ಒಂದು ಮಾವಿನ ಹಣ್ಣಿನ ಬುಟ್ಟಿಯಲ್ಲಿ ಎಲ್ಲಾ ಹಣ್ಣುಗಳು ಚೆನ್ನಾಗಿದ್ದು ಅದರಲ್ಲೂ ಕೆಲವು ಒಂದೆರಡು ಹಣ್ಣುಗಳು ಕೆಟ್ಟಿರುತ್ತದೆ. ಅದೇ ರೀತಿ ದೊಡ್ಡ ಪ್ರಮಾಣದ ಶಿಕ್ಷಕ ವೃಂದದಲ್ಲಿ ಎಲ್ಲವೂ ಸರಿಯಾಗಿದ್ದು ಕೆಲವೊಂದು ಸ್ವಾರ್ಥಿ ಶಿಕ್ಷಕರ ಕಾರಣಕ್ಕಾಗಿ ಮಕ್ಕಳ ಭವಿಷ್ಯವೇ ಹಳ್ಳ ಹಿಡಿದು ಹೋಗುತ್ತಿದೆ.
1986ರ ಸಂಗತಿ ನಾನು ಆಗ ಎಸ್ ಎಸ್ ಎಲ್ ಸಿ, ಬಯಲಸೀಮೆಯ ಒಂದು ಪರೀಕ್ಷಾ ಕೇಂದ್ರ, ಅದು ನನಗೆ ಶಾಲೆ ಕೂಡ ಅಲ್ಲಿ ಪರೀಕ್ಷೆ ಬರೆಯುತ್ತಿದ್ದೆ. ನನ್ನ ಮೇಲೆ ಯಾವ ರೀತಿಯ ಹಗೆ ಇತ್ತೊ ಗೊತ್ತಿಲ್ಲ. ಅದೇ ಶಾಲೆಯ ಶಿಕ್ಷಕನೋರ್ವ ತನಗೆ ಸಂಬಂಧವಿಲ್ಲದ ಪರೀಕ್ಷಾ ಕೇಂದ್ರದಲ್ಲಿ ಪ್ರವೇಶಿಸಿ ಬೆಳಿಗ್ಗೆ ಹಾಗೂ ಸಂಜೆಯ ಎರಡು ಪರೀಕ್ಷೆಯಲ್ಲೂ ಪ್ರತಿ ಬಾರಿ ಐದೈದು ಸಲ ನನ್ನನ್ನು ಚೆಕ್ ಮಾಡಿದ್ದ, ಕೇವಲ ನನ್ನನ್ನೇ ಗುರಿಯಾಗಿಸಿಕೊಂಡು ಚೆಕ್ ಮಾಡುತ್ತಿದ್ದ ಆತ, ಬೇರೆ ವಿಧ್ಯಾರ್ಥಿಗಳು ಕಾಪಿ ಮಾಡುತ್ತಿದ್ದರು ಕೂಡ ಕಣ್ಣೆತ್ತಿ ನೋಡುತ್ತಿರಲಿಲ್ಲ. ನಾನು ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶಿಸುತ್ತಿದ್ದಂತೆ ಉಳಿದ ವಿದ್ಯಾರ್ಥಿಗಳೆಲ್ಲ ನನ್ನನ್ನು ನೋಡಿ ನಗುವುದು ನನಗೆ ಕಣ್ಣಲ್ಲಿ ನೀರು ತರಿಸುವಂತೆ ಮಾಡಿತ್ತು. ಹೀಗಾಗಿ ಮಾನಸಿಕ ಕುಗ್ಗಿ ಹೋಗಿದ್ದ ನಾನು ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಬಹಳಷ್ಟು ಕಡಿಮೆ ಅಂಕವನ್ನು ಪಡೆದೆ. ಕನಿಷ್ಠ ಟಿಸಿಎಚ್ ಕೋರ್ಸ್ ಆಯ್ಕೆಯಾಗದಷ್ಟು ಕಡಿಮೆ ಅಂಕ ಪಡೆದು ಈಗ ಈ ಸ್ಥಿತಿಯಲ್ಲಿ ಇದ್ದೇನೆ.
