ಅತಿವೇಗದ ಕಾರು ಚಲಾಯಿಸಿ ಅಪಘಾತ : ಚಾಲಕನಿಗೆ ಗಾಯ
ಯಲ್ಲಾಪುರ: ಯಲ್ಲಾಪುರ ತಾಲೂಕಿನ ಮಾಗೋಡ ಕಪ್ಪೆಗದ್ದೆ ಕ್ರಾಸ್ ಬಳಿ ತುಮಕೂರು ನಿವಾಸಿ ಕಾರು ಚಾಲಕ ಕಾಂತರಾಜ ವಿಜೆ. ಜಗದೀಶ ಎಂ(23) ತನ್ನ ಕಾರನ್ನು ಅತಿವೇಗವಾಗಿ ಚಲಾಯಿಸಿ ಅಪಘಾತಕ್ಕೀಡಾಗಿ ಗಾಯಗೊಂಡ ಘಟನೆ ಅಕ್ಟೋಬರ್ 12 ರಂದು ಸಂಭವಿಸಿದೆ.
ಮಧ್ಯಾಹ್ನ 3-10ರ ಸುಮಾರಿಗೆ ಕಾಂತರಾಜ ರಾ.ಹೆ-63 ರಲ್ಲಿ ಯಲ್ಲಾಪುರದಿಂದ ಅಂಕೋಲಾ ಕಡೆಗೆ ತನ್ನ ಕಾರನ್ನು ಚಲಾಯಿಸುತ್ತಿದ್ದಾಗ, ನಿಷ್ಕಾಳಜಿತನದಿಂದ ವಾಹನದ ನಿಯಂತ್ರಣ ಕಳೆದುಕೊಂಡು ರಸ್ತೆಯ ಪಕ್ಕದಲ್ಲಿದ್ದ ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ. ಈ ಅಪಘಾತದಲ್ಲಿ ಕಾಂತರಾಜನಿಗೆ ಎದೆ, ಕೈಗಳಿಗೆ ಗಾಯಗಳಾಗಿದ್ದು, ಕಾರು ಜಖಂಗೊಂಡಿದೆ.
ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯ ಪಿಎಸ್ಐ ಶೇಡ್ಜಿ ಚೌಹಾನ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
*******
ಯಲ್ಲಾಪುರ ರವೀಂದ್ರನಗರದ ಬಸವರಾಜ ಭೋವಿವಡ್ಡರ್ ಕಾಣೆಯಾಗಿದ್ದಾರೆ
ಯಲ್ಲಾಪುರ : ಪಟ್ಟಣದ ರವಿಂದ್ರನಗರದ ಬಸವರಾಜ ಹನುಮಂತಪ್ಪ ಭೋವಿವಡ್ಡರ್ ಕಾಣೆಯಾಗಿದ್ದು, ಅವರನ್ನು ಹುಡುಕಲು ಪತ್ನಿ ಸೀತಾ ಬೋವಿವಡ್ಡರ ಪೊಲೀಸರಿಗೆ ದೂರು ನೀಡಿದ್ದಾರೆ.
ಕೂಲಿ ಕೆಲಸ ಮಾಡುತ್ತಿದ್ದ 40 ವರ್ಷ ವಯಸ್ಸಿನ ಬಸವರಾಜ ಭೋವಿವಡ್ಡರ್, ಅಕ್ಟೋಬರ್ 10ರಂದು ಬೆಳಗ್ಗೆ 9:30ಕ್ಕೆ ಮಗಳಿಗೆ ಕೆಲಸಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ತಮ್ಮ ಸ್ನೇಹಿತರೊಂದಿಗೆ ಹೊರಟಿದ್ದರು. ಆದರೆ, ಸ್ನೇಹಿತರೊಂದಿಗೆ ಇಲ್ಲದೆ ಇದುವರೆಗೂ ಮನೆಗೆ ಮರಳಿ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬಸವರಾಜ ಎಲ್ಲಿಗೆ ಹೋಗಿದ್ದಾರೆ ಎಂಬುದು ತಿಳಿದಿಲ್ಲ. ಸೀತಾ ಅವರು ಬೇರೆ ಬೇರೆ ಕಡೆ ಹುಡುಕಾಟ ನಡೆಸಿ, ಸಂಬಂಧಿಕರಿಗೆ ವಿಚಾರಿಸಿ, ಫೋನ್ ಮೂಲಕ ಮಾಹಿತಿ ಪಡೆಯಲು ಪ್ರಯತ್ನಿಸಿದ್ದಾರೆ. ಆದರೆ, ಬಸವರಾಜ ಸಿಕ್ಕಿಲ್ಲ. ಈ ಕಾರಣದಿಂದ ದೂರು ನೀಡಲು ವಿಳಂಭವಾಗಿದೆ ಎಂದು ಸೀತಾ ಅವರು ತಿಳಿಸಿದ್ದಾರೆ.
