ವರದಿ : ಜಗದೀಶ ನಾಯಕ
ಯಲ್ಲಾಪುರ : ಕಳೆದ ಕೆಲವು ದಿನಗಳಿಂದ ಯಲ್ಲಾಪುರ ಪಟ್ಟಣ ಹಾಗೂ ಗ್ರಾಮೀಣ ಬಾಗದಲ್ಲಿ ವಿದ್ಯುತ್ ಪೂರೈಕೆಯಲ್ಲಿ ನಿರಂತರ ವ್ಯತ್ಯಯ ಉಂಟಾಗುತ್ತಿದ್ದು, ನಾಗರಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ದಿನದ 24 ಗಂಟೆಗಳಲ್ಲಿ ಬೆಳಕಿಗಿಂತ ಕತ್ತಲೆ ಹೆಚ್ಚಾಗಿ ಕಂಡುಬರುತ್ತಿದೆ. ದೊಡ್ಢ ಮಳೆಗಾಲದಲ್ಲಿ 24 ಗಂಟೆಗಳ ವಿದ್ಯುತ್ ಪೂರೈಕೆ ಮಾಡಿ ನಾಗರಿಕರ ಮೆಚ್ಚುಗೆ ಪಡೆದಿದ್ದ ಹೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಮಳೆ ಕಡಿಮೆಯಾದ ನಂತರ ಏಕಾಏಕಿ ವಿದ್ಯುತ್ ಕಡಿತ ಮಾಡುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.
ಒಮ್ಮೊಮ್ಮೆ ವಿದ್ಯುತ್ ಹೋದರೆ ಮೂರರಿಂದ ಐದು ಗಂಟೆಗಳವರೆಗೆ ಪುನಃ ಪೂರೈಕೆ ಆಗದೆ ಇರುವುದು ಸಾಮಾನ್ಯವಾಗಿದೆ. ಮನೆಗಳಿಗೆ ವಿದ್ಯುತ್ ಕಡಿತ ಆದರೆ ಸಹಿಸಿಕೊಳ್ಳಬಹುದಾದರೂ, ವಿದ್ಯುತ್ ಅನ್ನು ಆಧರಿಸಿ ಉದ್ಯೋಗ ಮಾಡುವವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭಗಳಲ್ಲಿ ಅವರ ಕುಟುಂಬಸ್ಥರಿಗೆ ಹೊಟ್ಟೆಯ ಮೇಲೆ ತಣ್ಣೀರು ಪಟ್ಟಿಯೇ ಗತಿಯಾಗಿದೆ ಎಂಬುದು ನಿಜ.
ಇಂದಿನ ದಿನಗಳಲ್ಲಿ ಹೆಚ್ಚಿನ ಉದ್ಯೋಗಗಳು ವಿದ್ಯುತ್ ಯಂತ್ರಗಳನ್ನು ಅವಲಂಬಿಸಿವೆ. ಹಗಲು ರಾತ್ರಿ ಎನ್ನದೆ ನಿರಂತರವಾಗಿ ವಿದ್ಯುತ್ ವ್ಯತ್ಯಯವಾಗುತ್ತಿದ್ದರೆ, ವಿದ್ಯುತ್ ಅನ್ನು ನಂಬಿಕೊಂಡು ಉದ್ಯೋಗ ಮಾಡುತ್ತಿರುವವರ ಅಸ್ತಿತ್ವವೇ ಅಪಾಯಕ್ಕೆ ಸಿಲುಕುತ್ತದೆ. ಮಳೆ ಹೆಚ್ಚಾದಾಗ ಬೆಳೆ ಹಾನಿಯಾದರೆ ರೈತರಿಗೆ ಬೆಳೆ ವಿಮೆ ಅಥವಾ ಬರಗಾಲ ಬಿದ್ದಾಗ ಸರ್ಕಾರದಿಂದ ಬರಗಾಲ ಪರಿಹಾರ ದೊರೆಯುತ್ತದೆ. ಆದರೆ, ಹೋಟೆಲ್, ಕೂಲ್ ಡ್ರಿಂಕ್ಸ್, ಜೆರಾಕ್ಸ್, ವೆಲ್ಡಿಂಗ್ ವರ್ಕ್‌ಶಾಪ್, ಬೇಕರಿ, ಕಂಪ್ಯೂಟರ್ ಜಾಬ್ ಮುಂತಾದ ಹತ್ತು ಹಲವಾರು ಕ್ಷೇತ್ರಗಳಲ್ಲಿ ಸಾಲ ಸೋಲ ಮಾಡಿ ಬಂಡವಾಳ ಹೂಡಿ ಉದ್ಯೋಗ ಮಾಡುತ್ತಿರುವವರ ಪರಿಸ್ಥಿತಿ ಅತ್ಯಂತ ಕಷ್ಟಕರವಾಗುತ್ತಿದೆ. ಅವರ ಉದ್ಯೋಗ ಮತ್ತು ಜೀವನೋಪಾಯಕ್ಕೆ ತೀವ್ರ ಹಾನಿಯಾಗುತ್ತಿದೆ.
