ಯಲ್ಲಾಪುರ : 26 ವರ್ಷದಿಂದ ಯಲ್ಲಾಪುರ ಮಾದರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ಮುಂಡಗೋಡ ತಾಲೂಕಿನ ಮೈನಳ್ಳಿ ಶಾಲೆಗೆ ವರ್ಗಾವಣೆಗೊಂಡ ರೇಷ್ಮಾ ಶಬ್ಬೀರ್ ಶೇಖ ಇವರಿಗೆ ಗುರುವಾರ ಮಾದರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾವನಾತ್ಮಕವಾಗಿ ಬಿಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ, ರೇಷ್ಮಾ ಶೇಖ ಅವರು ಶಾಲೆಗೆ ಮಕ್ಕಳ ದಾಖಲಾತಿ ಕಡಿಮೆ ಇದ್ದಾಗಲೂ, ಕೂಡ ಪಾಲಕರ ಮನವೊಲಿಸಿ ಹೆಚ್ಚು ವಿದ್ಯಾರ್ಥಿಗಳು ಶಾಲೆಗೆ ಬರುವಂತೆ ಪಾಲಕರ ತಿಳಿ ಹೇಳಿದ್ದರು. ಎಸ್ ಡಿ ಎಂ ಸಿ ಯವರಿಗೆ ಹಾಗೂ ಶಾಲೆಯ ವರ್ಕಿಂಗ್ ಕಮಿಟಿ ಪದಾಧಿಕಾರಿಗಳಿಗೆ ಮಾರ್ಗದರ್ಶನ ಮಾಡಿ ಶಾಲೆಯ ಅಭಿವೃದ್ಧಿಗೆ ಬಹಳಷ್ಟು ಕೆಲಸ ಮಾಡಿದ್ದಾರೆ. ಇಂತಹ ಶಿಕ್ಷಕರು ವರ್ಗಾವಣೆಗೊಂಡಿರುವುದು ಪಾಲಕರು ಹಾಗೂ ಅವರಲ್ಲಿ ಶಿಕ್ಷಣ ಪಡೆದವರಿಗೆ ಸಹಜವಾಗಿಯೇ ನೋವಾಗುತ್ತದೆ, ಅವರು ಮತ್ತೆ ಇದೇ ಶಾಲೆಗೆ ಬರುವಂತಾಗಲಿ ಎಂದು ಅವರು ಹಾರೈಸಿದರು.
Pyara
ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ಪೀರ್‌ಸಾಬ್ ಮಾತನಾಡಿ, ನಾನು ಹಿಂದೆ ಎಸ್ಡಿಎಂಸಿ ಅಧ್ಯಕ್ಷನಾಗಿದ್ದಾಗ ರೇಷ್ಮಾ ಶೇಖ ಅವರು ಶಾಲೆಯ ಅಭಿವೃದ್ಧಿಗೆ ಬಹಳಷ್ಟು ಸಲಹೆ ಸೂಚನೆಗಳನ್ನು ನೀಡಿದ್ದರು ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕಿ ರೇಷ್ಮಾ ಶಬ್ಬೀರ್ ಶೇಖ, ನಾನು ಈ ಶಾಲೆಯ ಹಳೆಯ ವಿದ್ಯಾರ್ಥಿ, 20 ವರ್ಷಕ್ಕೆ ನನಗೆ ಶಿಕ್ಷಕ ಹುದ್ದೆಯ ಕೆಲಸ ಸಿಕ್ಕಿತು. ಅದು ಕೂಡ ಇದೇ ಶಾಲೆಯಲ್ಲಿ. ನಮ್ಮ ಉರ್ದು ಶಾಲೆಯ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು. ಸರ್ಕಾರಿ ನೌಕರಿಯಲ್ಲಾಗಲಿ ಅಥವಾ ಖಾಸಗಿ ಸಂಸ್ಥೆಯಲ್ಲಾಗಲಿ ಉನ್ನತ ಹುದ್ದೆಗಳನ್ನು ಪಡೆಯುವಂತಾಗಬೇಕು. ಈ ಶಾಲೆಯ ಹಳೆಯ ವಿದ್ಯಾರ್ಥಿಯಾಗಿ ಮತ್ತು ಶಾಲೆಯ ಶಿಕ್ಷಕಿಯಾಗಿ ನಾನು ನನ್ನ ಪ್ರಯತ್ನವನ್ನು ಮಾಡಿದ್ದೇನೆ. ನನ್ನ ಪ್ರಯತ್ನಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬಿಆರ್‌ಸಿ, ಎಸ್‌ಡಿಎಂಸಿ, ವರ್ಕಿಂಗ್ ಕಮಿಟಿ ಹಾಗೂ ಪಾಲಕರು ಎಲ್ಲ ರೀತಿಯ ಸಹಕಾರವನ್ನು ನೀಡಿದ್ದಾರೆ. 26 ವರ್ಷದವರೆಗೆ ನನ್ನನ್ನು ಈ ಶಾಲೆಯ ಶಿಕ್ಷಕಿಯಾಗಿ ನೋಡಿಕೊಂಡು, ಇಂದಿನ ಈ ಸಂದರ್ಭದಲ್ಲಿ ಗೌರವಯುತವಾಗಿ ಭಾವನಾತ್ಮಕವಾಗಿ ಬೀಳ್ಕೊಡುತ್ತಿರುವ ತಮಗೆ ಋಣಿಯಾಗಿದ್ದೇನೆ ಎಂದು ಹೇಳಿದರು.
ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಇರ್ಷಾದ್ ಕಾಗಲ್ಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು ಎಸ್ ಡಿ ಎಂ ಸಿ ಅಧ್ಯಕ್ಷರಾಗಿದ್ದಾಗ ಶಾಲೆಯ ಬಗ್ಗೆ ಶಾಲೆಯ ಅಭಿವೃದ್ಧಿ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ರೇಷ್ಮಾ ಶೇಖ ಅವರು ಶಾಲೆಯ ಶಿಕ್ಷಕಿಯಾಗಿ ನಮಗೆ ಸಹೋದರಿಯಾಗಿ ಶಾಲೆಯ ಅಭಿವೃದ್ಧಿಯ ಬಗ್ಗೆ ಏನೇನು ಕೆಲಸ ಮಾಡಬಹುದು ಎನ್ನುವುದರ ಕುರಿತು ಮಾರ್ಗದರ್ಶನ ಮಾಡಿದರು. ಶಾಲೆಯ ಅಭಿವೃದ್ಧಿಯಲ್ಲಿ ಎಸ್‌ಡಿಎಂಸಿಯ ಪಾತ್ರದ ಬಗ್ಗೆ ತಿಳಿಸಿ ಹೇಳಿದರು. ನಮ್ಮ ಮುಂದಿನ ಸಾಮಾಜಿಕ ಬದುಕಿಗೆ ರೇಷ್ಮಾ ಶೇಖ್ ಅವರ ಮಾರ್ಗದರ್ಶನ ಬಹಳಷ್ಟು ಸಹಕಾರಿಯಾಗಲಿದೆ. ಅವರ ಮುಂದಿನ ಶಾಲೆಯ ಸೇವೆ ಕೂಡ ಇದೇ ರೀತಿ ಮುಂದೆವರಿಯಲಿ, ಮುಂದೆ ಇದೇ ಶಾಲೆಗೆ ಮುಖ್ಯ ಶಿಕ್ಷಕಿಯಾಗಿ ಆಗಮಿಸಲಿ ಎಂದು ಆಶಿಸಿದರು.
ಶಾಲೆಯ ವರ್ಕಿಂಗ್ ಕಮಿಟಿ ಅಧ್ಯಕ್ಷ ಫೈರೋಜ್ ಸಯ್ಯದ್ ಮಾತನಾಡಿ, ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಾಲೆಯನ್ನು ಪ್ರಾರಂಭ ಮಾಡುವ ಸಂದರ್ಭದಲ್ಲಿ ನಮಗಿರುವ ತೊಡಕುಗಳನ್ನು ನಿವಾರಿಸಿ, ನಮ್ಮ ವರ್ಕಿಂಗ್ ಕಮಿಟಿಗೆ ಬೆನ್ನೆಲುಬಾಗಿ ಮಾರ್ಗದರ್ಶನ ಕೆಲಸ ಮಾಡಿಕೊಟ್ಟಿದ್ದಾರೆ. ಅವರ ಸೇವೆಯನ್ನು ನಾವು ಇಂದಿಗೂ ಹಾಗೂ ಮುಂದೆಯೂ ನೆನಪಿನಲ್ಲಿ ಇಟ್ಟುಕೊಳ್ಳುತ್ತೆವೆ ಮತ್ತು ಮರಳಿ ಇದೇ ಶಾಲೆಗೆ ಮುಖ್ಯ ಶಿಕ್ಷಕಿಯಾಗಿ ಬರಲಿ ಎಂದು ಆಶಿಸುತ್ತೇವೆ ಎಂದರು.
ಬಿಆರ್‌ಸಿ ಸಂಯೋಜಕ ಅಧಿಕಾರಿ ಸಂತೋಷ ಜಿಗಳೂರು, ಬಿಆರ್‌ಪಿ ಪ್ರಶಾಂತ ಪಟಗಾರ, ಸಿಆರ್‌ಪಿ ಶಿವಾನಂದ ವೆರ್ಣೇಕರ, ಬಿಆಯ್ ಆರ್ ಟಿ ದಿಲೀಪ ದೊಡ್ಮನಿ, ಸಾಮಾಜಿಕ ಕಾರ್ಯಕರ್ತ ಶುಕುರ್ ಶೇಖ ಸಾಂದರ್ಭಿಕವಾಗಿ ಮಾತನಾಡಿದರು.
ಪಟ್ಟಣ ಪಂಚಾಯಿತಿ ಸದಸ್ಯ ಅಬ್ದುಲ್ ಅಲಿ, ಶಾಲೆಯ ಶಿಕ್ಷಕರಾದ ಸುಮಂಗಲ ನಾಯಕ, ನಾಗರತ್ನ ನಾಯಕ, ಎಸ್ ಟಡಿ ಎಂ ಸಿ ಸದಸ್ಯರು, ವರ್ಕಿಂಗ್ ಕಮಿಟಿ ಸದಸ್ಯರು ಪಾಲಕರು ಇದ್ದರು.
ಇದೇ ಸಂದರ್ಭದಲ್ಲಿ ರೇಷ್ಮಾ ಶಬ್ಬಿರ್ ಶೇಖ ಅವರ ಪುತ್ರ ಮಂಚಿಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಅತೀಕ ಶಬ್ಬಿರ್ ಶೇಖ ಅವರನ್ನು ಕೂಡ ಸನ್ಮಾನಿಸಿ ಗೌರವಿಸಲಾಯಿತು.
ಮುಖ್ಯ ಶಿಕ್ಷಕಿ ಜೈಬುನ್ನಿಸಾ ಶೇಖ ಸ್ವಾಗತಿಸಿದರು, ಅತಿಥಿ ಶಿಕ್ಷಕಿ ಶೈನಾಜ್ ಶೇಖ ನಿರೂಪಿಸಿದರು. ಕೊನೆಯಲ್ಲಿ ಅತಿಥಿ ಶಿಕ್ಷಕಿ ವಂದಿಸಿದರು.
.
.
.