ಯಲ್ಲಾಪುರ : ತಾಲೂಕಿನ ರಾಜಕೀಯದಲ್ಲಿ ಸೌಮ್ಯ ಸ್ವಭಾವದ ಹಾಗೂ ಕಡಿಮೆ ಮಾತನಾಡುವ ಪೂಜಾ ನೇತ್ರಕರ್ ಅವರು ಒಂದು ಪರಚಯಾತ್ಮಕ ಹೆಸರಾಗಿದೆ. ಕಾಂಗ್ರೆಸ್ ಪಕ್ಷದ ಮಾಜಿ ಬ್ಲಾಕ್ ಉಪಾಧ್ಯಕ್ಷೆ ಮತ್ತು ಪ್ರಸ್ತುತ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆಯಾಗಿರುವ ಪೂಜಾ, ತಮ್ಮ ಸಂಘಟನಾ ಕೌಶಲ್ಯ ಮತ್ತು ಪಾರದರ್ಶಕ ಮುಖಂಡತ್ವದಿಂದ ಎಲ್ಲರ ಮನ್ನಣೆಯನ್ನು ಪಡೆದುಕೊಂಡಿದ್ದಾರೆ.
ಜೆಓಸಿ ವರೆಗೆ ವ್ಯಾಸಂಗ ಮಾಡಿರುವ ಪೂಜಾ, ಮಹಿಳಾ ಸ್ತ್ರೀಶಕ್ತಿ ಸಂಘದ ಮಾಜಿ ಅಧ್ಯಕ್ಷೆಯೂ ಆಗಿದ್ದಾರೆ. ಶಾಲಾ-ಕಾಲೇಜು ದಿನಗಳಲ್ಲಿ ವಾಲಿಬಾಲ್ ಕ್ರೀಡಾಪಟುವಾಗಿ ಗುರುತಿಸಲ್ಪಟ್ಟು, ತಂಡದ ನಾಯಕಿಯಾಗಿ ಕಾರ್ಯನಿರ್ವಹಿಸಿದ ಅನುಭವವನ್ನು ಹೊಂದಿದ್ದಾರೆ. ರಾಜಕೀಯದಲ್ಲಿ ಯಾವುದೇ ಹಿನ್ನೆಲೆ ಹೊಂದಿರದೇ ಯಾವುದೇ ಉದ್ದೇಶವಿಲ್ಲದಿದ್ದರೂ, ಶಿವರಾಮ್ ಹೆಬ್ಬಾರ್ ಅವರ ಅಭಿಮಾನಿಯಾಗಿರುವ ಶಕೀಲ್ ಅಹ್ಮದ್ ಅವರ ಒತ್ತಾಯಕ್ಕೆ ಮಣಿದು, ಶಿವರಾಮ್ ಹೆಬ್ಬಾರ್ ಅವರ ಮಾರ್ಗದರ್ಶನದಲ್ಲಿ ರಾಜಕೀಯಕ್ಕೆ ಪ್ರವೇಶಿಸಿದರು. ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು.
