ವಿದ್ಯಾರ್ಥಿ ಒಕ್ಕೂಟವನ್ನು ಸಂಸತ್ತು ಎಂದು ಕರೆದಿರುವುದು ಔಚಿತ್ಯಪೂರ್ಣ : ಡಾ. ಶ್ರೀಧರ ಬಳಗಾರ
ಯಲ್ಲಾಪುರ : ವಿದ್ಯಾರ್ಥಿ ಒಕ್ಕೂಟವನ್ನು ಸಂಸತ್ತು ಎಂದು ಕರೆದಿರುವುದು ಔಚಿತ್ಯ, ಅರ್ಥಪೂರ್ಣವಾಗಿದೆ. ಇಂತಹ ಸಂಸತ್ತನ್ನು ಉದ್ಘಾಟನೆ ಮಾಡಿದ ಭಾಗ್ಯ ನನ್ನದು. ಸಂಸತ್ತಿನ ಸಂವಿದಾನ ಭಾಷೆ ಪ್ರಜಾಪ್ರಭುತ್ವ ಭಾಷೆಯಾಗಿದೆ. ಎಲ್ಲ ಪ್ರದೇಶಗಳ, ಸಮೂದಾಯಕ್ಕೆ ಸಮನಾದ ಮಹತ್ವ ನೀಡುವುದು ಸಂವಿಧಾನದ ಮಹತ್ವ. ಇದನ್ನು ಅರ್ಥೈಸುವುದೇ ಸಂವಿದಾನ ಭಾಷೆಯಾಗಿದೆ ಎಂದು ಖ್ಯಾತ ವಿಮರ್ಶಕ, ಕಥೆಗಾರ ಡಾ. ಶ್ರೀಧರ ಬಳಗಾರ ಹೇಳಿದರು.
ಪಟ್ಟಣದ ವೈ.ಟಿ.ಎಸ್.ಎಸ್. ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಸತ್ತು, ಸಾಂಸ್ಕøತಿಕ, ಕ್ರೀಡಾ ಮತ್ತು ಎನ್.ಎಸ್.ಎಸ್. ಕಾರ್ಯಚಟುವಟಿಕೆಗಳನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡದ ಅಲಂಕಾರ, ಛಂದಸ್ಸು ಒಳಗೊಂಡಿದ್ದರೆ ಮಾತ್ರ ಕಾವ್ಯ, ಸಾಹಿತ್ಯ ರಚಿಸಲು ಸಾಧ್ಯವಿಲ್ಲ, ಉತ್ತಮ ಕಂಠವಿದ್ದರೆ ಮಾತ್ರ ಸಾಲದು, ಸಂಗೀತದ ಲಯ, ಭಾವ ಕಲ್ಪನೆ ಗೊತ್ತಿದ್ದರೆ ಮಾತ್ರ ಸಂಗೀತಗಾರನಾಗಲು ಸಾಧ್ಯ ಎಂದ ಅವರು, ಆತ್ಮಪ್ರಜ್ಞೆ, ಸ್ವಾಭಿಮಾನ ಎಲ್ಲರಲ್ಲೂ ಇರುತ್ತದೆ. ಸಂವಿದಾನಿಕ ಭಾಷಾ ಪ್ರಜ್ಞೆ ಇಲ್ಲದಿದ್ದರೆ, ಸಮಾಜದಲ್ಲಿ ಸಾಂಸ್ಕೃತಿಕ ವೈವಿದ್ಯತೆ ಇರುವಲ್ಲಿ ವೈರುದ್ಯತೆ ಇದ್ದರೆ ಜಾತಿ, ಸಮೂದಾಯ, ಧರ್ಮಗಳ ನಡುವೆ ವೈಷಮ್ಯಗಳು ಹುಟ್ಟು ಹಾಕುತ್ತದೆ. ನಮ್ಮ ಶಿಕ್ಷಣ ಕುಟುಂಬದಿಂದ, ಪರಿಸರದಿಂದ, ಕೃಷಿಯಿಂದ ದೂರಮಾಡಿದೆ. ಅತ್ಯಾಧುನಿಕ ವಸ್ತುಗಳನ್ನೊಳಗೊಂಡ ಮನೆ ನಿರ್ಮಿಸದರೆ ಸಾಲದು. ಮನೆಯಲ್ಲಿರುವ ಭಾಂದವ್ಯಗಳನ್ನು ಯಂತ್ರಗಳಿಂದಗಳಿಸಲು ಸಾಧ್ಯವಿಲ್ಲ. ಮನೆಯಲ್ಲಿ ಮಕ್ಕಳ ಜನನ, ಸಾವಿನ ನೋವಿನ ಅನುಭವ, ಮದುವೆಯ ಅನುಭವಗಳೂ ಕೂಡ ಇಲ್ಲವಾಗಿದೆ. ಅಂತಹ ಯಾಂತ್ರಿಕವಾದ ಬದುಕು ನಮ್ಮದಾಗಿದೆ ಎಂದರು.
