ಈ ಪ್ರಶಸ್ತಿಯನ್ನು ಯಲ್ಲಾಪುರದ ಹಿರಿಯ ಸಂಶೋಧಕರು ಹಾಗೂ ವಿದ್ವಾಂಸ ಸೂರ್ಯನಾರಾಯಣ ನಾಗೇಂದ್ರ ಭಟ್ಟ ಹಿತ್ಲಳ್ಳಿ ಅವರಿಗೂ ನೀಡಲಾಯಿತು.
ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ನವದೆಹಲಿ; ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ನವದೆಹಲಿ; ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ತಿರುಪತಿ - ಈ ಮೂರು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯಗಳು ಈ ಮಹೋತ್ಸವವನ್ನು ಸಹಯೋಗದಲ್ಲಿ ಆಯೋಜಿಸಿದವು.
2020ರಲ್ಲಿ ಇವು ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯಗಳಾಗಿ ಘೋಷಿಸಲ್ಪಟ್ಟ ನೆನಪಿಗೆ ಪ್ರತಿ ವರ್ಷ "ಉತ್ಕರ್ಷ ಮಹೋತ್ಸವ"ವನ್ನು ಆಚರಿಸಲಾಗುತ್ತದೆ. ಸಂಸ್ಕೃತ ಭಾಷೆಯನ್ನು ಭಾರತ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮಾಡುವುದು ಈ ಮಹೋತ್ಸವದ ಮುಖ್ಯ ಉದ್ದೇಶವಾಗಿದೆ.
ವಿ. ಸೂರ್ಯನಾರಾಯಣ ನಾಗೇಂದ್ರ ಭಟ್ಟ ಹಿತ್ಲಳ್ಳಿ ಬಗ್ಗೆ:
ಹಿತ್ಲಳ್ಳಿ ಸೂರ್ಯನಾರಾಯಣ ಭಟ್ಟರು ಮೀಮಾಂಸಾ, ವೇದಾಂತ, ನ್ಯಾಯ ಮುಂತಾದ ಶಾಸ್ತ್ರ ಗ್ರಂಥಗಳ ಅಧ್ಯಯನ ಮಾಡಿದವರು. ವಿದ್ವತ್, ಸಂಸ್ಕೃತ ಎಂ.ಎ., ಪಿಎಚ್.ಡಿ. ಪದವೀಧರರು. ಮೈಸೂರು, ಕೇರಳ, ಪುದುಚೇರಿ ಮುಂತಾದೆಡೆಗಳಲ್ಲಿ ಸಂಸ್ಕೃತ ಪಂಡಿತ, ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ ಅವರು; ಕಲ್ಲಿಕೋಟೆ ಮತ್ತು ತಿರುಪತಿಯ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶನ ಪ್ರಾಧ್ಯಾಪಕರೂ ಹೌದು. ಕನ್ನಡ, ಸಂಸ್ಕೃತ ಭಾಷೆಗಳ ಹಲವಾರು ಪುಸ್ತಕಗಳ ಲೇಖಕರಾದ ಅವರು ಪತ್ರಿಕೆಗಳಲ್ಲಿ ಆಗೀಗ ಲೇಖನಗಳನ್ನೂ ಬರೆದಿದ್ದಾರೆ. ಪಾಣಿನಿಯನ್ನು ಕುರಿತ ಸಿ.ಡಿ.ಯನ್ನು ಭಾರತೀಯ ಭಾಷಾ ಸಂಸ್ಥಾನ ಹೊರತಂದಿದೆ.