ಯಲ್ಲಾಪುರ: ಅರಬೈಲ್ ಘಟ್ಟದಲ್ಲಿ ಪೇಪರ್ ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಗುರುವಾರ ಬೆಳಿಗ್ಗೆ 7.15ರಿಂದ ಸಂಚಾರ ಸ್ಥಗಿತಗೊಂಡಿತ್ತು. ಲಾರಿಯನ್ನು ಎರಡು ಜೆಸಿಬಿಗಳ ಮೂಲಕ ತೆರವುಗೊಳಿಸಿ ಸುಮಾರು ಮೂರು ಗಂಟೆಗಳ ಕಾಲ ಸ್ಥಗಿತಗೊಂಡಿದ್ದ ಸಂಚಾರವನ್ನು ಪುನಃ ಸ್ಥಾಪಿಸಲಾಗಿದೆ.
ಬೆಳಿಗ್ಗೆ 7.15ರ ಸುಮಾರಿಗೆ ಘಟನೆ ನಡೆದಿದ್ದು, ರಸ್ತೆಯ ಮಧ್ಯದಲ್ಲಿ ಉರುಳಿ ಬಿದ್ದ ಲಾರಿ ಪಕ್ಕದಿಂದ ದಾಟಲು ಪ್ರಯತ್ನಿಸುತ್ತಿದ್ದ ಬಸ್ಸೊಂದು ಸಿಕ್ಕಿಕೊಂಡಿತ್ತು. ಇದರಿಂದಾಗಿ ಪರಿಸ್ಥಿತಿ ಇನ್ನಷ್ಟು ಜಟಿಲಗೊಂಡಿತ್ತು. ಘಟನೆಯಿಂದಾಗಿ ರಸ್ತೆಯ ಎರಡೂ ಬದಿಗಳಲ್ಲಿ ಸಾವಿರಾರು ವಾಹನಗಳು ಸಿಲುಕಿಕೊಂಡು ತೀವ್ರ ಸಂಚಾರ ದಟ್ಟಣೆ ಉಂಟಾಗಿತ್ತು. ಬೆಳಗ್ಗೆಯಿಂದಲೇ ಸಿಲುಕಿಕೊಂಡಿರುವ ವಾಹನಗಳಿಂದಾಗಿ ಜೆಸಿಬಿ ಅಥವಾ ಟ್ರೋಲಿಗಳು ಘಟನಾ ಸ್ಥಳಕ್ಕೆ ತಲುಪಲು ತೊಂದರೆ ಎದುರಾಗಿತ್ತು.
ಹೆದ್ದಾರಿ ನಿರ್ವಹಣಾ ಪ್ರಮುಖರು ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಎರಡು ಜೆಸಿಬಿಗಳನ್ನು ಘಟನಾ ಸ್ಥಳಕ್ಕೆ ತಲುಪಿಸಲು ಯಶಸ್ವಿಯಾಗಿದ್ದರು. ನಂತರ ಬಿದ್ದಿರುವ ಲಾರಿಯನ್ನು ಜೆಸಿಬಿಗಳ ಸಹಾಯದಿಂದ ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.
ಆದರೂ ಕೂಡ ಸಾವಿರಾರು ವಾಹನಗಳು ರಸ್ತೆಯ ಎರಡು ಬದಿಗಳಲ್ಲಿ ನಿಂತಿರುವುದರಿಂದ ವಾಹನಗಳ ಓಡಾಟದ ವೇಗದಲ್ಲಿ ಹಿನ್ನಡೆಯಾಗಿದೆ. ಹತ್ತಾರು ಕಿಲೋಮೀಟರ್ ಅಂತರವನ್ನು ದಾಟಲು ಗಂಟೆಗಳ ಸಮಯ ಬೇಕಾಗುತ್ತಿದೆ. ಹಾಳಾಗಿರುವ ರಸ್ತೆ ಹಾಗೂ ವಾಹನಗಳ ಮಧ್ಯ ತೂರಿ ಮುಂದೆ ಹೋಗಲು ಚಾಲಕರು ಹರಸಾಹಸ ಪಡಬೇಕಾಗಿದೆ. ಈ ಘಟನೆಯಿಂದಾಗಿ ಪ್ರಯಾಣಿಕರು ಮತ್ತು ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಲಾರಿ ಚಾಲಕನ ಅಜಾಗರೂಕತೆಯಿಂದ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಪೊಲೀಸರು ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
.