ಯಲ್ಲಾಪುರ: ಯಲ್ಲಾಪುರ ಭೂ ನ್ಯಾಯ ಮಂಡಳಿಯ ಸದಸ್ಯರಾಗಿ ಅಣ್ಣಪ್ಪ ಡಿ ನಾಯ್ಕ ಅವರನ್ನು ರಾಜ್ಯ ಸರ್ಕಾರ ನೇಮಿಸಿ ಆದೇಶ ಹೊರಡಿಸಿದೆ.
ಅಣ್ಣಪ್ಪ ನಾಯ್ಕ ಮೂಲತಃ ಕಿರವತ್ತಿ ಪಂಚಾಯತದ ಮುಂಡವಾಡ ಗ್ರಾಮದವರು. ಪ್ರಸ್ತುತ ಕಣ್ಣಿಗೇರಿ ಪಂಚಾಯತದ ಕಣ್ಣಿಗೇರಿ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಯಲ್ಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ. ವರೆಗೆ ವ್ಯಾಸಂಗ ಮಾಡಿರುವ ಅಣ್ಣಪ್ಪ ನಾಯ್ಕ, ಧಾರವಾಡ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು ಪಡೆದಿದ್ದಾರೆ.
ಕಳೆದ 25 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿರುವ ಅಣ್ಣಪ್ಪ ನಾಯ್ಕ, ಪಕ್ಷ ನೀಡಿದ ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಪಕ್ಷದ ತಾಲೂಕ ಕಿಸಾನ್ ಸೆಲ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅನುಭವವನ್ನು ಅವರು ಹೊಂದಿದ್ದಾರೆ.
ಸಾಮಾಜಿಕ ಕ್ಷೇತ್ರದಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅಣ್ಣಪ್ಪ ನಾಯ್ಕ, ಕುಳವಾಡಿ ಮರಾಠಿ ಸಮುದಾಯ ಸೇವಾ ಸಂಘದ ಯಲ್ಲಾಪುರ ತಾಲೂಕ ಅಧ್ಯಕ್ಷರು, ಕಣ್ಣಿಗೇರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರು, ಕಣ್ಣಿಗೇರಿ ಗ್ರಾಮದ ಶ್ರೀ ಗಜಾನನ ಯುವಕ ಸಂಘದ ಉಪಾಧ್ಯಕ್ಷರು, ತಾಲೂಕ ಅರಣ್ಯ ಹೋರಾಟ ವೇದಿಕೆಯ ಸದಸ್ಯರು, ಕಣ್ಣಿಗೇರಿ ಶ್ರೀ ಆನಂದ ಮಾರುತಿ ದೇವಸ್ಥಾನದ ಮುಕ್ತೇಸರರು ಹಾಗೂ ಇನ್ನಿತರ ಅನೇಕ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದಾರೆ.
ಶಾಲಾ-ಕಾಲೇಜು ದಿನಗಳಲ್ಲಿ ಉತ್ತಮ ಕ್ರೀಡಾಪಟುವಾಗಿದ್ದ ಅವರು, ಕಬಡ್ಡಿ, ವಾಲಿಬಾಲ್ ಸೇರಿದಂತೆ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಪ್ರದರ್ಶನಗೊಳ್ಳುವ ಸಾಮಾಜಿಕ ನಾಟಕಗಳಲ್ಲಿ ಪಾತ್ರವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಕಾಲೇಜು ದಿನಗಳಲ್ಲಿ ಹತ್ತು ಹಲವಾರು ಎನ್.ಎಸ್.ಎಸ್. ಶಿಬಿರಗಳಲ್ಲಿ ಭಾಗವಹಿಸಿದ ಅವರು, ಕಾಲೇಜು ವಿದ್ಯಾಭ್ಯಾಸದ ನಂತರ ನೆಹರು ಯುವ ಕೇಂದ್ರದಿಂದ ನೀಡಲಾಗುವ ಜಿಲ್ಲಾ ಯುವ ಪ್ರಶಸ್ತಿಯನ್ನು ಪಡೆದಿದ್ದಾರೆ.
ಅಣ್ಣಪ್ಪ ನಾಯ್ಕ ಅವರಿಗೆ ಭೂ ನ್ಯಾಯ ಮಂಡಳಿಯ ಸದಸ್ಯತ್ವ ದೊರಕಲು ಶಾಸಕ ಶಿವರಾಮ್ ಹೆಬ್ಬಾರ್, ಮಾಜಿ ಶಾಸಕ ವಿ.ಎಸ್. ಪಾಟೀಲ್, ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ವಿಜಯ ಮಿರಾಶಿ, ಕಾಂಗ್ರೆಸ್ ವಕ್ತಾರರಾಗಿದ್ದ ದಿವಂಗತ ರವಿ ನಾಯ್ಕ, ಬಿಸಿಸಿ ಅಧ್ಯಕ್ಷ ಎನ್.ಕೆ. ಭಟ್ ಮೆಣಸುಪಾಲ, ಪಂಚ ಗ್ಯಾರಂಟಿ ಯೋಜನೆ ತಾಲೂಕ ಅಧ್ಯಕ್ಷ ಉಲ್ಲಾಸ್ ಶಾನಭಾಗ, ಬಿಸಿಸಿ ಮಾಜಿ ಅಧ್ಯಕ್ಷ ವಿ.ಎಸ್. ಭಟ್ಟ ಮುಂತಾದವರ ಪಾತ್ರವಿದೆ ಎಂದು ಹೇಳಲಾಗುತ್ತಿದೆ.
ತಮಗೆ ನೀಡಲಾದ ಈ ಜವಾಬ್ದಾರಿಯನ್ನು ಸಮರ್ಥವಾಗಿ, ಪಾರದರ್ಶಕವಾಗಿ ಮತ್ತು ನ್ಯಾಯದ ಪರವಾಗಿ ಬಳಸಿಕೊಳ್ಳುವುದಾಗಿ ಅಣ್ಣಪ್ಪ ನಾಯ್ಕ ಭರವಸೆ ನೀಡಿದ್ದಾರೆ.