ಯಲ್ಲಾಪುರ /ಬೆಂಗಳೂರು : ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರನ್ನು ಯಲ್ಲಾಪುರ ಬಿಜೆಪಿ ಶಾಸಕರಾದ ಶಿವರಾಮ ಹೆಬ್ಬಾರ್ ಅವರು ಗುರುವಾರ ಬೆಳಿಗ್ಗೆ ವಿಧಾನಸೌದದಲ್ಲಿ ಭೇಟಿಯಾದರು.
ಕ್ಷೇತ್ರದ ಅಭಿವೃದ್ಧಿ ಯೋಜನೆಗಳ ಹಾಗೂ ಪ್ರಗತಿಯಲ್ಲಿರುವ ಮತ್ತು ನೂತನ ನೀರಾವರಿ ಯೋಜನೆಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಮಂಜೂರು ಮಾಡುವಂತೆ ಮನವಿ ಸಲ್ಲಿಸಿದರು
ಕೆಲವು ಸಮಯ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ ನಂತರ ಹೊರಗೆ ಬರುತ್ತಾ ಮಾಧ್ಯಮದ ಎದುರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಾಸಕ ಶಿವರಾಮ ಹೆಬ್ಬಾರ್ ಹೆಗಲ ಮೇಲೆ ಕೈ ಹಾಕಿ ಇಬ್ಬರೂ ಕೂಡ ನಗುನಗುತ್ತಲೆ ಹೊರ ಬಂದಿರುವುದು, ಹೆಬ್ಬಾರ್ ಕಾಂಗ್ರೆಸ್ ಸೇರುವುದು ನಿಶ್ಚಿತ ಅನ್ನುವ ಶಂಕೆಗೆ ಬಲ ಬಂದಿದೆ.
ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಂಡು ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದ ಶಾಸಕ ಶಿವರಾಮ ಹೆಬ್ಬಾರ್ ಮೂರನೇ ಅವಧಿಗೆ ಬಿಜೆಪಿ ಟಿಕೆಟ್ ನಿಂದ ಯಲ್ಲಾಪುರ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಅವರಿಗೆ ನಿರೀಕ್ಷಿಸಿದ ಮಟ್ಟಿಗೆ ಮತ ಬಿದ್ದಿರಲಿಲ್ಲ ಎನ್ನುವ ಕೊರಗು ಕಾಡುತ್ತಿತ್ತು ಬಿಜೆಪಿಯ ಸ್ವಪಕ್ಷೀಯರೇ ತಮ್ಮ ಪರವಾಗಿ ಕೆಲಸ ಮಾಡದೆ ಬೇರೆ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡಿರುವುದು ತಮಗೆ ಸಿಗಬೇಕಾದ ಮತಗಳು ಕಡಿಮೆಯಾಗಲು ಕಾರಣವಾಗಿದೆ. ಹೀಗಾಗಿ, ತಮ್ಮ ವಿರುದ್ಧ ಕೆಲಸ ಮಾಡಿರುವ ಕೆಲವು ಮುಖಂಡರು, ಕಾರ್ಯಕರ್ತರ ಪಟ್ಟಿಯನ್ನು ಮಾಡಿ ಬಿಜೆಪಿ ಹೈಕಮಾಂಡಿಗೆ ಅವರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆಗೆ ಕಾರಣಕ್ಕೆ ಕ್ರಮ ಕೈಗೊಳ್ಳುವಂತೆ ಹೆಬ್ಬಾರ್ ವಿನಂತಿಸಿದ್ದರು. ಆದರೆ, ಬಿಜೆಪಿ ವರಿಷ್ಠರು ಹೆಬ್ಬಾರ್ ವಿರುದ್ಧ ಚಟುವಟಿಕೆ ನಡೆಸಿದ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಬದಲಾಗಿ ಇನ್ನಷ್ಟು ಉನ್ನತ ಹುದ್ದೆ ನೀಡಿದ್ದರು.
