Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Friday, 9 August 2024

ಯಲ್ಲಾಪುರ ಪ.ಪಂ ದಲ್ಲಿ ಅಲ್ಪಸಂಖ್ಯಾತ ಸದಸ್ಯರಿಗೆ ಉಪಾಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ

ಯಲ್ಲಾಪುರ: ಯಲ್ಲಾಪುರ ಪಟ್ಟಣ ಪಂಚಾಯಿತಿಯಲ್ಲಿ ಅಲ್ಪಸಂಖ್ಯಾತ ಸಮುದಾಯದವರಿಗೆ ಉಪಾಧ್ಯಕ್ಷ ಸ್ಥಾನವನ್ನು ನೀಡಬೇಕೆಂದು ಪಟ್ಟಣ ಪಂಚಾಯಿತಿಯ ಅಲ್ಪಸಂಖ್ಯಾತ ಸದಸ್ಯ ಕೈಸರ್ ಸಯ್ಯದಲಿ ಆಗ್ರಹಿಸಿದ್ದಾರೆ.
   ಈ ಕುರಿತು ಹೇಳಿಕೆ ನೀಡಿರುವ ಅವರು, ಪಟ್ಟಣ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗದ ಬ ಮಹಿಳಾ ಮೀಸಲಾತಿ ಬಂದಿದ್ದು, ಎಲ್ಲ ಮಹಿಳಾ ಸದಸ್ಯರಲ್ಲಿ ಹಿಂ.ಬ ವರ್ಗದ ಮಹಿಳಾ ಅಭ್ಯರ್ಥಿಗಳು ಲಭ್ಯವಿಲ್ಲದ ಕಾರಣ ಬೇರೆ ವರ್ಗಕ್ಕೆ ಮೀಸಲಾತಿ ಬರಬಹುದಾಗಿದೆ. ಆದರೆ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗದ ಮೀಸಲಾತಿ ಇದ್ದರೂ, ಪಟ್ಟಣದಲ್ಲಿ ಅರ್ಧದಷ್ಟು ಜನಸಂಖ್ಯೆಯನ್ನು ಹೊಂದಿರುವ ಅಲ್ಪಸಂಖ್ಯಾತ ಸಮುದಾಯಕ್ಕೆ ಇದುವರೆಗೂ ಯಾವುದೇ ಪ್ರಾತಿನಿಧಿತ್ವ ದೊರೆತಿಲ್ಲ ಎಂದು ಹೇಳಿಕೊಂಡಿದ್ದಾರೆ. 
ಪಟ್ಟಣ ಪಂಚಾಯಿತಿಯ ಒಬ್ಬರ ಸಾವಿನ ನಂತರ ಉಳಿದ ಒಟ್ಟು 18 ಸದಸ್ಯರಲ್ಲಿ, ಕೈಸರ್ ಸಯ್ಯದಲ್ಲಿ ಅಬ್ದುಲ್ ಅಲಿ ಹಾಗೂ ಹಲಿಮಾ ಕಕ್ಕರೆ ನಾವು ಮೂವರು ಅಲ್ಪಸಂಖ್ಯಾತರಾಗಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ತಮ್ಮಲ್ಲಿ ಒಬ್ಬರಿಗೆ ಅವಕಾಶ ನೀಡುವಂತೆ, ಮಾಧ್ಯಮದ ಮೂಲಕ ಕಾಂಗ್ರೆಸ್ ಪಕ್ಷದ ಪ್ರಮುಖರಿಗೂ ಹಾಗೂ ಇನ್ನಿತರ ಪ.ಪಂ ಸದಸ್ಯರಿಗೆ ಕೈಸರ್ ಸಯ್ಯದಲಿ ವಿನಂತಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಎಂ.ಡಿ. ಮುಲ್ಲಾ ಅಧ್ಯಕ್ಷರಾದ ನಂತರ, ಪಟ್ಟಣ ಪಂಚಾಯಿತಿಯಲ್ಲಿ ಅಲ್ಪಸಂಖ್ಯಾತ ಸಮುದಾಯದವರಿಗೆ ಯಾವುದೇ ಹುದ್ದೆ ಸಿಕ್ಕಿಲ್ಲ ಎಂದು ಅವರು ನೋವು ತೋಡಿಕೊಂಡಿದ್ದಾರೆ.
   ಹಳೆಯ ಕಾಂಗ್ರೆಸ್ ಮತ್ತು ಹೊಸ ಕಾಂಗ್ರೆಸ್ ಪಕ್ಷದ ಪ್ರಮುಖರು, ಅಲ್ಪಸಂಖ್ಯಾತ ಸಮುದಾಯದ ಆಕಾಂಕ್ಷೆಗಳನ್ನು ಗಮನಿಸಿ, ಉಪಾಧ್ಯಕ್ಷ ಸ್ಥಾನವನ್ನು ಅವರಿಗೆ ಬಿಟ್ಟುಕೊಡುವ ಮೂಲಕ ಪ್ರಾತಿನಿಧ್ಯ ನೀಡಬೇಕೆಂದು ಕೈಸರ್ ಸಯ್ಯದಲಿ  ಒತ್ತಾಯಿಸಿದ್ದಾರೆ.
    ಯಲ್ಲಾಪುರ ಪಟ್ಟಣ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಗೋಂದಲದ ಹಿನ್ನೆಲೆಯಲ್ಲಿ, ಉಪಾಧ್ಯಕ್ಷ ಸ್ಥಾನಕ್ಕೆ ಬಹಳಷ್ಡು ಬೇಡಿಕೆ ಬಂದಿದೆ. ಇದೀಗ ಅಲ್ಪಸಂಖ್ಯಾತ ಸದಸ್ಯರು ಕೂಡ ತಮಗೆ ಪ್ರಾತಿನಿಧ್ಯ ನೀಡುವಂತೆ ಆಗ್ರಹಿಸಿರುವುದು ಸ್ಥಳೀಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ದೇಸಾಯಿ ಫೌಂಡೇಶನ್ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ

ಯಲ್ಲಾಪುರ : ಪಟ್ಟಣದ ಕ್ರಿಯೇಟಿವ್ ಕಂಪ್ಯೂಟರ್ ಸಂಸ್ಥೆಯಲ್ಲಿ ಶುಕ್ರವಾರದಂದು ದೇಸಾಯಿ ಫೌಂಡೇಶನ್ ಮತ್ತು ಶಿರಸಿಯ ಸ್ಕೋಡವಾಯ್ಸ್ ಸಹಯೋಗದಲ್ಲಿ 2 ಬ್ಯೂಟಿಷನ್ ಹಾಗೂ ಹೊಲಿಗೆ ತರಬೇತಿಯ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
   ಕ್ರಿಯೇಟಿವ್ ತರಬೇತಿ ಕೇಂದ್ರದಲ್ಲಿ ಉಚಿತವಾಗಿ ನೀಡಲಾದ ಈ ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ, ದೇಸಾಯಿ ಫೌಂಡೇಶನ್ ಮುಖ್ಯಸ್ಥ ವಿನಯಾ ನಾಯ್ಕ ಅವರು ಪ್ರಮಾಣ ಪತ್ರ ವಿತರಿಸಿ, "ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಳ್ಳಬೇಕು" ಎಂಬ ಸಲಹೆಯನ್ನು ನೀಡಿದರು.
  ತರಬೇತಿಯ ಮೇಲ್ವಿಚಾರಕರಾದ ಸ್ಕೋಡವಾಯ್ಸ್ ಉಮೇಶ್ ಮರಾಠಿ ಅವರು, "ಪ್ರಮಾಣ ಪತ್ರವು ವಿದ್ಯಾರ್ಥಿಗಳ ಮುಂದಿನ ಹಾದಿಯಲ್ಲಿ ಮಹತ್ವಪೂರ್ಣ ಪಾತ್ರವಹಿಸುತ್ತದೆ" ಎಂಬುದನ್ನು ಸ್ಪಷ್ಟಪಡಿಸಿದರು.
ಕ್ರಿಯೇಟಿವ್ ತರಬೇತಿ ಕೇಂದ್ರದ ಮಾಲೀಕ ಶ್ರೀನಿವಾಸ್ ಮುರುಡೇಶ್ವರ್, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, "ವಿದ್ಯಾರ್ಥಿಗಳು ತರಬೇತಿಯನ್ನಾಗಿ ಸದುಪಯೋಗಪಡಿಸಿಕೊಳ್ಳಬೇಕು" ಎಂದು ತಿಳಿಸಿದರು.
  ಕಾರ್ಯಕ್ರಮದಲ್ಲಿ ತರಬೇತಿ ಸಂಸ್ಥೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಕ್ರಿಯೇಟಿವ್ ಸಂಸ್ಥೆಯ ಶಿಕ್ಷಕಿ ಗಾಯತ್ರಿ ಕಾರ್ಯಕ್ರಮವನ್ನು ನಿರೂಪಿಸಿದರು.

