Adv

news21 ‌ ‌YELLAPURNews prakatane --------- ‌ ‌patanakaroct10to17pydkumar Oct9to15 ‌ ‌ ‌ ‌ ‌ oct5to15-pyd ‌‌ ‌ Vishal-sep13to-unlimited ‌ ‌ ‌ ‌ IMG-20241009-195526

Thursday, 5 September 2024

ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಆರ್ ಎನ್ ಗೌಡ; ಉತ್ತಮ ವ್ಯಕ್ತಿತ್ವಕ್ಕೆ ಸಂದ ನೈಜ ಗೌರವ


ಯಲ್ಲಾಪುರ: ತಾಲೂಕಿನ ಇಡ್ಗುಂದಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ ಆರ್ ಎನ್ ಗೌಡ ಅವರಿಗೆ 2024-25 ನೇ ಸಾಲಿನ ಶಿರಸಿ ಶೈಕ್ಷಣಿಕ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯು ಅವರ 35 ವರ್ಷಗಳ ಶಿಕ್ಷಣ ಕ್ಷೇತ್ರದ ಸೇವೆ ಮತ್ತು ಪ್ರಾಮಾಣಿಕತೆಯನ್ನು ಗುರುತಿಸಿ ನೀಡಲಾಗಿದೆ.

   ಆರ್ ಎನ್ ಗೌಡ ಅವರು 1964ರ ಅಕ್ಟೋಬರ್ 1ರಂದು ಬೀರಗದ್ದೆಯ ಕಾವೇರಿ ಮತ್ತು ನಾರಾಯಣಗೌಡ ಇವರ ಮಗನಾಗಿ ಜನಿಸಿದರು. ಬಾಲ್ಯದಲ್ಲಿ ಬೀರಗದ್ದೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ನಂತರ ವಜ್ರಳ್ಳಿಯಲ್ಲಿ ಹಿರಿಯ ಪ್ರಾಥಮಿಕ ಶಿಕ್ಷಣ ಪಡೆದರು. ಯಲ್ಲಾಪುರದ ವೈಟಿಎಸ್‌ಎಸ್‌ ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢಶಾಲೆ ಮತ್ತು ಪದವಿಪೂರ್ವ ಶಿಕ್ಷಣ ಪೂರೈಸಿದ ಅವರು, ಯಲ್ಲಾಪುರದಲ್ಲಿಯೇ ಪದವಿ ಮತ್ತು ಶಿಕ್ಷಕರ ತರಬೇತಿ ಕೋರ್ಸ್‌ ಪಡೆದರು. 

 ತಮ್ಮ ಶಾಲಾ ದಿನಗಳಿಂದಲೂ ಚುರುಕು ಮತ್ತು ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದ್ದ ಅವರು, ಎಲ್ಲರೊಂದಿಗೆ ಸರಳವಾಗಿ ಬೆರೆಯುವ ಗುಣ ಹೊಂದಿದ್ದರು. ನಿಸರ್ಗ ತಾಣಗಳಿಗೆ ಭೇಟಿ ನೀಡುವುದು, ಯಕ್ಷಗಾನ ಪಾತ್ರ ಧರಿಸುವುದು ಹಾಗೂ ತಾಳಮದ್ದಲೆಯನ್ನು ಆಲಿಸುವುದು ಅವರ ಹವ್ಯಾಸಗಳಾಗಿವೆ.

   1990ರ ಜೂನ್ 1ರಂದು ಶಿಕಾರಿಪುರ ತಾಲೂಕಿನ ಅಷಿನಕಟ್ಟೆ ಶಾಲೆಯಲ್ಲಿ ತಮ್ಮ ಶಿಕ್ಷಕ ವೃತ್ತಿ ಆರಂಭಿಸಿದ ಅವರು, ಐದು ವರ್ಷಗಳ ನಂತರ ಯಲ್ಲಾಪುರಕ್ಕೆ ವರ್ಗಾವಣೆ ಪಡೆದರು. ಯಲ್ಲಾಪುರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ದಬ್ಬೆಸಾಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೀರಗದ್ದೆ, ಚಿಮ್ನಳ್ಳಿ, ಜೋಗದಮನೆ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಅವರು, ಇದೀಗ ಇಡಗುಂದಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

   ಮಕ್ಕಳಿಗೆ ಅಚ್ಚು ಮೆಚ್ಚಿನ ಶಿಕ್ಷಕರಾಗಿರುವ ಅವರು, ಪಾಲಕರು, ಸ್ಥಳೀಯ ಸಮುದಾಯ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. 2008ರಲ್ಲಿ ತಾಲೂಕಿನ ಉತ್ತಮ ಶಿಕ್ಷಕರ ಪ್ರಶಸ್ತಿಯನ್ನು ಪಡೆದ ಅವರು, 2011-12 ರಲ್ಲಿ ಜೋಗಿನಮನೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ, ಕ್ಲಸ್ಟರ್ ಮಟ್ಟದ ಉತ್ತಮ ಗುಣಮಟ್ಟದ ಶಾಲೆ ಎಂಬ ಪ್ರಶಸ್ತಿಯನ್ನು ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದರು.

   ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಅನೇಕ ಸಾಧನೆಗಳನ್ನು ಮಾಡಿರುವ ಅವರು, ಗಂಗಾ ಅವರನ್ನು ಬಾಳ ಸಂಗತಿಯಾಗಿ ಸ್ವೀಕರಿಸಿ ಸೀಮಾ ಮತ್ತು ಸಂದೀಪ್ ಎಂಬ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಸೀಮಾ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರೆ, ಸಂದೀಪ್ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

   ಆರ್ ಎನ್ ಗೌಡ ಅವರ ಈ ಪ್ರಶಸ್ತಿಯು ಅವರ ಶ್ರಮ, ಪ್ರಾಮಾಣಿಕತೆ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗುರುತಿಸುತ್ತದೆ.