ಯಲ್ಲಾಪುರ/ ಶಿರಸಿ: ಪ್ರೌಢಶಾಲಾ ವಿಜ್ಞಾನ ಪ್ರಶ್ನೆ ಪತ್ರಿಕೆಯ ರಚನೆಯಲ್ಲಿ ಸೂಕ್ತ ಬದಲಾವಣೆ ತರುವಂತೆ ಪ್ರೌಢ ಶಾಲಾ ಪರೀಕ್ಷಾ ಮಂಡಳಿಗೆ ಒತ್ತಾಯಿಸಿ, ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಜಿಲ್ಲಾ ಸಂಘವು ಡಿಡಿಪಿಐ ಬಸವರಾಜ್ ಪಾರಿ ಅವರ ಮೂಲಕ ಮನವಿ ಸಲ್ಲಿಸಿದೆ.
ವಿಜ್ಞಾನದಲ್ಲಿ ಗುಣಾತ್ಮಕ ಫಲಿತಾಂಶ ಕುಸಿತ ಕಂಡುಬರುತ್ತಿರುವುದರಿಂದ ಪ್ರಶ್ನೆ ಪತ್ರಿಕೆಯಲ್ಲಿ ಬದಲಾವಣೆ ಅಗತ್ಯವಿದೆ ಎಂದು ಸಂಘ ವಾದಿಸಿದೆ. ಪಠ್ಯಪುಸ್ತಕದಲ್ಲಿ ಭೌತ, ಜೀವ, ರಸಾಯನ ಶಾಸ್ತ್ರಗಳನ್ನು ಪ್ರತ್ಯೇಕವಾಗಿ ವಿಭಜಿಸದಿದ್ದರೂ, ಪ್ರಶ್ನೆ ಪತ್ರಿಕೆಯಲ್ಲಿ ವಿಭಾಗವಾರು ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಭೌತಶಾಸ್ತ್ರವನ್ನು ಪ್ರಥಮವಾಗಿ ಆಯ್ಕೆ ಮಾಡಿರುವುದು ಹಾಗೂ ಅದರ ಪ್ರಶ್ನೆಗಳ ಕಠಿಣತೆಯಿಂದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ನೀಲನಕ್ಷೆಯಲ್ಲಿ ಘಟಕಗಳ ಬದಲಾಗಿ ಮುಖ್ಯಾಂಶಗಳಿಗೆ ಆದ್ಯತೆ ನೀಡಲಾಗುತ್ತಿದೆ. ಚಿತ್ರಗಳ ಬಿಡಿಸುವ ಪ್ರಶ್ನೆಗಳ ಬದಲಿಗೆ ಚಿತ್ರಾಧಾರಿತ ಪ್ರಶ್ನೆಗಳ ಸಂಖ್ಯೆ ಹೆಚ್ಚುತ್ತಿದೆ. ಹೀಗೆ ಸಿಬಿಎಸ್ಇ ಮಾದರಿಯ ಪ್ರಶ್ನೆಗಳನ್ನು ಕೇಳುವುದರಿಂದ ಗ್ರಾಮೀಣ ಭಾಗದ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಜಿಲ್ಲಾ ಸಂಘದ ಅಧ್ಯಕ್ಷ ಅಜಯ ನಾಯಕ, ಕಾರ್ಯದರ್ಶಿ ಆರ್.ಆರ್.ಶೇಟ್, ಶೈಕ್ಷಣಿಕ ಜಿಲ್ಲಾ ವಿಜ್ಞಾನ ಬಳಗದ ಅಧ್ಯಕ್ಷ ರಾಜಶೇಖರ್ ಎಂ ಹಾಗೂ ಕಾರ್ಯದರ್ಶಿ ರೀನಾ ನಾಯಕ, ಹಾಗೂ ಶಿರಸಿ ಸಿದ್ದಾಪುರ ಯಲ್ಲಾಪುರ ಮುಂಡಗೋಡ, ಹಳಿಯಾಳ, ಜೋಯಿಡಾ ತಾಲೂಕುಗಳ ವಿಜ್ಞಾನ ಬಳಗದ ಅಧ್ಯಕ್ಷರು ಹಾಗೂ ಶಿಕ್ಷಕರಾದ ಸದಾನಂದ ದಬಗಾರ, ಧರ್ಮಾನಂದ, ಗಣೇಶ ಪಟಗಾರ, ಕವಿತಾ ಶೆಟ್, ಜಯಲಕ್ಷ್ಮಿ ಗುನಗ, ನಾಗರಾಜ ಪಂಡಿತ, ನಯನಾ ಭಂಡಾರಿ, ಜಯಲಕ್ಷ್ಮಿ ಹೆಗಡೆ, ಹನುಮಂತಪ್ಪ ಎಸ್.ಆರ್, ಸದಾನಂದ ಡಿ, ವಾಣಿ ಹೆಗಡೆ, ಪ್ರಿಯಾ ಗೌಡ, ಸುಬ್ರಹ್ಮಣ್ಯ ಗೌಡ, ಶೈಲೇಂದ್ರ ಎಂ.ಎಚ್ ಸೇರಿದಂತೆ ಅನೇಕ ವಿಜ್ಞಾನ ಶಿಕ್ಷಕರು ಇದ್ದರು.