ಉದ್ಯಮಶೀಲತೆ ತರಬೇತಿಯಲ್ಲಿ ಕೌಶಲ್ಯ ವಿಕಾಸ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ

ಯಲ್ಲಾಪುರ, ಪಟ್ಟಣದ ಕ್ರಿಯೇಟಿವ್ ತರಬೇತಿ ಕೇಂದ್ರದಲ್ಲಿ ಶುಕ್ರವಾರ ಗ್ರೀನ್ ಕೇರ್ ಸಂಸ್ಥೆಯ "ಕೌಶಲ್ಯ ವಿಕಾಸ" ಯೋಜನೆಯ  ಬ್ಯೂಟಿಷನ್ ಮತ್ತು ಫ್ಯಾಶನ್ ಡಿಸೈನಿಂಗ್ ತರಬೇತಿ ವಿದ್ಯಾರ್ಥಿಗಳಿಗೆ ಉದ್ಯಮಶೀಲತೆ ಕುರಿತು ವಿಶೇಷ ತರಬೇತಿ ನೀಡಲಾಯಿತು.  
 ಕಾರ್ಯಕ್ರಮವನ್ನು  ಗ್ರೀನ್ ಕೇರ್ ಕಾರ್ಯದರ್ಶಿ ಜಿತೇಂದ್ರ ಕುಮಾರ್.ಆರ್.ಎಂ., ಮತ್ತು ಬೆಂಗಳೂರಿನ ಸಿಡಾಕ್ ಸಂಸ್ಥೆಯ ಉಪನಿರ್ದೇಶಕ ಶಿವಾನಂದ್.ವಿ.ಯಲಿಗಾರ್  ದೀಪ ಬೆಳಗಿಸಿ ಉದ್ಘಾಟಿಸಿದರು.  
 ಕಾರ್ಯಕ್ರಮದಲ್ಲಿ ಗ್ರೀನ್ ಕೇರ್ ಸಂಸ್ಥೆಯ ನಿರ್ದೇಶಕಿ ಆಶಾ ಡಿಸೋಜ, ಕ್ರಿಯೇಟಿವ್ ತರಬೇತಿ ಕೇಂದ್ರದ ಮಾಲೀಕ ಶ್ರೀನಿವಾಸ್ ಮುರುಡೇಶ್ವರ್ ಮತ್ತು ಸಿಡಾಕ್ ತರಬೇತುದಾರ ಶಿವರಾಜ್ ಕುಮಾರ್ ಹೆಳವಿ ಉಪಸ್ಥಿತರಿದ್ದರು.
 ತರಬೇತಿ ಸಂಸ್ಥೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕೌಶಲ್ಯ ವಿಕಾಸದ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

ಯಲ್ಲಾಪುರದ ಇಬ್ಬರು, ಜಿಲ್ಲೆಯ ಒಬ್ಬರಿಗೆ ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಘೋಷಣೆ


ವರದಿ : ಜಗದೀಶ ನಾಯಕ
ಯಲ್ಲಾಪುರ : ಕರ್ನಾಟಕ ನಾಟಕ ಅಕಾಡೆಮಿ ಈ ವರ್ಷದ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ನಾಟಕ ಕ್ಷೇತ್ರದಲ್ಲಿ ಮಂಜುನಾಥ ತಿಮ್ಮಣ್ಣ ಭಟ್, ಹವ್ಯಾಸಿ ರಂಗಭೂಮಿಯ ಕಲೆಗೆ ಸುರೇಶ ಸಿದ್ದಿ ಹಾಗೂ ರಂಗಭೂಮಿಯ ದಿಗ್ಗಜೆಯಾಗಿ ಬೆಳಗಿದ ಸಾಧಕಿ ಯಲ್ಲಾಪೂರದ ಗಿರೀಜಾ ಸಿದ್ದಿ ಇವರಿಗೆ ವಾರ್ಷಿಕ ಪ್ರಶಸ್ತಿ ಘೋಷಣೆಯಾಗಿದೆ. ಮೂವರು ಸಾಧಕರನ್ನು ಪರಿಚಯಿಸುವ ಸಣ್ಣ ಪ್ರಯತ್ನ ಯಲ್ಲಾಪುರ‌ ನ್ಯೂಸ್ ನಿಂದ.
 
