Adv

news21 ‌ ‌YELLAPURNews prakatane --------- ‌ ‌patanakaroct10to17pydkumar Oct9to15 ‌ ‌ ‌ ‌ ‌ oct5to15-pyd ‌‌ ‌ Vishal-sep13to-unlimited ‌ ‌ ‌ ‌ IMG-20241009-195526

Monday, 14 October 2024

ವಿಕಾಸವಾದಿ, ಕಾನೂನು ಪರಿಣಿತ, ಕ್ರೀಡಾ ಪ್ರೇಮಿ : ಪ್ರಕಾಶ ಮಾಲಶೇಟ ಎಂಬ ಯಲ್ಲಾಪುರದ ಆಲದ‌ಮರ

IMG-20241014-112939


ಯಲ್ಲಾಪುರ: ಪ್ರಕಾಶ ಮಾಲಶೇಟ ಅವರು ಕ್ರೀಡಾ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿರುವ ಒಬ್ಬ ಬಹುಮುಖ ಪ್ರತಿಭಾನ್ವಿತ ವ್ಯಕ್ತಿ. 1953 ರಲ್ಲಿ ಕಾಶೀನಾಥ ಮತ್ತು ನಿರ್ಮಲಾ ದಂಪತಿಯ ಪುತ್ರರಾಗಿ ಜನಿಸಿದ ಪ್ರಕಾಶ, 1975ರಲ್ಲಿ ಬೆಳಗಾವಿಯ ಗೋಗಟೆ ಕಾಲೇಜಿನಿಂದ ಬಿ.ಕಾಮ್ ಹಾಗೂ ಆರ್.ಎಲ್.ಲಾ ಕಾಲೇಜಿನಿಂದ ಎಲ್.ಎಲ್.ಬಿ (ಸ್ಪೆಷಲ್) ಪದವಿ ಪಡೆದು ಯಲ್ಲಾಪುರಕ್ಕೆ ಮರಳಿದರು.

1975 ರಿಂದ 1978 ರವರೆಗೆ ದೇಶದಲ್ಲಿ ಜಾರಿಯಲ್ಲಿದ್ದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ, ಅನಂತ ಗೋವಿಂದ ಪೈ, ವಿನಾಯಕ ಬಾಲಕೃಷ್ಣ ಮುರಕುಂಬಿ ಮತ್ತು ಮಂಜುನಾಥ ನಿಲಂಕಾರ ಹೆಗಡೆ ಎಂಬ ಮಿತ್ರರೊಂದಿಗೆ ತಮ್ಮನ್ನು ಜೈಲು ವಾಸಕ್ಕೆ ಒಳಪಡಿಸಿಕೊಂಡರು. IMG-20241014-112930

ಕ್ರೀಡಾ ಪ್ರೇಮಿ, ಕ್ರೀಡೆಗೆ‌ ಪ್ರೋತ್ಸಾಹಕ !

1978 ರಿಂದ ಯಲ್ಲಾಪುರದಲ್ಲಿ ವಕೀಲ ಮತ್ತು ತೆರಿಗೆ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಾ, 'ಸ್ಪೋರ್ಟ್ಸ್ ಕ್ಲಬ್ ಯಲ್ಲಾಪುರ' ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಅದರ ಸಂಸ್ಥಾಪಕ ಕಾರ್ಯದರ್ಶಿ ಹಾಗೂ ನಂತರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. (ಉತ್ತರ ಕನ್ನಡ ಜಿಲ್ಲಾ ಗೆಜೆಟಿಯರನಲ್ಲಿ ಈ ಸಂಸ್ಥೆಯನ್ನು ಕ್ರೀಡಾ ಸಂಘವಾಗಿ ನೊಂದಾಯಿಸಲಾಗಿದೆ). ಕ್ರೀಡಾಂಗಣ ನಿರ್ಮಾಣಕ್ಕಾಗಿ ಸರಕಾರದಿಂದ ಎರಡು ಎಕರೆ ಜಮೀನನ್ನು ಪಡೆದು, ಬಿಸಗೋಡ್ ಮೈನ್ಸ್ ನವರ ಬುಲ್ಡೋಜರ್ ಸಹಾಯದಿಂದ ಅದನ್ನು ಸಮತಟ್ಟು ಮಾಡಿ ಆಟದ ಮೈದಾನ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇದಲ್ಲದೆ, ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸದಸ್ಯರಾಗಿ ಸತತ ಇಪ್ಪತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ, ಯಲ್ಲಾಪುರದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರ ಅವಿರತ ಪ್ರಯತ್ನದ ಫಲವಾಗಿ, ದೇಶದಲ್ಲಿ ತಾಲ್ಲೂಕು ಕ್ರೀಡಾಂಗಣ ಯೋಜನೆ ಆರಂಭವಾಯಿತು.

