ಯಲ್ಲಾಪುರ: ತಾಲೂಕಿನ ಬಿಸಗೋಡ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ರವಿಕುಮಾರ ಕೆ.ಎನ್. ಅವರ ಅಪಾರ ಶಿಕ್ಷಣ ಸೇವೆಯನ್ನು ಗುರುತಿಸಿ, ಅವರಿಗೆ ‘ಶಿಕ್ಷಣ ರತ್ನ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. ಬೆಂಗಳೂರಿನ ‘ಸೂರ್ಯ ಫೌಂಡೇಶನ್’ ಮತ್ತು ‘ಸ್ಪಾರ್ಕ್ ಅಕಾಡೆಮಿ’ ವತಿಯಿಂದ ಹುರಳಿಚಿಕ್ಕನಹಳ್ಳಿ, ಹೆಸರಘಟ್ಟ ಇಂಡೋಗ್ಲೋಬ್ ಪಿಯು ಕಾಲೇಜಿನಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಅಕ್ಟೋಬರ್ 15ರಂದು ಈ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.
ರವಿಕುಮಾರ ಅವರ ಶಿಕ್ಷಣ ಕ್ಷೇತ್ರದಲ್ಲಿನ ಅಪಾರ ಸಾಧನೆ ಮತ್ತು ವಿದ್ಯಾರ್ಥಿಗಳ ಬೆಳವಣಿಗೆಗೆ ಅವರು ನೀಡಿರುವ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ‘ಶಿಕ್ಷಕ ರತ್ನ’ ರಾಜ್ಯ ಪ್ರಶಸ್ತಿಯನ್ನು ತನ್ನ ಎಲ್ಲಾ ಪ್ರೀತಿಯ ವಿದ್ಯಾರ್ಥಿಗಳಿಗೆ ಸಮರ್ಪಿಸುವುದಾಗಿ ರವಿಕುಮಾರ ತಿಳಿಸಿದ್ದಾರೆ.
ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕೆರೆಸಂತೆ ಗ್ರಾಮದ ನಿವಾಸಿಯಾದ ರವಿಕುಮಾರ, ಕಳೆದ 16 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ಹಳ್ಳಿ ಶಾಲೆಗಳಲ್ಲಿಯೂ ಅವರು ಉತ್ತಮ ಶಿಕ್ಷಕರಾಗಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಯಲ್ಲಾಪುರದ ಬಿಸಗೋಡ ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.
ಪ್ರಶಸ್ತಿ ಪತ್ರ ವಿತರಣಾ ಸಮಾರಂಭದಲ್ಲಿ ಇಂಡೋಗ್ಲೋಬ್ ಇನ್‌ಸ್ಟಿಟ್ಯೂಷನ್ಸ್, ಬೆಂಗಳೂರಿನ ಸಂಸ್ಥಾಪಕ ಬಿ.ಎಂ. ಗೌಡ ಅದ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಮೈಸೂರು ಎಎಂಸಿಎಡಿ ಸೆಂಟರ್ ಆಫ್ ಎಕ್ಸಲೆನ್ಸ್, ಅಂತರಾಷ್ಟ್ರೀಯ ಜೀವನ ಕೌಶಲ್ಯ ತರಬೇತುದಾರ ಚೇತನ್‌ರಾಮ್ ಆರ್.ಎ, ಇಂಡೋಗ್ಲೋಬ್ ಇನ್‌ಸ್ಟಿಟ್ಯೂಷನ್ಸ್ ಬೆಂಗಳೂರಿನ ಕಾರ್ಯದರ್ಶಿ ಸಂಗೀತಾ ಎಸ್. ಬಿ, ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಸಂಪಾದಕ ಗಂಡಸಿ ಸದಾನಂದಸ್ವಾಮಿ, ನವೋದಯ ಸಂಸ್ಥಾಪಕರು, ಸೂರ್ಯ ಫೌಂಡೇಶನ್ ಮತ್ತು ಸ್ಪಾರ್ಕ್ ಅಕಾಡೆಮಿ ಅಧ್ಯಕ್ಷ ಹಾಗೂ ಬೆಂಗಳೂರಿನ ಶಿಕ್ಷಣ ಸೌರಭ ಪತ್ರಿಕೆ ಸಂಪಾದಕ ಸೋಮೇಶ್, ಎಜಿಎಸ್ ಕಾರ್ಟ್ ಪ್ರೈ ಲಿ ಸಂಸ್ಥಾಪಕರು ವಿನಯ್ ಕುಮಾರ್ ಮತ್ತು ದಿಲೀಪ್ ಕುಮಾರ್, ವೃದ್ಧಿ ಲರ್ನಿಂಗ್ ಎಕ್ಸ್‌ಚೇಂಜ್ ಬಿಸಿನೆಸ್ ಕೋಚ್ ಸಂದೀಪ್ ವಿಜಯನ್, ಕೊಪ್ಪ ಶಾಲಾ ಶಿಕ್ಷಣ ಇಲಾಖೆ ಸಂಪನ್ಮೂಲ ವ್ಯಕ್ತಿ ಆರ್.ಡಿ. ರವೀಂದ್ರ ಮುಂತಾದ ಗಣ್ಯರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ರವಿಕುಮಾರ ಅವರ ಈ ಸಾಧನೆಯು ಯಲ್ಲಾಪುರ ತಾಲೂಕು ಮತ್ತು ಉತ್ತರ ಕನ್ನಡ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಅಪಾರ ಕೊಡುಗೆಯನ್ನು ಗುರುತಿಸಿ, ಅವರನ್ನು ಅಭಿನಂದಿಸಿರುವುದು ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಹೆಮ್ಮೆಯನ್ನು ತಂದಿದೆ.
ರವಿಕುಮಾರ ಅವರು ತಮ್ಮ ಶಿಕ್ಷಣ ಕ್ಷೇತ್ರದಲ್ಲಿನ ಸೇವೆಯನ್ನು ಮುಂದುವರೆಸಿಕೊಂಡು ಹೋಗಿ, ಹೆಚ್ಚಿನ ವಿದ್ಯಾರ್ಥಿಗಳ ಜೀವನದಲ್ಲಿ ಬೆಳಕನ್ನು ತರಲು ಶ್ರಮಿಸಲಿ ಎಂದು ಎಲ್ಲರೂ ಆಶಿಸುತ್ತಿದ್ದಾರೆ. ಅವರ ಈ ಸಾಧನೆಯು ಇತರ ಶಿಕ್ಷಕರಿಗೂ ಸ್ಫೂರ್ತಿಯಾಗಲಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿಯನ್ನು ಕಾಣಲಿ ಎಂದು ನಾವು ಆಶಿಸುತ್ತೇವೆ.
.