Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Monday, 12 August 2024

ತ್ರಿವರ್ಣ ದ್ವಜ ಹೋಲುವ ಬಣ್ಣದ ದೀಪಗಳಿಂದ‌ ಸಿಂಗಾರಗೊಂಡ ಆಡಳಿತ ಸೌಧ

ಯಲ್ಲಾಪುರ: 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ, ಯಲ್ಲಾಪುರದ ತಹಶೀಲ್ದಾರ ಕಚೇರಿಯಯನ್ನು ವಿಶಿಷ್ಟವಾಗಿ ಅಲಂಕರಿಸಲಾಗಿದೆ. ಈ ವರ್ಷದ ಸ್ವಾತಂತ್ರ್ಯೋತ್ಸವವನ್ನು ಹೆಚ್ಚುವರಿ ವಿಜೃಂಭಣೆಯೊಂದಿಗೆ ಆಚರಿಸಲು, ಕಚೇರಿಯ ಮುಂಬಾಗವನ್ನು ತ್ರಿವರ್ಣ ಧ್ವಜವನ್ನು ಹೋಲುವ ಕೆಸರಿ ಬಿಳಿ ಹಸಿರು ಬಣ್ಣದ ವಿದ್ಯುತ್ ದೀಪ(ಎಲ್‌ಇಡಿ) ಅಲಂಕರಿಸಲಾಗಿದೆ.  
 ಸ್ವತಂತ್ರೋತ್ಸವ ಉತ್ಸವದ ಅಂಗವಾಗಿ, ಕಚೇರಿ ಸುತ್ತಲೂ ಇರುವ ವಿದ್ಯುತ್ ದೀಪಗಳು ತ್ರಿವರ್ಣ ಧ್ವಜದ ಚಿತ್ರಣವನ್ನು ಪ್ರತಿಬಿಂಬಿಸುತ್ತವೆ.
   ಈ ದೃಶ್ಯ ರಾಷ್ಟ್ರೀಯ ಹೆದ್ದಾರಿ 63ರ ಮೇಲೆ ಸಂಚರಿಸುವ ವಾಹನಗಳ ಪ್ರಯಾಣಿಕರು ಹಾಗೂ ಚಾಲಕರಿಗೆ ರಾತ್ರಿಯ ಸಂದರ್ಭದಲ್ಲಿ ಬಹಳಷ್ಟು ಆಕರ್ಷಿಸುತ್ತಿದೆ. ಕಚೇರಿ ಪ್ರವೇಶದ ಪ್ರದೇಶವನ್ನು ಸಂಭ್ರಮದಿಂದ ತುಂಬಿಸಿದೆ. ಕಚೇರಿಯ ಮುಖ್ಯ ದ್ವಾರ ಇನ್ನಷ್ಟು ಪ್ರಕಾಶಮಾನವಾಗಿ ಪ್ರಜ್ವಲಿಸುತ್ತಿದೆ. 
  ಆತ್ಮಗೌರವ ಮತ್ತು ರಾಷ್ಟ್ರೀಯ ಹಬ್ಬಗಳ ಉಲ್ಲೇಖವನ್ನು ವ್ಯಕ್ತಪಡಿಸಲು ಈ ಆಕರ್ಷಕ ಅಲಂಕಾರದ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳೊಂದಿಗೆ, ಈ ವಿಶೇಷ ಅಲಂಕಾರ ಸುತ್ತಮುತ್ತಲು ಇಡೀ ಹರ್ಷಭರಿತ ಉತ್ಸವದ ಸ್ಪೂರ್ತಿಯಾಗಿ ಪರಿಣಮಿಸಿದೆ.‌

ಯಲ್ಲಾಪುರದಲ್ಲಿ ಸೆ.14ರಂದು ರಾಷ್ಟ್ರೀಯ ಲೋಕ್ ಅದಾಲತ್: ಸಾರ್ವಜನಿಕರಿಗೆ ಮಹತ್ವದ ಮಾಹಿತಿ /ಶ್ರಾವಣ ಸೋಮವಾರದ ವಿಶೇಷ ಪೂಜೆ ಮತ್ತು ಅರಿಶಿನ ಕುಂಕುಮ ಕಾರ್ಯಕ್ರಮ