ಯಲ್ಲಾಪುರದ ಪ್ರಕಾಶ ಮಾಲಶೇಟ ಅವರು ಕ್ರೀಡಾ ಲೋಕದಲ್ಲಿ ತಮ್ಮ ಅಪಾರ ಸೇವೆಯಿಂದ ಜನರ ಮನ ಗೆದ್ದಿರುವ ವ್ಯಕ್ತಿ. ಹಲವಾರು ಎಡರುತೊಡರುಗಳ ನಡುವೆಯೂ ಕ್ರೀಡೆಗೆ ತಮ್ಮನ್ನು ಅರ್ಪಿಸಿಕೊಂಡು, ಯಲ್ಲಾಪುರದ ಕ್ರೀಡಾ ಪ್ರಗತಿಗೆ ಅಪಾರ ಕೊಡುಗೆ ನೀಡಿದ್ದಾರೆ.

ತಾಲ್ಲೂಕು ಕ್ರೀಡಾಂಗಣ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ತಮ್ಮ ಸ್ಪೋರ್ಟ್ಸ್ ಕ್ಲಬ್ ಯಲ್ಲಾಪುರದ ತಾಲೂಕಾ ಕ್ರೀಡಾಂಗಣಕ್ಕೆ ಎರಡು ಎಕರೆ ಜಮೀನನ್ನು ದಾನವಾಗಿ ನೀಡಿ ಅದನ್ನು ಸಾಧ್ಯವಾಗಿಸಿದರು. ಇಷ್ಟೇ ಅಲ್ಲದೇ, ತಮ್ಮ ಕ್ಲಬ್‌ಗೆ ಸ್ವಂತ ಕಚೇರಿ ಕಟ್ಟಡ ನಿರ್ಮಾಣಕ್ಕಾಗಿ ಪ್ರಯತ್ನಿಸಿ, ಹೋಲಿ ರೋಜರಿ ಚರ್ಚ್ ಪಕ್ಕದಲ್ಲಿರುವ ಸರಕಾರಿ ನೌಕರರ ಸಂಘದ ಕಟ್ಟಡವನ್ನು ಖರೀದಿಸಿ ಅವರಿಗೆ ಹೊಸ ಕಟ್ಟಡ ನಿರ್ಮಾಣದಲ್ಲಿ ಸಹಾಯ ಮಾಡಿದರು.

ಮಂಡಲ ಉಪಾಧ್ಯಕ್ಷರಾಗಿ ಕೆಲಸ 

2005ರಲ್ಲಿ ಸ್ಪೋರ್ಟ್ಸ್ ಕ್ಲಬ್ ಯಲ್ಲಾಪುರದ ರಜತ ಮಹೋತ್ಸವದ ಸಂದರ್ಭದಲ್ಲಿ ಪತಂಜಲಿ ಯೋಗ ಸಮಿತಿ ಮತ್ತು ಸಹ್ಯಾದ್ರಿ ನಿಸರ್ಗ ಬಳಗದ ಸಹಕಾರದೊಂದಿಗೆ ಯೋಗ ಸಪ್ತಾಹವನ್ನು ಅದ್ದೂರಿಯಾಗಿ ಆಚರಿಸಿದರು. 1983ರಲ್ಲಿ ಯಲ್ಲಾಪುರ ಮಂಡಲ ಪಂಚಾಯತಿಯ ಸ್ವತಂತ್ರ ಅಭ್ಯರ್ಥಿಯಾಗಿ ಚುನಾಯಿತರಾಗಿ ಸದಸ್ಯರಾಗಿ ಸೇವೆ ಸಲ್ಲಿಸಿದ ಅವರು, ನಂತರ ಉಪಾಧ್ಯಕ್ಷರಾಗಿ ಮತ್ತು ಉಪಪ್ರಧಾನರಾಗಿ ಏಳುವರೆ ವರ್ಷ ಕಾರ್ಯನಿರ್ವಹಿಸಿದರು. ಯಲ್ಲಾಪುರದ ಮೀನು ಮಾರುಕಟ್ಟೆ ನಿರ್ಮಾಣಕ್ಕೂ ಅವರ ಪ್ರಯತ್ನಗಳು ಕಾರಣವಾಗಿವೆ.