ನಾಟಕ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಂಜುನಾಥ ತಿಮ್ಮಣ್ಣ ಭಟ್ಟರ ಕೊಡುಗೆ: 33 ವರ್ಷಗಳ ಸೇವೆ
ಮಂಜುನಾಥ ತಿಮ್ಮಣ್ಣ ಭಟ್ಟರು, ಇವರು ನಾಟಕ ಕಲಾವಿದರು ಮತ್ತು ಶಿಕ್ಷಕರಾಗಿ 33 ವರ್ಷ ಸೇವೆ ಸಲ್ಲಿಸಿದ್ದಾರೆ. ತಮ್ಮ 5-6ನೇ ತರಗತಿಯಲ್ಲಿ ರಂಗಭೂಮಿಗೆ ಪ್ರವೇಶಿಸಿದ ಅವರು, 20ಕ್ಕೂ ಹೆಚ್ಚು ಏಕಾಂಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ನವಿಲಗೋಣದ ಪ್ರಸಿದ್ಧ ನಾಟಕಕಾರ ರಾಮಚಂದ್ರ ಭಟ್ಟರ ಶಿಷ್ಯರಾಗಿದ್ದ ಮಂಜುನಾಥ ಭಟ್ಟರು, 1962ರಲ್ಲಿ ಯುವಜನ ಮೇಳ ಮತ್ತು ಸ್ಥಳೀಯ ಮಿತ್ರ ಮಂಡಳಿಗಳನ್ನು ಪ್ರಾರಂಭಿಸಿ, ಐತಿಹಾಸಿಕ, ಪೌರಾಣಿಕ, ಸಾಮಾಜಿಕ ನಾಟಕಗಳಲ್ಲಿ 30ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಭಾಗಿಯಾಗಿದ್ದಾರೆ.
    ಮಂಜುನಾಥ ಭಟ್ಟರು, "ಮಾರ್ಕಂಡೇಯ," "ಆಹಲ್ಲೋದ್ಧಾರ" ಮತ್ತು "ನನ್ನ ಗೋಪಾಲ" ಸೇರಿದಂತೆ ಹಲವು ನಾಟಕಗಳನ್ನು ಬರೆದಿದ್ದಾರೆ ಮತ್ತು ನಿರ್ದೇಶನ ಮಾಡಿದ್ದಾರೆ. 'ಬೇಲಿ ಹಣ್ಣು' ನಾಟಕ, ಬೆಂಗಳೂರಿನ ಟೌನ್ ಹಾಲ್‌ನಲ್ಲಿ ಪ್ರದರ್ಶನಗೊಂಡು ಜನಮನ್ನಣೆ ಪಡೆದಿದೆ. 25ನೇ ವಯಸ್ಸಿನಲ್ಲಿ ವೃತ್ತಿರಂಗಭೂಮಿಯಲ್ಲಿ ಪ್ರವೇಶಿಸಿದ ಭಟ್ಟರು, ಖಳನಾಯಕ, ಹಾಸ್ಯಪಾತ್ರ, ಪೋಷಕ ಪಾತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. 'ಕಲಾವಿದ' ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳನ್ನು ಗಳಿಸಿದ್ದಾರೆ.

ಹವ್ಯಾಸಿ ರಂಗಭೂಮಿಯ ಕಲಾವಿದ: ಸುರೇಶ ರಾಮಚಂದ್ರ ಸಿದ್ದಿಗೆ ಪ್ರಶಸ್ತಿ
ಯಲ್ಲಾಪುರ ತಾಲೂಕಿನ ಮಂಚಿಕೇರಿ ಗ್ರಾಮದ ಬಾಚನಳ್ಳಿ ನಿವಾಸಿ ಇವರು, ರಂಗಭೂಮಿ ಕಲಾವಿದ ಸುರೇಶ ರಾಮಚಂದ್ರ ಸಿದ್ದಿ, ಉತ್ತರ ಕನ್ನಡದ ರಂಗಭೂಮಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಪೋಷಕರ ಕಲಾಪ್ರವೃತ್ತಿಯ ಪರಿಣಾಮವಾಗಿ, ಅವರು ಬಾಲ್ಯದಿಂದಲೇ ಸಂಗೀತ, ವಾದ್ಯ ಮತ್ತು ನೃತ್ಯ ಕಲೆಯನ್ನು ಅರ್ಥೈಸಿದರು. ತಂದೆ ರಾಮಚಂದ್ರ ಪುಟ್ಟಾ ಸಿದ್ದಿಯವರಿಂದ ಕುಣಿತ ಮತ್ತು ಸಂಗೀತ ಕಲಿತು, ಸೋದರ ಮಾವ ಬಾಬು ಸಿದ್ದಿಯಿಂದ ಸಣ್ಣಾಟದ ಕಲೆಯನ್ನು ಮೈಗೂಡಿಸಿಕೊಂಡರು.
   ಅನೇಕ ಆರ್ಥಿಕ ಮತ್ತು ಕೌಟುಂಬಿಕ ಸಮಸ್ಯೆಗಳ ನಡುವೆಯೂ, ಸುರೇಶ ಸಿದ್ದಿ ಶಾಲೆಯ ಮೆಟ್ಟಿಲು ಹತ್ತದೆ ರಂಗಭೂಮಿಯ ಜೊತೆ ಹೊಟ್ಟೆಪಾಡಿಗಾಗಿ ಕೂಲಿ ಕೆಲಸ ಮಾಡಿಕೊಂಡಿದ್ದರು.  
 ಯಲ್ಲಾಪುರ ತಾಲೂಕಿನ ವಿವಿಧ ತಂಡಗಳಲ್ಲಿ ನಟ ಹಾಗೂ ಭಾಗವತಿಯಾಗಿ ಪಾಲ್ಗೊಂಡು, ಸಿದ್ಧಿ ಸಮುದಾಯದ ಕಲೆಗಳನ್ನು ಜೀವಂತವಾಗಿಟ್ಟಿದ್ದಾರೆ. ರಾಜ್ಯದ ಪ್ರಮುಖ ನಿರ್ದೇಶಕರಾದ ರಘುನಂದನ, ಚಿದಂಬರ ರಾವ್ ಮತ್ತು ಪರಶುರಾಮ ಗಿರಗೋಲಿಯಂತಹವರೊಂದಿಗೆ ಕೆಲಸ ಮಾಡುವ ಅವಕಾಶವನ್ನು ಅವರು ಪಡೆದಿದ್ದಾರೆ.
  ಪ್ರಸಕ್ತದಲ್ಲಿ, ಕೃಷಿಕರಾಗಿಯೂ, ವಾದಕರಾಗಿಯೂ, ಹವ್ಯಾಸಿ ರಂಗಭೂಮಿಯಲ್ಲಿ ತಮ್ಮ ಕೊಡುಗೆಯನ್ನು ಮುಂದುವರಿಸುತ್ತಿದ್ದಾರೆ.