ಯಲ್ಲಾಪುರ: ದಿನಾಂಕ 14.09.2024 ರಂದು ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ಅದರಂತೆ ಯಲ್ಲಾಪುರ ನ್ಯಾಯಲಯದಲ್ಲಿ ವಿಚಾರಣೆಗೆ ಬಾಕಿ ಇರುವ ಎಲ್ಲಾ ಚೆಕ್ ಬೌನ್ಸ್ ಪ್ರಕರಣಗಳು, ವೈವಾಹಿಕ ಪ್ರಕರಣಗಳು, ಮೋಟಾರು ವಾಹನದ ಅಪಘಾತ ಪರಿಹಾರದ ಪ್ರಕರಣಗಳು, ಭೂ ಸ್ವಾದೀನ ಪ್ರಕರಣಗಳು, ಹಾಗೂ ರಾಜಿ ಆಗುವ ಎಲ್ಲಾ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು, ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲು ಲೋಕ್ ಆದಾಲತ್ ಮೂಲಕ ವೇದಿಕೆಯನ್ನು ಕಲ್ಪಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕ ಕಾನೂನು ಸೇವಾ ಸಮಿತಿ ಯಲ್ಲಾಪುರ ಅಧ್ಯಕ್ಷರಾದ ಜಿ ಬಿ ಹಳ್ಳಾಕಾಯಿ ಹೇಳಿದರು.
   ಅವರು ಸೋಮವಾರ ಸಂಜೆ ನ್ಯಾಯಾಲಯ ಸಭಾ ಭವನದಲ್ಲಿ ಸೆಪ್ಟೆಂಬರ್ 14ರಂದು ನಡೆಯುವ ಲೋಕ ಅದಾಲತ್ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಸಂಬಂಧಪಟ್ಟ ಕಕ್ಷಿದಾರರು ಮತ್ತು ಸಾರ್ವಜನಿಕರು ತಮ್ಮ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಲೋಕ್ ಆದಾಲತ್‌ನಲ್ಲಿ ಬಗೆಹರಿಸಿಕೊಂಡು ತಮ್ಮ ಅಮೂಲ್ಯವಾದ ಹಣ ಮತ್ತು ಸಮಯವನ್ನು ಉಳಿತಾಯ ಮಾಡಿ, ನೆಮ್ಮದಿಯ ಜೀವನ ನಡೆಸುವಂತೆ ಕೋರಿದ ಅವರು ಲೋಕ ಅದಾಲತ್ ಯಶಿಸ್ವಿಗೊಳಿಸುವಂತೆ ಕರೆ ನೀಡಿದರು.
   ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿಗಕಳಾದ ಲಕ್ಷ್ಮೀಬಾಯಿ ಬಸನಗೌಡ ಪಾಟೀಲ ಮಾತನಾಡಿ, ಯಲ್ಲಾಪುರ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿನ ಸಾರ್ವಜನಿಕರು ಸೆ.14ರಂದು ನಡೆಯುವ ರಾಷ್ಟ್ರೀಯ ಲೋಕ್ ಆದಾಲತ್‌ನಲ್ಲಿ ಭಾಗವಹಿಸಿ, ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು, ಲೋಕ್ ಆದಾಲತನ್ನು ಯಶಸ್ವಿಗೊಳಿಸಲು, ಸಾರ್ವಜನಿಕರು ಸದರಿ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೋರಿದರು. 
    ಹೆಚ್ಚಿನ ಮಾಹಿತಿಗಾಗಿ, ತಮ್ಮ ಪರ ನ್ಯಾಯವಾದಿಗಳು ಅಥವಾ ಯಲ್ಲಾಪುರ ನ್ಯಾಯಲಯದ ಸಂಕೀರ್ಣದಲ್ಲಿರುವ ತಾಲೂಕು ಕಾನೂನು ಸೇವಾ ಸಮಿತಿಯನ್ನು ಸಂಪರ್ಕಿಸುವಂತೆ ಸಲಹೆ ನೀಡಿದರು.
   ಸರ್ಕಾರಿ ಸಹಾಯಕ ಅಭಿಯೋಜಕರಾದ ಝೀನತ್ ಬಾನು ಶೇಖ, ವಕೀಲರ ಸಂಘದ ಅಧ್ಯಕ್ಷರಾದ ಸರಸ್ವತಿ ಜಿ ಭಟ್, ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ, ಪಿಎಸ್ಐ ಸಿದ್ದಪ್ಪ ಗುಡಿ, ಡಿಆರ್‌ಎಫ್ಒ ಸಂಜಯಕುಮಾರ್ ಬೋರ್ಗಲ್ಲಿ, ಕಂದಾಯ ಇಲಾಖೆಯ ಶಿವು, ಕಾರ್ಮಿಕ ಇಲಾಖೆಯ ಸಂಗಮೇಶ, ಪ್ರಭಾರೆ ಸಿಡಿಪಿಓ ಫಾತೀಮಾ ಜುಳುಕಿ, ಪ್ಯಾನಲ್ ವಕೀಲರಾದ ಆರ್ ಎಸ್ ಭಟ್ಟ ಮುಂತಾದವರು ಇದ್ದರು‌.

ಶ್ರಾವಣ ಸೋಮವಾರದ ವಿಶೇಷ ಪೂಜೆ ಮತ್ತು ಅರಿಶಿನ ಕುಂಕುಮ ಕಾರ್ಯಕ್ರಮ
ಯಲ್ಲಾಪುರ: ಪಟ್ಟಣದ ಶ್ರೀ ವೀರಭದ್ರ ದೇವಸ್ಥಾನದಲ್ಲಿ ಶ್ರಾವಣ ಸೋಮವಾರದಂದು ವೀರಶೈವ ಲಿಂಗಾಯತ ಸಮಾಜದವರು ಮತ್ತು ಅಕ್ಕಮಹಾದೇವಿ ಬಳಗದವರು ವಿಶೇಷ ಪೂಜೆ ಹಾಗೂ ಸಾಮೂಹಿಕ ಅರಿಶಿನ ಕುಂಕುಮ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಿದರು. 
    ಅಕ್ಕಮಹಾದೇವಿ ಬಳಗದ ಶಶಿಕಲಾ ಹಿರೇಮಠ ಅವರು ಕಾರ್ಯಕ್ರಮದ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ, ಬಳಗದ ಸದಸ್ಯೆಯರು ಹಾಗೂ ಪಟ್ಟಣದ ವಿವಿಧೆಡೆಗಳಿಂದ ಬಂದ ಸುಮಂಗಲಿಗಳಿಗೆ ಅರಿಶಿಣ ಕುಂಕುಮ ನೀಡಿದರು. 
   ಅಪಾರ ಸಂಖ್ಯೆಯ ಮಹಿಳೆಯರು ಹಣ್ಣು ಕಾಯಿ ಸೇವೆ ಸಲ್ಲಿಸಿ, ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು. ಪ್ರಧಾನ ಕಾರ್ಯದರ್ಶಿ ರತ್ನಾ ಪಾಟೀಲ ಕಾರ್ಯಕ್ರಮವನ್ನು ನಿರ್ವಹಿಸಿದರು. 
   ಅಕ್ಕಮಹಾದೇವಿ ಬಳಗದ ಅಧ್ಯಕ್ಷೆ ದಾಕ್ಷಾಯಣಿ ಜೋಗಾರಶೆಟ್ಟರ್, ಕಾರ್ಯದರ್ಶಿ ಜಯಾ, ಖಜಾಂಚಿ ಸವಿತಾ ಹಿರೇಮಠ, ಹಾಗೂ ಸದಸ್ಯರಾದ ಪುಷ್ಪ ಜೋಗಾರಶೆಟ್ಟರ್, ಗೌರಿ ನಂದೋಳ್ಳಿ ಮಠ, ಸವಿತಾ ಕವಳಿ, ಸುಮಂಗಳಾ ಅಂಗಡಿ, ಪ್ರಭಾ ಜಯರಾಜ, ಮಂಗಳಾ ಗೌಳಿ, ಸುವರ್ಣ ಹಿರೇಮಠ, ಹೇಮಾ, ರತ್ನಾ, ರೇಣುಕಾ, ಪಲ್ಲವಿ, ಚೈತ್ರಾ ಇತರರು ಸಹಕರಿಸಿದರು.

