ಯಲ್ಲಾಪುರ : ತಾಲ್ಲೂಕಿನ ವಿವಿಧ ಭಾಗಗಳಲ್ಲಿ ದಟ್ಟ ಅರಣ್ಯದಲ್ಲಿ ವಾಸವಾಗಿರುವ ಹೈನುಗಾರಿಕೆಯನ್ನೇ ಮೂಲ ಕಸಬುನ್ನಾಗಿಸಿಕೊಂಡ ಧನಗರ ಗೌಳಿ ಸಮಾಜದ ದಸರಾ ಹಬ್ಬದ ಆಚರಣೆ ವಿಶೇಷವಾಗಿದೆ. ತಾಲ್ಲೂಕಿನ ಮದುನೂರು ಪಂಚಾಯತಿಯ ಗೊ-ಗ್ರಾಮ ಎಂದೇ ಖ್ಯಾತಿಯಾದ ಕರಡೊಳ್ಳಿ ಗ್ರಾಮದಲ್ಲಿ ಧನಗರ ಗೌಳಿ ಸಮುದಾಯದವರು ಶಾಸ್ತ್ರೋಕ್ತವಾಗಿ ವಿಜ್ರಂಭಣೆಯಿಂದ ಹಬ್ಬವನ್ನು ಆಚರಿಸಿದರು.
ಘಟಸ್ಥಾಪನೆ, ಜಾಗರಣೆ, ಮನೆಯ ಹಾಗೂ ದೇವಸ್ಥಾನದ ಅಂಗಳದಲ್ಲಿ ಗಜಾ ಕುಣಿತ, ಮೈ ಮೇಲೆ ದೇವರು ಬರುವುದು, ಊರಿನ ಗಡಿಭಾಗದಲ್ಲಿ ಪೂರ್ವಜರ ಹೆಸರಿನಿಂದ ಇಟ್ಟಿರುವ ಕಲ್ಲಿನ ಪೂಜೆ, ಹಾಲು, ಮೊಸರು, ಬೆಣ್ಣೆ, ತುಪ್ಪ, ಬೆಲ್ಲ ಇವುಗಳ ಮಿಶ್ರಿತ ದೇವರ ಪ್ರಸಾದ ನೈವೇದ್ಯ ಹಾಗೂ ವಿತರಣೆ ಇವುಗಳು ಕರಡೊಳ್ಳಿ ದಸರಾ ಹಬ್ಬದ ಆಚರಣೆಯಲ್ಲಿ ಕಂಡುಬರುವ ವಿಶೇಷತೆಗಳಾಗಿದ್ದವು.
ಗ್ರಾಮದ ಧನಗರ ಗೌಳಿ ಸಮಾಜದ ಒಳಪಂಗಡಗಳಾದ ಶಿಂಧೆ, ಕಾಳೆ, ಜೋರೆ, ಕೋಕರೆ, ಪಟಕಾರೆ, ಮಿಸಳ್, ಶೇಳಕೆ ಮನೆತನದ ಎಲ್ಲಾ ಹಿರಿಯರು,
ತಾಯಂದಿರು, ಯುವಕರು, ಗ್ರಾಮದ ನಾಗರಿಕರು ಸೇರಿ ದಸರಾ ಹಬ್ಬದ ಎರಡನೇ ದಿನದಂದು (ಬಾಹೇರಲಾ ದಸರಾ) ದೇವಸ್ಥಾನದ ಅಂಗಳದಲ್ಲಿ ಸೇರಿ ದೇವರಲ್ಲಿ ಹರಕೆ ಹೊತ್ತು ಹಾಗೂ ಹಳೆಯ ಹರಕೆಯನ್ನು ತೀರಿಸಿ ಗ್ರಾಮದ ಯುವಕರೆಲ್ಲರೂ ಸೇರಿ ಗಜಾ ನ್ರತ್ಯವನ್ನು ಮಾಡಿ ಬಂದಂತಹ ಬೀಗರನ್ನು ಬನ್ನಿ ಗಿಡದ ಎಲೆಯನ್ನು ಕೊಟ್ಟು ಜೀವನ ಪೂರ್ತಿ ಬಂಗಾರದ ಹಾಗೆ ಬಾಳುವ ಎಂದು ಪರಸ್ಪರ ಆಲಂಗನ ಮಾಡಿ ಶುಭ ಕೋರಿದರು.
ಎಲ್ಲರನ್ನು ಚೆನ್ನಾಗಿ ಇಟ್ಟಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾ ವಿಜೃಂಭಣೆಯಿಂದ ಆಚರಿಸಲಾಯಿತು. ತಾಲ್ಲೂಕಿನ ಮದನೂರು ಪಂಚಾಯತಿಯ ಧನಗರ ಗೌಳಿ ವಾಡಾಗಳಾದ ಕರಡೊಳ್ಳಿ, ಬಸಳೆಬೈಲ್, ಡೊಮಗೇರಿ, ಜೋಗಿಕೊಪ್ಪ, ಹುಲಗೋಡ, ಖಂದ್ರನಕೊಪ್ಪ, ಮಾದೇವಕೊಪ್ಪ, ಮದನೂರು, ಅಲ್ಕೇರಿ ಹೀಗೆ ಮುಂತಾದ ಹಳ್ಳಿಗಳಲ್ಲಿ ಹಬ್ಬದ ವಾತಾವರಣ ಜೋರಾಗಿತ್ತು,