ಸೋಮವಾರ ಸಂಜೆ ಸುರಿದ ಭಾರಿ ಮಳೆಗೆ ಯಲ್ಲಾಪುರ-ಮುಂಡಗೋಡ ರಸ್ತೆಯ ಹೊಂಡಗಳು ತುಂಬಿದ್ದು, ಟಾರು ರಸ್ತೆಗಿಂತ ನೀರು ತುಂಬಿದ ಹೊಂಡಗಳೇ ಹೆಚ್ಚು ಕಂಡುಬಂದವು. ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು, "ಯಲ್ಲಾಪುರದಿಂದ ಶಿಡ್ಲಗುಂಡಿವರೆಗಿನ ರಸ್ತೆಯಲ್ಲಿ ಅತಿ ಹೆಚ್ಚು ಹೊಂಡ ಇದೆ, ರಾಷ್ಟ್ರೀಯ ಪ್ರಶಸ್ತಿ ಸಿಗಬೇಕು!" ಎಂದು ಜನ ವ್ಯಂಗ್ಯವಾಗಿ ಹೇಳುತ್ತಿದ್ದಾರೆ.
ಪ್ರತಿ ದಿನ ಬೆಳಿಗ್ಗೆ ಈ ರಸ್ತೆಯಲ್ಲಿ ನಾಲ್ಕು ಬಸ್ಸುಗಳಲ್ಲಿ ಸುಮಾರು 180-200 ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದಾರೆ. ದೊಡ್ಡ ಅನಾಹುತ ಸಂಭವಿಸುವ ಮೊದಲು ಸಂಬಂಧಪಟ್ಟ ಅಧಿಕಾರಿಗಳು ರಸ್ತೆಯನ್ನು ಸರಿಪಡಿಸಬೇಕೆಂದು ವಾಹನ ಸವಾರರು, ಚಾಲಕರು ಮತ್ತು ಮಕ್ಕಳ ಪಾಲಕರು ಒತ್ತಾಯಿಸಿದ್ದಾರೆ.
ಯಲ್ಲಾಪುರ-ಮುಂಡಗೋಡ ರಸ್ತೆಯ ಜಡ್ಡಿಗದ್ದೆ ಹತ್ತಿರ ದೊಡ್ಡ ಹೊಂಡ ಬಿದ್ದಿದ್ದು, ವಾಹನಗಳು ತೊಳಲಾಡುತ್ತಾ ಸಾಗುತ್ತಿವೆ. ಅಪಾಯ ಸಂಭವಿಸುವ ಮೊದಲು ಸಣ್ಣ ಹೊಂಡಗಳನ್ನು ಮುಚ್ಚುವದಕ್ಕಿಂತ ತಾತ್ಕಾಲಿಕವಾಗಿ ದೊಡ್ಡ ಹೊಂಡಗಳನ್ನು ಮುಚ್ಚಬೇಕೆಂದು ಹುಣಶೆಟ್ಟಿಕೊಪ್ಪ ಗ್ರಾಮದ ಅನೇಕರು ಆಗ್ರಹಿಸಿದ್ದಾರೆ.