ರಂಗಭೂಮಿಯ ದಿಗ್ಗಜೆಯಾಗಿ ಬೆಳಗಿದ ಸಾಧಕಿ ಯಲ್ಲಾಪೂರದ ಗಿರೀಜಾ ಸಿದ್ದಿ: 
ಉತ್ತರಕನ್ನಡ ಜಿಲ್ಲೆಯ ಯಲ್ಲಾಪೂರ ತಾಲೂಕಿನ ಮಂಚಿಕೇರಿಯ ಅಣಲೇಸರ ಗ್ರಾಮ ಮೂಲದ ಗಿರೀಜಾ ಸಿದ್ದಿ, ಸಿದ್ದಿ ಸಮುದಾಯದ ಪ್ರಮುಖ ಕಲಾವಿದೆಯಾಗಿದ್ದು, ರಂಗಭೂಮಿ, ಗಾಯಕಿ, ಮತ್ತು ರಂಗ ನಿರ್ದೇಶಕಿ ಎಂದು ಗುರುತಿಸಿಕೊಂಡಿದ್ದಾರೆ. ತಮ್ಮ ತಂದೆ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಶುರಾಮ ಗಿರಗೋಲಿ ಸಿದ್ದಿ, ಮತ್ತು ತಾಯಿ ಲಕ್ಷ್ಮೀ ಸಿದ್ದಿ ಅವರಿಂದ ಸಾಂಸ್ಕೃತಿಕ ಪರಂಪರೆಯನ್ನು ಪಡೆದು ಬೆಳೆದ ಗಿರೀಜಾ, ಪುಗಡಿ ನೃತ್ಯ, ಡಮಾಮಿ ಹಾಡುಗಳಲ್ಲಿ ಪಾಂಡಿತ್ಯ ಹೊಂದಿದ್ದಾರೆ.
   ನೀನಾಸಮ್‌ನಲ್ಲಿ ರಂಗಶಿಕ್ಷಣ ಪಡೆದ ಗಿರೀಜಾ ಸಿದ್ದಿ, ಈ ತರಬೇತಿ ಪಡೆದ ಸಿದ್ದಿ ಸಮುದಾಯದ ಪ್ರಥಮ ಮಹಿಳೆಯಾಗಿದ್ದಾರೆ. ನೀನಾಸಮ್ ತಂಡದೊಂದಿಗೆ ಇವರು ವರ್ಷಗಳ ಕಾಲ ನಟಿಯಾಗಿ ಮತ್ತು ವಸ್ತ್ರ ವಿನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಅನೇಕ ರಾಜ್ಯ ಮತ್ತು ರಾಷ್ಟ್ರ ಮಟ್ಟದ ರಂಗ ಸಂಸ್ಥೆಗಳಲ್ಲಿ ತಮ್ಮ ಕಲೆ ಪ್ರದರ್ಶಿಸಿರುವ ಗಿರೀಜಾ, ಜಾನಪದ ನಾಟಕಗಳು, ಯಕ್ಷಗಾನ, ಮತ್ತು ಸಾಂಪ್ರದಾಯಿಕ ಕಲೆಗಳ ಕ್ಷೇತ್ರದಲ್ಲಿ ಮಹತ್ತರ ಕೊಡುಗೆ ನೀಡಿದ್ದಾರೆ. 
   ಹೆಚ್ಚು ಪಾಶ್ಚಾತ್ಯ ದೇಶಗಳಲ್ಲಿಯೂ ರಂಗ ಪ್ರದರ್ಶನಗಳನ್ನು ನೀಡಿರುವ ಗಿರೀಜಾ, ತಮ್ಮ ಹಿನ್ನಲೆ ಗಾಯನದ ಮೂಲಕ ಕನ್ನಡ ಚಿತ್ರರಂಗದಲ್ಲೂ ಹೆಸರು ಮಾಡಿದ್ದಾರೆ. "ಸಲಗ" ಮತ್ತು "ಉಗ್ರಾವತಾರ" ಚಿತ್ರಗಳಲ್ಲಿ ಹಿನ್ನಲೆ ಗಾಯಕಿಯಾಗಿ ಉತ್ತಮ ಸಿಂಗರ ಪ್ರಶಸ್ತಿ ಗಳಿಸಿರುವ ಗಿರೀಜಾ, ರಂಗಭೂಮಿಯೊಂದಿಗೆ ಸಂಗೀತ ಕ್ಷೇತ್ರದಲ್ಲಿಯೂ ವಿಶಿಷ್ಟ ಗುರುತಿಸಿಕೊಂಡಿದ್ದಾರೆ.
   ಈ ಮೂವರು ಸಾಧಕರಿಗೆ ಮಂಚಿಕೇರಿ ರಂಗ ಸಮುಹದ ಅಧ್ಯಕ್ಷರಾದ, ರಾಮಕೃಷ್ಣ ಭಟ್ಟ ದುಂಡಿ, ರಂಗಕಲಾವಿದ ಎಂ ಕೆ ಭಟ್ ಯಡಳ್ಳಿ ಹಾಗೂ ರಂಗ ಸಮೂಹದ ಎಲ್ಲ ಪದಾಧಿಕಾರಿಗಳು ಶುಭವನ್ನು ಕೋರಿದ್ದಾರೆ. 