ಸಂಭ್ರಮ ವೃತ್ತದ ಬಳಿ ಅಪಘಾತ: 50 ವರ್ಷದ ಪಾದಚಾರಿ ಸಾವು

ಯಲ್ಲಾಪುರ :  ಪಟ್ಟಣದ ಸಂಭ್ರಮ ಕ್ರಾಸ್ ಹತ್ತಿರ ಎನ್ ಎಚ್-63 ರಸ್ತೆಯ ಮೇಲೆ ಆಗಸ್ಟ್ 11 ರಂದು ಸಂಜೆ, ಅಪಘಾತ ಸಂಭವಿಸಿದ್ದು,. ಹನುಮಂತಪ್ಪ ಭಜಂತ್ರಿ (50) ಎಂಬ ವ್ಯಕ್ತಿ ರಸ್ತೆ ಎಡಬದಿಯಿಂದ ನಡೆದುಕೊಂಡು ಹೋಗುತ್ತಿದ್ದಾಗ, ಅಂಕೋಲಾ ಕಡೆಯಿಂದ ಯಲ್ಲಾಪುರ-ಹುಬ್ಬಳ್ಳಿ ಮಾರ್ಗದಲ್ಲಿ ತೆರಳುತ್ತಿದ್ದ ಲಾರಿ ಚಾಲಕ ಚಂದ್ರಭಾನ ಚೊಂಬೆಲಾಲ ಯಾದವ (37), ಮೀರ್ಜಾಪುರ, ಉತ್ತರ ಪ್ರದೇಶ ತನ್ನ ಲಾರಿಯನ್ನು ಅತಿವೇಗದಲ್ಲಿ ಚಲಾಯಿಸಿ ಪಾದಚಾರಿಗೆ ಡಿಕ್ಕಿ ಹೊಡೆದಿದ್ದಾನೆ.
ಲಾರಿ ಚಾಲಕ ತನ್ನ ವಾಹನವನ್ನು ಅತೀ ವೇಗ ನಿಷ್ಕಾಳಜಿಯಿಂದ ಚಾಲನೆ‌ಮಾಡಿ ತಂದೆ-ಹನುಮಂತಪ್ಪ ಅವರಿಗೆ ಡಿಕ್ಕಿ ಹೊಡೆದು ಸಾವಿಗೆ ಕಾರಣನಾಗಿದ್ದಾನೆ.
   ಈ ಘಟನೆಗೆ ಸಂಬಂಧಿಸಿದಂತೆ ಮೃತನ‌ ಮಗ ನವೀನ ತಂದೆ ಭಜಂತ್ರಿ ಯಲ್ಲಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.  ಯಲ್ಲಾಪುರ ಪೊಲೀಸ್ ಠಾಣೆಯ ಪಿಐ ರಮೇಶ ಹಾನಾಪುರ ಮಾರ್ಗದರ್ಶನದಲ್ಲಿ, ಪಿಎಸ್ಐ ನಿರಂಜನ ಹೆಗಡೆ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಆ.15ರಂದು ಯಲ್ಲಾಪುರದಲ್ಲಿ 78ನೇ ಸ್ವಾತಂತ್ರೋತ್ಸವ ಅದ್ದೂರಿ ಆಚರಣೆ:

