Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Tuesday, 6 August 2024

ಯಲ್ಲಾಪುರದಲ್ಲಿ ಇಬ್ಬರು ಟಿಪ್ಪರ್ ಲಾರಿಗಳ ಬ್ಯಾಟರಿ ಕಳ್ಳರು ಬಂಧನ, ವಾಹನ ವಶ

ಯಲ್ಲಾಪುರ: ತಾಲೂಕಿನ ಕಾಳಮ್ಮನಗರದಲ್ಲಿ ನಿಲ್ಲಿಸಿಟ್ಟ ಟಿಪ್ಪರ್ ಲಾರಿಗಳ ಬ್ಯಾಟರಿ ಕಳ್ಳತನ ಪ್ರಕರಣದಲ್ಲಿ ಪೊಲೀಸರು ಮಂಗಳವಾರ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 40,000 ರೂಪಾಯಿ ಮೌಲ್ಯದ ಕಳ್ಳತನವಾದ ಬ್ಯಾಟರಿಗಳು ಮತ್ತು ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
  ಕಾಳಮ್ಮನಗರ ನಿವಾಸಿ ಸಂಕೇತ ರಾಜೀವ ನಾಯ್ಕ, ತನ್ನ ನಾಲ್ಕು ಟಿಪ್ಪರ್ ಲಾರಿಗಳ ಬ್ಯಾಟರಿಗಳು ಮತ್ತು ಹೈಡ್ರಾಲಿಕ್ ಜಾಕ್ ಕಳ್ಳತನವಾಗಿರುವುದಾಗಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
  ಬಂಧಿತ ಆರೋಪಿಗಳು ಹಳಿಯಾಳ ನಿವಾಸಿ ಸುಭಾನಿ ಹಸನಸಾಬ ಜಂಗಲೆ, ಸಿದ್ದಿ(25) ಮತ್ತು ಮಂಚಿಕೇರಿ ನಿವಾಸಿ ಅಬ್ದುಲಹಮೀದ ಮಜೀದಸಾಬ ಮುಜಾವರ(22) ವೃತ್ತಿಯಲ್ಲಿ ಚಾಲಕನಾಗಿದ್ದಾನೆ. ಪೊಲೀಸರು ಆರೋಪಿಗಳನ್ನು ಕೂಲಂಕಷವಾಗಿ ವಿಚಾರಣೆ ನಡೆಸುತ್ತಿದ್ದು, ಈ ಕಳ್ಳತನಕ್ಕೆ ಇನ್ನೂ ಇತರರು ಸಹಚರರಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.
   ಈ ಕಾರ್ಯಾಚರಣೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಮ್. ನಾರಾಯಣ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಜಯಕುಮಾರ ಮತ್ತು ಜಗದೀಶ ನಾಯ್ಕ ಹಾಗೂ ಪೊಲೀಸ್ ಉಪಾಧೀಕ್ಷಕರಾದ ಗಣೇಶ ಕೆ.ಎಲ್ ಇವರ ಮಾರ್ಗದರ್ಶನದಲ್ಲಿ ಯಲ್ಲಾಪುರ ಪೊಲೀಸ್ ಠಾಣೆಯ ಪಿಎಸ್ಐ ರಮೇಶ ಹಾನಾಪುರ ನೇತೃತ್ವದಲ್ಲಿ ಪಿಎಸ್‌ಐ ನಿರಂಜನ ಹೆಗಡೆ. ಪಿಎಸ್‌ಐ ಸಿದ್ದಪ್ಪ ಗುಡಿ ಹಾಗೂ ಸಿಬ್ಬಂದಿಯವರಾದ ಬಸವರಾಜ ಹಗರಿ, ಮಹ್ಮದ ಶಫೀ, ಉಮೇಶ ತುಂಬರಗಿ, ಮಹಾವೀರ ಡಿ.ಎಸ್. ಆರೋಪಿತರನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 

