ಯಲ್ಲಾಪುರ : ಹಿರಿಯರ ಮಾರ್ಗದರ್ಶನ ಮತ್ತು ಸಂಸ್ಕೃತಿಯನ್ನು ಪಾಲಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಸಮಿತಿ ತಾಲೂಕ ಅಧ್ಯಕ್ಷರು ಗುಡ್ಡಪ್ಪ ಬಸವಣ್ಣೆಪ್ಪ ಹಳ್ಳಾಕಾಯಿ ಹೇಳಿದರು.
ಅವರು, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳ ಸಹಯೋಗದಲ್ಲಿ ಅ 10 ರಂದು ತಾಲೂಕು ಆಸ್ಪತ್ರೆ ಸಭಾಭವನದಲ್ಲಿ 'ಹಿರಿಯ ನಾಗರಿಕ ದಿನಾಚರಣೆ ಹಾಗೂ ಮಾನಸಿಕ ಆರೋಗ್ಯ ದಿನಾಚರಣೆ' ಬೇಟಿ ಬಚಾವೋ ಬೇಟಿ ಪಡಾವೊ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ವಿಶ್ವ ಹಿರಿಯರ ನಾಗರಿಕರ ದಿನಾಚರಣೆಯ ಪ್ರಾಮುಖ್ಯತೆಯನ್ನು ಎತ್ತಿ ತೋರಿದರು. ಈ ದಿನ ವಿಶ್ವ ಮಾನಸಿಕ ಆರೋಗ್ಯ ಹಾಗೂ ಬೇಟಿ ಬಚಾವೋ ಬೇಟಿ ಪಡಾವೋ ದಿನಾಚರಣೆಯನ್ನೂ ಆಚರಿಸಲಾಗುತ್ತಿದೆ. ಸರ್ಕಾರ ಹಿರಿಯ ನಾಗರಿಕರ ಅರ್ಥಿಕ ಸುರಕ್ಷತೆಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಮಾನಸಿಕ ಅಸ್ವಸ್ಥತೆಯುಳ್ಳವರನ್ನು ಕೀಳಾಗಿ ಕಾಣಬಾರದು ಎಂದು ಹೇಳಿ, ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಕರೆ ನೀಡಿದರು. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ ಅವರ ಅಭಿವೃದ್ಧಿಗೆ ಪ್ರೋತ್ಸಾಹಿಸಬೇಕು, ಮಹಿಳೆಯರನ್ನು ಗೌರವದಿಂದ ಕಾಣುವಂತೆ ಕರೆ ನೀಡಿದರು.
ಅಪರ ಸರ್ಕಾರಿ ವಕೀಲ ಎನ್.ಟಿ. ಗಾಂವ್ಕರ್ ಮಾತನಾಡಿ, ಭಾರತೀಯ ಸಂಸ್ಕೃತಿ ಹಿರಿಯ ನಾಗರಿಕರಿಗೆ ಅಪಾರ ಗೌರವ ನೀಡುತ್ತದೆ ಎಂದು ಹೇಳಿದರು. ಸಮಾಜದಲ್ಲಿ ನೈತಿಕತೆ ಕಡಿಮೆಯಾದಾಗ ಕಾನೂನಿನ ಅಗತ್ಯ ಉದ್ಭವಿಸುತ್ತದೆ. ವೃದ್ಧರನ್ನು ನೋಡಿಕೊಳ್ಳುವುದು ಮುಂದಿನ ಪೀಳಿಗೆಯ ಜವಾಬ್ದಾರಿಯಾಗಿದ್ದು, ಕಾನೂನು ಹಿರಿಯ ನಾಗರಿಕರಿಗೆ ಸುರಕ್ಷತಾ ಹಕ್ಕನ್ನು ನೀಡಿದೆ ಎಂದು ಅವರು ತಿಳಿಸಿದರು.