ಇವರ ಸಂಘಟನಾ ಚಾತುರ್ಯ ಮತ್ತು ಪಾರದರ್ಶಕ ಮುಖಂಡತ್ವವನ್ನು ಗಮನಿಸಿದ ರಾಜ್ಯ ಸರ್ಕಾರ, ಪೂಜಾ ಅವರನ್ನು ಯಲ್ಲಾಪುರ ತಾಲೂಕ ಭೂ ನ್ಯಾಯ ಮಂಡಳಿಯ ಸದಸ್ಯರನ್ನಾಗಿ ನೇಮಿಸಿ ಗೌರವಿಸಿದೆ. ಈ ಹುದ್ದೆಗೆ ನೇಮಕವಾಗಲು ಶಾಸಕ ಶಿವರಾಮ್ ಹೆಬ್ಬಾರ್, ಮಾಜಿ ಶಾಸಕ ವಿ ಎಸ್ ಪಾಟೀಲ್, ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್, ಕಾಂಗ್ರೆಸ್ ಪ್ರಮುಖ ರವಿ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್‌ಕೆ ಭಟ್ಟ ಮೆಣಸುಪಾಲ, ಬಿಸಿಸಿ ಮಾಜಿ ಅಧ್ಯಕ್ಷ ಡಿ ಎನ್ ಗಾಂವ್ಕರ್, ಪಂಚಾಯತ್ ರಾಜ್ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಉಲ್ಲಾಸ ಶಾನಭಾಗ, ಪಟ್ಟಣ ಪಂಚಾಯತ್ ಅಧ್ಯಕ್ಷೆ ನರ್ಮದಾ ನಾಯ್ಕ, ಸದಸ್ಯ ಸಯ್ಯದ್ ಕೈಸರಲಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಮುಖೆ ಸರಸ್ವತಿ ಗುನಗಾ, ಸಾಮಾಜಿಕ ಕಾರ್ಯಕರ್ತ ಶಕೀಲ್ ಅಹ್ಮದ್ ಮುಂತಾದ ಮುಖಂಡರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳುತ್ತಾರೆ.
ಕರ್ನಾಟಕ ಭೂ ನ್ಯಾಯ ಮಂಡಳಿಯ ಸದಸ್ಯೆಯಾಗಿ, ಭೂ ವಿವಾದಗಳನ್ನು ತೀರ್ಮಾನಿಸುವುದು, ಭೂ ಹಕ್ಕುಗಳ ಪರಿಶೀಲನೆ ಮತ್ತು ನೀಡಿಕೆ, ಭೂ ಹಕ್ಕುಗಳಿಗೆ ಸಂಬಂಧಿಸಿದ ವಿವಾದಗಳು ಮತ್ತು ಅರ್ಜಿಗಳನ್ನು ಸ್ವೀಕರಿಸಿ ತೀರ್ಮಾನಗಳನ್ನು ಕೈಗೊಳ್ಳುವುದು, ಇತ್ಯಾದಿ ಜವಾಬ್ದಾರಿಗಳನ್ನು ಪೂಜಾ ಸಮರ್ಥವಾಗಿ ಪ್ರತಿನಿಧಿಸುವುದಾಗಿ ಭರವಸೆ ಹೊಂದಿದ್ದಾರೆ. ಎಲ್ಲಾ ತೀರ್ಮಾನಗಳು ಕಾನೂನುಬದ್ಧ ದಾರಿಯಲ್ಲಿ ಮತ್ತು ಸಮಾನತೆಯ ಆಧಾರದ ಮೇಲೆ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ತಾಲೂಕಿನ ಎಲ್ಲ ಘಟನಾವಳಿಗಳ ಪಾರದರ್ಶಕತೆಯನ್ನು ಕಾಪಾಡಿಕೊಂಡು ನ್ಯಾಯದ ಪರವಾಗಿ ನಿಲ್ಲುವುದಾಗಿ ಪೂಜಾ ನೇತ್ರಕರ್ ಭರವಸೆ ನೀಡಿದ್ದಾರೆ.
ಪೂಜಾ ಅವರ ಈ ಹೊಸ ಜವಾಬ್ದಾರಿಯು ತಾಲೂಕಿನ ಜನರಿಗೆ ನ್ಯಾಯ ಮತ್ತು ನ್ಯಾಯೋಚಿತ ಭೂ ಹಕ್ಕುಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂಬುದು ಸ್ಪಷ್ಟ. ಅವರ ಸಮರ್ಥ ನಾಯಕತ್ವ ಮತ್ತು ಪಾರದರ್ಶಕತೆಯು ಭೂ ವಿವಾದಗಳನ್ನು ಪರಿಹರಿಸುವಲ್ಲಿ ಹಾಗೂ ಜನರಿಗೆ ನ್ಯಾಯ ಒದಗಿಸುವಲ್ಲಿ ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.