ಬಿಇಓ ಎನ್.ಆರ್.ಹೆಗಡೆ ಉಪಸ್ಥಿತರಿದ್ದು ಶುಭಕೋರಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕೋಶಾಧ್ಯಕ್ಷ ಸದಾನಂದ ದೇಸಾಯಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಮಹಾ ಶಕ್ತಿ ಅಡಗಿದೆ. ಕಲ್ಲನ್ನು ಕೆತ್ತಿ ಮೂರ್ತಿಮಾಡುವ ಕಾರ್ಯವನ್ನು ಶಿಕ್ಷಕರು ಮಾಡುತ್ತಾರೆ. ಪಾಲಕರು ಪ್ರತಿಫಲಾಪೇಕ್ಷೆ ಇಲ್ಲದೇ ನಿಮಗೆ ಶಿಕ್ಷಣ, ಸಂಸ್ಕಾರ ನೀಡುವ ಕಾರ್ಯ ಮಾಡುತ್ತಾರೆ. ಇದನ್ನು ಅರಿತು ಉನ್ನತ ಶಿಕ್ಷಣ ಪಡೆದು ಉತ್ತಮ ಜೀವನ ನಡೆಸಿದಾಗ ಮಾತ್ರ ಈ ತ್ಯಾಗಕ್ಕೆ ಬೆಲೆ ಬರುತ್ತದೆ ಎಂದರು.
ಸಂಸ್ಥೆಯ ನಿರ್ದೇಶಕ ನಾಗರಾಜ ಮದ್ಗುಣಿ ಮಾತನಾಡಿ, 'ಕೇವಲ ಶಿಕ್ಷಣ ಕಲಿತರೆ ಸಾಲದು. ಉತ್ತಮ ಸ್ಥಾನಕ್ಕೇರಲು ಜೀವನದ ಅನುಭವಗಳೂ ಬೇಕು. ಇಂತಹ ಶಿಕ್ಷಣವನ್ನು ವೈ.ಟಿ.ಎಸ್.ಎಸ್. ನೀಡುತ್ತಿದೆ. ಇದನ್ನು ಸದುಪಯೋಗ ಪಡಿಸಿಕೊಂಡು ಜೀವನದಲ್ಲಿ ಉತ್ತಮ ಸಾಧನೆ ಮಾಡಿ' ಎಂದು ಹೇಳಿದರು.
ಶಿಕ್ಷಕರಾದ ಕೆ.ಸಿ.ಮಾಳ್ಕರ್, ಪರ್ವೀನ್ ಬಾನು ಸುಂಕದ ವಿದ್ಯಾರ್ಥಿ ಸಂಸತ್ತನ್ನು ಪರಿಚಯಿಸಿದರು. ದೈಹಿಕ ಶಿಕ್ಷಕ ಎಂ.ಗಂಗಾನಾಯಕ ಪ್ರತಿಜ್ಞಾವಿದಿ ಭೋದಿಸಿದರು.
ಶ್ರೀನಿದಿ ಸಂಗಡಿಗರು ಪ್ರಾರ್ಥನೆ ಹಾಡಿದರು. ಪ್ರಾಂಶುಪಾಲ ಆನಂದ ಹೆಗಡೆ ಸ್ವಾಗತಿಸಿದರು. ಉಪ ಪ್ರಾಂಶುಪಾಲ ಎನ್.ಎಸ್. ಭಟ್ಟ ವಂದಿಸಿದರು, ಶಿಕ್ಷಕ ವಿನೋದ ಭಟ್ಟ ನಿರೂಪಿಸಿದರು.
ಯಶಸ್ವಿಯಾದ ತೇಲಂಗಾರದ ತಾಳಮದ್ದಲೆ
ಯಲ್ಲಾಪುರ : ಗ್ರಾಮೀಣ ಭಾಗದಲ್ಲಿ ಕಲಾ ಸಂಘಟನೆಗಳು ಸಾಂಸ್ಕೃತಿಕ ವಾತಾವರಣ ನಿರಂತರವಾಗಿ ಮುಂದುವರಿಯಲು ಶ್ರಮಿಸಬೇಕು ಎಂದು ವಜ್ರಳ್ಳಿಯ ಆದರ್ಶ ಸೇವಾ ಸಹಕಾರಿ ಸಂಘದ ಅಧ್ಯಕ್ಷ ದತ್ತಾತ್ರೇಯ ಭಟ್ಟ ತಾರಗಾರ ಹೇಳಿದರು.
ಅವರು ತಾಲೂಕಿನ ತೇಲಂಗಾರ ಮೈತ್ರಿ ಸಭಾಭವನದಲ್ಲಿ ಕರ್ನಾಟಕ ಕಲಾ ಸನ್ನಿಧಿ ತೇಲಂಗಾರ ಹಾಗೂ ಮೈತ್ರಿ ಕಲಾ ಬಳಗ ತೇಲಂಗಾರ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ತಾಳಮದ್ದಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾ.ಪಂ ಸದಸ್ಯ ಜಿ.ಆರ್.ಭಾಗ್ವತ ಮಾತನಾಡಿ, ಗ್ರಾಮೀಣ ಭಾಗದ ತೆರೆಮರೆಯ ಕಲಾವಿದರನ್ನು ಗುರುತಿಸುವ ಕಾರ್ಯವನ್ನು ಕಲಾ ಸನ್ನಿಧಿ ಸಂಸ್ಥೆ ಮಾಡುತ್ತಿರುವುದು ಮಾದರಿಯಾಗಿದೆ ಎಂದರು.
ಕರ್ನಾಟಕ ಕಲಾ ಸನ್ನಿಧಿಯ ಖಜಾಂಚಿ ದಿನೇಶ ಭಟ್ಟ ಯಲ್ಲಾಪುರ ಮಾತನಾಡಿ, ಮೈತ್ರಿ ಕಲಾ ಬಳಗ ಎರಡೂವರೆ ದಶಕಗಳಿಂದ ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಜಿಲ್ಲೆಯಲ್ಲೇ ಮಾದರಿಯಾಗಿದೆ. ಬಳಗದಿಂದ ಪ್ರೇರಿತರಾಗಿ ಕಲಾ ಸೇವೆ ಮುಂದುವರಿಸುತ್ತಿದ್ದೇವೆ. ತೆರೆಮರೆಯ ಕಲಾವಿದರ ಕಲಾ ಸೇವೆಯನ್ನು ಪರಿಚಯಿಸುವ ಕಾರ್ಯ ನಿರಂತರವಾಗಿ ಮುಂದುವರಿಸುತ್ತೇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮೈತ್ರಿ ಕಲಾ ಬಳಗದ ಅಧ್ಯಕ್ಷ ಗಣಪತಿ ಕಂಚಿಪಾಲ ಮಾತನಾಡಿ, ಹಿರಿಯ ಕಲಾವಿದರ ಕಲಾ ಸೇವೆ ಗುರುತಿಸುವುದು, ಸಾಂಸ್ಕೃತಿಕ ಕಾರ್ಯಕ್ರಮ ಸಂಘಟನೆಯಂತಹ ಮಾದರಿಯ ಕಾರ್ಯವನ್ನು ಕಲಾ ಸನ್ನಿಧಿ ಮಾಡುತ್ತಿದೆ. ಇಂತಹ ಪ್ರಯತ್ನಗಳು ಹೆಚ್ಚು ನಡೆದಾಗ ಗ್ರಾಮೀಣ ಭಾಗದಲ್ಲಿ ಸಾಂಸ್ಕೃತಿಕ ವಾತಾವರಣ ಜೀವಂತವಾಗಿರಲು ಸಾಧ್ಯ. ಕಲಾ ಸನ್ನಿಧಿಯ ಕಾರ್ಯಗಳಿಗೆ ಮೈತ್ರಿ ಕಲಾ ಬಳಗ ಸದಾ ಪ್ರೋತ್ಸಾಹ ಹಾಗೂ ಸಹಕಾರ ನೀಡಲಿದೆ ಎಂದರು.
ಸಾಮಾಜಿಕ ಕಾರ್ಯಕರ್ತ ತಮ್ಮಣ್ಣ ಗಾಮದ, ಮೈತ್ರಿ ಕಲಾ ಬಳಗದ ಗೌರವ ನಿರ್ದೇಶಕ ಜಿ.ಎನ್.ಅರುಣಕುಮಾರ, ಕರ್ನಾಟಕ ಕಲಾ ಸನ್ನಿಧಿಯ ಕಾರ್ಯದರ್ಶಿ ದೀಪಕ ಭಟ್ಟ ಕುಂಕಿ ಉಪಸ್ಥಿತರಿದ್ದರು. ಕರ್ನಾಟಕ ಕಲಾ ಸನ್ನಿಧಿಯ ಸಹ ಕಾರ್ಯದರ್ಶಿ ದಿನೇಶ ಗೌಡ ಮಾವಿನಮನೆ ನಿರ್ವಹಿಸಿದರು.
ಹಲಸಿನಹಳ್ಳಿ ನರಸಿಂಹ ಶಾಸ್ತ್ರೀ ವಿರಚಿತ ರುಕ್ಮಾಂಗದ ಚರಿತ್ರೆ ತಾಳಮದ್ದಲೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ದಿನೇಶ ಭಟ್ಟ, ವಿವೇಕ ಮರಾಠಿ ಅಂಕೋಲಾ, ಮದ್ದಲೆವಾದಕರಾಗಿ ನರಸಿಂಹ ಭಟ್ಟ ಹಂಡ್ರಮನೆ ಭಾಗವಹಿಸಿದ್ದರು.
ರುಕ್ಮಾಂಗದನಾಗಿ ಆರ್.ವಿ.ಹೆಗಡೆ ಕುಂಬ್ರಿಕೊಟ್ಟಿಗೆ, ಮೋಹಿನಿಯಾಗಿ ನರಸಿಂಹ ಭಟ್ಟ ಕುಂಕಿಮನೆ, ವಿಷ್ಣುವಾಗಿ ಶ್ರೀಧರ ಅಣಲಗಾರ, ಸಂಧ್ಯಾವಳಿಯಾಗಿ ಮಂಜುನಾಥ ಜೋಶಿ ಮಾಗೋಡ, ಧರ್ಮಾಂಗದನಾಗಿ ದಿನೇಶ ಪಾತ್ರ ಚಿತ್ರಣ ನೀಡಿದರು.