ಅರಣ್ಯದಲ್ಲಿ ಜೋಡಿ ಹಳಿ: ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆಯಲ್ಲಿ ಬದಲಾವಣೆ

ಯಲ್ಲಾಪುರ/ನವದೆಹಲಿ : ಪರಿಸರವಾದಿಗಳ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ವಿನ್ಯಾಸದಲ್ಲಿ ಬದಲಾವಣೆ ಮಾಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಅರಣ್ಯ ಪ್ರದೇಶದಲ್ಲಿ ಜೋಡಿ ಹಳಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. 
 ಉತ್ತರಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಶೋತ್ತರ ಅವಧಿಯಲ್ಲಿ ಕೇಳಿದ ಪ್ರಶ್ನೆಗೆ ಸಚಿವರು ಈ ಉತ್ತರ ನೀಡಿದ   ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಲೋಕಸಭೆಗೆ ತಿಳಿಸಿದಂತೆ, "ಯೋಜನೆಯ ಎಲ್ಲ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿ ಅರಣ್ಯದಲ್ಲಿ ದ್ವಿಪಥಕ್ಕಾಗಿ ವಿಸ್ತ್ರತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗಿದೆ." ಎಂದಿದ್ದಾರೆ.
   ಪಶ್ಚಿಮ ಘಟ್ಟದ 108 ಕಿ.ಮೀ. ದಟ್ಟ ಅರಣ್ಯಗಳ ನಡುವೆ ಸಾಗುವ ಈ ಯೋಜನೆ ಅನುಷ್ಠಾನಕ್ಕಾಗಿ 2 ಲಕ್ಷ ಮರಗಳ ಹನನ ಮಾಡಬೇಕಾಗುತ್ತದೆ ಎಂದು ಪರಿಸರವಾದಿಗಳು ಕಳವಳ ವ್ಯಕ್ತಪಡಿಸಿದ್ದರು. 
   "ಹುಬ್ಬಳ್ಳಿ-ಕಿರವತ್ತಿ (47 ಕಿ.ಮೀ) ವಿಭಾಗದಲ್ಲಿ ಮಣ್ಣು ಮತ್ತು ಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ಆದರೆ, 569.64 ಹೆಕ್ಟೇರ್ ಅರಣ್ಯ ಭೂಮಿಯ ಅರಣ್ಯ ಮತ್ತು ವನ್ಯಜೀವಿ ಅನುಮೋದನೆ ಹಾಗೂ ಸಂಬಂಧಿತ ವ್ಯಾಜ್ಯಗಳಿಂದಾಗಿ ಉಳಿದ ಕಾಮಗಾರಿ ಕಾರ್ಯಗತಗೊಳಿಸಲು ಸಾಧ್ಯವಾಗಿರಲಿಲ್ಲ. ಈಗ ವ್ಯಾಜ್ಯ ಇತ್ಯರ್ಥವಾಗಿರುವ ಕಾರಣ ವನ್ಯಜೀವಿಗಳಿಗೆ ಪದೇ ಪದೇ ತೊಂದರೆಯಾಗುವುದನ್ನು ತಪ್ಪಿಸಲು ಅರಣ್ಯ ಪ್ರದೇಶದಲ್ಲಿ ಜೋಡಿ ಹಳಿ ನಿರ್ಮಿಸಲು ನಿರ್ಧರಿಸಲಾಗಿದೆ" ಎಂದು ಸಚಿವರು ತಿಳಿಸಿದರು. 
   ಡೆಹ್ರಡೂನ್‌ನ ವನ್ಯಜೀವಿ ಸಂಸ್ಥೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ರೈಲ್ವೆ ಇಲಾಖೆಯು ಡಿಪಿಆ‌ರ್ ಸಿದ್ಧಪಡಿಸಿದೆ.