ಯಲ್ಲಾಪುರದಲ್ಲಿ 17ನೇ ವರ್ಷದ ಶ್ರಾವಣ ಮಾಸದ ಸಾಮೂಹಿಕ ಅರಶಿಣ-ಕುಂಕುಮ ಕಾರ್ಯಕ್ರಮ

ಯಲ್ಲಾಪುರ: ವಿಶ್ವ ಹಿಂದೂ ಪರಿಷತ್ ಮತ್ತು ವಿಶ್ವ ಹಿಂದೂ ಪರಿಷತ್ ಮಾತೃ ಮಂಡಳಿ ಆಶ್ರಯದಲ್ಲಿ 17ನೇ ವರ್ಷದ ಶ್ರಾವಣ ಮಾಸದ ಸಾಮೂಹಿಕ ಅರಶಿಣ-ಕುಂಕುಮ ಕಾರ್ಯಕ್ರಮವು ಆಗಸ್ಟ್ 14, ರಂದು ಮಧ್ಯಾಹ್ನ 3.00ರಿಂದ 6.30ರವರೆಗೆ ಶ್ರೀ ಗ್ರಾಮದೇವಿ ದೇವಸ್ಥಾನದಲ್ಲಿ ನಡೆಯಲಿದೆ.
   ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಭಗವದ್ಗೀತೆ ಅಭಿಯಾನದ ರಾಜ್ಯ ಸಂಚಾಲಕಿ ಹಾಗೂ ಬೆಂಗಳೂರಿನ ಸಮಾಜಸೇವಕಿ ಪೂರ್ಣಿಮಾ ಮಂಜುನಾಥ ಜನ್ನು ಅವರು ಭಾಗವಹಿಸಲಿದ್ದಾರೆ. ಅವರ ಉಪನ್ಯಾಸವು ಭಗವದ್ಗೀತೆ ಮತ್ತು ಅದ್ಭುತ ಗ್ರಂಥದ ಆಧ್ಯಾತ್ಮಿಕ ವಿಷಯದ ಬಗ್ಗೆ ವಿವರಣೆ ನೀಡಲಿದೆ. 
   ಕಾರ್ಯಕ್ರಮಕ್ಕೆ ವಿ.ಹಿಂ.ಪ. ಮಾತೃ ಮಂಡಳಿ ಅಧ್ಯಕ್ಷೆ ನಮೀತಾ ನಾಗರಾಜ ಬೀಡಿಕರ ಹಾಗೂ ಕಾರ್ಯಕ್ರಮ ಸಂಘಟಕರು ತಿಳಿಸಿದ್ದಾರೆ. 

ಕುಡಿದ ನಶೆಯಲ್ಲಿ ಮಲಗಿದ್ದಲ್ಲಿಯೇ ವ್ಯಕ್ತಿಯ ಸಾವು

ಯಲ್ಲಾಪುರ: ಕುಡಿದ ನಶೆಯಲ್ಲಿ ಮಲಗಿದ್ದಲ್ಲಿಯೇ ವ್ಯಕ್ತಿಯ ಸಾವನಪ್ಪಿರುವ ಘಟನೆ ಮಂಗಳವಾರ ಪಟ್ಟಣದ ಪೋಸ್ಟ್ ಆಫೀಸ್ ಮುಂಭಾಗದ ಹಳೆಯ ಕಟ್ಟಡದಲ್ಲಿ ಪತ್ತೆಯಾಗಿದೆ. 
   ಪಟ್ಟಣದ ಅಕ್ಬರಗಲ್ಲಿ ನಿವಾಸಿ ವೃತ್ತಿಯಲ್ಲಿ ಆಚಾರಿ ಕೆಲಸ ಮಾಡುವ ಅಬ್ದುಲ್ ಖಾದರ್ ಖಾನ್ (65) ಮೃತರಾಗಿದ್ದು, ಅವರ ಸಾವಿಗೆ ಸಂಬಂಧಿಸಿದಂತೆ ಮೃತನ ಮಗ ಮುರ್ತುಜಾ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಮುರ್ತುಜಾ ಖಾನ್ ದೂರಿನ ಪ್ರಕಾರ, ಅಬ್ದುಲ್ ಖಾದರ್ ಖಾನ್ ಅವರು ಮದ್ಯಪಾನದ ನಶೆಯಲ್ಲಿ ನಿದ್ರಿಸುತ್ತಿದ್ದು, ನಿದ್ರೆಯಲ್ಲಿಯೇ ಮೃತರಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಸಂಶಯವಿಲ್ಲ, ಅಬ್ದುಲ್ ಖಾನ್ ಕೆಲವು ದಿನಗಳಿಂದ ವಿಪರೀತ ಮದ್ಯಪಾನದಲ್ಲಿ ತೊಡಗಿಸಿಕೊಂಡಿದ್ದರು. ಜುಲೈ 30 ರಂದು ಬೆಳಗ್ಗೆ 11 ಗಂಟೆಗೆ ಮನೆಯಿಂದ ನಿರ್ಗಮಿಸಿದ ಅಬ್ದುಲ್ ಖಾದರ್ ಖಾನ್, ಆಗಸ್ಟ್ 6 ರಂದು ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಅವರ ಪುತ್ರ ತಿಳಿಸಿದ್ದಾನೆ.
      ಪ್ರಕರಣವನ್ನು ಯಲ್ಲಾಪುರ ಪೊಲೀಸ್ ಠಾಣೆಯ ಟ್ರಾಫಿಕ್ ಪಿ.ಎಸ್.ಐ ನಸ್ರೀನತಾಜ್ ಚಟ್ಟರಕಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮಂಚಿಕೇರಿ ರಾಜರಾಜೇಶ್ವರಿ ವಿದ್ಯಾಸಂಸ್ಥೆಯಲ್ಲಿ ಕಾನೂನು ಅರಿವು ಮತ್ತು ವಿದ್ಯಾರ್ಥಿ ಪರಿಷತ್ತಿನ ಉದ್ಘಾಟನೆ