ಯಲ್ಲಾಪುರ ಪೊಲೀಸ್ ಠಾಣೆಯ ಪಿಎಸ್ಐ ಶೇಡ್ಜಿ ಚೌಹಾನ್ ಈ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
*******
ಯಲ್ಲಾಪುರದಲ್ಲಿ ರಸ್ತೆ ಅಪಘಾತ, ಒಬ್ಬರಿಗೆ ಗಾಯ
ಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಸಂಭವಿಸಿದ ಒಂದು ರಸ್ತೆ ಅಪಘಾತದಲ್ಲಿ ಒಬ್ಬ ವ್ಯಕ್ತಿಗೆ ಗಾಯಗಳಾಗಿವೆ. ಕಿರಣ ಆನಂದ ರಜಪೂತ ಎಂಬಾತ ಅ.11 ರಂದು ಸಂಜೆ 7 ಗಂಟೆ ಸುಮಾರಿಗೆ ಮಂಗಳೂರಿನಿಂದ ಹುಬ್ಬಳ್ಳಿಗೆ ತನ್ನ ಕಾರನ್ನು ಚಾಲನೆ ಮಾಡುತ್ತಿದ್ದಾಗ ಯಲ್ಲಾಪುರ ತಾಲೂಕಿನ ತಾಳಕುಂಬ್ರಿ ಬಳಿ ಅಪಘಾತ ಸಂಭವಿಸಿದೆ.
ಕಿರಣ ಅತೀ ವೇಗವಾಗಿ ಮತ್ತು ನಿಷ್ಠಾಳಜಿಯಿಂದ ಕಾರನ್ನು ಚಾಲನೆ ಮಾಡುತ್ತಿದ್ದರಿಂದ ಚಾಲನಾ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಯ ತಡೆಗೋಡೆಗೆ ಕಾರು ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಕಾರಲ್ಲಿದ್ದ ರೋಹಿತ ಪೊಪಟ್ ಮೊಹಿತೆ ಎಂಬಾತನಿಗೆ ಹೊಟ್ಟೆ ಬಳಿ ಗಾಯಗಳಾಗಿವೆ.
ಕಿರಣ, 26 ವರ್ಷ ವಯಸ್ಸಿನ ವ್ಯವಹಾರಿಯಾಗಿದ್ದು, ಮಹಾರಾಷ್ಟ್ರದ ಸೊಲ್ಲಾಮರದ ನಿವಾಸಿಯಾಗಿದ್ದಾನೆ. ಹಾಲಿ ಗೌಳಿಗಲ್ಲಿಯಲ್ಲಿ ವಾಸವಿದ್ದಾನೆ. ರೋಹಿತ 20 ವರ್ಷ ವಯಸ್ಸಿನವನಾಗಿದ್ದು, ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಖಾನಾಪುರ ತಾಲೂಕಿನ ಹಿಂಗಣಗದೆಯ ನಿವಾಸಿಯಾಗಿದ್ದಾನೆ.
ಈ ಘಟನೆಯ ಬಗ್ಗೆ ರೋಹಿತ ಫಿರ್ಯಾದು ದಾಖಲಿಸಿದ್ದು, ಯಲ್ಲಾಪುರ ಪೊಲೀಸ್ ಠಾಣೆಯ ಪಿಎಸ್ಐ ಶೇಡ್ಜಿ ಚೌಹಾನ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.