ಯಲ್ಲಾಪುರ: "ಅರಣ್ಯ ಹುತಾತ್ಮರ ತ್ಯಾಗವನ್ನು ಸ್ಮರಿಸುವ ಮತ್ತು ಅವರ ಸೇವೆಯನ್ನು ಗೌರವಿಸುವ ದಿನ ಇದು. ನಮ್ಮ ಅರಣ್ಯ ಸಂಪತ್ತನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ವೀರರ ತ್ಯಾಗವನ್ನು ನಾವು ಎಂದಿಗೂ ಮರೆಯಬಾರದು. ಇಂದು ನಾವು ಅರಣ್ಯ ಹುತಾತ್ಮರ ದಿನಾಚರಣೆ ಆಚರಿಸುತ್ತಿದ್ದೇವೆ" ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು ಜಿ.ಪಿ ಹೇಳಿದರು.
ಬುಧವಾರ ಬೆಳಿಗ್ಗೆ ತಮ್ಮ ಕಚೇರಿ ಆವಾರದ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಪುಷ್ಪಾರ್ಚನೆಗೈದು, ಅರಣ್ಯ ಹುತಾತ್ಮರ ದಿನಾಚರಣೆ ಕುರಿತು ಮಾತನಾಡಿದ ಅವರು, ಅರಣ್ಯ ರಕ್ಷಣೆ ಮತ್ತು ಪರಿಸರ ಸಂರಕ್ಷಣೆಗಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಅಪಾರ ಕಷ್ಟ ಪಡುತ್ತಾರೆ. "ಕಾಡಿನ ಬೆಂಕಿ, ಕಳ್ಳ ಬೇಟೆ, ಅತಿಯಾದ ಮರಗಳನ್ನು ಕಡಿಯುವುದು ಇತ್ಯಾದಿ ಸಮಸ್ಯೆಗಳನ್ನು ಎದುರಿಸುವಾಗ ಅವರು ಅನೇಕ ಸವಾಲುಗಳನ್ನು ಎದುರಿಸುತ್ತಾರೆ. ಅರಣ್ಯಗಳು ನಮ್ಮ ಪರಿಸರದ ಪ್ರಮುಖ ಭಾಗವಾಗಿದೆ". ಅರಣ್ಯ ರಕ್ಷಣೆಯಲ್ಲಿ ಹುತಾತ್ಮರಾದ ನಮ್ಮ ವೀರ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತ್ಯಾಗವನ್ನು ಸ್ಮರಿಸುವುದರ ಜೊತೆಗೆ, ಅರಣ್ಯ ಸಂರಕ್ಷಣೆ ಮತ್ತು ಪರಿಸರ ಸಂರಕ್ಷಣೆಗೆ ನಾವೆಲ್ಲರೂ ಕೈಜೋಡಿಸುವ ಅಗತ್ಯವಿದೆ. ನಮ್ಮ ಅರಣ್ಯಗಳನ್ನು ರಕ್ಷಿಸುವುದು, ಅವುಗಳ ಸಂಪನ್ಮೂಲಗಳನ್ನು ಜಾಗೃತವಾಗಿ ಬಳಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ" ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ವೃಂದದಿಂದ ಸಂಗಮೇಶ ಪ್ರಭಾಕರ, ವಲಯ ಅರಣ್ಯ ಅಧಿಕಾರಿಗಳ ವೃಂದದಿಂದ ಮಹೇಶ ಬೊಚಳ್ಳಿ, ಪತ್ರಾಂಕಿತ ವ್ಯವಸ್ಥಾಪಕರು ಕಚೇರಿ ವೃಂದದಿಂದ ಪ್ರಕಾಶ ಬೋರಕರ, ಉಪ ವಲಯ ಅರಣ್ಯಾಧಿಕಾರಿ ವೃಂದದಿಂದ ಸುಭಾಷ ಗಾಂವ್ಕರ, ಗಸ್ತು ಅರಣ್ಯ ಪಾಲಕ ವೃಂದದಿಂದ ಲಕ್ಕಪ್ಪ ಯಮ್ಮಿಕಾಯಿ, ವಾಹನ ಚಾಲಕರ ವೃಂದದಿಂದ ಪರಶುರಾಮ ಮಡಿವಾಳ, ಕ್ಷೇಮಾಭಿವೃದ್ಧಿ ನೌಕರರ ವತಿಯಿಂದ ಅಬ್ದುಲ್ ಜಲಿಲಖಾನ, ಜವಾನ ವೃಂದದಿಂದ ಕೃಷ್ಣ ಪೆಡ್ನೇಕರ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ಸಮರ್ಪಣೆ ಮಾಡಿದರು.
ಉಪ ವಿಭಾಗದ ಎಲ್ಲ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಎಲ್ಲ ವಲಯ ಅರಣ್ಯ ಅಧಿಕಾರಿಗಳು, ಉಪವಲಯ ಅರಣ್ಯ ಅಧಿಕಾರಿಗಳು, ಗಸ್ತು ವನ ಪಾಲಕರು, ಅರಣ್ಯ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಗಸ್ತು ವನಪಾಲಕ ಶಾನವಾಜ್ ಮುಲ್ತಾನಿ ಕಾರ್ಯಕ್ರಮ ನಿರೂಪಿಸಿದರು. ಉಪವಲಯ ಅರಣ್ಯ ಅಧಿಕಾರಿ ಸಂಜಯಕುಮಾರ ಬೋರಗಲ್ಲಿ ಅರಣ್ಯ ಹುತಾತ್ಮರ ಬಗ್ಗೆ ಪಕ್ಷಿ ನೋಟದ ಮೂಲಕ ವಿವರಿಸಿದರು. ಉಪವಲಯ ಅರಣ್ಯ ಅಧಿಕಾರಿ ಅಶೋಕ ಶಿರಗಾಂವಿ, ಶರಣಬಸು ಹಾಗೂ ಇನ್ನಿತರರು ಕಾರ್ಯಕ್ರಮ ನಿರ್ವಹಿಸಿದರು.
ಈ ಕಾರ್ಯಕ್ರಮದ ಮೂಲಕ ಅರಣ್ಯ ಹುತಾತ್ಮರ ತ್ಯಾಗವನ್ನು ಸ್ಮರಿಸಲಾಗಿದ್ದು, ಅರಣ್ಯ ಸಂರಕ್ಷಣೆ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು.
.
.
.