ಯಲ್ಲಾಪುರ:  78ನೇ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಯಲ್ಲಾಪುರದಲ್ಲಿ ಆಗಸ್ಟ್ 15, ಬೆಳಿಗ್ಗೆ 9-00 ಗಂಟೆಗೆ ತಾಲೂಕಾ ಕ್ರೀಡಾಂಗಣ, ಕಾಳಮ್ಮನಗರದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಕಾರ್ಯಕ್ರಮವು ತಾಲೂಕಾ ಆಡಳಿತ, ತಾಲೂಕಾ ಪಂಚಾಯತ್, ಪಟ್ಟಣ ಪಂಚಾಯತ್ ಮತ್ತು ಯಲ್ಲಾಪುರ ತಾಲೂಕಾ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಡೆಯಲಿದೆ.
   ಬೆಳಿಗ್ಗೆ 9-00 ಗಂಟೆಗೆ ತಹಶೀಲ್ದಾರರು ಹಾಗೂ ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಅಶೋಕ ಭಟ್ಟ ಧ್ವಜಾರೋಹಣ ಮಾಡಲಿದ್ದಾರೆ. ಧ್ವಜಕ್ಕೆ ಗೌರವ ರಕ್ಷೆ ಸಲ್ಲಿಸಲಾಗುವುದು. ನಂತರ ತಹಶೀಲ್ದಾರರು ಸ್ವಾತಂತ್ರ್ಯದ ಮಹತ್ವವನ್ನು ಸಾರುವ ಸಂದೇಶವನ್ನು ನೀಡಲಿದ್ದಾರೆ. ನಂತರ, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅಧ್ಯಕ್ಷೀಯ ನುಡಿಯ ಮೂಲಕ ಈ ಮಹತ್ವದ ದಿನದ ಭಾವನೆಯನ್ನು ಹಂಚಿಕೊಳ್ಳಲಿದ್ದಾರೆ. 
   ಕಾರ್ಯಕ್ರಮದಲ್ಲಿ ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ. ಸಭಾಪತಿಗಳಾದ ಬಸವರಾಜ ಹೊರಟ್ಟಿ, ಮೀನುಗಾರಿಕೆ ಹಾಗೂ ಬಂದರುಗಳು, ಒಳನಾಡು ಜಲಸಾರಿಗೆ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ, ಸಚಿವರಾದ ಮಂಕಾಳ ವೈದ್ಯ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್. ವಿ. ದೇಶಪಾಂಡೆ, ಕರ್ನಾಟಕ ಮಾರ್ಕೆಟಿಂಗ್ ಕನ್ಸಲ್ಲೆಂಟ್ ಅಂಡ್ ಏಜೆನ್ಸಿಸ್ ಅಧ್ಯಕ್ಷರಾದ ಸತೀಶ ಕೃಷ್ಣ ಸೈಲ್ ಅವರುಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.    
   ಪ್ರಮುಖರಾದ ಪ್ರೊ. ಎಸ್. ವಿ. ಸಂಕನೂರು, ಶಾಂತಾರಾಮ ಸಿದ್ದಿ, ಗಣಪತಿ ಉಳ್ವೇಕರ, ಪ್ರೊಮೋದ ಹೆಗಡೆ ಸೇರಿದಂತೆ ಹಲವಾರು ಗಣ್ಯರು ಗೌರವ ಉಪಸ್ಥಿತರಿರುವವರು. ಪಟ್ಟಣ ಪಂಚಾಯತ್ ಸದಸ್ಯರು, ಗ್ರಾಮ ಪಂಚಾಯತ್ ಅಧ್ಯಕ್ಷರು, ತಾಲೂಕಾ ಇತರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬುಧವಾರ ಉಮ್ಮಚಗಿ ಭಾಗದಲ್ಲಿ ವಿದ್ಯುತ್ ವ್ಯತ್ಯಯ

ಯಲ್ಲಾಪುರ : ಉಮ್ಮಚಗಿ 110/33/11 ಕೆವಿ ಉಪ ಕೇಂದ್ರದಲ್ಲಿ ಆಗಸ್ಟ್ 13ರಂದು ತುರ್ತು ನಿರ್ವಹಣಾ ಕಾರ್ಯ ಇರುವುದರಿಂದ ಅಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5:30ರ ವರೆಗೆ
ಹಿತ್ಲಳ್ಳಿ, ಬೆಳ್ಕಿ, ಉಮ್ಮಚಗಿ ಹಾಗೂ ಮಾವಿನಕಟ್ಟಾ ಭಾಗಗಳಿಗೆ ವಿದ್ಯುತ್ ಪ್ರತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಯಲ್ಲಾಪುರ ಎಸ್ಕಾಂ ಉಪವಿಭಾಗದ ಕಾರ್ಯ ಮತ್ತು ಪಾಲನಾ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

