈ ದಿನ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ನಾಯಕರ ಯಶಸ್ಸನ್ನು ಗೌರವಿಸುವ ದಿನವಾಗಿದೆ. ಮಹಾತ್ಮ ಗಾಂಧೀಜಿ, ಸುಭಾಷ ಚಂದ್ರ ಭೋಸ್, ಭಗತ್ ಸಿಂಗ್, ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಮತ್ತು ಇನ್ನಿತರ ಅನೇಕ ಹೋರಾಟಗಾರರು ತ್ಯಾಗ ಮತ್ತು ಬಲಿದಾನಗಳನ್ನು ಮಾಡಿ ನಮಗೆ ಸ್ವಾತಂತ್ರ್ಯವನ್ನು ತಂದುಕೊಟ್ಟರು.‌ಈ ದಿನ ನಾವು ನಮ್ಮ ಸಂವಿಧಾನದ ಮೌಲ್ಯಗಳಾದ ಪ್ರಜಾಪ್ರಭುತ್ವ, ಜಾತ್ಯಾತೀತತೆ ಮತ್ತು ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಬೇಕು. ಭಾರತ ಇಂದು ಕೃಷಿ, ಶಿಕ್ಷಣ, ಆರೋಗ್ಯ, ಮಿಲಿಟರಿ, ಕ್ರೀಡೆ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದೆ. ಆದರೆ ನಾವು ಇನ್ನೂ ಬಡತನ, ಅನಕ್ಷರತೆ, ಲಿಂಗ ಅಸಮಾನತೆ, ಪರಿಸರದ ಅವನತಿ, ವಾಯು ಮಾಲಿನ್ಯ ಮುಂತಾದ ಸವಾಲುಗಳನ್ನು ಎದುರಿಸಬೇಕಿದೆ" ಎಂದರು
   "ನಮ್ಮ ಸರಕಾರಗಳು ದೀನ ದಲಿತರ ಕಲ್ಯಾಣ, ಮಕ್ಕಳ ಶಿಕ್ಷಣ, ಆರೋಗ್ಯ, ರೈತರು, ಕೂಲಿಕಾರರು ಮತ್ತು ಮಹಿಳಾ ಸಬಲೀಕರಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಈ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಯಲ್ಲಾಪುರ ತಾಲೂಕು ಜಲಪಾತಗಳ ತವರೂರು, ಸಹ್ಯಾದ್ರಿ ಶೃಂಗದಲ್ಲಿ ಬದುಕುತ್ತಿರುವ ನಾವೆಲ್ಲ ಭಾಗ್ಯವಂತರು. ಈ ತಾಲೂಕು ಅನೇಕ ಸ್ವಾತಂತ್ರ್ಯ ಹೋರಾಟಗಾರರಿಗೆ, ಅಭಿವೃದ್ಧಿಯ ಚಿಂತಕರಿಗೆ, ಯೋಧರಿಗೆ, ಸಾಧಕರಿಗೆ, ತಂತ್ರಜ್ಞರಿಗೆ ಜನ್ಮ ನೀಡಿದೆ. ಈ ಮಣ್ಣಿಗೆ ಅಪಾರವಾದ ಶಕ್ತಿ ಮತ್ತು ಆತ್ಮಾಭಿಮಾನ ಇದೆ. ಈ ಮಣ್ಣನ್ನು ಹಿಡಿದು ನಾವೆಲ್ಲ ಸುಭದ್ರ ದೇಶ ಕಟ್ಟುವ ಸಂಕಲ್ಪ ಮಾಡೋಣ" ಎಂದು ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದರು. 
   ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಶಿವರಾಮ ಹೆಬ್ಬಾರ್, "ಸಾವಿರಾರು ಹೋರಾಟಗಾರರ ಪುಣ್ಯಾತ್ಮರ ಹೊರಾಟ ಬಲಿದಾನದ ಫಲವಾಗಿ ನಾವು 78ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮಿಸುತ್ತಿದ್ದೇವೆ. ಅಹಿಂಸಾತ್ಮಕ ಹೋರಾಟದ ಮೂಲಕ ಸ್ವತಂತ್ರ ಅನುಭವಿಸುತ್ತಿದ್ದೆವೆ. ಆದರೆ ದೇಶದಲ್ಲಿ ಇನ್ನೂ ಸವಾಲುಗಳು ಇವೆ. ದೇಶದ ಪ್ರಗತಿಗಾಗಿ ನಾವು ನಮ್ಮ ಸರ್ಕಾರದೊಂದಿಗೆ ಕೈಜೋಡಿಸಿ" ಎಂದು ಸ್ವತಂತ್ರೋತ್ಸವದ ಶುಭಾಶಯ ಕೋರಿದರು. 
  ಪೊಲೀಸ್ ಇಲಾಖೆ, ಗೃಹರಕ್ಷಕ ದಳ, ಅಗ್ನಿಶಾಮಕ ದಳ, ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾದಳ, ಎನ್‌ಸಿಸಿ, ಎನ್‌ಎಸ್‌ಎಸ್ ಹಾಗೂ ಶಾಲಾ-ಪ್ರೌಢಶಾಲಾ ವಿದ್ಯಾರ್ಥಿಗಳು ರಾಷ್ಟ್ರಧ್ವಜಕ್ಕೆ ಗೌರವ ನಮನ ಸಲ್ಲಿಸಿದರು. 
  ಗ್ರೇಡ್ 2 ತಹಶೀಲ್ದಾರ್ ಸಿ.ಜಿ. ನಾಯ್ಕ, ಪೊಲೀಸ್ ನಿರೀಕ್ಷಕ ರಮೇಶ್ ಹಾನಪುರ್, ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ರಾಜೇಶ್ ಧನವಾಡಕರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುನಿಲ್ ಗಾವಡೆ, ಪಿಡ್ಬ್ಲೂಡಿ ಎಇಇ ಸಂಜಯ, ಪ್ರಮುಖರಾದ ಪ್ರಮೋದ ಹೆಗಡೆ, ಸುನಂದಾ ದಾಸ್, ಎಂ ಆರ್ ಹೆಗಡೆ ಕುಂಬ್ರಿಗುಡ್ಡೆ  ವೇದಿಕೆಯಲ್ಲಿದ್ದರು.
   ಕ್ಷೇತ್ರ ಶಿಕ್ಷಣಾಧಿಕಾರಿ ಎನ್‌.ಆರ್‌. ಹೆಗಡೆ ಸ್ವಾಗತಿಸಿದರು, ಶಿಕ್ಷಕರಾದ ಚಂದ್ರಹಾಸ ನಾಯ್ಕ ಹಾಗೂ ದಿಲೀಪ ದೊಡ್ಮನೆ ನಿರೂಪಿಸಿದರು. ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ತಾರೀಕೊಪ್ಪ ವಂದಿಸಿದರು.

ಹಿರಿಯ ವಿದ್ಯುತ್ ಗುತ್ತಿಗೆದಾರ ಎಂ.ಎಂ. ಶೇಖ ನಿಧನ

ಯಲ್ಲಾಪುರ : ಹಿರಿಯ ವಿದ್ಯುತ್ ಗುತ್ತಿಗೆದಾರ ಮತ್ತು ಸಮಾಜಸೇವಕ ಎಂ.ಎಂ. ಶೇಖ (ಅಬ್ದುಲ್ ಮಜೀದ ಶೇಖ) ಅವರು ಆಗಸ್ಟ್  14ರ ರಾತ್ರಿ 10.30ಕ್ಕೆ ತಮ್ಮ ಸ್ವಗೃಹದಲ್ಲಿ ನಿಧನರಾದರು. ಕಳೆದ ಕೆಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. 15 ಆಗಸ್ಟ್ 2024 ರಂದು ಮಧ್ಯಾಹ್ನದೊಳಗೆ ಯಲ್ಲಾಪುರದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.