ಯಲ್ಲಾಪುರ: ತಾಲೂಕಿನ ಮಂಚಿಕೇರಿಯ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ಕಾನೂನು ಅರಿವು ಮಾಹಿತಿ ಕಾರ್ಯಾಗಾರ ಮತ್ತು ವಿದ್ಯಾರ್ಥಿ ಸಂಸತ್ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಯಲ್ಲಾಪುರ ಪಿ ಐ ರಮೇಶ್ ಹಾನಾಪುರ್ ಉದ್ಘಾಟಿಸಿದರು.
  ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾಫಿಯಾದ ಅಪಾಯ, ಟ್ರಾಫಿಕ್ ನಿಯಮಗಳು ಪಾಲಿಸುವಂತೆ ಮತ್ತು ಇತಿಂಇತಿಯಲ್ಲಿ ಮೊಬೈಲ್ ಬಳಕೆ ಮಾಡುವಂತೆ ಕುರಿತು ಸವಿಸ್ತಾರವಾಗಿ ವಿವರಿಸಿದರು. "ಅನಾಹುತಗಳನ್ನು ತಡೆಯಲು, ಕಾನೂನು ಪಾಲನೆ ಅತ್ಯವಶ್ಯಕ," ಎಂದು ತಿಳಿಸಿದ ಅವರು, ಹೆಣ್ಣು ಮಕ್ಕಳಿಗೆ ತೊಂದರೆ ಎದುರಾದಲ್ಲಿ, 112 ಗೆ ಕರೆ ಮಾಡಿ, ನಿಮ್ಮ ರಕ್ಷಣೆಗೆ ಪೊಲೀಸರು ಸದಾ ಸಿದ್ದ ಎಂದು ಭರವಸೆ ನೀಡಿದರು.
   ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಎಂ. ಕೆ. ಭಟ್ ಯಡಳ್ಳಿ ಮಾತನಾಡಿ, "ರಮೇಶ್ ಹಾನಾಪುರ್ ಅವರು ಅಧಿಕಾರಿಯಾಗಿರುವುದರ ಹೊರತಾಗಿಯೂ ಬಡವರಿಗೆ ಮತ್ತು ಸಾರ್ವಜನಿಕರಿಗೆ ಸಹಾಯ ಮಾಡುತ್ತಿದ್ದಾರೆ," ಎಂದು ಶ್ಲಾಘಿಸಿದರು. 
   ಕಂಪ್ಲಿ ಪಂಚಾಯಿತದ ಅಧ್ಯಕ್ಷೆ ರೇಣುಕಾ ಬೋವಿವಡ್ಡರ ವಿದ್ಯಾರ್ಥಿಗಳಿಗೆ ನೈತಿಕತೆ ಮತ್ತು ಶಿಸ್ತು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. 
  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಗುರುಪ್ರಸಾದ್ ಭಟ್ ವಹಿಸಿ, ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. 
  ಕಾರ್ಯಕ್ರಮದ ಪ್ರಾರಂಭದಲ್ಲಿ ವಿದ್ಯಾರ್ಥಿ ಸಂಸತ್ ಪ್ರತಿನಿಧಿಗಳಿಗೆ ಸದಾನಂದ ನಾಯಕ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. 
   ವಿದ್ಯಾರ್ಥಿಗಳು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭವಾಯಿತು. ಲೋಕೇಶ್ ಗುನುಗಾರ್ ಸ್ವಾಗತಿಸಿ, ಪ್ರದೀಪ್ ನಾಯಕ ವಂದಿಸಿದರು. ಶಿಕ್ಷಕಿ ವಿಜಯಲಕ್ಷ್ಮಿ ಮತ್ತು ವಿದ್ಯಾ ಪಟಗಾರ್ ಕಾರ್ಯಕ್ರಮ ನಿರೂಪಿಸಿದರು.

