ಯಲ್ಲಾಪುರ : ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಮಾದರಿ ಬಿ.ಎಂ.ಸಿ. (ಜೀವ ವೈವಿಧ್ಯ ಸಮಿತಿ)ಗಳ ಸಮಾಲೋಚನಾ ಸಭೆಯಲ್ಲಿ ವಿವಿಧ ಜಿಲ್ಲೆಗಳ ಮಾದರಿ ಬಿ.ಎಂ.ಸಿ.ಗಳ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚೆ ನಡೆಯಿತು. ಈ ಸಭೆಯನ್ನು ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಹಿರಿಯ ತೋಟಗಾರಿಕಾ ಅಧಿಕಾರಿ ಪವಿತ್ರಾ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಸಭೆಯಲ್ಲಿ ಮಾತನಾಡಿದ ಜೀ.ವೈ. ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ದೇಶದಲ್ಲಿ ಬಿ.ಎಂ.ಸಿ.ಗಳು ನಿಸರ್ಗ ಸಂರಕ್ಷಣೆಗೆ ಕೊಡುಗೆ ನೀಡುತ್ತಿರುವುದನ್ನು ಮೆಚ್ಚಿ, ಇವುಗಳ ಕಾರ್ಯಗಳನ್ನು ಮುಂದುವರಿಸಲು ಸಹಕಾರ ಮತ್ತು ನಿರ್ದೇಶನ ಅಗತ್ಯವಿದೆ ಎಂದರು. ಮಲೆನಾಡಿನ ಸುಸ್ಥಿರ ಅಭಿವೃದ್ಧಿಗೆ ಬಿ.ಎಂ.ಸಿ.ಗಳು ಪ್ರತಿ ತಾಲೂಕಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಕಳೆದ ಮೂರು ವರ್ಷಗಳಲ್ಲಿ ನಡೆದ ಜೀವವೈವಿಧ್ಯ ಜಾಗೃತಿ ಕಾರ್ಯಕ್ರಮಗಳು ಮತ್ತು 14 ಜೀವ ವೈವಿಧ್ಯ ತಾಣಗಳಿಗೆ ಮಾನ್ಯತೆ ನೀಡಿರುವುದು ಮಹತ್ವದ ಸಾಧನೆಯಾಗಿದ್ದು, ಕೃಷಿ, ತೋಟಗಾರಿಕೆ, ಪಶುಪಾಲನೆ ಮತ್ತು ಜಲ ಸಂರಕ್ಷಣೆಯಂತಹ ಪ್ರಥಮ ದರ್ಜೆಯ ವಿಚಾರಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳು ನಡೆದಿವೆ ಎಂದರು.
ಉಪಸ್ಥಿತರಾದ ಸೊರಬದ ಶಿರಸ್ತಿ ಬಾಹುಳಿಕೆ ಬಿಚ್ಚುಗತ್ತಿ, ಬಿ.ಎಂ.ಸಿ.ಗೆ ರಾಜ್ಯಮಟ್ಟದ ಪ್ರಶಸ್ತಿ ದೊರೆತಿರುವ ಬಗ್ಗೆ ವಿವರಿಸಿದರು. ರಾಜ್ಯ ಮಟ್ಟದಲ್ಲಿ ಕೆರೆ ಸಮ್ಮೇಳನ, ದೇವರ ಕಾಡುಗಳ ಸಂರಕ್ಷಣೆಯಂತಹ ಅಭಿಯಾನಗಳು ಯಶಸ್ವಿಯಾಗಿ ನಡೆದಿದೆ ಎಂದು ಹೇಳಿದರು.
ಜೀವ ವೈವಿಧ್ಯ ಮಂಡಳಿಯ ಅಧಿಕಾರಿ ಪ್ರೀತಂ, ಬಿ.ಎಂ.ಸಿ. ಕಾರ್ಯಚಟುವಟಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಈ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸುವ ಮೂಲಕ ನಿಸರ್ಗ ಸಂಪತ್ತು ಉಳಿಸಬೇಕಾಗಿದೆ ಎಂದು ಹೇಳಿದರು.
ಹೆಚ್ಚು ಹಣಕಾಸು ಹಂಚಿಕೆ ಮತ್ತು ಬಿ.ಎಂ.ಸಿ.ಗಳ ಕಾರ್ಯಕ್ಷಮತೆಯನ್ನು ಸುಧಾರಿಸುವ ಸಲುವಾಗಿ, 15ನೇ ಹಣಕಾಸು ಯೋಜನೆಯ ಅಡಿಯಲ್ಲಿ ಶೇ 5% ಅನುದಾನವನ್ನು ಬಿ.ಎಂ.ಸಿ. ಕಾರ್ಯಗಳಿಗೆ ನೀಡಬೇಕೆಂದು, ಮತ್ತು ಅರಣ್ಯ ಇಲಾಖೆ ಹಾಗೂ ವಕೀಲರೊಂದಿಗೆ ಸಮಾಲೋಚನೆ ನಡೆಸಬೇಕೆಂದು ಸಭೆಯಲ್ಲಿ ನಿರ್ಣಯ ಮಾಡಲಾಯಿತು. ಇದೇ ಸಂದರ್ಭದಲ್ಲಿ ಶಿರಸಿ, ಯಲ್ಲಾಪುರ, ಸಿದ್ದಾಪುರ, ಸೊರಬ, ಸಾಗರ ಮತ್ತು ಹೊಸನಗರದ ಬಿ.ಎಂ.ಸಿ.ಗಳ ಕಾರ್ಯವೈಖರಿಯ ಅವಲೋಕನ ಮಾಡಲಾಯಿತು.
ಸಭೆಯಲ್ಲಿ ಕೆ.ಎಸ್.ಭಟ್ಟ, ಆನಗೋಡ, ಚಕ್ರವಾಕ್ ಸುಬ್ರಹ್ಮಣ್ಯ, ಟಿ.ಆರ್. ಹೆಗಡೆ, ಆನೆಗೂಳಿ ಸುಬ್ಬರಾವ್ ಮತ್ತು ಇತರರು ಉಪಸ್ಥಿತರಿದ್ದರು.ಸಮಿತಿಯ ಸದಸ್ಯ ನರಸಿಂಹ ಸಾತೊಡ್ಡಿ ಸ್ವಾಗತಿಸಿದರು.ಸಮಿತಿಯ ಕಾರ್ಯದರ್ಶಿ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ರಾಜೇಶ ಧನವಾಡಕರ್ ವಂದಿಸಿದರು.