ಯಲ್ಲಾಪುರ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಅಂಕೋಲಾ ಅರ್ಬನ್ ಕೋ-ಆಪ್ ಬ್ಯಾಂಕ್ ಇವರ ಸಂಯುಕ್ತ ಆಶ್ರಯದಲ್ಲಿ 'ಶಿಕ್ಷಕರ ದಿನಾಚರಣೆ ಮತ್ತು ಗುರು ಗೌರವಾರ್ಪಣಾ ಸಮಾರಂಭ 2024' ವೇದವ್ಯಾಸ ಕಲ್ಯಾಣ ಮಂಟಪದಲ್ಲಿ ಸೆಪ್ಟೆಂಬರ್ 5 ರಂದು ನಡೆಯಿತು.
ಶಾಸಕ ಶಿವರಾಮ್ ಹೆಬ್ಬಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಕ ವೃತ್ತಿಯು ಪವಿತ್ರ ಕ್ಷೇತ್ರವಾಗಿದ್ದು, ಇದರಲ್ಲಿ ಸಿಗುವ ಆತ್ಮಸ್ಥೈರ್ಯ ಅಪಾರ. ಶಿಕ್ಷಣ ಕ್ಷೇತ್ರದಲ್ಲಿನ ಸಣ್ಣ ಲೋಪವು ಮಕ್ಕಳ ಭವಿಷ್ಯ ಹಾಳು ಮಾಡಬಹುದು. ಶಿಕ್ಷಕರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದಾಗ ಮಾತ್ರ ಮಕ್ಕಳು ಉನ್ನತ ಸ್ಥಾನಗಳನ್ನು ತಲುಪಲು ಸಾಧ್ಯ ಎಂದರು. ಅಲ್ಲದೆ, ನಮ್ಮ ಜಿಲ್ಲೆ- ತಾಲೂಕಿನಲ್ಲಿ ಒಳ್ಳೆಯ ಶಿಕ್ಷಕರಿದ್ದಾರೆ ಎಂದು ಹೆಮ್ಮೆಯಿಂದ ಹೇಳಿದರು.
ರಾಜ್ಯ ವಿಕೇಂದ್ರೀಕರಣ ಮತ್ತು ಯೋಜನಾ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಅತಿಥಿಯಾಗಿ ಮಾತನಾಡಿ, ಇಂದಿನ ಮಕ್ಕಳು ದಾರಿ ತಪ್ಪುತ್ತಿರುವುದು ಕಂಡುಬರುತ್ತಿದೆ. ಶಿಕ್ಷಕರು ಮಕ್ಕಳನ್ನು ಅಪರಾಧ ಹಾಗೂ ಮಾದಕ ದ್ರವ್ಯಗಳಿಂದ ದೂರವಿರಿಸಿ, ಶಿಸ್ತಿನಿಂದ ಬೆಳೆಸಲು ಪ್ರಯತ್ನಿಸಬೇಕು. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ವಿಜ್ಞಾನಿ ಎನಿಸಿಕೊಳ್ಳುವುದಕ್ಕಿಂತ ಶಿಕ್ಷಕರೆಂದು ಕರೆಯಿಸಿಕೊಳ್ಳಲು ಇಷ್ಟಪಡುತ್ತಿದ್ದರು ಎಂದು ಹೇಳಿದರು.
ತಹಶೀಲ್ದಾರ ಅಶೋಕ ಭಟ್, ಯಲ್ಲಾಪುರ ಶೈಕ್ಷಣಿಕ ಕ್ಷೇತ್ರದಲ್ಲಿ ಬಿಇಓ ಎನ್ ಆರ್ ಹೆಗಡೆ ನೇತೃತ್ವದ ಉತ್ತಮ ತಂಡವಿದೆ ಎಂದು ಹೇಳಿ, ಶಿಕ್ಷಕರು ತಮ್ಮನ್ನು ತಾವು ದಹಿಸಿಕೊಂಡು ಮಕ್ಕಳಿಗೆ ಬೆಳಕು ನೀಡುವ ದೀಪದಂತೆ ಎಂದು ಪ್ರಶಂಸಿಸಿದರು.
ಪಟ್ಟಣ ಪಂಚಾಯತಿಯ ಅಧ್ಯಕ್ಷೆ ನರ್ಮದಾ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶಿಕ್ಷಕರಾದ ಸುರೇಶ್ ಎನ್ ನಾಯ್ಕ, ಶ್ರೀಕಾಂತ ವೈದ್ಯ, ಗಾಯತ್ರಿ ಗದ್ದೆಮನೆ, ಪ್ರೌಢ ಶಾಲೆ ವಿಭಾಗದಲ್ಲಿ ವೀರಭದ್ರ ಭಟ್ಟ ಹಾಗೂ ಡಾ.ನವಿನಕುಮಾರ ಎ ಜೆ, ತಾಲೂಕಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದರು.
ನಿವೃತ್ತ ಶಿಕ್ಷಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಇಲಾಖೆಯ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಶಿಕ್ಷಕರಿಗೆ ಬಹುಮಾನ ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಪ.ಪಂ ಉಪಾಧ್ಯಕ್ಷ ಅಮಿತ್ ಅಂಗಡಿ, ಅಂಕೋಲಾ ಅರ್ಬನ್ ಬ್ಯಾಂಕ್ ಅಧ್ಯಕ್ಷ ಭಾಸ್ಕರ್ ನಾರ್ವೇಕರ, ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್ ಆರ್ ಭಟ್ಟ, ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ರಾಜೇಶ್ ಧನವಾಡಕರ್, ಪ್ರಕಾಶ ಕುಂಞ ಅಂಕೋಲಾ, ಮಲೇನಾಡು ಸೊಸೈಟಿ ಅಧ್ಯಕ್ಷ ಎಂ ಆರ್ ಹೆಗಡೆ ಕುಂಬ್ರಿಗುಡ್ಡೆ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಶ್ರೀರಾಮ ಹೆಗಡೆ, ಚಂದ್ರಶೇಖರ ಎಸ್ ಸಿ ವೇದಿಕೆಯಲ್ಲಿದ್ದರು.
ಸುಜಯ ದುರಂದರ್ ಪ್ರಾರ್ಥಿಸಿದರು. ಶಿಕ್ಷಕಿ ಎಮ್ ಎ ಬಾಗೇವಾಡಿ ಹಾಗೂ ತಂಡದಿಂದ ನಾಡಗೀತೆ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ ಸ್ವಾಗತಿಸಿದರು. ಚಂದ್ರಹಾಸ ನಾಯ್ಕ, ಸುಮಂಗಲಾ ಭಟ್ಟ, ಭಾಸ್ಕರ ನಾಯ್ಕ ನಿರೂಪಿಸಿದರು.
.
.