ಹೀಗಾಗಿ ಮತ್ತಷ್ಟು ಬೇಸರಗೊಂಡ ಶಾಸಕ ಶಿವರಾಮ ಹೆಬ್ಬಾರ್, ಬಿಜೆಪಿಯಿಂದ ದೂರ ಸರಿಯುತ್ತ ಕಾಂಗ್ರೆಸ್ ಪಕ್ಷಕ್ಕೆ ಹತ್ತಿರವಾಗುತ್ತ ಹೋದರು. ಚುನಾವಣೆ ಹಾಗೂ ಇನ್ನಿತರ ಕೆಲಸಗಳಲ್ಲಿ ಶಿವರಾಮ್ ಹೆಬ್ಬಾರ್ ಅವರಿಗೆ ಬಲಗೈನಂತೆ ಕೆಲಸ ಮಾಡುತ್ತಿದ್ದ ತಮ್ಮ ಪುತ್ರ ವಿವೇಕ ಹೆಬ್ಬಾರ್ ಅವರನ್ನು ಲೋಕಸಭೆ ಚುನಾವಣೆಯ ಮುನ್ನ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಿ ಕೆಪಿಸಿಸಿ ಸದಸ್ಯತ್ವವನ್ನು ಕೊಡಿಸುವಲ್ಲಿ ಯಶಸ್ವಿಯಾದರು. ಕಾಂಗ್ರೆಸ್ ಪಾಳ್ಯದಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರಗಳ ಜೊತೆ ನಿಕಟ ಸಂಪರ್ಕ ಹೊಂದಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಯಲ್ಲಾಪುರ ಮುಂಡಗೋಡ ಬನವಾಸಿ ಭಾಗಗಳಿಗೆ ಬಹಳಷ್ಟು ಅನುದಾನಗಳನ್ನು ತರಿಸುವಲ್ಲಿ ಶಿವರಾಮ ಹೆಬ್ಬಾರ್ ಯಶಸ್ವಿಯಾಗಿದ್ದಾರೆ.
ಬಿಜೆಪಿಯ ಯಾವುದೇ ಸಕ್ರಿಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದ ಶಿವರಾಮ ಹೆಬ್ಬಾರ್ ಅದರಲ್ಲೂ ಜಿಲ್ಲೆಯ ಬಿಜೆಪಿ ಮುಖಂಡರಿಂದ ಅಂತರವನ್ನು ಕಾಯ್ದುಕೊಂಡಿದ್ದಾರೆ. ಬಿಜೆಪಿಯಲ್ಲಿ ಇರಲು ಇಷ್ಟವಿಲ್ಲದಿದ್ದರೆ ರಾಜೀನಾಮೆ ಕೊಟ್ಟು ಹೋಗಬೇಕು ಎಂದು ಇಲ್ಲಿಯ ಬಿಜೆಪಿ ಮುಖಂಡರು ಹೇಳುತ್ತಿದ್ದರೇ, ದಮ್ಮಿದ್ದರೆ ನನಗೆ ಹೊರಗೆ ಹಾಕಿ ಎಂದು ಶಿವರಾಮ ಹೆಬ್ಬಾರ್ ಹಾಗೂ ಅವರ ಬೆಂಬಲಿಗರು ಹೇಳುತ್ತಿದ್ದಾರೆ. ಎರಡು ಪಕ್ಷದಲ್ಲಿ ಹಾವು ಸಾಯಬಾರದು ಕೋಲು ಮುರಿಯಬಾರದು ಎನ್ನುವ ತತ್ವವನ್ನು ಅಳವಡಿಸಿಕೊಂಡಿರುವುದರಿಂದ ಶಿವರಾಮ್ ಹೆಬ್ಬಾರ್ ಅವರು ಬಿಜೆಪಿಯಲ್ಲಿಯೇ ಶಾಸಕರಾಗಿದ್ದಾರೆ, ಸ್ವಪಕ್ಷಿಯರು ಅವರ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಹೆಬ್ಬಾರ್ ಕಾಂಗ್ರೆಸ್ಸಿನ ಅತ್ಯಂತ ನಿಕಟ ಸಂಪರ್ಕದಲ್ಲಿದ್ದು ತಮ್ಮ ಕ್ಷೇತ್ರಕ್ಕೆ ಆಗಬೇಕಾಗಿರುವ ಎಲ್ಲ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ.
ಹೀಗಾಗಿಯೇ ಶುಕ್ರವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಶಾಸಕ ಶಿವರಾಮ ಹೆಬ್ಬಾರ್ ಅವರ ಹೆಗಲ ಮೇಲೆ ಕೈ ಹಾಕಿ ಹಾಸ್ಯ ಚಟಾಕಿಗಳನ್ನು ಹಾರಿಸಿ ಹೆಬ್ಬಾರ್ ನಮ್ಮವರು ಎಂದು ಮಾಧ್ಯಮದ ಎದುರು ತೋರಿಸಿಕೊಟ್ಟಿದ್ದಾರೆ.
.
.
.