ಯಲ್ಲಾಪುರ: ಯಲ್ಲಾಪುರ ಭೂ ನ್ಯಾಯ ಮಂಡಳಿಯ ಸದಸ್ಯರಾಗಿ ಆಯ್ಕೆಯಾದ ಪೂಜಾ ನೆತ್ರೇಕರ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮಹಿಳಾ ಮುಖಂಡರು ಸನ್ಮಾನಿಸಿ ಗೌರವಿಸಿದರು. ಯಲ್ಲಾಪುರ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆಯಾಗಿರುವ ಪೂಜಾ ಅವರ ಮನೆಗೆ ತೆರಳಿ ಅವರಿಗೆ ಶುಭ ಹಾರೈಸಿ, ಅವರ ಸೇವೆಗೆ ಮನ್ನಣೆ ನೀಡಲಾಯಿತು.
ಪೂಜಾ ನೆತ್ರೇಕರ ಅವರು ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ, ಕಾಂಗ್ರೆಸ್ ಪಕ್ಷದಲ್ಲಿ ಮಹಿಳೆಯರಿಗೆ ಪ್ರೋತ್ಸಾಹ ನೀಡುತ್ತಿರುವುದು ಮತ್ತು ಅವರಿಗೆ ಪ್ರಮುಖ ಸ್ಥಾನಗಳನ್ನು ನೀಡುತ್ತಿರುವುದು ಶ್ಲಾಘನೀಯ. ತಾವು ಈ ಸ್ಥಾನಕ್ಕೆ ಬರಲು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರ ಪ್ರೋತ್ಸಾಹವೇ ಕಾರಣ ಎಂದು ಹೇಳಿದರು. ನನ್ನ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಂಡು, ಎಲ್ಲರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಮಹಿಳಾ ಕಾಂಗ್ರೆಸ್‌ನ ಪ್ರಮುಖೆ ಆಯೇಶಾ ಗೊಜನೂರು ಮಾತನಾಡಿ, ಪೂಜಾ ಅವರು, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆಯಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದರು. ಪ್ರತಿಯೊಬ್ಬರ ಅಭಿಪ್ರಾಯಗಳನ್ನು ಗೌರವಿಸುತ್ತಾ, ಸಂಘಟಿತರಾಗಿ ಕೆಲಸ ಮಾಡುತ್ತಿದ್ದರು ಎಂದು ಹೇಳಿದರು. ಭೂ ನ್ಯಾಯ ಮಂಡಳಿ ಸದಸ್ಯರಾಗಿ ಆಯ್ಕೆಯಾದ ನಂತರ ಪೂಜಾ ಅವರ ಮೇಲೆ ಜನರ ನಿರೀಕ್ಷೆ ಹೆಚ್ಚಾಗಿದೆ. ಪಾರದರ್ಶಕ ಮತ್ತು ನ್ಯಾಯಪರವಾದ ಕೆಲಸವನ್ನು ಪೂಜಾ ಅವರು ಮುಂದೆಯೂ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅಚಲವಾದ ನಂಬಿಕೆ ವ್ಯಕ್ತಪಡಿಸಿದ ಅವರು, ಈ ಸ್ಥಾನವನ್ನು ಉತ್ತಮವಾಗಿ ಬಳಸಿಕೊಂಡು, ಜನರಿಗೆ ಸೇವೆ ಸಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಹೆಮ್ಮೆಯನ್ನು ತರುವ ನಿರೀಕ್ಷೆ ಇದೆ ಎಂದರು.
ಈ ಸನ್ಮಾನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖರಾದ ಎಂ ಡಿ ಗೌಸ್, ರೂಪಾ ಪಾಟಣಕರ, ಶಕೀಲ್ ಅಹ್ಮದ್, ಅಖ್ತರ್ ಕೆಸರ್ ಶೇಖ, ರಾಜಾರಾಮ ಗಾಂವ್ಕರ, ರಹಮಾನ್ ಶೇಖ ಮತ್ತು ಪೂಜಾ ಪತಿ ನಾಗರಾಜ ನೆತ್ರೇಕರ ಸೇರಿದಂತೆ ಅನೇಕ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.