ಯಲ್ಲಾಪುರದಲ್ಲಿ ಶಿವಾನಂದ ನಾಯ್ಕ ಎಂದರೆ ಕೇವಲ ಕಾಳಮ್ಮನಗರದ ಶಿವಾನಂದ ನಾಯ್ಕ ಎನ್ನುವಷ್ಟರ ಮಟ್ಟಿಗೆ ಅವರು ಚಿರಪರಿಚಿತರಾಗಿದ್ದರು. ಯಲ್ಲಾಪುರ ಪಟ್ಟಣದಲ್ಲಿ ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಅವರು ಶಿಕ್ಷಣ ಪ್ರೇಮಿಯಾಗಿದ್ದರು.
ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿ ಪ್ರಾರಂಭದಿಂದಲೂ ಸಕ್ರಿಯವಾಗಿದ್ದ ಅವರು, ಕಾಳಮ್ಮನಗರ ದೇವಸ್ಥಾನ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ನೂತನ ಶಿಲಾಮಯ ದೇವಸ್ಥಾನ ನಿರ್ಮಾಣಕ್ಕೆ ಅವರು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ್ದರು. ಕಾಳಮ್ಮನಗರ ಪ್ರಾಥಮಿಕ ಶಾಲೆಯ ಅಭಿವೃದ್ಧಿಗಾಗಿ ಅವರು ಸದಾ ಸಕ್ರಿಯವಾಗಿದ್ದರು. ಕಾಳಮ್ಮನಗರದಲ್ಲಿ ಗಣಪತಿ ಕಟ್ಟೆ ನಿರ್ಮಾಣ ಹಾಗೂ ಪ್ರತಿ ವರ್ಷ ಗಣೇಶೋತ್ಸವವನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಸಮಕಾಲೀನರೊಂದಿಗೆ ಸಮಕಾಲಿನ ವ್ಯಕ್ತಿಯಾಗಿ, ಯುವಕರೊಂದಿಗೆ ಯುವಕರಾಗಿ, ತಮ್ಮ ಇಳಿವಯಸ್ಸಿನಲ್ಲೂ ಅವರು ಚಟುವಟಿಕೆಯಿಂದ ಕೆಲಸ ಮಾಡುತ್ತಿದ್ದರು. ಶಿವಾನಂದ ನಾಯ್ಕ ಅಗಲಿಕೆಯು ಅನೇಕರಿಗೆ ನೋವಿನ ಸಂಗತಿಯಾಗಿದೆ.
ಯಲ್ಲಾಪುರ ಹಾಗೂ ಕಾಳಮ್ಮನಗರದ ಅಭಿವೃದ್ಧಿ, ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಅವರ ಕೊಡುಗೆ ಅಪಾರವಾಗಿದೆ.
ಶಿವಾನಂದ ನಾಯ್ಕ ಮೂಲತಃ ಕುಮಟಾದ ಕೊಡಕಣಿಯವರಾಗಿದ್ದು, ಹಲವಾರು ದಶಕಗಳ ಹಿಂದೆ ಉದ್ಯೋಗಕ್ಕಾಗಿ ಯಲ್ಲಾಪುರಕ್ಕೆ ಬಂದರು. ಕಾಳಮ್ಮನಗರದಲ್ಲಿ ಅವರು ಕಾಯಂ ನಿವಾಸಿಗಳಾಗಿ ಗುರುತಿಸಿಕೊಂಡಿದ್ದರು. ಅವರ ಪತ್ನಿ ಹಾಗೂ ಒಬ್ಬ ಪುತ್ರ ಈಗಾಗಲೇ ಮೃತಪಟ್ಟಿದ್ದಾರೆ. ಅವರ ಇಬ್ಬರು ಪುತ್ರರು ಹಾಗೂ ಅಪಾರ ಬಂದುಬಳಗ, ಮಿತ್ರರು ಶೋಕ ಸಾಗರದಲ್ಲಿದ್ದಾರೆ.
ಶಿವಾನಂದ ನಾಯ್ಕ ಅಗಲಿಕೆಗೆ ಶಾಸಕ ಶಿವರಾಮ ಹೆಬ್ಬಾರ್, ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ, ಎಂಎಲ್‌ಸಿ ಶಾಂತಾರಾಮ ಸಿದ್ದಿ, ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ನರ್ಮದಾ ನಾಯ್ಕ, ಮಾಜಿ ಅಧ್ಯಕ್ಷರಾದ ಸುನಂದಾ ದಾಸ್, ಶಿರೀಶ ಪ್ರಭು, ರಾಮು ನಾಯ್ಕ, ಪ.ಪಂ ಉಪಾಧ್ಯಕ್ಷೆ ಅಮಿತ ಅಂಗಡಿ, ಪ್ರಮುಖರಾದ ವೇಣುಗೋಪಾಲ ಮದ್ಗುಣಿ, ವೈಟಿಎಸ್ಎಸ್ ನಿವೃತ್ತ ಪ್ರಾಂಶುಪಾಲರಾದ ಜಯರಾಮ ಗುನಗಾ ಹಾಗೂ ಶ್ರೀರಂಗ ಕಟ್ಟಿ, ಪ.ಪಂ ಮಾಜಿ ಸದಸ್ಯ ಗಜಾನನ ನಾಯ್ಕ ತಳ್ಳಿಕೇರಿ, ಪ.ಪಂ ಸದಸ್ಯೆ ಕಲ್ಪನಾ ನಾಯ್ಕ ಸೇರಿದಂತೆ ಹಲವಾರು ಜನರು ಸಂತಾಪ ಸೂಚಿಸಿದ್ದಾರೆ.