ಜಿಲ್ಲಾ ಮಟ್ಟದ ಹಲವಾರು ಸಂಸ್ಥೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿರುವ ಪ್ರಕಾಶ ಮಾಲಶೇಟ ಅವರು, 1983ರಿಂದ 5 ಬಾರಿ ಜಿಲ್ಲಾ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಯಲ್ಲಾಪುರದಲ್ಲಿ ಏರ್ಪಡಿಸಿದ್ದಾರೆ. 'ಗೆದ್ದರೂ ಬಹುಮಾನ, ಸೋತರೂ ಬಹುಮಾನ' ಎಂಬ ಹೊಸ ಕ್ರೀಡಾ ಪ್ರೋತ್ಸಾಹ ನೀತಿಯನ್ನು ಪರಿಚಯಿಸುವ ಮೂಲಕ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಇತಿಹಾಸದಲ್ಲಿ ಪ್ರಥಮ ಬಾರಿ ಕಾರವಾರದಲ್ಲಿ ನಡೆದ ದಕ್ಷಿಣ ಭಾರತ ಭಾರ ಎತ್ತುವ ಸ್ಪರ್ಧೆಯ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ, ಜಿಲ್ಲಾ ವೇಟ್ ಲಿಫ್ಟಿಂಗ್ ಅಸೋಸಿಯೇಷನ್‌ನ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಕರ್ನಾಟಕ ರಾಜ್ಯ ಬೀಚ್ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷರಾಗಿ ಮೂರು ವರ್ಷ ಸೇವೆ ಸಲ್ಲಿಸಿದ ಅವರು, ಮುಂಬೈನಲ್ಲಿ ನಡೆದ ಏಷ್ಯನ್ ಬೀಚ್ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾರತ ತಂಡದ ತಾಂತ್ರಿಕ ಸಮಿತಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಈ ಮೂಲಕ ಕ್ರೀಡಾ ಲೋಕದಲ್ಲಿ ತಮ್ಮನ್ನು ಒಂದು ಪ್ರೇರಣಾ ಮೂರ್ತಿಯನ್ನಾಗಿ ಸ್ಥಾಪಿಸಿಕೊಂಡಿದ್ದಾರೆ.

 ಕ್ರೀಡೆ, ಪತ್ರಿಕೋದ್ಯಮ ಮತ್ತು ಸಾಮಾಜಿಕ ಸೇವೆಯಲ್ಲಿ ಸಕ್ರಿಯ

ಶಿರಸಿಯ ಪ್ರಕಾಶ ಮಾಲಶೇಟ್ ಅವರು ಕ್ರೀಡಾ, ಸಾಮಾಜಿಕ ಮತ್ತು ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಾ ಒಂದು ವಿಶಿಷ್ಟ ಗುರುತನ್ನು ಸೃಷ್ಟಿಸಿಕೊಂಡಿದ್ದಾರೆ. ಜಿಲ್ಲೆಯ ಇತಿಹಾಸದಲ್ಲಿ ಶಿರಸಿಯಲ್ಲಿ ನಡೆದ ಕರ್ನಾಟಕ ಮತ್ತು ಗೋವಾ ರಣಜಿ ಟ್ರಾಫಿ ಕ್ರಿಕೇಟ್ ಪಂದ್ಯಾವಳಿಯ ಆಹಾರ, ವಸತಿ ಮತ್ತು ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಯಲ್ಲಾಪುರದಲ್ಲಿ ನಡೆದ ರಾಜ್ಯ ಯುವಜನ ಮೇಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಈಗ ಅವರು ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್‌ನ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವರದಿಗಾರರಾಗಿ ಮಾಲಶೇಟ್

