ಯಲ್ಲಾಪುರ: ಯಲ್ಲಾಪುರ ಕ್ರಿಕೆಟ್ ಅಸೋಸಿಯೇಷನ್ ವೈಪಿಎಲ್ ಸೀಸನ್ 04 ಅನ್ನು ಈ ಬರುವ ಡಿಸೆಂಬರ್ ನಲ್ಲಿ ಆರಂಭಿಸಲು ಸಜ್ಜಾಗಿದೆ. ಹಿಂದಿನ ಮೂರು ಸೀಸನ್ ಗಳಲ್ಲಿ ಅಪಾರ ಜನಪ್ರಿಯತೆ ಗಳಿಸಿ ಯಲ್ಲಾಪುರದ ಕ್ರಿಕೆಟ್ ಕ್ಷೇತ್ರದಲ್ಲಿ ಹೊಸ ಇತಿಹಾಸವನ್ನು ಬರೆದಿರುವ ಈ ಅಸೋಸಿಯೇಷನ್, ಈಗ ಸೀಸನ್ 04 ರ ಯಶಸ್ವಿ ಆಯೋಜನೆಗೆ ತಯಾರಿ ನಡೆಸುತ್ತಿದೆ. ಈ ಸೀಸನ್ ನ ಆಟಗಾರರ ಆಯ್ಕೆ ಪ್ರಕ್ರಿಯೆ, 'ಬಿಲ್ಡಿಂಗ್' ಮೂಲಕ ಇದೇ ನವೆಂಬರ್ 24 ರಂದು ಆರಂಭವಾಗಲಿದೆ.
ಯಲ್ಲಾಪುರ ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿರುವ ಯಲ್ಲಾಪುರ ಕ್ರಿಕೆಟ್ ಅಸೋಸಿಯೇಷನ್ ಕಮಿಟಿ, ಪ್ರತಿ ಸೀಸನ್ ನಲ್ಲೂ ಹೊಸ ಪ್ರಾಯೋಜಕರನ್ನು ಪಡೆದುಕೊಂಡು ಯಲ್ಲಾಪುರದ ಕ್ರಿಕೆಟ್ ಅನ್ನು ಹೊಸ ಎತ್ತರಕ್ಕೆ ಏರಿಸುತ್ತಾ ಬಂದಿದೆ. ವೈಪಿಎಲ್ ಸೀಸನ್ 3 ರಲ್ಲಿ ಯೂಟ್ಯೂಬ್ ಮೂಲಕ ನೇರ ಪ್ರಸಾರ ಮತ್ತು ಅಂತರಾಷ್ಟ್ರೀಯ ಮಾಜಿ ಕ್ರಿಕೆಟ್ ಆಟಗಾರ ಡಿ. ಗಣೇಶ್ ರವರನ್ನು ಯಲ್ಲಾಪುರಕ್ಕೆ ಆಹ್ವಾನಿಸಿ ಬಹುಮಾನ ವಿತರಣಾ ಸಮಾರಂಭವನ್ನು ಯಶಸ್ವಿಯಾಗಿ ನಡೆಸಿತ್ತು.
ಈ ಯಶಸ್ಸಿಗೆ ಯಲ್ಲಾಪುರ ಕ್ರಿಕೆಟ್ ಅಸೋಸಿಯೇಷನ್ ಮತ್ತು ಯಲ್ಲಾಪುರ ಕ್ರಿಕೆಟ್ ಪ್ರೇಮಿಗಳ ಜೊತೆಗೆ ಯಲ್ಲಾಪುರದ ಜನಪ್ರಿಯ ಶಾಸಕ ಶಿವರಾಮ್ ಹೆಬ್ಬಾರ್, ಶ್ರೀ ರಾಮನಾಥ್ ಡೆವಲಪರ್ಸ್ ನ ಬಾಲಕೃಷ್ಣ ನಾಯಕ್, ಹನ್ಸ್ ನ ವಿಶಾಲ ಶಾನಭಾಗ ಅವರ ಸಹಕಾರವೂ ಹೆಚ್ಚಿನ ಪಾತ್ರ ವಹಿಸಿದೆ.
ಈ ಬಾರಿ ಯಲ್ಲಾಪುರ ಕ್ರಿಕೆಟ್ ಅಸೋಸಿಯೇಷನ್ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ. ಭಾರಿ ಬೇಡಿಕೆಯ ಮಧ್ಯೆ, ಈ ಹಿಂದೆ ಎಂಟು ತಂಡಗಳೊಂದಿಗೆ ನಡೆಯುತ್ತಿದ್ದ ಪಂದ್ಯಾವಳಿಗೆ ಈ ಬಾರಿ ಒಂಬತ್ತನೇ ತಂಡವನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ಈ ಒಂಬತ್ತನೇ ತಂಡದ ಆಟಗಾರರನ್ನು ಬಿಲ್ಡಿಂಗ್ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗುವುದು ಎಂದು ಯಲ್ಲಾಪುರ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಸತೀಶ್ ನಾಯ್ಕ ಇಡಗುಂದಿ ತಿಳಿಸಿದ್ದಾರೆ.
ತಂಡದ ಆಯ್ಕೆ ಸಂಬಂಧಿತ ಬಿಡ್ಡಿಂಗ್ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಿರುವ ಕಮಿಟಿ, ಆಸಕ್ತರು ಕೆಳಗಿನ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಿ ಮಾಹಿತಿ ಪಡೆಯುವಂತೆ ಕೋರಿದೆ.
9902610438, 9844852345, 8147824003, 9972520717, 9481680407.
ಯಲ್ಲಾಪುರದ ಕ್ರಿಕೆಟ್ ಅಭಿಮಾನಿಗಳಿಗೆ ವೈಪಿಎಲ್ ಸೀಸನ್ 04 ಒಂದು ಉತ್ತಮ ಮನರಂಜನೆಯ ಅವಕಾಶವನ್ನು ನೀಡಲಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.