ಕುಕ್ಕಟ ಕದನದ ಅಕ್ಕರೆಯ ಕರೆಯೋಲೆ, ತಮಾಷೆಯ ಆಮಂತ್ರಣ ಪತ್ರಿಕೆ

ಸುದ್ದಿ : ಜಗದೀಶ ನಾಯಕ
ಯಲ್ಲಾಪುರ : ಕುಕ್ಕಟ ಕದನದ ಅಕ್ಕರೆಯ ಕರೆಯೋಲೆ ಇದೇನಿದು ವಿಶೇಷ ಎಂದು ಆಶ್ಚರ್ಯವಾಗಿರಬಹುದು ಹೌದು, ಕೋಳಿ ಅಂಕ ಎಂದು ಕರೆಯಿಸಿಕೊಳ್ಳುವ ಕೋಳಿ ಕಾಳಗದ ಆಮಂತ್ರಣ ಪತ್ರಿಕೆ ಅಥವಾ ಕರಪತ್ರಿಕೆಯೇ ಹೀಗೆ ಪ್ರಕಟವಾಗುತ್ತಿತ್ತು, ಆದರೆ ಸರ್ಕಾರ ಇದೀಗ ಕೋಳಿ ಅಂಕಕ್ಕೆ ನಿಷೇಧ ಹೇರಿರುವದರಿಂದ, ಕಠಿಣ ಕಾನೂನುಗಳಿಂದಾಗಿ ಪೊಲೀಸರ ಭಯಕ್ಕೆ ಕೋಳಿ ಅಂಕವನ್ನು ನಡೆಸುವುದು ಹೋಗಲಿ, ಅದರ ಬಗ್ಗೆ ಮಾತನಾಡಲು ಕೂಡ ಜನ ಭಯ ಬಿಳುತ್ತಿದ್ದಾರೆ.
   ಸುಮಾರು 35 ರಿಂದ 50 ವರ್ಷಗಳ ಹಿಂದೆ ಕೋಳಿ ಅಂಕ ಬಹಳಷ್ಟು ಜನಪ್ರಿಯವಾಗಿತ್ತು, ಅದರಲ್ಲಿಯೂ ದಕ್ಷಿಣ ಕನ್ನಡ, ಈಗಿನ ಉಡುಪಿ ಮತ್ತು ಉತ್ತರ ಕನ್ನಡ, ಭಾಗಶಃ ಶಿವಮೊಗ್ಗ ಜಿಲ್ಲೆಯಲ್ಲಿ ಕೋಳಿ ಅಂಕ ನಡೆಯುತ್ತಿದ್ದವು. ಜನ ಕೋಳಿಗಳ ಮೇಲೆ ಬಾಜಿ ಕಟ್ಟುತ್ತಿದ್ದರು. ಕೋಳಿ ಅಂಕಕ್ಕಾಗಿ ಪ್ರತ್ಯೇಕವಾದ ಜಾತಿಯ ಅಂಕದ ಕೋಳಿಯನ್ನು ಸಾಕಿ ಅದಕ್ಕೆ ಬೇಕಾದ ಆಹಾರವನ್ನು ಒದಗಿಸುತ್ತಿದ್ದರು. ತಮ್ಮ ಕೋಳಿ ಯಾವುದೇ ಕಾರಣಕ್ಕೂ ಸೋಲಬಾರದು ಎನ್ನುವುದಕ್ಕಾಗಿ ಈಗಿನ ರೇಸ್ ಕುದುರೆಗೆ ಸಾಕಿದಂತೆ ಸಾಕಿ ಅದನ್ನು ಕಾಳಗಕ್ಕೆ ಇಳಿಸುತ್ತಿದ್ದರು. ಸೋತ ಕೋಳಿ ಸತ್ತು ಹೋಯಿತು, ಗೆದ್ದ ಕೋಳಿ ಸೋತು ಹೋಯಿತು. ಅನ್ನುವ ರೀತಿಯಲ್ಲಿ ರಕ್ತ ಸೂರಿದು ನಿತ್ರಾಣವಾಗಿ ತನ್ನ ಮಾಲೀಕನಿಗೆ ಗೆದ್ದ ಕೋಳಿ ಜಯತಂದು ಕೊಡುತ್ತಿತ್ತು, ಕೋಳಿ ಅಂಕವನ್ನು ನೋಡಲು ಮತ್ತು ಅದರ ಮೇಲೆ ಹಣ ಕಟ್ಟಲು ನೂರಾರು ಸಂಖ್ಯೆಯಲ್ಲಿ ಜನ ಜಮಾಯಿಸುತ್ತಿದ್ದರು. 
