ಯಲ್ಲಾಪುರ : ಪಟ್ಟಣದ ಮಂಜುನಾಥನಗರದಲ್ಲಿರುವ ಕಾರ್ಮಿಕ ಭವನದಲ್ಲಿ 9ನೇ ವರ್ಷದ ಶ್ರಾವಣ ಯಕ್ಷ ಸಂಭ್ರಮ ಕಾರ್ಯಕ್ರಮ ಸೆ.15 ರಂದು ಸಂಜೆ 6 ರಿಂದ ನಡೆಯಲಿದೆ.
ಈ ಬಾರಿ 'ದ್ರುಪದ ಗರ್ವಭಂಗ', 'ಯೋಗಿನಿ ಕಲ್ಯಾಣ' ಹಾಗೂ 'ವೀರ ವೃಷಸೇನ' ಎಂಬ ಅಪರೂಪದ ಪೌರಾಣಿಕ ಯಕ್ಷಗಾನ ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ. ಸುಬ್ಬಣ್ಣ ಕಂಚಗಲ್, ರಾಘವೇಂದ್ರ ಬೆಳಸೂರು, ಎಂ.ಆರ್.ವಡ್ರಮನೆ ಅವರ ಸಂಯೋಜನೆಯಲ್ಲಿ, ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದೆ. ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಕಲಾವಿದರು, ಸ್ಥಳೀಯ ಕಲಾವಿದರು ಸೇರಿ 35 ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಲಿದ್ದಾರೆ.
ಪ್ರತಿ ವರ್ಷವೂ ಈ ಕಾರ್ಯಕ್ರಮದಲ್ಲಿ ಯಕ್ಷಗಾನದ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ಮಾಡಲಾಗುತ್ತಿದ್ದು, ಈ ಬಾರಿ ಯಕ್ಷಗಾನ ಪ್ರದರ್ಶನಗಳಿಗೆ ವೇಷಭೂಷಣ ಒದಗಿಸುವ ಕವಾಳೆ ಸಹೋದರರನ್ನು ಸನ್ಮಾನಿಸಲಾಗುತ್ತಿದೆ. ಕಳೆದ 22 ವರ್ಷಗಳಿಂದ ಸುತ್ತಮುತ್ತಲಿನ ಯಕ್ಷಗಾನಗಳಿಗೆ ವೇಷಭೂಷಣ ನೀಡುತ್ತಿರುವ ಕೇಶವ ಭಾಗ್ವತ ಹಾಗೂ ವಿನಾಯಕ ಭಾಗ್ವತ ಅವರಿಗೆ ಈ ವರ್ಷದ ಶ್ರಾವಣ ಸಂಭ್ರಮ ಗೌರವ ಸನ್ಮಾನ ಮಾಡಲಾಗುತ್ತಿದೆ.
ಕಳೆದ 9 ವರ್ಷಗಳಿಂದ ಸುಬ್ಬಣ್ಣ ಕಂಚಗಲ್ ನೇತೃತ್ವದಲ್ಲಿ ಅನೇಕ ಸಂಘಟಕರು, ಕಲಾಭಿಮಾನಿಗಳ ಸಹಕಾರದೊಂದಿಗೆ ಶ್ರಾವಣ ಯಕ್ಷ ಸಂಭ್ರಮ ಕಾರ್ಯಕ್ರಮ ನಡೆಯುತ್ತಿದೆ. ಪ್ರತಿ ವರ್ಷ ವಿಶೇಷ ಸಂಯೋಜನೆ, ಅಪರೂಪದ ಪ್ರಸಂಗಗಳು ಮೂಲಕ ಶ್ರಾವಣ ಸಂಭ್ರಮದ ಸಂಘಟನೆ ಜಿಲ್ಲೆಯಲ್ಲಿ ಹೆಸರು ಗಳಿಸಿದೆ.