ವಕೀಲ ಆರ್.ಕೆ. ಭಟ್ ಉಪನ್ಯಾಸ ನೀಡಿ, ಕುಟುಂಬದಲ್ಲಿ ಸದಸ್ಯರ ಸಂಖ್ಯೆ ಕಡಿಮೆಯಾಗುತ್ತಿರುವುದು ಹಾಗೂ ಉದ್ಯೋಗಕ್ಕಾಗಿ ಬೇರೆಡೆ ವಲಸೆ ಹೋಗುವುದರಿಂದ ದೇಶದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿದೆ ಎಂದರು. ಈ ಪ್ರವೃತ್ತಿ ಒಳ್ಳೆಯದಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ತಾಲೂಕಾ ಆಸ್ಪತ್ರೆಯ ತಜ್ಞ ವೈದ್ಯ ಡಾ. ಸೌಮ್ಯ ಕೆ.ವಿ. ಉಪನ್ಯಾಸ ನೀಡಿ, ಮನಸ್ಸು ಆರೋಗ್ಯಕ್ಕೆ ಮುಖ್ಯ ಕಾರಣ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ದೇಹ ಹಾಗೂ ಮನಸ್ಸು ಎರಡೂ ಸ್ವಸ್ಥವಾಗಿರಬೇಕು. ಇತ್ತೀಚಿನ ವರ್ಷಗಳಲ್ಲಿ ದೈಹಿಕ ರೋಗಗಳ ಮೇಲೆ ನಿಯಂತ್ರಣ ಸಾಧಿಸಿದರೂ, ಮಾನಸಿಕ ಅನಾರೋಗ್ಯ ಹೆಚ್ಚುತ್ತಿದೆ. ಹೀಗಾಗಿ, ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯದ ಕಡೆಗೂ ಗಮನ ನೀಡಬೇಕು. ಪಾಲಕರು ಮಕ್ಕಳ ಮೇಲೆ ಅತಿಯಾದ ಒತ್ತಡ ಹೇರಬಾರದು. ಸೋಲುಗಳನ್ನು ಸಹಿಸಿಕೊಳ್ಳುವುದನ್ನು ಮಕ್ಕಳಿಗೆ ಕಲಿಸಬೇಕು. ಯೋಗಾಸನ, ಪ್ರಾಣಾಯಾಮ, ಉತ್ತಮ ಆಹಾರ, ಸಾಕು ಪ್ರಾಣಿಗಳ ಜೊತೆ ಕಾಲ ಕಳೆಯುವುದು ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ ಎಂದು ಸಲಹೆ ನೀಡಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀದೇವಿ ಪಾಟೀಲ್ ಮಾತನಾಡಿ, ಹೆಣ್ಣು ಮಕ್ಕಳನ್ನು ಅವರ ಸಾಧನೆಗೆ ಪ್ರೋತ್ಸಾಹಿಸಬೇಕೆಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕಾ ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ ಮಾತನಾಡಿ, ವಸತಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸುವ ಪಾಲಕರು, ಅದೇ ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿ ವೃದ್ಧಾಶ್ರಮ ಸೇರುತ್ತಿದ್ದಾರೆ. ಕೌಟಂಬಿಕ ವ್ಯವಸ್ಥೆ ಸುಸ್ಥಿಯಲ್ಲಿರಬೇಕು. ವೃದ್ಧರ ಹಠಮಾರಿತನವನ್ನು ಚಿಕ್ಕ ಮಕ್ಕಳಂತೆ ಸಹಿಸಿಕೊಳ್ಳಬೇಕು. ನಮ್ಮ ಪೋಷಕರು ನಮ್ಮನ್ನು ನೋಡಿಕೊಂಡಂತೆ ನಾವು ಅವರನ್ನು ನೋಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷೆ ಸರಸ್ವತಿ ಜಿ ಭಟ್, ಪೊಲೀಸ್ ಉಪ ನಿರೀಕ್ಷಕ ಮಹಾವೀರ ಕಾಂಬಳೆ, ಅಬಕಾರಿ ಉಪ ನಿರೀಕ್ಷಕ ಮಂಜುನಾಥ ಜೋಗಳೆಕರ, ಸಮಾಜ ಕಲ್ಯಾಣ ಇಲಾಖೆ ಪ್ರಬಾರ ಸಹಾಯಕ ನಿರ್ದೇಶಕಿ ಜ್ಯೋತಿ ಬಿ ನರೋಟ, ಪ್ಯಾನಲ್ ವಕೀಲರಾದ ಬೇಬಿ ಅಮೀನಾ, ವೇದಿಕೆಯಲ್ಲಿದ್ದರು.
ಅಂಗನವಾಡಿ ಕಾರ್ಯಕರ್ತೆ ರೇಣುಕಾ ಪ್ರಾರ್ಥಿಸಿದರು, ಹಿರಿಯ ಸಹಾಯಕ ಆರೋಗ್ಯಾಧಿಕಾರಿ ಮಹೇಶ ತಾಳೀಕೊಟೆ ಸ್ವಾಗತಿಸಿದರು, ಅರೆ ಕಾಲಿಕ ಸ್ವಯಂ ಸೇವಕರುಗಳಾದ ಸುಧಾಕರ ನಾಯಕ ನಿರೂಪಿಸಿದರು, ಸಂಜೀವ ಹೊಸ್ಕೇರಿ ಕೊನೆಯಲ್ಲಿ ವಂದಿಸಿದರು.
.