ಹೃದಯಾಘಾತದಿಂದ ಯಲ್ಲಾಪುರ ಪೌರ ಕಾರ್ಮಿಕ ಮೃತ್ಯು

ಯಲ್ಲಾಪುರ : ಯಲ್ಲಾಪುರ ಪಟ್ಟಣ ಪಂಚಾಯತ ಪೌರಕಾರ್ಮಿಕ 56 ವರ್ಷದ ಲಕ್ಷ್ಮಣ ಆಯಿತ್ರ ಹರಿಜನ ಹೃದಯಾಘಾತದಿಂದ ಸೋಮವಾರ ಬೆಳಗ್ಗೆ ಸಾವನಪ್ಪಿದ್ದಾರೆ
   ಪಟ್ಟಣದ ಬೆಲ್ ರಸ್ತೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅವರಿಗೆ ಹೃದಯಘಾತ ಸಂಭವಿಸಿದೆ. ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಅವರನ್ನು ಪರೀಕ್ಷಿಸಿದಾಗ ತೀವ್ರ ಹೃದಯಘಾತ ಆಗಿದೆ ಎಂದು ತಿಳಿದುಬಂದಿದೆ. ಕೂಡಲೇ ತಾಲೂಕ ಆಸ್ಪತ್ರೆಗೆ ಸೇರಿಸುವಂತೆ ಖಾಸಗಿ ವೈದ್ಯರು ಸೂಚನೆ ನೀಡಿದ್ದಾರೆ. ತಾಲೂಕು ಆಸ್ಪತ್ರೆಗೆ ಸೇರಿಸುವ ಪೂರ್ವದಲ್ಲಿಯೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.
    ಅತ್ಯಂತ ಶಾಂತ ಸ್ವಭಾವದ ಲಕ್ಷ್ಮಣ್ ಹರಿಜನ್, ತಮ್ಮ ಸಹಪೌರಕಾರ್ಮಿಕರೊಂದಿಗೆ ಉತ್ತಮವಾದ ಸ್ನೇಹಮಯ ಸಂಬಂಧವನ್ನು ಬೆಳೆಸಿಕೊಂಡಿದ್ದರು. ಹಾಸ್ಯ ಚಟಾಕಿಗಳನ್ನು ಹಾರಿಸುತ್ತ ಹಲವಾರು ಜನರ ಮನ ಗೆದ್ದಿದ್ದರು. ಸೋಮವಾರ ತಲೆ ಸುತ್ತಿ ನೆಲಕ್ಕೆ ಉರುಳಿದ್ದ ಲಕ್ಷ್ಮಣ್ ಹರಿಜನ್ ಅವರ ನಡುವಳಿಕೆ ಒಂದು ಹಾಸ್ಯದ ಭಾಗ ಎಂದು ಭಾವಿಸಲಾಗಿತ್ತು.  ಆದರೂ ಕೂಡ ಸಂಶಯಗೊಂಡ ಇನ್ನಿತರರು ಅವರನ್ನು ಆಸ್ಪತ್ರೆಗೆ ಸಾಗಿಸಿದ್ದರು.
  ಯಲ್ಲಾಪುರ ಶಾಸಕರಾದ ಶಿವರಾಮ ಹೆಬ್ಬಾರ್ ಅವರು ಘಟನೆ ವಿಷಯ ತಿಳಿದ ತಕ್ಷಣ ತಾಲೂಕಾ ಆಸ್ಪತ್ರೆಗೆ ಭೇಟಿ ನೀಡಿ ಮೃತ ಲಕ್ಷ್ಮಣ ಆಯಿತ್ರ ಹರಿಜನ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಪೊಲೀಸ್ ನಿರೀಕ್ಷಕರಾದ ರಮೇಶ ಹಾನಾಪುರ ಇನ್ನಿತರರು ಇದ್ದರು.
      ಪಟ್ಟಣ ಪಂಚಾಯತ ಮುಖ್ಯ ಅಧಿಕಾರಿ ಸುನಿಲ್ ಗಾವಡೆ, ಸಮೂಹ ಸಂಪನ್ಮೂಲ ಅಧಿಕಾರಿ ಹೇಮಾವತಿ ಭಟ್ಟ, ಆರೋಗ್ಯ ನಿರೀಕ್ಷಕ ಗುರು ಗಡಗಿ, ಎಂಜೀನಿಯರ್ ಹೇಮಚಂದ್ರ ನಾಯ್ಕ, ಪ.ಪಂ ಮಾಜಿ ಅಧ್ಯಕ್ಷರಾದ ಸುನಂದಾ ದಾಸ, ಶಿರೀಶ ಪ್ರಭು ಹಾಲಿ‌ ಮಾಜಿ ಸದಸ್ಯರು ಶೋಕ ವ್ಯಕ್ತಪಡಿಸಿದ್ದಾರೆ. 

ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಯಲ್ಲಾಪುರ ಶಿಕ್ಷಕರ ಧರಣಿ!

ಯಲ್ಲಾಪುರ/ ಬೆಂಗಳೂರು : ಸೋಮವಾರವ ಬೆಳಿಗ್ಗೆಯಿಂದ ಸಂಜೆಯವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಯಲ್ಲಾಪುರ ಪ್ರಾಥಮಿಕ ಶಾಲಾ ಶಿಕ್ಷಕರ ಒಂದು ದಿನದ ಧರಣಿ ನಡೆಸುತ್ತಿದ್ದಾರೆ. 
  ಶಿಕ್ಷಕರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಬೆಂಗಳೂರು ಚಲೋ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಯಲ್ಲಾಪುರದ ಶಿಕ್ಷಕರುಗಳು ಸೋಮವಾರ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಧರಣಿ ಕುಳಿತಿದ್ದಾರೆ. 2017ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು 2016ಕ್ಕಿಂತ ಮೊದಲು ನೇಮಕಾತಿಯಾದವರಿಗೆ
ಪೂರ್ವಾನ್ವಯಗೊಳಿಸಬಾರದು ಹಾಗೂ ಇದರಿಂದ ಪ್ರಾಥಮಿಕ ಶಾಲಾ ಸೇವಾ ನಿರತ ಶಿಕ್ಷಕರಿಗಾಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಅರ್ಹ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2016ರ ಪೂರ್ವದಂತೆ ಅರ್ಹತೆಯ ಆಧಾರದ ಮೇಲೆ ಪ್ರೌಢ ಶಾಲೆಗೆ ಬಡ್ತಿ ನೀಡಬೇಕು. ಸೇವಾ ಜೇಷ್ಠತೆ, ಪದೋನ್ನತಿ ಹಾಗೂ ಇನ್ನಿತರ ನ್ಯಾಯಯುತ ಬೇಡಿಕೆಗಳಿಗಾಗಿ ನಡೆದ ರಾಜ್ಯ ಮಟ್ಟದ ಶಿಕ್ಷಕರ ಹಕ್ಕುತಾಯ ಸಭೆಯಲ್ಲಿ ಯಲ್ಲಾಪುರ ತಾಲೂಕಿನ ಈ ಕೆಳಗಿನ ಶಿಕ್ಷಕರು ಧರಣಿ ಕುಳಿತಿದ್ದಾರೆ.
   ಯಲ್ಲಾಪುರ ತಾಲೂಕ ಶಿಕ್ಷಕರ ಸಂಘದ ಕಾರ್ಯದರ್ಶಿಗಳಾದ  ಸತೀಶ್ ನಾಯಕ, ಪದಾಧಿಕಾರಿಗಳಾಗಿರುವ ಮಾರುತಿ ನಾಯಕ, ಶಿಕ್ಷಕರುಗಳಾದ ಸಂತೋಷ್ ನಾಯಕ, ಹೇಮಂತ್ ದುರಂದರ, ಗಣಪತಿ ಪಟಗಾರ್, ಶ್ರೀಕಾಂತ್ ವೈದ್ಯ, ಪವನ್ ಕುಮಾರ್  ಮಾರುತಿ ಆಚಾರಿ ವಿನಾಯಕ್ ಗಾವ್ಕರ್ ಅಮಿತ್ ಚೌಹಾನ್ ಹಾಗೂ  ಶಂಕರಾನಂದ ಮತ್ತು ಭರತ್ ಪಾಲ್ಗೊಂಡಿದ್ದಾರೆ.