   ಎಂ.ಎಂ. ಶೇಖ ಅವರು 1990 ರಿಂದ 2000ರ ದಶಕದಲ್ಲಿ ಯಲ್ಲಾಪುರದ ಪ್ರಮುಖ ವಿದ್ಯುತ್ ಗುತ್ತಿಗೆದಾರರಾಗಿ ಹೆಸರು ಪಡೆದಿದ್ದರು. ಅವರ ಸೇವೆ ಹಾಗೂ ಪ್ರಾಮಾಣಿಕತೆ ಯಲ್ಲಾಪುರದ ಜನತೆಯಲ್ಲಿ ಅಪಾರ ಮೆಚ್ಚುಗೆಗೆ ಪಾತ್ರವಾಯಿತು. ಶೇಖ ಅವರು ಜನರ ನಡುವೆ ಉತ್ತಮ ನಂಟನ್ನು ಬೆಳೆಸಿಕೊಂಡಿದ್ದರು, ಅವರು ಹಣಕ್ಕಿಂತ ಜನರನ್ನು ಹೆಚ್ಚು ಸಂಪಾದಿಸಿದ್ದರು. ಅಂದು ಅವರು ನಡೆಸುತ್ತಿದ್ದ ಚೌಹಾನ್ ಕಾಂಪ್ಲೆಕ್ಸ್ ನ ಮೆಟ್ಟಿಲುಗಳ ಕೆಳಗಿನ ಎಲೆಕ್ಟ್ರಿಕಲ್ ಅಂಗಡಿ ಯಲ್ಲಾಪುರದ ಜನತೆಗೆ ಚಿರಪರಿಚಿತವಾಗಿತ್ತು. 
   ಅಂಗಡಿಯಲ್ಲಿ ವಿವಿಧ ಎಲೆಕ್ಟ್ರಿಕ್ ಪಂಪಸೆಟ್ ಮೋಟಾರ್ ವೈಂಡಿಂಗ್, ಪ್ಯಾನ್, ಗ್ರೈಂಡರ್, ಮಿಕ್ಸರ್, ಹಾಗೂ ಬೋರ್ಡ್ ದುರಸ್ತಿಯನ್ನು ನಿರ್ವಹಿಸುತ್ತಿದ್ದ ಶೇಖ ಅವರು, ಅದರ ಜೊತೆಗೆ ಯಲ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳಿಗೆ ಇಲೆಕ್ಟ್ರಿಕ್ ವೈರಿಂಗ್, ಕಂಬ ಮತ್ತು ಟ್ರಾನ್ಸ್‌ಫಾರ್ಮರ್ ಅಳವಡಿಸುವ ಗುತ್ತಿಗೆ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು. ಅವರ ಶ್ರಮ ಹಾಗೂ ದಕ್ಷತೆ ಅವರಿಗೆ ಹಲವಾರು ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ನಿರ್ವಹಿಸುವ ಅವಕಾಶ ಕಲ್ಪಿಸಿತ್ತು.