ಬೈಲಂದೂರ ಗ್ರಾಮದಲ್ಲಿ 1.43 ಲಕ್ಷ ರೂ. ಮೌಲ್ಯದ ಬಂಗಾರದ ಕಳ್ಳತನ

 ಯಲ್ಲಾಪುರ: ತಾಲೂಕಿನ ಬೈಲಂದೂರ ಗ್ರಾಮದಲ್ಲಿ ಮನೆಯೊಂದರಲ್ಲಿ 22 ಜುಲೈ 2024 ರಂದು  1,43,000 ರೂಪಾಯಿ ಮೌಲ್ಯದ ಬಂಗಾರದ ಆಭರಣಗಳನ್ನು ಕಳವು ಮಾಡಲಾಗಿದೆ ಎಂದು ಲಕ್ಷ್ಮೀ ಸಂತೋಷ ದೇಸಾಯಿ ಆಗಸ್ಟ್ 8ರಂದು ಯಲ್ಲಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
   ಈ ಘಟನೆ ಲಕ್ಷ್ಮೀ ದೇಸಾಯಿ ಅವರು ಮನೆಯಿಂದ ಹೊರಗಿದ್ದ ವೇಳೆ, ಬೆಳಿಗ್ಗೆ 9:00 ರಿಂದ ಸಂಜೆ 4:30 ಗಂಟೆಗಳ ಅವಧಿಯಲ್ಲಿ ನಡೆದಿದ್ದು,

ಅವರ ಮನೆಯ ಬೀಗವನ್ನು ಯಾರೋ ಕಳ್ಳರು ಗಟ್ಟಿಯಾದ ವಸ್ತುವಿನಿಂದ ಮುರಿದು ಒಳನುಗ್ಗಿದ್ದಾರೆ. ಡ್ರಾವರ್‌ನಲ್ಲಿದ್ದ ಸುಮಾರು 1,43,000 ರೂಪಾಯಿ ಮೌಲ್ಯದ ಬಂಗಾರದ ಆಭರಣಗಳನ್ನು ಕಳವು ಮಾಡಿದ್ದಾರೆ. ಕಳ್ಳತನವಾದ ವಸ್ತುಗಳಲ್ಲಿ 16 ಗ್ರಾಂ ತೂಕದ ಲಕ್ಷ್ಮೀ ಸರ, 93,000 ರೂಪಾಯಿ ಮೌಲ್ಯ ಮತ್ತು ಒಂದೊಂದು ಜೊತೆ ಬಂಗಾರದ ಜುಮುಕಿ, ಬೆಂಡೋಲೆ, ಕಿವಿಯ ಸರಪಳಿಗಳ ಮೌಲ್ಯ 50,000 ರೂಪಾಯಿ ಎಂದು ಅಂದಾಜಿಸಲಾಗಿದೆ. 
   ತಕ್ಷಣವೇ ಪೊಲೀಸರು ಸ್ಥಳಕ್ಕೆ ಧಾವಿಸಿ, ಸ್ಥಳ ಪರಿಶೀಲನೆ ನಡೆಸಿದ್ದಾರೆ.  ಕಳುವಾದ ಆಭರಣಗಳ ಬಗ್ಗೆ ತಕ್ಷಣ ಮನೆದವರೊಂದಿಗೆ ಚರ್ಚಿಸಿ, ಘಟನೆಯ ಬಗ್ಗೆ ಯಲ್ಲಾಪುರ ಠಾಣೆಗೆ ದೂರು ನೀಡಲು ವಿಳಂಬವಾಗಿದೆ. ಪ್ರಸ್ತುತ, ಕಳವು ಸಂಬಂಧಿಸಿದ ತನಿಖೆಯನ್ನು ಪಿಎಸ್ಐ ನಿರಂಜನ ಹೆಗಡೆ ನೇತೃತ್ವದಲ್ಲಿ ಯಲ್ಲಾಪುರ ಪೊಲೀಸ್ ಠಾಣೆ ನಡೆಸುತ್ತಿದೆ.    