ವಿದ್ಯುತ್ ಸ್ಪರ್ಶ, ವಿಷ ತಿಂದು ಸತ್ತು ಬೀಳುತ್ತಿರುವ ಮಂಗಗಳು

ವರದಿ : ಜಗದೀಶ ನಾಯಕ
ಯಲ್ಲಾಪುರ : ಯಲ್ಲಾಪುರ ಪಟ್ಟಣದಲ್ಲಿ ಮನುಷ್ಯರೊಂದಿಗೆ ಮಂಗಗಳು ಕೂಡ ವಾಸ್ತವ ಮಾಡುತ್ತಿದ್ದು 200 -300 ರಷ್ಟು ಮಂಗಗಳು ಜನ ವಾಸ್ತವ್ಯ ಮಾಡುವ ಮನೆಯ ಮೇಲೆ ವಾಸ ಮಾಡಿಕೊಂಡಿವೆ. ಬೆಳಿಗ್ಗೆ ಕಾಡಿಗೆ ಆಹಾರ ಅರಿಸಿ ಹೋಗುವ ಮಾರ್ಗ ಮಧ್ಯ ವಿದ್ಯುತ್ ಕಂಬಗಳು, ಹೈಟೆನ್ಷನ್ ವೈರ್ ಗಳ ಮೇಲೆ ಸಂಚರಿಸಿ ಮಂಗಗಳು ವಿದ್ಯುತ್ ಸ್ಪರ್ಶದಿಂದಾಗಿ ಸ್ಥಾವನಪ್ಪುತ್ತಿವೆ.
   ಪಟ್ಟಣದ ಐಬಿ ರಸ್ತೆಯ ವೆಂಕಟರಮಣ ಮಠದ ಹಿಂಬದಿಯ ಟ್ರಾನ್ಸ್ಫಾರ್ಮರ್ ಮೇಲೆ ಸೋಮವಾರ ಮಂಗ ಒಂದು ವಿದ್ಯುತ್ ಸಂಪರ್ಕಕ್ಕೆ ಬಂದು ಟ್ರಾನ್ಸ್ಫರ್ ಮೇಲೆ ಸುಟ್ಟು ಬಿದ್ದಿತ್ತು. ಮಂಗನ ದೇಹದಿಂದ ಹೊಗೆ ಹೊರಡುತ್ತಿರುವ ಕಾರಣಕ್ಕೆ ಸ್ಥಳೀಯರು ಹೆಸ್ಕಾಂಗೆ ಕರೆ ಮಾಡಿ ಟ್ರಾನ್ಸಸ್ಪರ್ ಮೇಲೆ ಮಂಗ ಸತ್ತು ಬಿದ್ದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಹೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಮುಂದೆ ಆಗಬಹುದಾದ ಅಪಾಯವನ್ನು ತಪ್ಪಿಸಿದ್ದಾರೆ.
   ಯಲ್ಲಾಪುರ ಪಟ್ಟಣದ ತಾರಸಿ ಮನೆ ಮೇಲಿನ ಜಿಐ ಶೆಡ್ ಕೆಳಗೆ ನೆಲೆ ಕಂಡುಕೊಂಡಿರುವ ಕೆಂಪು ಮತ್ತು ಕಪ್ಪು ಮುಖದ ಮಂಗಗಳ ಗುಂಪುಗಳಿಗೆ ಮಳೆಗಾಲ ಮತ್ತು ಬೇಸಿಗೆ ಕಾಲದಲ್ಲಿ ಜಿಐ ಶೆಡ್ ರಕ್ಷಣೆ ಒದಗಿಸುತ್ತದೆ. ಅಲ್ಲದೆ ಮನೆಯ ಮೇಲಿನ ನೀರಿನ ತೊಟ್ಟಿ, ಸಿಂಟೆಕ್ಸ್ ಟ್ಯಾಂಕ್ ನೀರಿನ ದಾಹವನ್ನು ತಣಿಸುವುದಲ್ಲದೇ,  ಟ್ಯಾಂಕ್‌ಗಳ ಮುಚ್ಚಳ ತೆರೆದಿದ್ದಾಗ ದೊಡ್ಡ ಮಂಗ ಮತ್ತು ಸಣ್ಣ ಮಂಗಗಳ ಮರಿಗಳಿಗೆ ಸ್ನಾನ ಗ್ರಹವಾಗಿ ಪರಿವರ್ತನೆಯಾಗುತ್ತದೆ. ಅದರಲ್ಲಿಯೂ ಬೇಸಿಗೆಯಲ್ಲಿ ಮಂಗಗಳು ಟಾಕಿಯಲ್ಲಿ ಇಳಿದು ಈಸಿ ಕುಣಿದು ಕುಪ್ಪಳಿಸುತ್ತವೆ. 
