ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಗುಂದದ ತಿಮ್ಮಣ್ಣ ದಬಗಾರ್ ಅವರ ತೋಟದಲ್ಲಿ ಅಚ್ಚರಿಯ ಘಟನೆ ಸಂಭವಿಸಿದೆ. ಪ್ರಾಕೃತಿಕ ವಿಸ್ಮಯದಂತೆ, ಒಂದು ತೆಂಗಿನಕಾಯಿಗೆ ನಾಲ್ಕು ಕಣ್ಣುಗಳು ಕಂಡುಬಂದಿವೆ. ಇದು ವಿರಳವಾಗಿದ್ದು, ಸಾಮಾನ್ಯವಾಗಿ ತೆಂಗಿನಕಾಯಿಗೆ ಮೂರು ಕಣ್ಣುಗಳು ಮಾತ್ರ ಇರುತ್ತವೆ. ಆದರೆ ಈ ಸಂದರ್ಭದಲ್ಲಿ, ಏಕಕಾಲದಲ್ಲಿ ನಾಲ್ಕು ಕಣ್ಣುಗಳನ್ನು ಹೊಂದಿರುವ ತೆಂಗಿನಕಾಯಿ ಬೆಳೆಯುವುದನ್ನು ಮೊದಲ ಬಾರಿ ಕಂಡಿರುವುದು ಕುತೂಹಲದ ವಿಷಯವಾಗಿದೆ.
ಕಳೆದ ವರ್ಷ ಯಲ್ಲಾಪುರದ ಕಳಚೆ ಗ್ರಾಮದಲ್ಲಿ ತೋಟದಲ್ಲಿ, ಒಂದೇ ಮೊಗ್ಗಿಗೆ ಎರಡು ಹೂವುಗಳು, ಹಾಗೂ ಎರಡು ಕಣ್ಣಿನ ತೆಂಗಿನಕಾಯಿ ಕೂಡ ಕಾಣಿಸಿಕೊಂಡಿದ್ದವು. ಇದೀಗ ಮತ್ತೊಂದು ಅಚ್ಚರಿ ಮೂಡಿಸಿರುವ ಈ ಘಟನೆ ಪಕ್ಕದ ಜೊಯಿಡಾ ಗುಂದದ ತೋಟದ ಮಾಲಕರನ್ನು ಹಾಗೂ ಇಡೀ ಗ್ರಾಮಸ್ಥರನ್ನು ಆಕರ್ಷಿಸಿದೆ.
ಇದಕ್ಕೆ ಕಾರಣವಾದ ವೈಜ್ಞಾನಿಕ ಕಾರಣಗಳು ಏನೆಂಬುದು ಸ್ಪಷ್ಟವಾಗದಿದ್ದರೂ, ಈ ರೀತಿಯ ವಿಸ್ಮಯಗಳು ಪ್ರಕೃತಿಯ ವೈಚಿತ್ರ್ಯಗಳನ್ನು ಪ್ರತಿಬಿಂಬಿಸುತ್ತವೆ. (ವರದಿ : ಪ್ರಮೋದ ಹೆಬ್ಬಾರ್ ಕಳಚೆ)