ಯಲ್ಲಾಪುರ : ದಾಂಡೇಲಿಯ ಹಾರ್ನ್ ಬಿಲ್ ಸಭಾಭವನದಲ್ಲಿ ನಡೆದ 70ನೇ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭದ ಅಂಗವಾಗಿ ಆಗಮಿಸಿದ ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಕೆನರಾ ವೃತ್ತದಲ್ಲಿ ಅತ್ಯುತ್ತಮವಾಗಿ ಸಸ್ಯ ಪಾಲನಾಲಯವನ್ನು ನಿರ್ವಹಿಸಿದ ಅರಣ್ಯ ವೀಕ್ಷಕರಿಗೆ ಹಾಗೂ ಸಿಬ್ಬಂದಿಗಳಿಗೆ ಸನ್ಮಾನಿಸಿದರು.
ಸನ್ಮಾನಿತರಲ್ಲಿ ಯಲ್ಲಾಪುರ ವಲಯದ ಸಬಗೇರಿ ಸಸ್ಯಪಾಲನಾಲಯದ ಅರಣ್ಯ ಕಾವಲುಗಾರರಾದ ಗಣಪತಿ ತುಕಾರಾಮ ಹಾಲುಕುರುಬ ಒಬ್ಬರಾಗಿದ್ದು, ಇವರು ಪ್ರಾರಂಭದ ಹತ್ತು ವರ್ಷ ದಿನಗೂಲಿ ನೌಕರನಾಗಿ ವಡೆಹುಕ್ಕಳಿ ಹಾಗೂ ಬಿಸಗೋಡ ಭಾಗದಲ್ಲಿ ಅರಣ್ಯ ಕಾವಲುಗಾರನಾಗಿ ಕೆಲಸ ನಿರ್ವಹಿಸಿದ್ದರು. ನಂತರ ಸುಮಾರು 27 ವರ್ಷಗಳಿಂದ ಸಬಗೇರಿ ಸಸ್ಯಪಾಲನಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತ ಇಲ್ಲಿಯವರೆಗೂ ಸುಮಾರು ಒಂದು ಕೋಟಿಗಿಂತಲೂ ಹೆಚ್ಚು ಸಸಿಗಳನ್ನು ಪಾಲನೆ ಪೋಷಣೆ ಮಾಡಿ, ಮೇಲಾಧಿಕಾರಿಗಳ ಮೆಚ್ಚುಗೆಗೆ ಹಾಗೂ ಹೆಗ್ಗಳಿಕೆಗೆ ಪಾತ್ರರಾಗಿ 'ಕೋಟಿ ಸಸ್ಯಪಾಲಕ' ಎಂದು ಗುರುತಿಸಿಕೊಂಡಿದ್ದಾರೆ. ಇವರಿಗೆ ಸಚಿವ ಖಂಡ್ರೆ ಸನ್ಮಾನಿಸಿದ್ದು ಯಲ್ಲಾಪುರ ವಿಭಾಗಕ್ಕೆ ಹೆಮ್ಮೆ ಸಂಗತಿಯಾಗಿದೆ.
ಈ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ಎಸ್ ವೈದ್ಯ, ಅರಣ್ಯ ಇಲಾಖೆಯ ವಿವಿಧ ಸ್ಥರದ ಮೇಲಾಧಿಕಾರಿಗಳು ಉಪಸ್ಥಿತರಿದ್ದು ಸನ್ಮಾನಿತರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
(ವರದಿ : ಎಫ್ ಜಿ ಶಾನವಾಜ್ ಅರಣ್ಯ ಇಲಾಖೆ)
.
.