   ಆಯ್ದ ಮನೆಯ ತಾರಸಿಯ ಶೆಡ್ ನಲ್ಲಿಯು 15 ರಿಂದ 30 ಮಂಗಗಳ ಗುಂಪು ನೆಲೆ ಕಂಡುಕೊಂಡಿದ್ದು, ಈ ಗುಂಪಿಗೆ ಒಂದು ಗಂಡು ಮಂಗ ನಿಯಂತ್ರಿಸುತ್ತಿರುತ್ತದೆ. ಬೆಳಿಗ್ಗೆ ಆದೊಡನೆ ಆಹಾರ ಅರಸುತ್ತಾ ಅರಣ್ಯದ ಕಡೆಗೆ ಮುಖ ಮಾಡುವ ಮಂಗಗಳು, ದಾರಿ ಮಧ್ಯದಲ್ಲಿ ಸಿಗುವ ಕಸದ ತೊಟ್ಟಿಗಳಲ್ಲಿ ತೆರೆದ ಮನೆಯ ಗಿಡಗಳಿಂದ ಒಳಗೆ ತೆರಳಿ ಹಂಚು ತೆಗೆದು ಮನೆಯ ಒಳಗೆ ಪ್ರವೇಶಿಸಿ ಆಹಾರವನ್ನು ಕಳ್ಳತನ ಮಾಡುತ್ತವೆ. ಕಸದ ತೊಟ್ಟಿಯಲ್ಲಿ ಸಿಗುವ ವಿಷಭರಿತ ಆಹಾರವನ್ನು ಸೇವಿಸಿ ಆಗಾಗ ಮಂಗಗಳು ಸಾವನ್ನಪ್ಪುವುದನ್ನು ಕಾಣಬಹುದು. ಕೆಲವೊಂದು ಕಿರಾಣಿ ಅಂಗಡಿಕಾರರು ಹೋಟೆಲ್ ನಡೆಸುವವರು ತಮ್ಮ ಅಂಗಡಿಯಲ್ಲಿ ಆಹಾರದೊಂದಿಗೆ ವಿಷವನ್ನು ಕೂಡ ಸೇರಿಸಿ ಇಲಿಗಳಿಗಾಗಿ ಇಟ್ಟಿರುತ್ತಾರೆ. ಇಂತಹ ಉಳಿದ ಭಾಗವನ್ನು ಕಸದ ತೊಟ್ಟಿಯಲ್ಲಿ ಹಾಕುವುದರಿಂದ ಏನೂ ಅರಿಯದ ಮಂಗಗಳು ತಿಂದು ಸಾವನ್ನಪ್ಪಿವೆ. ಅಷ್ಟೇ ಅಲ್ಲದೆ ವಿದ್ಯುತ್ ತಂತಿಗಳು ಇಂಟರ್ನೆಟ್ ಕೇಬಲ್, ಟಿವಿ ಕೇಬಲ್ಗಳ ಮೇಲೆ ವಿದ್ಯುತ್ ಕಂಬ ಮರಗಳ ಮೇಲೆ ಸಂಚರಿಸುವಾಗ ವಿದ್ಯುತ್ ಅಪಘಾತಕ್ಕೆ ಒಳಗಾಗಿ ಸಾವನ್ನಪ್ಪಿವೆ.
  ಈ ಎಲ್ಲ ಅಪಾಯಗಳಿಂದ ಮಂಗಗಳನ್ನು ಪಾರು ಮಾಡಬೇಕಾದ ಅರಣ್ಯ ಇಲಾಖೆ ಮಾತ್ರ ಜಾಣ ಕಿವುಡುತನ ತೋರಿಸುತ್ತಿದೆ. ಸಾರ್ವಜನಿಕರು ಎಷ್ಟೇ ಹೇಳಿದರೂ ಕೂಡ ಮಂಗಗಳನ್ನು ದಟ್ಟ ಅರಣ್ಯಕ್ಕೆ ಕಳಿಸುವ ಕಾರ್ಯ ಮಾತ್ರ ಮಾಡುತ್ತಿಲ್ಲ. ಮಂಗ ಮುಂತಾದ ಮರವಾಸಿ ಪ್ರಾಣಿಗಳು ಅರಣ್ಯದ ಮರ ಗಿಡಗಳಲ್ಲಿ ಹಣ್ಣು ಕಾಯಿಗಳನ್ನು ಹುಡುಕಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳದ ಬೇಕಾದ ಪ್ರಾಣಿಗಳಾಗಿವೆ. ಈ ಪ್ರಾಣಿಗಳು ತಿನ್ನುವ ಆಹಾರವನ್ನು ಟೆಂಡರ್ ಕರೆದು ಗುತ್ತಿಗೆ ನೀಡಿ ಅರಣ್ಯ ಇಲಾಖೆ ಮೂಖ ಪ್ರಾಣಿಗಳ ಆಹಾರವನ್ನು ಕೂಡ ಕಸಿದುಕೊಂಡು ಹಣ ಮಾಡುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಹೀಗಾಗಿ, ಅನಿವಾರ್ಯತೆಯಿಂದ ಅರಣ್ಯದಿಂದ ಮಂಗಗಳು ಆಹಾರ ಹುಡುಕುತ್ತಾ ಪಟ್ಟಣದ ಕಡೆಗೆ ಬರುತ್ತಿದ್ದು, ಇದರಿಂದ ಸಾರ್ವಜನಿಕ ಕಿರುಕುಳ ಹೆಚ್ಚಾಗುತ್ತಿದೆ.

