ಯಲ್ಲಾಪುರ: ತಾಲೂಕಿನ ವಜ್ರಳ್ಳಿಯ ವಜ್ರೇಶ್ವರಿ ಯುವಕ ಸಂಘದಿಂದ ಆಯೋಜಿಸಲಾಗಿದ್ದ ಸಾರ್ವಜನಿಕ ಗಣೇಶೋತ್ಸವವು ಕಳೆದ ನಾಲ್ಕು ದಿನಗಳಿಂದ ವಿಜೃಂಭಣೆಯಿಂದ ನಡೆಯಿತು. ಮಂಗಳವಾರ ಸಂಜೆ ನಡೆದ ವೈಭವದ ವಿಸರ್ಜನಾ ಮೆರವಣಿಗೆಯಲ್ಲಿ ಇನ್ನೂರಕ್ಕೂ ಹೆಚ್ಚು ಜನರು ಪಾಲ್ಗೊಂಡು ಸಂಭ್ರಮಿಸಿದರು.
ಈ ವರ್ಷ ವಜ್ರೇಶ್ವರಿ ಯುವಕ ಸಂಘದ ಸದಸ್ಯರು ಭಾವೈಕ್ಯತೆಯನ್ನು ಬಿಂಬಿಸುವುದರ ಮೂಲಕ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸಿದರು. ಸುತ್ತಮುತ್ತಲಿನ ಗ್ರಾಮಗಳ ಯುವಕರು, ಮಹಿಳೆಯರು, ಮಕ್ಕಳು ಸೇರಿಕೊಂಡು ಮೆರವಣಿಗೆಯಲ್ಲಿ ಹಾಡುಗಳೆಡೆಗೆ ಹೆಜ್ಜೆ ಹಾಕಿ ಬಣ್ಣದ ಬೆಳಕುಗಳಲ್ಲಿ ನೃತ್ಯ ಮಾಡಿದರು.
ಗಣೇಶ ಮೂರ್ತಿಯ ವಿಸರ್ಜನೆಯ ವೇಳೆ ಮೂರು ತಾಸುಗಳ ಕಾಲ ನಡೆದ ಮೆರವಣಿಗೆಯಲ್ಲಿ ವಜ್ರೇಶ್ವರಿ ಯುವಕ ಸಂಘದ ಸದಸ್ಯರು ವಿಶೇಷವಾಗಿ ತಯಾರಿಸಿದ ಗಣೇಶನ ಚಿತ್ರದ ಬಿಳಿ ಅಂಗಿ ಧರಿಸಿ ಗಮನಸೆಳೆದರು. ಇವರೆಲ್ಲರ ಜೊತೆಗೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಮತ್ತು ಸಮಾಜಸೇವಕರು ಕೂಡ ಮೆರವಣಿಗೆಯಲ್ಲಿ ಭಾಗಿಯಾಗಿ ಕಾರ್ಯಕ್ರಮದ ವೈಭವವನ್ನು ಹೆಚ್ಚಿಸಿದರು. Pyara
ಸಮಾರಂಭದಲ್ಲಿ ವಜ್ರೇಶ್ವರಿ ಯುವಕ ಸಂಘದ ಅಧ್ಯಕ್ಷ ಸತೀಶ ಗಾಂವ್ಕರ್, ಕಾರ್ಯದರ್ಶಿ ಗಿರೀಶ ವಡ್ಡರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಭಗೀರಥ ನಾಯ್ಕ, ಆದರ್ಶ ಸೇವಾ ಸಹಕಾರಿ ಸಂಘದ ಅಧ್ಯಕ್ಷ ದತ್ತಾತ್ರೇಯ ಭಟ್ ತಾರಗಾರ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಪದಾಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು ಗಣೇಶ ಮೂರ್ತಿ ವಿಸರ್ಜನೆಯ ಮೆರವಣಿಗೆಯ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಯಲ್ಲಾಪುರ ಪೋಲೀಸ್ ಇಲಾಖೆ ಭದ್ರತೆ ನೀಡಲು ಬಿಗಿ ಬಂದೋಬಸ್ತ್ ಮಾಡಿತ್ತು.
.
.