ಯಲ್ಲಾಪುರ : ತಾಲೂಕಿನ ಗೇರಕೊಂಬೆಯ ನಿವಾಸಿ ಹಾಗೂ ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಎನ್.ಬಿ. ಶ್ರೀಧರ ಅವರನ್ನು 2024ನೇ ಸಾಲಿನ "ಶ್ರೇಷ್ಟ ಸಂಶೋಧಕ" ಪ್ರಶಸ್ತಿಗೆ ಭಾಜನಗೊಳಿಸಲಾಗಿದೆ.
ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರನ ಶಿಕ್ಷಕರ ಸಂಘವು ಅವರ ಸಮಗ್ರ ಸಂಶೋಧನಾ ಸಾಧನೆಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ಶಿಕ್ಷಕರ ದಿನಾಚರಣೆಯ ವೇಳೆ ನೀಡಿತು.
ಡಾ. ಶ್ರೀಧರ ಅವರು ಪಶುವೈದ್ಯಕೀಯ ಕ್ಷೇತ್ರದಲ್ಲಿ ಕಳೆದ ಹಲವು ದಶಕಗಳಿಂದ ಮಹತ್ವದ ಸಂಶೋಧನೆ ನಡೆಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ 200 ಕ್ಕೂ ಹೆಚ್ಚು ಸ್ನಾತಕೋತ್ತರ ಮತ್ತು ಡಾಕ್ಟರೇಟ್ ವಿದ್ಯಾರ್ಥಿಗಳು ಸಂಶೋಧನೆ ನಡೆಸಿದ್ದಾರೆ. ಸಸ್ಯಜನ್ಯ, ಶಿಲೀಂದ್ರವಿಷ ಹಾಗೂ ನಿಗೂಢ ಕಾಯಿಲೆಗಳ ಕುರಿತು ಅವರು ನಡೆಸಿದ ವಿಶಿಷ್ಟ ಸಂಶೋಧನೆಗಳು ಅನೇಕ ಜಾನುವಾರುಗಳ ಪ್ರಾಣ ಉಳಿಸಲು ಕಾರಣವಾಗಿವೆ.
ಅವರು ಬಂಜೆತನದಿಂದ ಬಳಲುತ್ತಿರುವ ಪಶುಗಳಿಗೆ ಸೂಕ್ತ ಚಿಕಿತ್ಸಾ ವಿಧಾನಗಳನ್ನು ಕಂಡುಹಿಡಿದು, ಅವುಗಳನ್ನು ಉತ್ಪಾದಕತೆಯತ್ತ ಕೊಂಡೊಯ್ದ ಸಾಧನೆಗಳಿಗೆ ಗುರುತಿಸಿಕೊಂಡಿದ್ದಾರೆ.
ಇತ್ತೀಗಷ್ಟೇ, ಭಾರತೀಯ ಪಶುವೈದ್ಯ ಔಷಧಶಾಸ್ತ್ರಜ್ಞರ ಮತ್ತು ವಿಷಶಾಸ್ತ್ರಜ್ಞರ ಸಂಘವು ಡಾ. ಶ್ರೀಧರ ಅವರಿಗೆ "ರಾಷ್ಟ್ರೀಯ ಫೆಲೊ" ಪ್ರಶಸ್ತಿಯನ್ನು ನೀಡಿದೆ.