ನಮ್ಮದೇ ಶಾಲೆಯ ಶಿಕ್ಷಕರನ್ನಾಗಿದ್ದರು ಕೂಡ ಆತ ನನ್ನ ಮೇಲೆ ಯಾಕೆ ಹೀಗೆ ಹಗೆ ಸಾಗಿಸಿದ ಎನ್ನುವುದು ಇದುವರೆಗೂ ನನಗೆ ತಿಳಿದು ಬಂದಿಲ್ಲ. ನನಗೆ ಬುದ್ಧಿ ಬಂದ ನಂತರ ಅಥವಾ ಶಿಕ್ಷಕರ ದಿನಾಚರಣೆಯ ಮಹತ್ವ ಅರಿತ ನಂತರ, ಪ್ರತಿ ಸೆಪ್ಟೆಂಬರ್ 5ರಂದು ಒಂದು ಹಾಳೆಯ ಮೇಲೆ ಆ ಮಾಸ್ತರನ ಚಿತ್ರ ಬಿಡಿಸಿ ಅದಕ್ಕೆ ನನ್ನ ಎಡಗಾಲು ಎಕ್ಕಡದಿಂದ ಪೂಜೆ ಮಾಡುತ್ತೇನೆ. ಆ ಮಾಸ್ತರ್ ಇದ್ದಾನೋ ಸತ್ತಿದಾನೊ ನನಗೆ ಗೊತ್ತಿಲ್ಲ. ಎಡಗಾಲು ಎಕ್ಕಡದಿಂದ ಪೂಜೆ ಮಾಡಿದ ಕಾಲ್ಪನಿಕವಾಗಿ ಬಿಡಿಸಿದ ಚಿತ್ರವನ್ನು ನಂತರ ಸುಟ್ಟು ಹಾಕುತ್ತೇನೆ. ಆಗ ನನಗಾದ ಅನ್ಯಾಯಕ್ಕೆ, ನನ್ನ ಭವಿಷ್ಯ ಹಾಳುಮಾಡಿದ ಸೂ*** ಮಗ ಶಿಕ್ಷಕನ ಮೇಲೆ ಸೇಡು ತಿರಿಸಿಕೊಂಡ ತೃಪ್ತಿಯಾಗುತ್ತದೆ.
ಬಹಳ ಹಿಂದೆಯೇ ಇದನ್ನು ಬರೆದು ಕೊಳ್ಳಬೇಕು ಎಂದು ನನಗೆ ಅನಿಸಿತ್ತು. ಅಂತಹುದೇ ಕಹಿ ಘಟನೆ ಇನ್ನೊಮ್ಮೆ ನನ್ನಲ್ಲಿ ನಡೆದಿದೆ. ಇತ್ತೀಚೆಗೆ ನಮ್ಮ ಪರಿಚಯದವರೊಬ್ಬರು ಪರೀಕ್ಷೆ ಬರೆಯುವ ಸಂದರ್ಭದಲ್ಲಿ, ಉಪನ್ಯಾಸಕನೋರ್ವ ಉದ್ದೇಶಪೂರ್ವಕವಾಗಿ ಆತನನ್ನೇ ಕೇವಲ ಆತನನ್ನು ಚೆಕ್ ಮಾಡಿರುವುದು ನನ್ನನ್ನು ಇನ್ನೊಮ್ಮೆ ಆ ಘಟನೆ ಬರಿಯಬೇಕು ಎನಿಸುವ ಮಟ್ಟಿಗೆ ನೆನಪು ಮಾಡಿಕೊಟ್ಟಿತು.
ಏನೇ ಇರಲಿ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಮಕ್ಕಳ ಭವಿಷ್ಯವನ್ನು ಹೊಡೆದು, ಬೈದು, ತಿದ್ದಿ, ತೀಡಿ ಬಡ ಮಕ್ಕಳಿಗಾದರೆ ಪಟ್ಟಿ ಪುಸ್ತಕವನ್ನು ನೀಡಿ, ಅವರನ್ನು ಶೈಕ್ಷಣಿಕವಾಗಿ ಸಿದ್ದ ಪಡಿಸುವ ನೂರಾರು ಶಿಕ್ಷಕರನ್ನು ನನ್ನ ಬದುಕಿನಲ್ಲಿ ಕಂಡಿದ್ದೇನೆ. ಕೆಲವರು ಪ್ರಚಾರ ಬಯಸಿದರೆ ಇನ್ನೂ ಕೆಲವರು ಪ್ರಚಾರ ಬಯಸದೆ ತಮ್ಮ ಸೇವೆಯನ್ನು ಮಾಡುತ್ತಿರುತ್ತಾರೆ. ಇಂತಹ ಎಲ್ಲ ಉತ್ತಮ ಪ್ರಶಸ್ತಿ ಯೋಗ್ಯ ಶಿಕ್ಷಕರಿಗೆ ಮತ್ತೊಮ್ಮೆ ನಾನು ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಕೋರಿ ತಮ್ಮಿಂದ ತಯಾರಾದ ಮೂರ್ತಿಗಳು ಜಗತ್ತಿನ ತುಂಬಾ ತಮ್ಮ ಹೆಸರು ನೆನಪಿಸುವಂತೆ ಪ್ರಚಾರ ಪಡಲಿ ಎಂದು ಆಶಿಸುತ್ತೇನೆ.
....ಜಗದೀಶ ನಾಯಕ