ಯಲ್ಲಾಪುರ : ತಾಲ್ಲೂಕಿನ ರವಿಂದ್ರನಗರದ ಬಸವರಾಜ ಹನುಮಂತಪ್ಪ ಬೋವಿವಡ್ಡರ (40) ಅವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ನಡೆದಿದ್ದು, ಅವರ ಪತ್ನಿ ಸೀತಾ ಬಸವರಾಜ ಬೋವಿವಡ್ಡರ ಅವರು ಈ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸೀತಾ ಅವರು ತಮ್ಮ ಗಂಡನ ಸಾವಿನಲ್ಲಿ ಸಂಶಯ ವ್ಯಕ್ತಪಡಿಸಿ, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಬಸವರಾಜ ಪೀಡ್ಸ್ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ಬಸವರಾಜ ಕೂಲಿ ಕೆಲಸಗಾರರಾಗಿದ್ದು. ಕಳೆದ ಅಕ್ಟೋಬರ್ 10 ರಂದು ಬೆಳಿಗ್ಗೆ 9:30 ಕ್ಕೆ ಕೃಷ್ಣಪ್ಪ ಲಮಾಣಿ ಮತ್ತು ಪರಶುರಾಮ ಸಿದ್ದಿ ಎಂಬವರೊಂದಿಗೆ ಕೆಲಸಕ್ಕೆ ಹೋಗಿದ್ದರು. ಆದರೆ, ಅಕ್ಟೋಬರ್ 13 ರಂದು ರಾತ್ರಿ 11:30 ಕ್ಕೆ ಯಲ್ಲಾಪುರ ತಾಲೂಕಿನ ಮಳಲಗಾಂವ ಗ್ರಾಮದ ಬೇಡ್ತಿ ನದಿ ಪಕ್ಕದ ಅರಣ್ಯದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಅವರ ದೇಹ ಪತ್ತೆಯಾಗಿದೆ.
ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸಾವಿನ ನಿಜವಾದ ಕಾರಣ ಏನು ಎಂಬುದನ್ನು ತಿಳಿದುಕೊಳ್ಳಲು ಯಲ್ಲಾಪುರ ಪೊಲೀಸ್ ನಿರೀಕ್ಷಕರಾದ ರಮೇಶ ಹಾನಾಪುರ ತನಿಖೆ ನಡೆಸುತ್ತಿದ್ದಾರೆ.