ಯಲ್ಲಾಪುರದಲ್ಲಿ ಸುಜ್ಞಾನ ಸೇವಾ ಫೌಂಡೇಶನ್‌ನಿಂದ 2024 ರ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೋಟೋ ಸ್ಪರ್ಧೆ

ಯಲ್ಲಾಪುರ: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ, ಸುಜ್ಞಾನ ಸೇವಾ ಫೌಂಡೇಶನ್ ಉತ್ತರಕನ್ನಡ ಜಿಲ್ಲೆಯಲ್ಲಿ ನಾಲ್ಕನೇ ವರ್ಷದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೋಟೋ ಸ್ಪರ್ಧೆ-2024 ಅನ್ನು ಆಯೋಜಿಸಿದೆ. ಈ ಸ್ಪರ್ಧೆ ಯಲ್ಲಾಪುರದ ಗೌತಮ್ ಜ್ಯುವೆಲರ್ಸ್, ಶಿರಸಿಯ ಟಿ.ಎಸ್.ಎಸ್, ಹಾಂಗ್ಯೋ ಐಸ್ ಕ್ರೀಂ ಮತ್ತು ಇ-ಯಲ್ಲಾಪುರ ಡಿಜಿಟಲ್ ನ್ಯೂಸ್ ಪ್ರಾಯೋಜಕತ್ವದಲ್ಲಿ, ರಂಗಸಹ್ಯಾದ್ರಿ ಯಲ್ಲಾಪುರ ಹಾಗೂ ಸುಜ್ಞಾನವಾಹಿನಿ ಪತ್ರಿಕೆಯ ಸಹಯೋಗದಲ್ಲಿ ಸ್ಪರ್ಧೆ ನಡೆಯಲಿದೆ.
   ಸ್ಪರ್ಧೆಯು ಆರು ವರ್ಷದ ಒಳಗಿನ ಮಕ್ಕಳಿಗಾಗಿ ಆಯೋಜಿತವಾಗಿದ್ದು, ಭಾಗವಹಿಸಲು ಆಸಕ್ತರು ತಮ್ಮ ಮಕ್ಕಳ ಮುದ್ದುಕೃಷ್ಣ ವೇಷದ ಫೋಟೋಗಳನ್ನು ಕಳಿಸಬೇಕಾಗಿದೆ. ಫೋಟೋಗಳಿಗೆ ಆಯ್ಕೆಯಾದ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ಮಕ್ಕಳಿಗೆ ನಗದು ಬಹುಮಾನ, ಬೆಳ್ಳಿಯ ಸ್ಮರಣಿಕೆ, ಪಾರಿತೋಷಕ ಮತ್ತು ಪ್ರಶಸ್ತಿಪತ್ರ ನೀಡಲಾಗುತ್ತದೆ. ಒಂಬತ್ತು ಮಕ್ಕಳಿಗೆ ಸಮಾಧಾನಕರ ಬಹುಮಾನವಾಗಿ ಬೆಳ್ಳಿಯ ಸ್ಮರಣಿಕೆ, ಪಾರಿತೋಷಕ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು. 

ಸ್ಪರ್ಧೆಯ ನಿಯಮಗಳು ; 

ಫೋಟೋಗಳನ್ನು ಕಳಿಸಲು ಅಂತಿಮ ದಿನಾಂಕ ಆಗಸ್ಟ್ 24, 2024 ಎಂದು ನಿಗದಿಗೊಳಿಸಲಾಗಿದೆ. ಸ್ಪರ್ಧಾ ನಿಯಮಗಳ ಪ್ರಕಾರ, ಫೋಟೋಗಳನ್ನು ಈ ದಿನದಂದು ಸಂಜೆ 6:00 ಗಂಟೆ ಒಳಗೆ ಕಳಿಸಬೇಕಾಗಿದೆ. ನಂತರದ ಫೋಟೋಗಳನ್ನು ಪರಿಗಣಿಸಲಾಗುವುದಿಲ್ಲ. ಹೊಸ ಫೋಟೋಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ, ಹಳೆಯ ಫೋಟೋಗಳಿಗೆ ಅವಕಾಶ ಇಲ್ಲ. ಎಡಿಟ್ ಮಾಡಿದ ಫೋಟೋಗಳಿಗೆ ಅವಕಾಶವಿಲ್ಲ. ಸ್ಪರ್ಧೆ ಉತ್ತರಕನ್ನಡ ಜಿಲ್ಲೆ ವ್ಯಾಪ್ತಿಯ ಮಕ್ಕಳಿಗಾಗಿ ಮಾತ್ರ ಜರುಗುತ್ತದೆ. ಫೋಟೋతో ಒಂದೇ ಬಾರಿ ಮಗುವಿನ ಹೆಸರು, ಹುಟ್ಟಿದ ದಿನಾಂಕ, ಪಾಲಕರ ಹೆಸರು, ಸಂಪೂರ್ಣ ವಿಳಾಸ ಮತ್ತು ಸಂಪರ್ಕ ಸಂಖ್ಯೆಯ ಮಾಹಿತಿಯನ್ನು ಕಡ್ಡಾಯವಾಗಿ ಕಳಿಸಬೇಕಾಗಿದೆ. 

   ತೀರ್ಪುಗಾರರ ನಿರ್ಣಯವೇ ಅಂತಿಮವಾಗಿದ್ದು, ಸ್ಪರ್ಧೆಗೆ ಪ್ರವೇಶ ಉಚಿತವಾಗಿದೆ. ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಂದು ಸ್ಪರ್ಧಾ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಸುಜ್ಞಾನ ಸೇವಾ ಫೌಂಡೇಶನ್ ಉತ್ತರಕನ್ನಡ ಪ್ರಕಟಣೆಯಲ್ಲಿ ತಿಳಿಸಿದೆ.
ಫೋಟೋ ಕಳುಹಿಸುವ ವಾಟ್ಸಪ್ ನಂಬರ್ :  8431662869
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :  7899588538 ಫೋಟೋಗಳನ್ನು ಇಮೇಲ್ ಮಾಡಬಹುದು : gnbtattigadde@gmail.com