ಯಲ್ಲಾಪುರ: ತಾಲೂಕಿನ ತಾಟವಾಳ ಗ್ರಾಮದಲ್ಲಿ ಭಾವೈಕ್ಯತೆಯ ಪ್ರತಿರೂಪವಾಗಿರುವ ಸಾರ್ವಜನಿಕ ಗಜಾನನೋತ್ಸವವು ಭಾನುವಾರ ವಿಶೇಷವಾಗಿ ಜರುಗಿತು. ಈ ಸಂದರ್ಭದಲ್ಲಿ ತಾಟವಾಳ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕಿ ಗಂಗಾ ಠಾಕೂರರನ್ನು ಸನ್ಮಾನಿಸಿ ಗೌರವಿಸಲಾಯಿತು. ತಾಟವಾಳ ಹಾಗೂ ಸುತ್ತಮುತ್ತಲಿನ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿಗೆ 16 ವರ್ಷಗಳಿಂದ ಅಕ್ಷರ ಜ್ಞಾನ ನೀಡಿದ ಸಾಧನೆಯು ಗುರುತಿಸಲ್ಪಟ್ಟಿರುವ ಗಂಗಾ ಠಾಕೂರ ಸನ್ಮಾನ ಅರ್ಥಪೂರ್ಣವಾಗಿತ್ತು.
ತಾಟವಾಳ, ಕಾರಕುಂಡಿ ಮತ್ತು ಡೌಗಿನಾಳ ಗ್ರಾಮಗಳಿಂದ ಬಹುಮಟ್ಟಿಗೆ ಗೌಳಿ ಸಮುದಾಯ ವಾಸವಾಗಿದ್ದು, ಇತರೆ ಜನಾಂಗಗಳ ಪ್ರಾಬಲ್ಯವೂ ಇದೆ. ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಭಾವೈಕ್ಯತೆಯಿಂದ ಸಹಜೀವನ ನಡೆಸುವ ಈ ಗ್ರಾಮ, ಸಹಭಾಗಿತ್ವದ ಮಾದರಿಯಾಗಿಯೂ ಪ್ರಸಿದ್ಧವಾಗಿದೆ. ತಾಟವಾಳ ಗ್ರಾಮದ ಮುಕ್ತೇಸರ ಕೇಶವ ಪಾಟೀಲ ಮತ್ತು ಪ್ರಮುಖರುಗಳಾದ ವೆಂಕಟೇಶ ಪಾಟೀಲ, ರಾಯಾ ವಿಠ್ಠು ಕಸ್ತೂರೆ ಸೇರಿದಂತೆ ಗ್ರಾಮಸ್ಥರು ಗಂಗಾ ಠಾಕೂರರ ಸೇವೆಯನ್ನು ಗುರುತಿಸಿ ಅವರ ಮೇಲಿನ ಪ್ರೀತಿ, ಗೌರವವನ್ನು ಸನ್ಮಾನಿಸಿ ವ್ಯಕ್ಯ್ತಪಡಿಸಿದರು.
ಗ್ರಾಮದ ಸಾಂಸ್ಕೃತಿಕ ಇತಿಹಾಸವೂ ವಿಶೇಷವಾಗಿದ್ದು, ಇಲ್ಲಿ ರವಳನಾಥ ಮಹಾರಾಜರ ದೇವಸ್ಥಾನ ಹಾಗೂ ಮುಸ್ಲಿಂ ಸಮುದಾಯದ ಘುಮ್ ಶಹೀದ್ ದರ್ಗಾ ಸ್ಥಾಪಿತವಾಗಿವೆ. ಇವುಗಳಿಗೆ ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಭೇಟಿ ನೀಡುವ ಮೂಲಕ ಭಾವೈಕ್ಯತೆಯನ್ನು ಮೂರ್ತರೂಪಗೊಳಿಸುತ್ತಾರೆ.
ಇದೀಗ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಹಲವು ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದ್ದು, ಗ್ರಾಮಸ್ಥರ ಉತ್ಸಾಹವು ಉಲೇಖನೀಯವಾಗಿತ್ತು. ಮಹಿಳೆಯರ ದೀಪ ಹಚ್ಚುವ ಸ್ಪರ್ಧೆ, ಪುರುಷರ ಹಗ್ಗ ಜಗ್ಗಾಟ, ಮಕ್ಕಳ ನೃತ್ಯ ಮತ್ತು ಸಂಗೀತ ಖುರ್ಚಿ ಮುಂತಾದ ಸ್ಪರ್ಧೆಗಳು ಜರುಗಿದವು. ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಗಣೇಶೋತ್ಸವದ ಪೂಜೆ, ದೇವರ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಮತ್ತು ದೇವರ ಫಲಾವಳಿಗಳ ಹಂಚಿಕೆಗಳು ಸಮಾರಂಭದ ವೈಶಿಷ್ಟ್ಯವಾಗಿದ್ದವು.
.
.
.