ಯಲ್ಲಾಪುರ : ಯಲ್ಲಾಪುರದ ಪ್ರಸಿದ್ಧ ಇಂಜಿನಿಯರ್ ಹಾಗೂ ಕಟ್ಟಡ ಕಾಮಗಾರಿಯ ಗುತ್ತಿಗೆದಾರರಾಗಿದ್ದ ರವಿ ನಾಗಪ್ಪ ನಾಯ್ಕ ಬುಧವಾರ ಬೆಳಿಗ್ಗೆ ತಮ್ಮ ಸ್ವಗ್ರಹದಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಹೃದಯಾಘಾತದಿಂದ ನಿಧನರಾದರು. ಅವರಿಗೆ 56 ವರ್ಷ ವಯಸ್ಸಾಗಿತ್ತು.
ರವಿ ನಾಗಪ್ಪ ನಾಯ್ಕ ಪ್ರಸ್ತುತ ಯಲ್ಲಾಪುರದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ನರ್ಮದಾ ನಾಯ್ಕ ಅವರ ಪತಿಯಾಗಿದ್ದು, ಪತ್ನಿ, ಇಬ್ಬರೂ ಹೆಣ್ಣು ಮಕ್ಕಳು ಅಪಾರ ಬಂದು ಬಳಗ ಮಿತ್ರರನ್ನು ಅವರು ಅಗಲಿದ್ದಾರೆ.
ಕಳೆದ 35 ವರ್ಷದಿಂದ ಯಲ್ಲಾಪುರದ ಮನೆ ಬಂಗಲೆಗಳ ನಿರ್ಮಾಣ, ಸಿವಿಲ್ ಗುತ್ತಿಗೆದಾರರಾಗಿ ಹಾಗೂ ಮನೆಗಳ ಒಳಾಗಂಗಣ ವಿನ್ಯಾಸಕಾರರಾಗಿ ತೊಡಗಿಸಿಕೊಂಡು ಅಪಾರವಾದ ಹೆಸರನ್ನು ಗಳಿಸಿದ್ದರು.
ಯಲ್ಲಾಪುರದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹಾಗೂ ವೈಟಿಎಸ್ಎಸ್ ನಲ್ಲಿ ಪಿಯು ಶಿಕ್ಷಣವನ್ನು ಪೂರೈಸಿದ್ದ ರವಿ ನಾಯ್ಕ, ನಂತರ ಬಿ ಇ ಸಿವಿಲ್ ಇಂಜಿನಿಯರಿಂಗ್ ಗಾಗಿ ಧಾರವಾಡದಲ್ಲಿ ಶಿಕ್ಷಣ ಪಡೆದುಕೊಂಡರು.
ರಾಜಕೀಯವಾಗಿ, ಸಾಮಾಜಿಕವಾಗಿ ಹಾಗೂ ನಾಮಧಾರಿ ಸಮಾಜದ ಪ್ರಮುಖ ಮುಖಂಡರಾಗಿ ಸಮಾಜವನ್ನು ಕಟ್ಟಿ ಬೆಳೆಸುವಲ್ಲಿ ಮುಂಚುಣಿಯಲ್ಲಿ ನಿಂತವರಾಗಿದ್ದರು.
ಒಂದುವರೆ ದಶಕಗಳ ಹಿಂದೆ ಯಲ್ಲಾಪುರ ಪಟ್ಟಣ ಪಂಚಾಯಿತಿಯ ಅರ್ಧ ಅವಧಿಗೆ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಕರ್ನಾಟಕ ರಾಜ್ಯ ಯುವ ನಾಮಧಾರಿ ಸಂಘದ ಅಧ್ಯಕ್ಷರಾಗಿ ದಶಕಗಳ ಹಿಂದೆ ಕೆಲಸ ಮಾಡಿದ್ದರು. ಪ್ರಸ್ತುತ ಕಾಂಗ್ರೆಸ್ ಪಕ್ಷದ ಜಿಲ್ಲಾ ವಕ್ತಾರರಾಗಿ ಪಕ್ಷದ ಸಂಘಟನೆಗಾಗಿ ಅವೀರತವಾಗಿ ಶ್ರಮಿಸುತ್ತಿದ್ದರು.
ಯಲ್ಲಾಪುರದ ಯುಗಾದಿ ಸಮಿತಿಯ ಉಪಾಧ್ಯಕ್ಷರಾಗಿ, ಕಾಳಮ್ಮನಗರ ತ್ರಿಶೂಲ ಬಳಗದ ಸಂಸ್ಥಾಪಕ ಅಧ್ಯಕ್ಷರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು. ಶ್ರೀ ಗುರು ಕೋ ಆಪ್ ಕ್ರೆಡಿಟ್ ಸೊಸೈಟಿಗೆ ಹಿಂದೆ ಒಂದು ಬಾರಿ ಹಾಗೂ ಹಾಲಿ ಅಧ್ಯಕ್ಷರಾಗಿ ಸಂಘವನ್ನು ಮುನ್ನಡೆಸಲು ಹಾಗೂ ಅಭಿವೃದ್ಧಿ ಪಡಿಸಲು ರವಿ ನಾಯ್ಕ ಪ್ರಮುಖ ಕಾರಣರಾಗಿದ್ದರು.
ಯಲ್ಲಾಪುರ ನಾಮಧಾರಿ ಸಂಘದ ಅಧ್ಯಕ್ಷ ನರಸಿಂಹ ನಾಯ್ಕ, ಶಿರಸಿ ಶಾಸಕರಾದ ಭೀಮಣ್ಣ ನಾಯ್ಕ, ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಾಯಿನಾಥ ಗಾಂವ್ಕರ್, ಕೆಪಿಸಿಸಿ ಸದಸ್ಯ ವಿವೇಕ ಹೆಬ್ಬಾರ್, ವೈಟಿಎಸ್ಎಸ್ ನಿವೃತ್ತ ಪ್ರಾಂಶುಪಾಲ ಜಯರಾಮ ಗುನಗಾ, ಸಾಮಾಜಿಕ ಕಾರ್ಯಕರ್ತ ರಾಮು ನಾಯ್ಕ, ಮಹೇಶ ನಾಯ್ಕ ಕಾಳಮ್ಮನಗರ, ನರೇಂದ್ರ ಪಾಟೀಲ, ನಾಗರಾಜ ಮದ್ಗುಣಿ, ನಾಗರಾಜ ನಾಯಕ ಮಂಗಳೂರು, ಯಲ್ಲಾಪುರ ನಾಮಧಾರಿ ಸಮಾಜದ ಪ್ರಮುಖರು, ಸಿವಿಲ್ ಇಂಜಿನಿಯರ್ ಸಂಘದ ಪ್ರಮುಖರು, ಸಿವಿಲ್ ಗುತ್ತಿಗೆದಾರರ ಸಂಘದ ಪ್ರಮುಖರು ರವಿ ನಾಯ್ಕ ಅಗಲಿವಿಕೆಗೆ ಶೋಕ ವ್ಯಕ್ತಪಡಿಸಿದ್ದಾರೆ.
.