ಯಲ್ಲಾಪುರ : 'ಪ್ರತಿಯೊಂದು ಜೀವನದ ಘಟ್ಟದಲ್ಲಿಯೂ ಪ್ರತಿಭೆಯ ಆಧಾರದ ಮೇಲೆ ಯಶಸ್ಸು ಕಾದಿದೆ. ಯಾವ ಕಂಪನಿಯ ಅನ್ನವನ್ನು ತಿನ್ನುತ್ತೇವೆಯೋ ಅದರ ಋಣವನ್ನು ತೀರಿಸುವ ಭಾವನೆ ನಿಮ್ಮಲ್ಲಿರಲಿ' ಎಂದು ಶಾಸಕ ಶಿವರಾಮ ಹೆಬ್ಬಾರ್ ಉದ್ಯೋಗಾಕಾಂಕ್ಷಿಗಳಿಗೆ ಕರೆ ನೀಡಿದರು.
ಶಾಸಕ ಶಿವರಾಮ ಹೆಬ್ಬಾರ್ ಮಾರ್ಗದರ್ಶನದಲ್ಲಿ ಅಕ್ಟೋಬರ್ 15ರಂದು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕ್ರಿಯೇಟಿವ್ ಕಂಪ್ಯೂಟರ್ಸ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬಾಸ್ ಕಂಪನಿಯ ನೇತ್ರತ್ವದಲ್ಲಿ ನಡೆದ ಬಾಸ್ ಬ್ರಿಡ್ಜ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರಿ ಸೇವೆಗೂ ಖಾಸಗಿ ಸೇವೆಗೂ ಸಾಕಷ್ಟು ವ್ಯತ್ಯಾಸವಿದೆ. ಖಾಸಗಿ ಕಂಪನಿಗಳು ಅನುಭವದ ಕೆಲಸಗಾರರ ಮೂಲಕವೇ ಕಂಪನಿಯನ್ನು ಅಭಿವೃದ್ಧಿ ಮಾಡಿಕೊಳ್ಳಬೇಕಿದೆ. ಅವರು ಕೌಶಲ್ಯಕ್ಕೆ ಆಧ್ಯತೆ ನೀಡುತ್ತಾರೆ. ಹೀಗಾಗಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುವ ಅಗತ್ಯತೆ ಇದೆ ಎಂದರು.
ಪ್ರಾಂಶುಪಾಲ ಡಾ. ಆರ್.ಡಿ.ಜನಾರ್ಧನ ಮಾತನಾಡಿ, 'ಉದ್ಯೋಗ ಮೇಳದ ಯಶಸ್ಸಿಗೆ ಸಾಕಷ್ಟು ಪ್ರಯತ್ನಪಟ್ಟಿದ್ದೇವೆ. ಕೌಶಲ್ಯ ಇರುವ ಪ್ರತಿಭಾವಂತರಿಗೆ ಉದ್ಯೋಗ ನೀಡಲು ಬಾಸ್ ಕಂಪನಿ ವೇದಿಕೆ ಕಲ್ಪಿಸಿದೆ ' ಎಂದರು.
ಬಾಸ್ ಕಂಪನಿಯ ಮಾನವ ಸಂಪನ್ಮೂಲ ಮುಖ್ಯಸ್ಥ ಖಲೀದ್ ಎಸ್. ಮಾತನಾಡಿ, ಎರಡು ವರ್ಷದ ಹಿಂದೆ ಶಾಸಕ ಹೆಬ್ಬಾರ ಅವರ ಅಭಿಲಾಶೆಯಂತೆ. ಈ ಉದ್ಯೋಗ ಮೇಳ ಮೊದಲ ಹೆಜ್ಜೆ ಇದಾಗಿದೆ. ನಿಮ್ಮ ಶ್ರಮದ ಹೊರತಾಗಿ ಯಶಸ್ಸು ಸಾಧ್ಯವಿಲ್ಲ. ವಿವಿದ ಜಿಲ್ಲೆಗಳಿಂದ ಅಭ್ಯರ್ಥಿಗಳು ಉದ್ಯೋಗದ ಆಕಾಂಕ್ಷೆಯಿಂದ ಬಂದಿದ್ದಾರೆ. ಈ ಉದ್ಯೋಗ ಮೇಳ ಅವರ ಪ್ರತಿಭೆಗನುಸಾರ ಅವರನ್ನು ನಿರಾಶೆಗೊಳಿಸದು' ಎಂದರು.