ಬಹುತೇಕ ಉಚಿತ ವಿದ್ಯುತ್ ಪೂರೈಕೆ ಆರಂಭವಾದ ನಂತರ ಹೆಸ್ಕಾಂ ಗ್ರಿಡ್‌ಗಳು ಮೇಲ್ದರ್ಜೆಗೆ ಏರಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಸರ್ಕಾರವೇ ಉಚಿತ ವಿದ್ಯುತ್ ಬಳಕೆಯನ್ನು ತಪ್ಪಿಸಲು ವಿದ್ಯುತ್ ಕಡಿತಗೊಳಿಸುತ್ತಿದೆ ಎಂಬ ಆರೋಪಗಳು ಸಾರ್ವಜನಿಕರಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿವೆ.
ಯಲ್ಲಾಪುರದಂತಹ ಹಿಂದುಳಿದ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳು ಮತ್ತು ವ್ಯಾಪಾರಸ್ಥರು ಸಮರ್ಪಕ ವಿದ್ಯುತ್ ಪೂರೈಕೆ ಪಡೆಯುವುದು ಅತ್ಯಗತ್ಯ ಎಂಬುದು ನಾಗರಿಕರ ಅಭಿಪ್ರಾಯವಾಗಿದೆ. ಹೆಸ್ಕಾಂ ಈ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳುವುದು ಅನಿವಾರ್ಯವಾಗಿದೆ.
ಮುಖ್ಯವಾಗಿ, ಈ ಸಮಸ್ಯೆಯನ್ನು ಪರಿಹರಿಸಲು ಹೆಸ್ಕಾಂ ವಿದ್ಯುತ್ ಪೂರೈಕೆಯನ್ನು ಸುಧಾರಿಸಬೇಕು, ನಿರಂತರ ವಿದ್ಯುತ್ ವ್ಯತ್ಯಯವನ್ನು ತಪ್ಪಿಸಬೇಕು. ವಿದ್ಯುತ್ ಗ್ರಿಡ್‌ಗಳನ್ನು ಮೇಲ್ದರ್ಜೆಗೆ ಏರಿಸುವುದು ಅಗತ್ಯವಾಗಿದೆ. ಖಾಸಗಿ ಬಡ ಉದ್ಯೋಗಿಗಳಿಗೆ ಮತ್ತು ವ್ಯಾಪಾರಸ್ಥರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವ ನಿಟ್ಟಿನಲ್ಲಿ ಹೆಸ್ಕಾಂ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಹೀಗಾದಾಗ ಮಾತ್ರ ಯಲ್ಲಾಪುರದ ಜನರು ಸಮರ್ಪಕ ವಿದ್ಯುತ್ ಸೌಲಭ್ಯ ಪಡೆಯಲು ಮತ್ತು ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರಗಳು ಸುಗಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗಲಿದೆ.