ಸಭೆಯಲ್ಲಿ ಮಾತನಾಡಿದ ಶಾಸಕ ಶಿವರಾಮ ಹೆಬ್ಬಾರ್, "ಆರ್ಥಿಕವಾಗಿ ಸಬಲರಾಗಿದ್ದವರು ಈ ಯೋಜನೆ ಪಡೆಯಬಾರದು. ನಿಜವಾಗಿಯೂ ಬಡತನ ರೇಖೆಗಿಂತ ಕೆಳಗಿದ್ದವರು ಮಾತ್ರ ಈ ಯೋಜನೆ ಪಡೆಯಬೇಕು. ಎಲ್ಲರಿಗೂ ಫಲಾನುಭವಿ ಆಗುವ ಅರ್ಹತೆ ಇದೆ. ಅದರೆ, ನಾವು ಈ ಯೋಜನೆಗೆ ಅರ್ಹರೇ ಎಂದು ಅವರೇ ನಿರ್ಣಯಿಸಿಕೊಳ್ಳಬೇಕು. ಸ್ವಯಂ ಪ್ರೇರಣೆಯಿಂದ ಯೋಜನೆ ಬಿಟ್ಟುಕೊಡುವವರೇ ದೊಡ್ಡವರು" ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಮಾತನಾಡಿ, "ಕೊರೊನಾ ಹಾಗೂ ಆರ್ಥಿಕ ಸಂಕಷ್ಟದ ನಡುವೆಯೂ ಕಾಂಗ್ರೆಸ್ ನಾಯಕರು ಪಂಚ ಗ್ಯಾರಂಟಿಯ ನಿರ್ಣಯ ಕೈಗೊಂಡಿದ್ದು, ಸರ್ಕಾರ ರಚನೆಯಾದ 8 ತಿಂಗಳ ಒಳಗೆ ಪಂಚ ಗ್ಯಾರಂಟಿ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ. ಅಧಿಕಾರಿಗಳು ಹಾಗೂ ಗ್ಯಾರಂಟಿ ಸಮಿತಿ ಸದಸ್ಯರು ಮನೆ ಮನೆಗೆ ತೆರಳಿ ಈ ಯೋಜನೆಯನ್ನು ಅರ್ಹರಿಗೆ ತಲುಪಿಸಬೇಕು" ಎಂದರು.
"ಗ್ಯಾರಂಟಿ ಯೋಜನೆ ಬಗ್ಗೆ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದಾಗ ವಿರೋಧ ಪಕ್ಷಗಳು ಸಾಕಷ್ಟು ಅಪಪ್ರಚಾರ ಮಾಡಿದ್ದವು. ಆದರೆ, ಸರ್ಕಾರ ರಚನೆಯಾದ ನಂತರ 58 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗೆ ಮೀಸಲಿಟ್ಟು ಸರ್ಕಾರ ನುಡಿದಂತೆ ನಡದಿದೆ" ಎಂದು ಸಚಿವರು ಸಮರ್ಥಿಸಿಕೊಂಡರು.
ಈ ಸಭೆಯಲ್ಲಿ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಸತೀಶ ನಾಯ್ಕ, ಉಪಾಧ್ಯಕ್ಷ ಡಿ.ಎನ್. ಗಾಂವ್ಕರ, ಸಹಾಯಕ ಆಯುಕ್ತರಾದ ಕಾವ್ಯಾರಾಣಿ, ಯಲ್ಲಾಪುರ ಪ.ಪಂ. ಅಧ್ಯಕ್ಷೆ ನರ್ಮದಾ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕೆ. ಭಟ್ಟ, ಪಂಚ ಗ್ಯಾರಂಟಿ ತಾಲೂಕಾ ಅಧ್ಯಕ್ಷ ಉಲ್ಲಾಸ ಶಾನಭಾಗ, ತಹಸೀಲ್ದಾರ್ ಅಶೋಕ ಭಟ್ಟ, ತಾ.ಪಂ. ಆಡಳಿತಾಧಿಕಾರಿ ನಟರಾಜ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ ಧನವಾಡಕರ ಇನ್ನಿತರರು ಇದ್ದರು.
.
.