ಬಾಸ್ ಕಂಪನಿಯ ಸಾಮಾಜಿಕ ಜವಾಬ್ದಾರಿ ಮುಖ್ಯಸ್ಥ ಸುದೀರ ಪಿ.ಡಿ. ಮಾತನಾಡಿ, 'ಯಾರು ಕೌಶಲ್ಯಗಳಲ್ಲಿ ಉನ್ನತಿಕರಿಸಿಕೊಳ್ಳುತ್ತಿರುತ್ತಾರೋ ಅವರಿಗೆ ಖಾಸಗಿ ಕಂಪನಿಗಳಲ್ಲಿ ಹೆಚ್ಚು ಅವಕಾಶಗಳಿರುತ್ತದೆ. ಈ ಅವಕಾಶಗಳನ್ನು ಬಳಸಿಕೊಳ್ಳಿ' ಎಂದರು.
ಅಧ್ಯಕ್ಷತೆ ವಹಿಸಿದ್ದ ಕ್ರಿಯೇಟಿವ್ ಕಂಪ್ಯೂರ‍್ಸ್ ನ ಮುಖ್ಯಸ್ಥ ಶ್ರೀನಿವಾಸ ಮುರ್ಡೇಶ್ವರ ಮಾತನಾಡಿ, .ಉದ್ಯೋಗ ಮೇಳ ಉದ್ಯೋಗ ನೀಡುವ ಪಡೆಯುವ, ಸಂದರ್ಶನಗಳಿಗೆ ಅನುಭವದ ಮಾಹಿತಿಯನ್ನು ನೀಡುವ ಕಾರ್ಯಾಗಾರವಾಗಿದೆ. ಇದರಲ್ಲಿ ಉದ್ಯೋಗ ದೊರೆಯದೇ ಹೋದರೂ ಇದರ ಅನುಭವ ಮುಂದೆ ಕೆಲಸ ಪಡೆಯಲು ಸಹಕಾರಿಯಾಗುತ್ತದೆ' ಎಂದರು.
ಇದೇ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿರುವ ಶಾಸಕ ಶಿವರಾಮ ಹೆಬ್ಬಾರ್ ಅವರನ್ನುಗಣ್ಯರು ಸನ್ಮಾನಿಸಿ ಗೌರವಿಸಿದರು.
ಪ್ರಮುಖರಾದ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ವಿಜಯ ಮಿರಾಶಿ, ಸಾಮಾಜಿಕ ಕಾರ್ಯಕರ್ತ ಎನ್.ಕೆ.ಭಟ್ಟ ಮೆಣಸುಪಾಲ, ಗ್ರೀನ್ ಕೇರ್ ಸಂಸ್ಥೆಯ ಆಶಾ ಡಿಸೋಜಾ, ಮುಂಡಗೋಡು ಸರಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರಸನ್ನ, ಉಪನ್ಯಾಸಕಿಯರಾದ ಸುರೇಖಾ ತಡವಲ, ಡಾ.ರುಬೀನಾ ವೇದಿಕೆಯಲ್ಲಿದ್ದರು.
297 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಣೆ :
ವಿವಿದ ಜಿಲ್ಲೆಗಳ 846 ಅಭ್ಯರ್ಥಿಗಳು ಮೇಳದಲ್ಲಿ ಭಾಗವಹಿಸಿದ್ದರು. 297 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಲಾಯಿತು. ಉದ್ಯೋಗ ಮೇಳದಲ್ಲಿ 27 ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿದ್ದವು.
ವೇದಾ ಭಟ್ಟ ಪ್ರಾರ್ಥಿಸಿದರು, ಶರತಕುಮಾರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು, ನಂದಿತಾ ಭಾಗ್ವತ್ ನಿರೂಪಿಸಿದರು, ಮೇಘಾ ದೇವಳಿ ವಂದಿಸಿದರು.
.