ಯಲ್ಲಾಪುರ: ಪಟ್ಟಣದ ಹೋಲಿ ರೋಜರಿ ಚರ್ಚ್ ವಾರ್ಷಿಕೋತ್ಸವವನ್ನು ಸೋಮವಾರ ಅತ್ಯಂತ ಭಕ್ತಿ ಮತ್ತು ಧಾರ್ಮಿಕ ಭಾವನೆಯಿಂದ ಆಚರಿಸಲಾಯಿತು. ಉತ್ತರ ಕನ್ನಡ ಜಿಲ್ಲೆ ಹಾಗೂ ಗೋವಾ ರಾಜ್ಯದಿಂದ 800ಕ್ಕೂ ಹೆಚ್ಚು ಕ್ರೈಸ್ತ ಬಾಂಧವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚರ್ಚ್‌ನ ವಾರ್ಷಿಕೋತ್ಸವವನ್ನು ಸಂಭ್ರಮಿಸಿದರು.
ವಾರ್ಷಿಕೋತ್ಸವದ ಪ್ರಮುಖ ಕಾರ್ಯಕ್ರಮವಾಗಿ ಹೋಲಿ ರೋಜರಿ ಚರ್ಚ್‌ನ ಪ್ರಧಾನ ಗುರುಗಳಾದ ಫಾ. ಬಾವ್ತೀಸ್ ಅವರು ಸಹಗುರುಗಳ ಮೂಲಕ ಬಲಿಪೂಜೆ ಸಲ್ಲಿಸಿದರು. ಚರ್ಚ್‌ನ ಪ್ರಧಾನ ಗುರು ಫಾ. ಪೀಟರ್ ಕಾರ್ನೇಲೊ, ಎಲ್ಲಾ ಗುರುಗಳು ಹಾಗೂ ದೂರದಿಂದ ಆಗಮಿಸಿದ ಭಕ್ತರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.
ಹಳಿಯಾಳ ಡಿನರಿಯ ಡಿನ್ ಆದ ಫಾದರ್ ರೇಮಂಡ್ ಡಿಸೋಜಾ ಹಾಗೂ ಸಹಾಯಕ ಗುರುಗಳಾದ ಫಾದರ್ ಸೈಮನ್... ಕಾರ್ಯಕ್ರಮದಲ್ಲಿ ಸಹಕರಿಸಿ, ಭಕ್ತರಿಗೆ ಧಾರ್ಮಿಕ ಸೇವೆಗಳನ್ನು ಒದಗಿಸಿದರು. ಸಂಜೆಯ ವೇಳೆಗೆ ಫಾ.ರೇಮಂಡ್ ಹಾಗೂ ಸಹಾಯಕ ಗುರುಗಳ ನಿರ್ದೇಶನದಲ್ಲಿ, ನಿಕ್ಸನ್ ಅಲ್ಫಾನ್ಸೊ ಮತ್ತು ಚರ್ಚ್‌ನ ಸದಸ್ಯರು ಸಂಘಟಿಸಿದ್ದ ಮನರಂಜನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ವಾರ್ಷಿಕೋತ್ಸವದಲ್ಲಿ ಭಕ್ತರು ತಮ್ಮ ಧಾರ್ಮಿಕ ಭಾವನೆಗಳನ್ನು ವ್ಯಕ್ತಪಡಿಸಿ, ಪರಸ್ಪರ ಸಂವಾದ ನಡೆಸಿ, ಚರ್ಚ್‌ನ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಚರ್ಚ್‌ನ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ಈ ಕಾರ್ಯಕ್ರಮವನ್ನು ಅತ್ಯಂತ ಸುಸಜ್ಜಿತವಾಗಿ ಹಾಗೂ ಯಶಸ್ವಿಯಾಗಿ ನಡೆಸಲು ಶ್ರಮಿಸಿದ್ದು, ಭಕ್ತರಿಂದ ಮೆಚ್ಚುಗೆಗೆ ಪಾತ್ರವಾಯಿತು.
ಈ ವಾರ್ಷಿಕೋತ್ಸವವು ಕೇವಲ ಒಂದು ಧಾರ್ಮಿಕ ಕಾರ್ಯಕ್ರಮವಲ್ಲದೆ, ಕ್ರೈಸ್ತ ಸಮಾಜದಲ್ಲಿ ಸೌಹಾರ್ದತೆ ಮತ್ತು ಸಹೋದರತ್ವವನ್ನು ಬೆಳೆಸುವ ಒಂದು ಪ್ರಯತ್ನವಾಗಿದ್ದು, ಈ ರೀತಿಯ ಕಾರ್ಯಕ್ರಮಗಳು ಸಮಾಜದಲ್ಲಿ ಒಗ್ಗಟ್ಟು ಸೌಹಾರ್ದತೆಯನ್ನು ಬೆಳೆಸಲು ನೆರವಾಗುತ್ತವೆ ಎಂದು ಭಕ್ತರು ಅಭಿಪ್ರಾಯಪಟ್ಟರು.