  ಸರಕಾರ ಹಿಂಸೆಗೆ ಪ್ರಚೋದನೆ ಮತ್ತು ಕೋಳಿ ಅಂಕವನ್ನು ಜೂಜು ಎಂದು ಪರಿಗಣಿಸಿರುವ ಪರಿಣಾಮವಾಗಿ ಕೋಳಿ ಕಾಳಗವನ್ನು ನಿಷೇಧಿಸಿದೆ. ಆದರೂ ಅಲ್ಲಿ ಇಲ್ಲಿ ಕದ್ದ ಕುಟುಕುಟು ಮಂಡದ ಹಾಗೆ, ಈಗಲೂ ಕೋಳಿ ಅಂಕವನ್ನು ನಡೆಸಲಾಗುತ್ತದೆ ಆಗಾಗ ಪೊಲೀಸರು ಅಂಕ ನಡೆಸಿದವರನ್ನು ಬಂಧಿಸಿರುವುದು ಇದೆ. ಅದೇನೆ ಇರಲಿ, 
   1980ರ ಸಾಲಿನಲ್ಲಿ ಕೋಳಿ ಅಂಕ ನಡೆಸುವ ಕರಪತ್ರ ಒಂದು ಲಭ್ಯವಾಗಿದ್ದು, ಕಾರವಾರ ತೋಡೂರಿನ ನಿವಾಸಿ ಚೇತನ್ ನಾಯ್ಕ ಯಲ್ಲಾಪುರ ನ್ಯೂಸ್ ಗೆ ಒದಗಿಸಿದ್ದಾರೆ. ಈ ಕರಪತ್ರ ನೋಡಲು ಓದಲು ಬಹಳಷ್ಟು ಕುತೂಹಲ ಭರಿತವಾಗಿದ್ದು ನಮ್ಮ ಓದುಗರಿಗೆ ನೀಡುತ್ತಿದ್ದೇವೆ. ಅದರಲ್ಲಿ ಇರುವ ವಿಷಯ ಹೀಗಿದೆ.
ಶೀರ್ಷಿಕೆ : 'ಕುಕ್ಕಟ ಕದನದ ಅಕ್ಕರೆಯ ಕರೆಯೋಲೆ' ದಿ: 31-8-1980 ಆದಿತ್ಯವಾರ ಮತ್ತು 31-8-1980 ಸೋಮವಾರ ಅಷ್ಟಮಿಯ ಸಲುವಾಗಿ ಮಂಗಲಪದುವಿನಲ್ಲಿ(ಎಲ್ಲಿಯ ಊರು ನಮಗೂ ತಿಳಿದಿಲ್ಲ) ಪ್ರಚಂಡ ಬಹುಮಾನದ ಕೋಳಿ ಅಂಕ, ಆ ಪ್ರಯುಕ್ತವಾಗಿ ತಾವು ತಮ್ಮ ಅಂಕದ ಕೋಳಿಗಳನ್ನು ಹಿಡಿಸಿಕೊಂಡು ಬಂದು ಅಂಕವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ಅಪೇಕ್ಷಿಸುವ ರಾಮ ಅಡಾಪ್ ನೆಕ್ಕಿಲಾರು, ಸಂಜೀವ ಪೂಜಾರಿ. ಬಹುಮಾನದ ವಿವರ ತಾರೀಖು: 31-8-80 ನೇ ಆದಿತ್ಯವಾರ ಗೂಟದ ಕೋಳಿಗೆ ಒಂದು ಮುಡಿ ಅಕ್ಕಿ, ಇಲ್ಲಿ ಪ್ರತಿ ಆದಿತ್ಯವಾರ ಮತ್ತು ಗುರುವಾರ ಕೋಳಿ ಅಂಕವಿದೆ.