ಯಲ್ಲಾಪುರದದಲ್ಲಿ ಅಡಿಕೆ ವ್ಯವಹಾರದಲ್ಲಿ ಮೋಸ: ರೈತರಿಂದ ದೂರು

ಯಲ್ಲಾಪುರ: ಶಿರಸಿ ತಾಲ್ಲೂಕಿನ ಬಿಳೂರ ಗ್ರಾಮದ ರೈತ ಮಂಜುನಾಥ ನಾಯ್ಕ ಎಂಬುವವರು ಯಲ್ಲಾಪುರ ಟಿಎಸ್ಎಸ್ ಅಡಿಕೆ ವ್ಯವಹಾರದಲ್ಲಿ ದೊಡ್ಡ ಮಟ್ಟದ ಮೋಸವಾಗಿದೆಯೆಂದು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು ನೀಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಬಿಳೂರ ಮತ್ತು ಉಲ್ಲಾಳಕೊಪ್ಪದ ಕೆಲವು ರೈತರು ಕೂಡಾ ಸಾಕ್ಷಿಗಳಾಗಿ ಬೆಂಬಲ ನೀಡಿದ್ದಾರೆ. 
   ಶಿರಸಿ ಬಿಳೂರು ಗ್ರಾಮದ ಮಂಜುನಾಥ ಲಕ್ಷ್ಮಣ ನಾಯ್ಕ,  ಈಶ್ವರ ಫಕೀರಪ್ಪ ನಾಯ್ಕ, ಈರಪ್ಪ ನಾಗೇಶ ನಾಯ್ಕ ಮತ್ತು ಶಿರಸಿ ಉಲ್ಲಾಳಕೊಪ್ಪದ ಶ್ರೀಧರ ಭಟ್ಟ ಎಂಬ ನಾಲ್ಕು ರೈತರು ತಮ್ಮ ಅಡಿಕೆಯನ್ನು ಹರಾಜು ಹಾಕಲು 2024ರ ಜುಲೈ 22ರಂದು ಯಲ್ಲಾಪುರ ಟಿ.ಎಸ್.ಎಸ್  ಶಾಖೆಗೆ ಬಂದಿದ್ದರು. ಹರಾಜು ಪ್ರಕ್ರಿಯೆಯು ಬೆಳಗ್ಗೆ 10:00ರಿಂದ ಸಂಜೆ 5:00ರವರೆಗೆ ನಡೆದಿತ್ತು. ಈ ಸಂದರ್ಭದಲ್ಲಿ, ಅಡಿಕೆ ಲಾಟ ಸಂಖ್ಯೆ 30, 35, ಮತ್ತು 36ವನ್ನು ಹರಾಜಿಗೆ ಹಾಕಲಾಗಿತ್ತು. ಲಾಟ 30ರಲ್ಲಿ 18,876 ರೂ ಗೆ ಹರಾಜು ಆಗಿದ್ದು, ನಂತರ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಆರೋಪಿಗಳು 12,899 ರೂ ಎಂದು  ತಿದ್ದುಪಡಿ ಮಾಡಿ, ಮೋಸದ ಮೂಲಕ ವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ. 
   ಈ ಪ್ರಕರಣದಲ್ಲಿ ಗೋಪಾಲಕೃಷ್ಣ ಮತ್ತಿಗಟ್ಟ, ಸಂತೋಷ ಹಳವಳ್ಳಿ, ಕೃಷ್ಣ ಜೂಜಿನಬೈಲ್,  ಗಿರೀಶ ಶಿರಸಿ ಮತ್ತು ರವಿ ಚಿಪಗಿ ಎಂಬ ಐವರ ವಿರುದ್ಧ ದೂರು ದಾಖಲಾಗಿದೆ.   
   ಈ ಘಟನೆ ಕುರಿತು ರೈತ ಒಕ್ಕೂಟದ ಜೊತೆ ಚರ್ಚಿಸಿ ದೂರು ನೀಡಲು ವಿಳಂಭವಾಗಿರುವ ಬಗ್ಗೆ ತಮ್ಮ ದೂರಿನಲ್ಲಿ‌ ತಿಳಿಸಿದ್ದಾರೆ.    
   ಯಲ್ಲಾಪುರ ಪೊಲೀಸ್ ಠಾಣೆಯ ಪಿಎಸ್ಐ ನಿರಂಜನ ಹೆಗಡೆ, ದೂರು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ.