ಯಲ್ಲಾಪುರ: ತಾಲೂಕಿನ ಅರಬೈಲ್ ಸಮೀಪದ ಮೂಲೆಪಾಲ್ ನಲ್ಲಿ ಗಿರೀಶ ಭಟ್ ಅವರ ತೋಟದಲ್ಲಿ 10 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಈ ಸರ್ಪವನ್ನು ಉರಗ ಸ್ನೇಹಿ ಸ್ನೇಕ್ ಸೂರಜ್ ಸೆರೆಹಿಡಿದು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ.
ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರಿಗೆ ಈ ಕಾಳಿಂಗ ಸರ್ಪ ಕಾಣಿಸಿಕೊಂಡಾಗ, ಅವರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅರಣ್ಯ ಇಲಾಖೆಯು ಸ್ನೇಕ್ ಸೂರಜ್ ಅವರ ಸಹಾಯ ಪಡೆದು ಕಾಳಿಂಗ ಸರ್ಪವನ್ನು ರಕ್ಷಿಸಲು ಕ್ರಮ ಕೈಗೊಂಡಿತು. ವಿಶೇಷವೆಂದರೆ, ಇದು ಸ್ನೇಕ್ ಸೂರಜ್ ಅವರ 15ನೇ ಕಾಳಿಂಗ ಸರ್ಪ ರಕ್ಷಣಾ ಕಾರ್ಯಾಚರಣೆಯಾಗಿದೆ.
ಈ ಕಾರ್ಯಾಚರಣೆಯಲ್ಲಿ ಹರೀಶ ಮಡಿವಾಳ, ಚಂದ್ರಕಾಂತ ನಾಯ್ಕ, ಗೋಪಾಲ ಗೌಡ, ಮತ್ತು ಸೋಮಶೇಖರ್ ನಾಯ್ಕ ಸ್ನೇಕ್ ಸೂರಜ್ ಅವರಿಗೆ ಸಹಕರಿಸಿದರು. ಕಾಳಿಂಗ ಸರ್ಪದಂತಹ ವಿಷಪೂರಿತ ಸರ್ಪಗಳನ್ನು ಸುರಕ್ಷಿತವಾಗಿ ಸೆರೆಹಿಡಿಯುವ ಮೂಲಕ ಸ್ನೇಕ್ ಸೂರಜ್ ಅವರು ಮಾನವ ಮತ್ತು ಪ್ರಾಣಿಗಳನ್ನು ರಕ್ಷಿಸುತ್ತಿದ್ದಾರೆ ಎಂಬುದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.