ಈಗ ನಮಗೆ ತಮಾಷೆಯಂತೆ ಕಾಣುವ ಕೋಳಿ ಅಂಕದ ಆಮಂತ್ರಣ ಅಂದು ಸಹಜವಾಗಿತ್ತು.

ವಜ್ರಳ್ಳಿ : ಕೊಳೆರೋಗದಿಂದ ಅಡಿಕೆ ಬೆಳೆ ನಷ್ಟ: ರೈತರು ಸಂಕಟದಲ್ಲಿ



ವರದಿ ; ದತ್ತಾತ್ರೇಯ ಭಟ್ಟ ಕಣ್ಣಿಪಾಲ 
ಯಲ್ಲಾಪುರ : ತಾಲೂಕಿನ ವಜ್ರಳ್ಳಿಯ ಬೀಗಾರ, ವಜ್ರಳ್ಳಿ, ತೇಲಂಗಾರ, ಹೊನ್ನಗದ್ದೆ ಸೇರಿದಂತೆ ಹಲವಾರು ಹಳ್ಳಿಗಳಲ್ಲಿ ಅಡಿಕೆ ಕೊಳೆರೋಗ ವ್ಯಾಪಕವಾಗಿ ಹರಡಿದೆ. ನಿರಂತರ ಮಳೆಯಿಂದಾಗಿ ಬೆಳೆಗಾರರು ಕಂಗಾಲಾಗಿದ್ದು, ಔಷಧಿ ಸಿಂಪರಣೆಯ ಮೂಲಕ ರೋಗವನ್ನು ನಿಯಂತ್ರಣ ತರಲು ಸಾಧ್ಯವಾಗುತ್ತಿಲ್ಲ. ಬಿರುಸಿನ ಗಾಳಿ ಹಾಗೂ ಮಳೆಯಿಂದ ಎತ್ತರದ ಅಡಿಕೆ ಮರಗಳು ನೆಲಕ್ಕುರುಳಿವೆ. ಅಡಿಕೆ ಬೆಳೆಗಾರರು ಈ ಬಾರಿ ಇಳುವರಿ ಕುಂಠಿತವಾಗುವ ಭಯದಲ್ಲಿ ಸಂಕಟ ಅನುಭವಿಸುತ್ತಿದ್ದಾರೆ. 
  ಕೊಳೆರೋಗ ತೀವ್ರವಾಗಿ ಹರಡಿರುವುದರಿಂದ ಔಷಧಿ ಸಿಂಪರಣೆ ಮಾಡಲು ಕೊನೆಗೌಡರ ಕೊರತೆ ಉಂಟಾಗಿದೆ. ಕೊಳೆ ಅಡಿಕೆ ಒಣಗಿಸಲು ಡ್ರೈಯರ್‌ಗಳ ಕೊರತೆಯಿಂದ ಬೆಳೆಗಾರರು ಕಷ್ಟದಲ್ಲಿದ್ದಾರೆ. ಬಲಿಯದ ಎಳೆಯ ಅಡಿಕೆಗಳು ಕೊಳೆರೋಗದಿಂದ ಉದುರಿದ ಪರಿಣಾಮ ಮುಂಬರುವ ಫಸಲಿನಲ್ಲಿ ಅಪಾರ ಬೆಳೆ ನಷ್ಟ ಸಂಭವಿಸುವ ಸಾಧ್ಯತೆಯಿದೆ.
 

 ವಜ್ರಳ್ಳಿಯ ಭಾಗದಲ್ಲಿ ಭತ್ತ, ಕಬ್ಬು, ಅಡಿಕೆ, ತೆಂಗು, ಗೇರು, ಮಾವು ಮುಂತಾದ ಪಾರಂಪರಿಕ ಬೆಳೆಗಳನ್ನು ನಂಬಿದ ರೈತರು ಈಗ ಅತೀವೃಷ್ಟಿಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ ದಶಕದಿಂದ ಇಷ್ಟೊಂದು ಪ್ರಮಾಣದಲ್ಲಿ ಬೆಳೆ ನಷ್ಟವಾಗಿರುವುದರಿಂದ ಸರ್ಕಾರದಿಂದ ಪರಿಹಾರ ಘೋಷಿಸುವಂತೆ ರೈತರು ಒತ್ತಾಯಿಸಿದ್ದಾರೆ.

  "ಅಡಿಕೆ ಮರಗಳು ಗಾಳಿಯಿಂದ ಬಿದ್ದು, ಕೊಳೆರೋಗದಿಂದ ೫೦% ಹಾನಿಯಾಗಿದ್ದು, ತೋಟಗಾರಿಕೆ ಇಲಾಖೆ ಈ ಬಗ್ಗೆ ಗಮನಹರಿಸಬೇಕಾಗಿದೆ. ಸ್ಥಳೀಯ ಪಂಚಾಯತ ಮತ್ತು ಸೇವಾ ಸಹಕಾರಿ ಸಂಘಗಳು ಸಮೀಕ್ಷೆ ನಡೆಸಿ, ರೈತರಿಗೆ ಬೆಳೆ ವಿಮೆ ನೀಡುವ ಕ್ರಮ ತೆಗೆದುಕೊಳ್ಳಬೇಕು." ..... ವಿ.ಎನ್. ಭಟ್ಟ, ಸಾಮಾಜಿಕ ಕಾರ್ಯಕರ್ತ

 "ವಜ್ರಳ್ಳಿ ಭಾಗದ ರೈತರು ತೋಟದ ಸಮೀಕ್ಷೆ ಮಾಡಿ ಬೆಳೆ ಹಾನಿಯ ವರದಿ ಸಿದ್ಧಪಡಿಸುವಂತೆ ತಾಲೂಕು ಆಡಳಿತಕ್ಕೆ ಮನವಿ ಮಾಡುತ್ತಿದ್ದಾರೆ. ಸ್ಥಳೀಯ ಆಡಳಿತ ರೈತರ ನೆರವಿಗೆ ಮುಂದಾಗಬೇಕು." ...... ನವೀನ ಕಿರಗಾರೆ, ವಜ್ರಳ್ಳಿ ಸಹಕಾರಿ ಸಂಘದ ಸದಸ್ಯ.


