ಯಲ್ಲಾಪುರ : ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ. ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟ ಉತ್ತರ ಕನ್ನಡ ಸಂಚಾಲಕ ಎಂ. ಕೆ. ಭಟ್ಟ ಯಡಳ್ಳಿ ಅವರು ಇದರ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರಿಗೆ ಮನವಿ ಮಾಡಿದ್ದಾರೆ.
15ನೇ ಹಣಕಾಸು ಅಲೋಕೇಶನ್‌ನ ಕ್ರಿಯಾ ಯೋಜನೆ ಕಳಿಸಿದರೂ ನಿಗದಿತ ಹಣ ಬಿಡುಗಡೆಯಾಗುತ್ತಿಲ್ಲ. ಕಸ ವಿಲೇವಾರಿ ಘಟಕ ಮತ್ತು ಪೆಟ್ರೋಲ್ ವಾಹನಗಳಿಗೆ ನಿರ್ವಹಣೆ ವೆಚ್ಚ ಮತ್ತು ಡ್ರೈವರ್‌ಗಳ ಸಂಬಳ ಇಲ್ಲ. ಅಭಿವೃದ್ಧಿ ಅನುದಾನವನ್ನು ನೌಕರರ ಸಂಬಳಕ್ಕೆ ಬಳಸಲಾಗುತ್ತಿದೆ. ಹೆಚ್ಚಿನ ಪಂಚಾಯತಗಳಲ್ಲಿ ಹೆಸೆಕ್ರೋ ಬಾಕಿ ಇಲ್ಲದಿದ್ದರೂ ಉಳಿದ ಹಣ ಅಭಿವೃದ್ಧಿಗೆ ಬಿಡುಗಡೆಯಾಗುತ್ತಿಲ್ಲ. 15ನೇ ಹಣಕಾಸು ಇನ್ನೂ ಬಾರದೇ ಕಾಯುತ್ತಿದೆ. 4-6 ವರ್ಷಗಳಿಂದ ಸಿಬ್ಬಂದಿ ನೇಮಕಾತಿ ನಡೆಯುತ್ತಿಲ್ಲ.
ಪಂಚಾಯತದ ಕರಗಳಿಂದ ಸಂಗ್ರಹಿಸಿದ ಹಣದ ಶೇ.6 ಗ್ರಂಥಾಲಯದ ಹೆಸರಿನಲ್ಲಿ ಜಿ.ಪಂ. ಖಾತೆಗೆ ಸಂದಾಯ ಮಾಡಲಾಗಿದೆ, ಆದರೆ ಗ್ರಂಥಪಾಲಕರಿಗೆ ಹೆಚ್ಚಿನ ವೇತನ ನೀಡಲಾಗುತ್ತಿದೆ. ಜಲನಲ್ ಮಿತ್ರ ಯೋಜನೆಯ ತರಬೇತಿ ವೆಚ್ಚವನ್ನು ಪಂಚಾಯತಗಳಿಂದ ಕೇಳಲಾಗುತ್ತಿದೆ, ಇದು ಸರಿಯಲ್ಲ. ನರೇಗಾದಲ್ಲಿ ಪಂಚಾಯತಕ್ಕೆ ಬರುವ ಆಡಳಿತಾತ್ಮಕ ವೆಚ್ಚ ಶೆ.2 ರಷ್ಟು 3-4 ವರ್ಷಗಳಿಂದ ನಿಲ್ಲಿಸಲಾಗಿದೆ. ಬೊರ್‌ವೆಲ್ ನಿರ್ವಹಣೆಗಾಗಿ ಬರುವ ಹಣ ಕೂಡ ಬರುತ್ತಿಲ್ಲ.
ಈ ಸಮಸ್ಯೆಗಳಿಂದ ಗ್ರಾಮ ಪಂಚಾಯತಿಗಳಲ್ಲಿ ಸಣ್ಣ ಪಟ್ಟ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಸಚಿವರು ಸರಕಾರದಲ್ಲಿ ಮಧ್ಯಸ್ಥಿಕೆ ವಹಿಸಬೇಕೆಂದು ಎಂ. ಕೆ. ಭಟ್ಟ ಯಡಳ್ಳಿ ಅವರು ಮನವಿ ಮಾಡಿದ್ದಾರೆ.
.