ಯಲ್ಲಾಪುರ/ ಶಿರಸಿ: ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ಕ್ಷೇತ್ರವನ್ನು ಗುರುತಿಸುವ ಕಸ್ತೂರಿರಂಗನ್ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿರುವುದು ಸ್ವಾಗತಾರ್ಹ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.
ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿ, ಕೇಂದ್ರ ಸರ್ಕಾರ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸುವಂತೆ ಒತ್ತಡ ತರಬೇಕೆಂದು ಆಗ್ರಹಿಸಿದರು. ಪಶ್ಚಿಮ ಘಟ್ಟ ಪ್ರದೇಶದ ಜನರ ವಿರೋಧದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಈ ನಿರ್ಧಾರ ಸ್ವಾಗತಾರ್ಹ ಎಂದು ನಾಯ್ಕ ತಿಳಿಸಿದರು.
ಕಸ್ತೂರಿರಂಗನ್ ವರದಿಯಿಂದ ಉಂಟಾಗುವ ಅನಾನೂಕೂಲತೆ ಕುರಿತು ಹೋರಾಟಗಾರರ ವೇದಿಕೆ ಪ್ರಕಟಿಸಿದ ಕರಪತ್ರ ಹಾಗೂ ಲಕ್ಷಾಂತರ ಕುಟುಂಬಗಳಿಂದ ಕೇಂದ್ರಕ್ಕೆ ಸಲ್ಲಿಸಲಾದ ಆಕ್ಷೇಪಣೆ ಪತ್ರಗಳನ್ನು ಪರಿಶೀಲಿಸಿ, ಮುಖ್ಯಮಂತ್ರಿಯವರು ಹೋರಾಟದ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ರವೀಂದ್ರ ನಾಯ್ಕ ತಿಳಿಸಿದರು.