78ನೇ ಸ್ವಾತಂತ್ರೋತ್ಸವದ ಪೂರ್ವಭಾವಿ ಸಭೆ: ತಹಶೀಲ್ದಾರ್ ಕಚೇರಿಯಲ್ಲಿ ನಿರ್ಣಯ

ಯಲ್ಲಾಪುರ: ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಬೆಳಿಗ್ಗೆ ತಹಶೀಲ್ದಾರ್ ಅಶೋಕ ಭಟ್ ಅಧ್ಯಕ್ಷತೆಯಲ್ಲಿ 78ನೇ ಸ್ವಾತಂತ್ರೋತ್ಸವದ ಪೂರ್ವಭಾವಿ ಸಭೆ ನಡೆಯಿತು.
    ಈ ಸಂದರ್ಭದಲ್ಲಿ ತಹಶೀಲ್ದಾರ್ ಅಶೋಕ ಭಟ್ ಮಾತನಾಡಿ, "ದೇಶದ 78ನೇ ಸ್ವಾತಂತ್ರೋತ್ಸವ ನಮಗೆಲ್ಲರಿಗೂ ಹೆಮ್ಮೆ. ಧ್ವಜಾರೋಹಣ, ಪರೇಡ್, ಸಾಂಸ್ಕೃತಿಕ ಕಾರ್ಯಕ್ರಮ, ಸಿಹಿ ಹಂಚುವ ಜವಾಬ್ದಾರಿ ಹಿಂದಿನ ವರ್ಷದಂತೆ ಸಂಬಂಧಿಸಿದ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳು ನಿರ್ವಹಿಸಬೇಕು. ಸ್ವಾತಂತ್ರ್ಯೋತ್ಸವವನ್ನು ಅತ್ಯಂತ ಅದ್ಧೂರಿಯಾಗಿ ಮತ್ತು ಸರಿಯಾದ ಸಮಯಕ್ಕೆ ಆಚರಣೆಯಾಗಬೇಕು. ಸಾಧ್ಯವಾದಷ್ಟು ಎಲ್ಲರೂ ಬಿಳಿ ಸಮಸವಸ್ತ್ರ ಧರಿಸಿ ಬರಬೇಕು," ಎಂದರು.
 
 ಸಾರ್ವಜನಿಕ ಧ್ವಜಾರೋಹಣವನ್ನು ಬೆಳಿಗ್ಗೆ 09.00 ಗಂಟೆಗೆ ತಾಲೂಕಾ ಕ್ರೀಡಾಂಗಣ, ಕಾಳಮ್ಮನಗರದಲ್ಲಿ ನೆರವೇರಿಸಲು ತೀರ್ಮಾನಿಸಲಾಯಿತು. ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಂಗವಾಗಿ, ಪ್ಲಾಸ್ಟಿಕ್ ಧ್ವಜ ಬಳಕೆಯನ್ನು ನಿಷೇಧಿಸಲು ಸ್ಥಳೀಯ ಸಂಸ್ಥೆಗಳಿಗೆ, ತಾಲೂಕು ಕಿರಾಣಿ ಅಂಗಡಿ ವ್ಯಾಪಾರ ಸಂಘ ಸಂಸ್ಥೆಗಳಿಗೆ ಸೂಚನೆ ನೀಡಲಾಯಿತು. ಎಲ್ಲಾ ಸರಕಾರಿ ಕಚೇರಿಗಳನ್ನು ಸ್ವಚ್ಚಗೊಳಿಸಿ, ದೀಪಾಲಂಕಾರಗಳಿಂದ ಸಿಂಗರಿಸಬೇಕು. ಬೆಳಿಗ್ಗೆ 8-15ರೊಳಗೇ ಕಚೇರಿಗಳಲ್ಲಿ ಧ್ವಜಾರೋಹಣ ನೆರವೇರಿಸಬೇಕು. ತಹಶೀಲ್ದಾರ್ ಕಚೇರಿಯಲ್ಲಿ ಧ್ವಜಾರೋಹಣ ನಂತರ, ತಾಲೂಕಾ ಕ್ರೀಡಾಂಗಣಕ್ಕೆ ಎಲ್ಲರೂ ಕಡ್ಡಾಯವಾಗಿ ಭಾಗವಹಿಸಬೇಕೆಂದು ತಿಳಿಸಲಾಯಿತು.
   ಸಭೆಯಲ್ಲಿ ಗ್ರೇಡ್ 2 ತಹಶೀಲ್ದಾರ್ ಸಿ ಜಿ ನಾಯ್ಕ, ಪಿಎಸ್ಐ ಸಿದ್ದಪ್ಪ ಗುಡಿ, ಪ.ಪಂ ಮುಖ್ಯಾಧಿಕಾರಿ ಸುನೀಲ ಗಾವಡೆ, ಹಿಂದುಳಿದ ವರ್ಗಗಳ ಅಧಿಕಾರಿ ದಾಕ್ಷಾಯಣಿ ನಾಯ್ಕ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ನಾಯಕ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ  ನಾಯಕ, ಸಹಾಯಕ ಗ್ರಂಥಾಲಯ ಅಧಿಕಾರಿ ಎಫ್ ಎಚ್ ಬಾಸೂರ್, ವಿವಿಧ ಇಲಾಖೆಗಳ ಅಧಿಕಾರಿಗಳಾದ ಪ್ರಕಾಶ ತಾರೀಕೊಪ್ಪ, ಕೀರ್ತಿ ಬಿ ಎಮ್, ಜೆ ಬಿ ನರೋಟಿ, ನಾಗರಾಜ ನಾಯ್ಕ, ನಾಗರಾಜ ಕಾರ್ತಿಕರ, ಹಾಗೂ ವಿವಿಧ ಸಂಘಟನೆಯ ಪ್ರಮುಖರಾದ ನಂದನ ಬಾಳಗಿ, ವೇಣುಗೋಪಾಲ ಮಧ್ಗುಣಿ, ಜಗನ್ನಾಥ ಮರಾಟೆ ಮತ್ತಿತರರು ಉಪಸ್ಥಿತರಿದ್ದರು.