ಪತ್ರಿಕಾರಂಗದಲ್ಲಿಯೂ ತಮ್ಮ ಕೈವಾಡವನ್ನು ಹೊಂದಿರುವ ಪ್ರಕಾಶ ಮಾಲಶೇಟ್, ಬೆಳಗಾವಿಯ "ತರುಣ ಭಾರತ" ಮರಾಠಿ ದಿನಪತ್ರಿಕೆಗೆ ಎಂಟು ವರ್ಷಗಳ ಕಾಲ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಕುಟುಂಬ ಪ್ರಿಯರಾದ ಪ್ರಕಾಶ 1984ರಲ್ಲಿ ಪುಷ್ಪಲತಾರನ್ನು ವಿವಾಹವಾಗಿ ಇಬ್ಬರು ಪುತ್ರರನ್ನು ಪಡೆದಿದ್ದಾರೆ. ಅವರ ಪ್ರಥಮ ಪುತ್ರ ಬಿ.ಇ ಪದವಿಯನ್ನು ಪಡೆದು ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಎರಡನೇ ಪುತ್ರ ಬಿ.ಕಾಂ ಮತ್ತು ಎಂ.ಬಿ.ಎ ಪದವಿಯನ್ನು ಪಡೆದು ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಕಂಪನಿಯನ್ನು ನಡೆಸುತ್ತಿದ್ದಾರೆ.

ಕೇಂದ್ರ ಸರ್ಕಾರದ ಕ್ರೀಡಾ ಇಲಾಖೆ ವತಿಯಿಂದ ನಡೆಸಲಾದ "ಸಿದ್ದಿ ಕ್ರೀಡಾ ಪ್ರತಿಭಾನ್ವೇಷಣಾ" ಕಾರ್ಯಕ್ರಮದಲ್ಲಿ ಪ್ರಕಾಶ ಸಕ್ರಿಯವಾಗಿ ತೊಡಗಿಸಿಕೊಂಡು, ಹಳಿಯಾಳದ ಬಸವರಾಜ ಓಸೀಮಠ ಅವರೊಂದಿಗೆ 42 ಜನ ಸಿದ್ದಿ ಕ್ರೀಡಾಪಟುಗಳನ್ನು ದೆಹಲಿಗೆ ತರಬೇತಿಗೆ ಕರೆದೊಯ್ದು, ಅವರ ತರಬೇತಿಗೆ ಸಹಕಾರ ನೀಡಿದ್ದಾರೆ. 40 ವರ್ಷಗಳಿಂದ ಟಿಳಕಚೌಕ್ ಸಾರ್ವಜನಿಕ ಗಜಾನನೋತ್ಸವ ಸಮಿತಿಯಲ್ಲಿ ವಿವಿಧ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದ ಪ್ರಕಾಶ, ಯಲ್ಲಾಪುರ ತಾಲೂಕಿನಲ್ಲಿ ಗಣೇಶೋತ್ಸವ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅಲ್ಲದೆ, ಸಮಾಜದ ಸಂಸ್ಥಾಪಕ ಕಾರ್ಯದರ್ಶಿ ಮತ್ತು ನಂತರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ತಾಲ್ಲೂಕು ಪತಂಜಲಿ ಯೋಗ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿ, ಯೋಗಋಷಿ ಬಾಬಾ ರಾಮದೇವ ಅವರ ಕಾರ್ಯಕ್ರಮವನ್ನು ವೈ.ಟಿ.ಎಸ್ ಸಂಸ್ಥೆಯ ಮೈದಾನದಲ್ಲಿ ಯಶಸ್ವಿಯಾಗಿ ನಡೆಸಿದ್ದಾರೆ. IMG-20241014-112917 IMG-20241014-113111

ಜಗತ್ತು ಸುತ್ತುವ ಪ್ರಕಾಶ ಮಾಲಶೇಟ್ ಅವರಿಗೆ ಸನ್ಮಾನ

ಯಲ್ಲಾಪುರದ ಪ್ರಕಾಶ ಮಾಲಶೇಟ್ ಅವರು ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯ ಉತ್ತಮ ವಿದ್ಯಾರ್ಥಿಯಾಗಿದ್ದು, ಹಲವು ವರ್ಷಗಳಿಂದ ಸಂಸ್ಥೆಯ ಅಜೀವ ಸದಸ್ಯರಾಗಿದ್ದಾರೆ. 2006 ರಿಂದ ಬೆಂಗಳೂರಿನಲ್ಲಿ ವಾಸವಿರುವ ಅವರು, ಬೆಂಗಳೂರಿನಲ್ಲಿ ವಕಾಲತ್ತು ಮಾಡುತ್ತಾ ತೆರಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಕಾಶರಿಗೆ ಪ್ರವಾಸ ಮಾಡುವುದು ಮತ್ತು ಜಗತ್ತನ್ನು ಸುತ್ತುವುದು ಅತ್ಯಂತ ಪ್ರೀತಿಯ ಹವ್ಯಾಸ. ಅವರು ತಮ್ಮ ಪತ್ನಿ ಪುಷ್ಪಲತಾ ಅವರೊಂದಿಗೆ ಅಮೆರಿಕವನ್ನು ಸಂಪೂರ್ಣವಾಗಿ ಸುತ್ತಿದ್ದಾರೆ. ನೇಪಾಳ, ಭೂತಾನ್ ಮುಂತಾದ ದೇಶಗಳಿಗೆ ತಮ್ಮ ಮಿತ್ರರನ್ನು ಕರೆದುಕೊಂಡು ಹೋಗಿ ತೋರಿಸಿದ್ದಾರೆ. ಪ್ರತಿ ವರ್ಷ ಒಂದು ರಾಜ್ಯವನ್ನು ಸುತ್ತುವುದು ಅವರ ನಿಯಮಿತ ಹವ್ಯಾಸ. ಗುಜರಾತ್‌ನಿಂದ ಅಸ್ಸಾಂವರೆಗೆ ಹಾಗೂ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ತಮ್ಮ ಗುಂಪಿನ ಜನರೊಂದಿಗೆ ಹಲವು ಬಾರಿ ಪ್ರವಾಸ ಮಾಡಿದ್ದಾರೆ. ಈ ವರ್ಷದ ನವೆಂಬರ್‌ನಲ್ಲಿ 25 ಜನರ ತಂಡದೊಂದಿಗೆ ದಕ್ಷಿಣ ಭಾರತ ಪ್ರವಾಸವನ್ನು ಯೋಜಿಸಿದ್ದಾರೆ.

ಇದೀಗ 72ನೇ ವಯಸ್ಸಿನಲ್ಲೂ ಸಕ್ರಿಯರಾಗಿರುವ ಪ್ರಕಾಶ, ಪದ್ಮಶ್ರೀ ಡಾ. ಸುಭಾಷ ಪಾಳೆಕರ ಅವರ ಕೃಷಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು, ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕಗಳನ್ನು ಬಳಸದೇ ತಮ್ಮ ಸ್ವಂತ ಹೊಲದಲ್ಲಿ ವಿಷಮುಕ್ತ ಮತ್ತು ಆರೋಗ್ಯಕರ ತರಕಾರಿಗಳನ್ನು ಬೆಳೆಸಿ ಜನರಿಗೆ ಒದಗಿಸುವಲ್ಲಿ ತೊಡಗಿದ್ದಾರೆ.

ಭಾನುವಾರ, ಎಪಿಎಂಸಿ ರೈತ ಭವನದಲ್ಲಿ ನಡೆದ ಚೆಸ್ ಪಂದ್ಯಾವಳಿ ಉದ್ಘಾಟನೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಯಲ್ಲಾಪುರದ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ತಾಲೂಕು ಸಮಿತಿಯ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ಅವರ ನೇತೃತ್ವದಲ್ಲಿ ಪ್ರಕಾಶ ಮಾಲಶೇಟ್ ಅವರನ್ನು ಸನ್ಮಾನಿಸಲಾಯಿತು. ಶಾಸಕ ಶಿವರಾಮ ಹೆಬ್ಬಾರ್ ಹಾಗೂ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಅವರು ಕಾರ್ಯಕ್ರಮದಲ್ಲಿ ಮಾತನಾಡಿ, ತಾಲೂಕಾ ಕ್ರೀಡಾಂಗಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪ್ರಕಾಶ ಮಾಲಶೇಟ್ ಅವರ ಸೇವೆ ಮತ್ತು ಪರಿಶ್ರಮವನ್ನು ಸ್ಮರಿಸಿದರು.

.