ಯಲ್ಲಾಪುರ, ಸೆಪ್ಟೆಂಬರ್ 9: ಸೆಪ್ಟೆಂಬರ್ 15 ರಂದು ನಡೆಯುವ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಯಶಸ್ವಿಯಾಗಿ ಆಚರಿಸಲು ಸೋಮವಾರ ಸಂಜೆ ತಾಲೂಕಾ ಆಡಳಿತ ಸೌದದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಈ ಸಭೆಯಲ್ಲಿ ಯಲ್ಲಾಪುರದ ತಹಶೀಲ್ದಾರ ಯಲ್ಲಪ್ಪ ಗೊನೆಣ್ಣವರು ಮಾತನಾಡಿ, "ತಾಲೂಕಿನಲ್ಲಿ 48 ಕಿಲೋಮೀಟರ್ ಉದ್ದದ ಮಾನವ ಸರಪಳಿ ನಿರ್ಮಿಸಬೇಕಾಗಿದೆ," ಎಂದು ಸೂಚಿಸಿದರು.
ತಾಟವಾಳದಿಂದ ಶಿರಸಿ ರಸ್ತೆಯ ತಾಲೂಕು ಗಡಿಯವರೆಗೆ ಮಾನವ ಸರಪಳಿ ನಿರ್ಮಿಸುವ ಯೋಜನೆ ಕುರಿತು ವಿವರಿಸಿದ ಯಲ್ಲಪ್ಪ ಗೊನೆಣ್ಣವರ್. "ಸೆಪ್ಟೆಂಬರ್ 15ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ, ತಾಲೂಕಿನ ಎಲ್ಲಾ ಸಂಘ ಸಂಸ್ಥೆಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ಸ್ಥಳೀಯ ಜನತೆ ಸೇರಿ ಮಾನವ ಸರಪಳಿ ನಿರ್ಮಾಣದಲ್ಲಿ ಭಾಗವಹಿಸಬೇಕು," ಎಂದು ಅವರು ಕರೆ ನೀಡಿದರು. ಈ ಯೋಜನೆಗೆ ಸರ್ಕಾರಿ ನೌಕರರು ಕಡ್ಡಾಯವಾಗಿ ಭಾಗವಹಿಸಬೇಕೆಂದು ಅವರು ಸೂಚಿಸಿದರು.
ಯಲ್ಲಾಪುರ ತಾಲೂಕಿನ ಬಹುಪಾಲು ಪ್ರದೇಶವು ಅರಣ್ಯದಿಂದ ಆವೃತವಾಗಿರುವುದರಿಂದ, ಸರಕಾರದ ಆದೇಶದಂತೆ, ಜನವಸತಿ ಪ್ರದೇಶಗಳಲ್ಲಿ ಮಾನವ ಸರಪಳಿ ನಿರ್ಮಾಣ ಮಾಡಬೇಕಾಗಿದೆ. "ತಾಲೂಕಿನ ಜನತೆ ಮತ್ತು ವಿವಿಧ ಸಂಘ ಸಂಸ್ಥೆಗಳು ಕೈಜೋಡಿಸಿ, ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವ ಜವಾಬ್ದಾರಿಯನ್ನು ಹೊತ್ತಿಕೊಳ್ಳಬೇಕು, ಸಭೆಯಲ್ಲಿ ಸಾರ್ವಜನಿಕರ ಜೊತೆಗೂಡಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆಯನ್ನು ನೀಡಬೇಕೆಂದು" ತಹಶೀಲ್ದಾರ ಮನವಿ ಮಾಡಿದರು.
ಈ ಸಭೆಯಲ್ಲಿ ತಾಲೂಕಾ ಆಡಳಿತದ ಹಲವು ಅಧಿಕಾರಿಗಳು ಮತ್ತು ಪ್ರಮುಖ ವ್ಯಕ್ತಿಗಳು ಉಪಸ್ಥಿತರಿದ್ದರು. ಗ್ರೇಡ್ 2 ತಹಶೀಲ್ದಾರ ಸಿ.ಜಿ. ನಾಯ್ಕ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ದನವಾಡಕರ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುನಿಲ ಗಾವಡೆ, ಸಿಪಿಐ ರಮೇಶ ಹಾನಾಪುರ, ತಾಲೂಕಾ ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ, ಭಾರತ ಸೇವಾದಳದ ತಾಲೂಕಾ ಅಧ್ಯಕ್ಷ ಎಂ. ಆರ್. ಹೆಗಡೆ ಕುಂಬ್ರಿಗುಡ್ಡೆ, ಪಿಡಿಓಗಳು ವಿವಿಧ ಇಲಾಖೆಯ ಮುಖ್ಯಸ್ಥರು ಕೂಡ ಸಭೆಯಲ್ಲಿ ಭಾಗವಹಿಸಿದ್ದರು.
.
.
.