ಯಲ್ಲಾಪುರ : ಜಾನುವಾರು ಸಾಗಣೆ: ನಾಲ್ವರು ಬಂಧನ, ವಾಹನ ಜಪ್ತಿ

ಯಲ್ಲಾಪುರ: ಪಟ್ಟಣದ ಜೈ ಕಾರ್ನಾಟಕ ವೆಲ್ಡಿಂಗ್ ಗ್ಯಾರೇಜ್ ಎದುರು, ಕಾರವಾರ-ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ನಂ. 63 ರಲ್ಲಿ, ಮಂಗಳವಾರ ಬೆಳಗ್ಗೆ ಪೊಲೀಸರು ನಾಲ್ವರು ಆರೋಪಿಗಳನ್ನು ಜಾನುವಾರುಗಳ ಅಕ್ರಮ ಸಾಗಣೆಯ ಆರೋಪದಲ್ಲಿ ಬಂಧಿಸಿದ್ದಾರೆ. ಜೊತೆಗೆ, ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳು ಮತ್ತು ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
  ಪೊಲೀಸರ ಪ್ರಕಾರ, ಭಟ್ಕಳದ ತಿರುಮಲ ನಾಯಕನ ಸೂಚನೆಯ ಮೇರೆಗೆ, ಬೆಳಗಾವಿಯಿಂದ ಭಟ್ಕಳಕ್ಕೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸಲಾಗುತ್ತಿತ್ತು. ಅಂದಾಜು 80,000 ರೂ. ಮೌಲ್ಯದ 5 ಕೋಣದ ಕರುಗಳು ಮತ್ತು ಒಂದು ಆಕಳನ್ನು ಹಾಗೂ 2 ಲಕ್ಷ ರೂ. ಮೌಲ್ಯದ ಮಹೇಂದ್ರ ಪಿಕ್‌ಅಪ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
   ಭಟ್ಕಳದ ತಿರುಮಲ ನಾಯಕ, ಬೆಳಗಾವಿಯ ರಮೇಶ ರಾಮಪ್ಪ ನೇಗನಾಳ (30), ಕ್ಲೀನರ್ ಗಂಗಪ್ಪ ನಿಂಗಪ್ಪ ಟೊನ್ನಿ (43), ಮತ್ತು ಶಿವರಾಯಪ್ಪ ಶಿವುಗುಂಡಪ್ಪ ಪಾಟೀಲ (32), ಬಂಧಿತ ಆರೋಪಿಗಳಾಗಿದ್ದಾರೆ.
   ಯಾವುದೇ ಪಾಸ್ ಅಥವಾ ಪರವಾನಿಗೆ ಇಲ್ಲದೆ, ಹಿಂಸಾತ್ಮಕವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ಪಿಎಸ್‌ಐ ಸಿದ್ದಪ್ಪ ಗುಡಿ ನೇತೃತ್ವದಲ್ಲಿ ಸಿಬ್ಬಂದಿಯವರು ದಾಳಿ ನಡೆಸಿ ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ.