ಯಲ್ಲಾಪುರ: ತಾಲೂಕಿನಲ್ಲಿ ಮಂಗಳವಾರ ರಾತ್ರಿ ಅನಿರೀಕ್ಷಿತವಾಗಿ ಭಾರಿ ಮಳೆ ಸುರಿದಿದ್ದು, ಮಳೆಗಾಲ ಪ್ರಾರಂಭವಾಗಿದೆಯೋ ಅಥವಾ ಅಂತ್ಯಗೊಳ್ಳುತ್ತಿದೆಯೋ ಎಂಬ ಗೊಂದಲ ಜನರಲ್ಲಿ ಮೂಡಿದೆ.
ಮಂಗಳವಾರ ಮಧ್ಯಾಹ್ನದಿಂದಲೇ ಆಗಾಗ ಗುಡುಗು ಸಹಿತ ಮಳೆಯ ಸುಳಿವುಗಳು ಕಂಡುಬಂದಿದ್ದವು. ಕೆಲವು ಕ್ಷಣಗಳ ಕಾಲ ಸಣ್ಣದಾಗಿ ಸುರಿದು ನಿಲ್ಲುತ್ತಿದ್ದ ಮಳೆಯು ತಾಪಮಾನವನ್ನು ಕಡಿಮೆ ಮಾಡಿತ್ತು. ಆದರೆ, ರಾತ್ರಿ 11 ಗಂಟೆಯ ನಂತರ ಪರಿಸ್ಥಿತಿ ತಿರುಗಿ ಬಿದ್ದಿತು. ಏಕಾಏಕಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯಲು ಆರಂಭಿಸಿತು. ಇದರೊಂದಿಗೆ ಗುಡುಗು, ಮಿಂಚುಗಳ ಆರ್ಭಟವೂ ಕಂಡುಬಂತು.
ಹವಾಮಾನ ಇಲಾಖೆ ಸೋಮವಾರದಿಂದ ಜಿಲ್ಲೆಯಲ್ಲಿ ಮಳೆಯ ಬಗ್ಗೆ ಮುನ್ಸೂಚನೆ ನೀಡಿತ್ತು, ಯಲ್ಲೊ ಅಲರ್ಟ್ ಘೋಷಿಸಿತ್ತು. ಕಳೆದ ಎರಡು ದಿನಗಳಿಂದಲೂ ಆಗಾಗ ಮಳೆಯ ಹನಿ ಸುರಿಯುತ್ತಿತ್ತು. ಆದರೆ, ಸೋಮವಾರ, ಮಂಗಳವಾರ ಒಮ್ಮೆಲೆ ಭಾರಿ ಮಳೆ ಸುರಿದಿದೆ.
ಮಂಗಳ ರಾತ್ರಿ 11 ಗಂಟೆಗೆ ಆರಂಭವಾದ ಮಳೆ ನಿರಂತರವಾಗಿ 1 ಗಂಟೆಯವರೆಗೂ ಎಡಬಿಡದೇ ಸುರಿಯಿತು. ನಂತರ ಬುಧವಾರ ಬೆಳಿಗ್ಗೆಯವರೆಗೆ ನಿಧಾನವಾಗಿ ಸುರಿದಿದೆ. ಮಳೆಯ ಪ್ರಮಾಣ ಎಷ್ಟೊಂದು ಹೆಚ್ಚಿತ್ತು ಎಂದರೆ, ಮಳೆಗಾಲ ಪ್ರಾರಂಭವಾಗಿದೆಯೇ ಅಥವಾ ಅಂತ್ಯಗೊಳ್ಳುತ್ತಿದೆಯೇ ಎಂಬುದೇ ಜನರನ್ನು ಗೊಂದಲಕ್ಕೀಡು ಮಾಡಿತು.
ಈ ಅನಿರೀಕ್ಷಿತ ಮಳೆಯಿಂದ ರೈತರು ಮತ್ತು ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ತಾಲೂಕಿಗೆ ಬೇಡವೆಂದರೂ ಕೂಡ ಪ್ರಕೃತಿ ಒತ್ತಾಯಪೂರ್ವಕವಾಗಿ ತನ್ನ ಮುನಿಸಿಕೊಳ್ಳುವಂತಿದೆ. ರೈತರು ಮತ್ತು ಸಾರ್ವಜನಿಕರು ಮಳೆಯ ಅಗತ್ಯತೆ ಇಲ್ಲದಿದ್ದರೂ ಕೂಡ ದೊಡ್ಡ ಪ್ರಮಾಣದಲ್ಲಿ ಸುರಿದ ಮಳೆಯಿಂದ ಬೆಳೆದು ನಿಂತ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇನ್ನೂ, ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿವೆ. ಕೆಲವೆಡೆ ಮನೆಗಳಿಗೂ ನೀರು ನುಗ್ಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗ್ಗಿನವರೆಗೂ ವಿದ್ಯುತ್ ವ್ಯತ್ಯಯವಾಗಿತ್ತು.
ಮಳೆಯ ರಭಸದಿಂದಾಗಿ ಮರಗಳು ಉರಳಿ ಬೀಳುವುದು, ವಿದ್ಯುತ್ ತಂತಿಗಳು ಕಡಿತಗೊಳ್ಳುವುದು ಮುಂತಾದ ಘಟನೆಗಳು ನಡೆದ ಬಗ್ಗೆ ಇದುವರೆಗೂ ಮಾಹಿತಿ ಲಭ್ಯವಾಗಿಲ್ಲ. ಒಟ್ಟಾರೆಯಾಗಿ, ಅನಿರೀಕ್ಷಿತವಾಗಿ ಸುರಿದ ಭಾರಿ ಮಳೆಯಿಂದಾಗಿ ತಾಲೂಕಿನಲ್ಲಿ ಹಲವು ಸಮಸ್ಯೆಗಳು ಹುಟ್ಟುಹಾಕಿದೆ.
.