   ಎಂ.ಎಂ. ಶೇಖ ಅವರು ಇವರ ಮಾತೃಭಾಷೆ ಉರ್ದು ಆಗಿದ್ದರೂ, ಹವ್ಯಕ ಭಾಷೆಯನ್ನು ಮತ್ತು ಕೊಂಕಣಿ ಭಾಷೆಯನ್ನು ಸಹ ಸರಾಗವಾಗಿ ಮಾತನಾಡುತ್ತಿದ್ದರು. ಅವರ ಭಾಷಾ ಸಾಮರ್ಥ್ಯ ಹಾಗೂ ಸ್ನೇಹಶೀಲತೆಯ ನುಡಿಗಳು ಗ್ರಾಮೀಣ ಭಾಗದ ಜನರಲ್ಲಿ ಅವರ ಮೇಲೆ ನಂಬಿಕೆ ಹುಟ್ಟಿಸುತ್ತಿದ್ದವು. ಭಾಷೆಯಲ್ಲಿನ ಇವರ ಪ್ರತಿಭೆಯ ಕಾರಣ ಅವರು ಅನೇಕ ಗ್ರಾಮೀಣ ಕ್ಷೇತ್ರಗಳಲ್ಲಿ ವಿಶ್ವಾಸಾರ್ಹವಾಗಿ ಕಾರ್ಯನಿರ್ವಹಿಸುತ್ತಿದ್ದರು. ಯಲ್ಲಾಪುರದ ಪ್ರಮುಖ ಗಣೇಶೋತ್ಸವ ಸಮಿತಿಯ ಮುಖ್ಯ ಸದಸ್ಯರಾಗಿ ಪ್ರತಿ ವರ್ಷ ನಡೆಯುವ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿದ್ದು ಕಾರ್ಯ ನಿರ್ವಹಿಸುತ್ತಿದ್ದರು.
   ಶೇಖ ಅವರ ಅನಾರೋಗ್ಯದ ಬಗ್ಗೆ ತಿಳಿದ ಸ್ಥಳೀಯ ಶಾಸಕರಾದ ಶಿವರಾಮ ಹೆಬ್ಬಾರ್ ಕಳೆದ ಸೋಮವಾರ, ಶೇಖ ಅವರ ಮನೆಗೆ ಭೇಟಿ ನೀಡಿ, ಶೇಖ ಅವರ ಆರೋಗ್ಯ ವಿಚಾರಿಸಿ, ಬೇಗನೆ ಗುಣಮುಖರಾಗಲಿ ಎಂಬುದಾಗಿ ಹಾರೈಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ, ಪಟ್ಟಣ ಪಂಚಾಯತ ಸದಸ್ಯ ಸತೀಶ ನಾಯ್ಕ, ಪ್ರಮುಖರಾದ ಗಣಪತಿ ಮುದ್ದೆಪಾಲ, ಶಾಸಕರ ಆಪ್ತ ಸಹಾಯಕರಾದ ಕಮಲಾಕರ ನಾಯ್ಕ, ನಾಗರಾಜ ನಾಯ್ಕ ಮುಂತಾದವರು ಕೂಡ ಅವರೊಂದಿಗೆ ಇದ್ದರು. 
   ಎಂ.ಎಂ. ಶೇಖ ಅವರ ನಿಧನಕ್ಕೆ ಜನಪ್ರತಿನಿಧಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಶಾಸಕ ಶಿವರಾಮ ಹೆಬ್ಬಾರ್ ಅವರು ಶೇಖ ಅವರ ಕುಟುಂಬಕ್ಕೆ ದೂರವಾಣಿ ಮೂಲಕ ಸಂತಾಪ ಸೂಚಿಸಿದ್ದಾರೆ. ಅಲ್ಲದೇ, ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ಹಾಗೂ ಸಂಘದ ಇತರೆ ಸದಸ್ಯರು ಕೂಡ ಶೋಕ ವ್ಯಕ್ತಪಡಿಸಿದ್ದಾರೆ. 
ಎಂ ಎಂ ಶೇಖ ನಿಧನದಿಂದ ಯಲ್ಲಾಪುರದ ಜನತೆ, ವಿದ್ಯುತ್ ಕ್ಷೇತ್ರದ ನಿಪುಣ ಹಾಗೂ ಗಣ್ಯ ವ್ಯಕ್ತಿಯನ್ನಿ‌ಕಳೆದುಕೊಂಡಿದೆ. ಅವರು ಸಮಾಜಕ್ಕೆ ಸಲ್ಲಿಸಿದ ಸೇವೆಗಳು ಮತ್ತು ಸ್ನೇಹಶೀಲತೆಯ ನುಡಿಗಳು ಯಲ್ಲಾಪುರದಲ್ಲಿ ಸದಾ ನೆನಪಿನಲ್ಲಿರುವಂತಾಗಿವೆ.